ವಚನ-ಸಂವಿಧಾನ ಜಾಗೃತಿಗಾಗಿ ಹೊಸ ‘ವಚನ ಪರಿವಾರ’ ವೇದಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ:

ಸರ್ವ ಸಮಾಜಗಳು ಒಂದುಗೂಡಿ ಬದುಕು ಸಾಗಿಸಬೇಕು. ವಚನ-ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಇಟ್ಟುಕೊಂಡು “ವಚನ ಪರಿವಾರ” ಎಂಬ ವೇದಿಕೆಯನ್ನು ಬುಧವಾರ ಆರಂಭಿಸಲಾಯಿತು.

ಹುಬ್ಬಳ್ಳಿಯ ಉಣಕಲ್ಲ ಚನ್ನಬಸವ ಸಾಗರದ ದಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಾದಿ ಶರಣರ ವಚನ ಪಠಣ ಮಾಡಿ, ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಶರಣೆ ಗೀತಾ ಮಲ್ಲಪ್ಪ ತಡಸದ ಹಾಗೂ ಉಣಕಲ್ಲ ಬಾಲ ಬಸವ ಸೇನೆಯ ಮಕ್ಕಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗೀತಾ ತಡಸದ ಅವರು ಮಾತನಾಡುತ್ತ, ಜಾತಿ ಧರ್ಮ ಮೀರಿ ಎಲ್ಲರಿಗೂ ಅನ್ವಯಿಸುವ ತತ್ವಗಳು ಶರಣರ ವಚನಗಳಲ್ಲಿವೆ. ಹಾಗಾಗಿ ವಚನಗಳನ್ನು ಸರಿಯಾದ ರೀತಿಯಲ್ಲಿ ಎಲ್ಲರಿಗೂ ತಲುಪಿಸಬೇಕಾಗಿದೆ. ಆದರೆ ಕೆಲವು ಜನ ವಚನಗಳನ್ನು ತಪ್ಪುದಾರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅದನ್ನು ತಡೆಯಬೇಕು.

ವಚನ ಪರಿವಾರವು ಕಾರ್ಯಕ್ರಮದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ದಿನಕ್ಕೊಂದು ವಚನ, ನಮ್ಮ ದೇಶದ ಸಂವಿಧಾನದ ಆರ್ಟಿಕಲ್ ಹೇಳುತ್ತಾ ಹೋದರೆ ಎಲ್ಲರಿಗೂ ವಚನಗಳ ಅರಿವು, ಸಂವಿಧಾನದ ಅರಿವು ಮೂಡುತ್ತದೆ ಎಂಬ ಉದ್ದೇಶವಿದೆ ಎಂದರು.

ಲಂಡನ್ ಪಾರ್ಲಿಮೆಂಟ್‌ನಲ್ಲಿ ವಚನ ಹಾಕಿದ್ದಾರೆ. ದೇಶದ ಹೊರಗಿನವರು ವಚನಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ನಮಗೆ ಇನ್ನೂ ಅರ್ಥವಾಗಿಲ್ಲ ಎಂದರು. ವಚನಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೇವೆ.

ವಚನಗಳನ್ನು ಓದುವುದರಿಂದ ಮೂಢನಂಬಿಕೆ ಹೋಗುತ್ತದೆ. ಸಮಾಜದಲ್ಲಿ ನಾವು ಹೇಗಿರಬೇಕು, ಹೇಗೆ ಬದುಕಬೇಕು, ಸಂಘಟನೆ ಹೇಗೆ ಮಾಡಬೇಕೆಂಬುದು ಗೊತ್ತಾಗುತ್ತದೆ.

ವಚನ ಪರಿವಾರ ಇಂದು ಸಾಂಕೇತಿಕವಾಗಿ ಆರಂಭವಾಗಿದೆ. ಅದನ್ನು ನಾವೆಲ್ಲಾ ಮುಂದುವರೆಸಿಕೊಂಡು, ಬೆಳೆಸಿಕೊಂಡು ಹೋಗೋಣ ಎಂದು ತಡಸದ ಹೇಳಿದರು.

ಪ್ರಾಸ್ತಾವಿಕವಾಗಿ ಕುಮಾರಣ್ಣ ಪಾಟೀಲ ಮಾತನಾಡುತ್ತ, ಇಂದು ಯುವಕರು ಮಕ್ಕಳು ಅಡ್ಡದಾರಿ ಹಿಡಿದಿದ್ದಾರೆ. ಅಂಥವರಿಗೆ ವಚನಗಳನ್ನು ತಿಳಿಸಿ ಹೇಳುವುದು ಅವಶ್ಯವಾಗಿದೆ. ಈ ಉದ್ದೇಶ ಇಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಜನ ಸೇರುವಲ್ಲಿ, ಗಾರ್ಡನ್, ಬಯಲು, ವಾಕಿಂಗ್ ಮಾಡುವ ಸ್ಥಳಗಳಲ್ಲಿ ವಚನಗಳನ್ನು, ಸಂವಿಧಾನದ ಮಹತ್ವವನ್ನು ಹೇಳುವುದು ಬಹಳ ಸುಲಭವಾಗಿ ಮಾಡಬಹುದು ಎಂದರು.

ಶಿಕ್ಷಕರಾದ ಬಸವರಾಜ ದೇಸೂರ ಮಾತನಾಡುತ್ತ, ವಚನಗಳನ್ನು ಇಸ್ಲಾಂ, ಕ್ರೈಸ್ತ, ಬೌದ್ಧ, ಜೈನ ಎಲ್ಲ ಧರ್ಮಗಳೂ ಒಪ್ಪುತ್ತವೆ. ವಚನಗಳು ಸರಳವಾದ ಮಾತುಗಳು, ಅದರಲ್ಲಿ ಸಾಗರದಷ್ಟು ಜ್ಞಾನವನ್ನು ಮಡಿಕೆಯಲ್ಲಿ ತುಂಬಿದಂತೆ ತುಂಬಿದ್ದಾರೆ ಎಂದರು. ವಚನಗಳನ್ನು ಪ್ರಚಾರ ಮಾಡಲು ವಚನ ಪರಿವಾರ ಅತ್ಯಂತ ಸರಳವಾದ ಮಾರ್ಗ ಎಂದರು.

ಈ ಜಾಗೃತಿ ಕಾರ್ಯಕ್ರಮದಲ್ಲಿ ‌ ಶಮೀಮ್ ಮುಲ್ಲಾ, ಸೋಮಶೇಖರ, ಬಸವರಾಜ ಹುಲ್ಲೋಳಿ, ಗಂಗಾಧರ ಪೆರೂರ, ಭೀಮನಗೌಡ ಗೌಡಪ್ಪಗೌಡ, ಗುರುರಾಜ ಅವರಾದಿ, ವೀರಯ್ಯಾ ಹಿರೇಮಠ ಬಾಲ ಶರಣ ಸೇನೆಯ ಮಕ್ಕಳು, ಮುಂತಾದವರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
3 Comments
  • 🔵 *ವಚನ ಪರಿವಾರ*
    ಬಸವಾದಿ ಶಿವಶರಣರು ರಚಿಸಿದ ವಚನಗಳ ರಾಷ್ಟ್ರವಾದದ ಚಿಂತನ ಧಾರೆ, ಈ ವಚನ ಪರಿವಾರದಲ್ಲಿ ಸಮಾನತೆ, ಸಹೋದರತ್ವ, ಮತ್ತು ಆಧ್ಯಾತ್ಮಿಕ ಜ್ಞಾನದ ಬಸವಾದಿ ಶರಣರ ಸಾಹಿತ್ಯದ ಸಂದೇಶಗಳನ್ನು ಪರಸ್ಪರ ಹಂಚಿಕೊಳ್ಳುವುದು.
    ವಚನ ಸಾಹಿತ್ಯವು ಭಾರತೀಯ ಸಮಾಜದಲ್ಲಿನ ಎಲ್ಲ ವರ್ಗದ ಜನಸಾಮಾನ್ಯರನ್ನು ತಲುಪಿದ ಭಕ್ತಿಯ ತತ್ವಗಳನ್ನು ಒಳಗೊಂಡ ಸಾಹಿತ್ಯ ಪ್ರಕಾರವಾಗಿದೆ.
    *ವಚನಗಳು:* ಸರಳವಾದ ಗದ್ಯ ರೂಪದ ಸಾಹಿತ್ಯ, ಸತ್ಯ ಶುದ್ಧವಾದ ಕಾಯಕ, ಭಕ್ತಿಯ ಸ್ವಾನುಭಾವದಿಂದ ಬಂದ ನುಡಿಗಳು, ಇವು ಸಾಮಾಜಿಕ ಸುಧಾರಣೆಯ ಸಂದೇಶಗಳನ್ನು ಒಳಗೊಂಡಿವೆ.
    *ಪರಂಪರೆ:* ಶರಣರ ಆಶಯಗಳು ಮತ್ತು ವಿಚಾರಗಳ ನಿರಂತರ ಪ್ರವಾಹ.
    *ಧ್ಯೇಯ:* ಸಾಮಾಜಿಕ ಸಮಾನತೆ, ಮೂಢನಂಬಿಕೆ ನಿವಾರಣೆ, ಆತ್ಮೋದ್ಧಾರ, ಜಾತೀಯತೆ ನಿರ್ಮೂಲನೆ, ದೇಶ ಭಕ್ತಿ ಮತ್ತು ಎಲ್ಲರ ಬದುಕನ್ನು ಸಾರ್ಥಕಗೊಳಿಸುವುದು.
    ವಚನ ಪರಿವಾರವು ವಚನಕಾರರ ಎಲ್ಲ ವಿಚಾರಧಾರೆಗಳನ್ನು ಒಳಗೊಂಡ ಒಂದು ವಿಶಾಲ ಮತ್ತು ಶಕ್ತಿಯುತ ಸಾಹಿತ್ಯಿಕ ಹಾಗೂ ಸಾಮಾಜಿಕ ಚಳವಳಿಯನ್ನು ಮುಂದುವರೆಸುವುದಾಗಿದೆ.

    🔵 *ಭಾರತದ ಸಂವಿಧಾನ*
    ಸಂವಿಧಾನದ ಸಂಕ್ಷಿಪ್ತ ರೂಪ ಸಂವಿಧಾನ ಪೀಠಿಕೆ,
    ನಮ್ಮ ದೇಶ, ಅಂದರೆ ಭಾರತೀಯರು ಹೇಗಿರಬೇಕು?
    ಯಾವ ರೀತಿಯಲ್ಲಿ ಬದುಕಬೇಕು? ದೇಶ ಕಟ್ಟುವ ಬಗೆ ಹೇಗೆ? ನಮ್ಮೆಲ್ಲರ ಕರ್ತವ್ಯದ ಜೊತೆ ಜೊತೆಗೆ ನಮ್ಮ ಹಕ್ಕುಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು.
    ಸಂವಿಧಾನವು ನಮ್ಮನ್ನು ಸದಾ ಎಚ್ಚರದಲ್ಲಿ ಇರುವಂತೆ ಮಾಡುತ್ತದೆ, ಸಂವಿಧಾನ ಪ್ರಸ್ತಾವನೆಯು ನಮ್ಮನ್ನು ಪ್ರೇರೇಪಿಸುತ್ತಲೇ ಇರುವ ಶಕ್ತಿಧಾತುವಾಗಿದೆ.
    ದಿನಾಲು ಒಂದೊಂದು ವಿಧಿಯನ್ನು ಕೇಳಿ ತಿಳಿದುಕೊಳ್ಳುವುದು.

    *ವಚನ ಪರಿವಾರದ ಸದಸ್ಯತ್ವ:*
    ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸವಣ್ಣ ಅಂಬಿಗರ ಚೌಡಯ್ಯ, ಫುಲೆ, ಪೆರಿಯಾರ, ಸತ್ಯಕ್ಕ, ಜೇಡರ ದಾಸೀಮಯ್ಯ, ಒಕ್ಕಲಿಗ ಮುದ್ದಣ್ಣ, ಕುರುಬ ಗೊಲ್ಲಾಳ, ಮಡಿವಾಳ ಮಾಚಿದೇವ, ಚನ್ನಮ್ಮ, ಸಮಗಾರ ಹರಳಯ್ಯ ಮುಂತಾದ ಸಾವಿರಾರು ಶರಣರ ಚಿಂತಕರ ವಾರಸುದಾರರೆ ಈ ಪರಿವಾರದ ಸದಸ್ಯರು.

    • ಆತ್ಮೀಯ ಸಮಾಜ ಬಾಂಧವರೆ,
      ವಚನ ಪರಿವಾರದಿಂದ
      *ವಚನ-ಸಂವಿಧಾನ ಅರಿವು, ಸಮಾಜ ಜಾಗೃತಿ*

      ಉದ್ದೇಶ : ಜಾತಿ ಧರ್ಮ ಮೇಲು ಕೀಳು ಎನ್ನದೆ ಎಲ್ಲ ಭಾರತೀಯರನ್ನು ಒಂದುಗೂಡಿಸುವುದು
      ಶರಣರ, ಸಂತರ ಸಮಾನತೆಯ ತತ್ವಗಳನ್ನು ತಿಳಿದುಕೊಳ್ಳುವುದು
      ಭಾರತೀಯ ಸಂಸ್ಕೃತಿ, ರಾಷ್ಟ್ರೀಯತೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಳ್ಳುವುದು
      ಕಾಯಕ ವರ್ಗಗಳಿಗೆ ಗೌರವ ಕೊಡುವುದು, ದೇಶಪ್ರೇಮ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುವುದು.
      ತನು ಮನದಿಂದ ಸೇವೆ ಮಾಡುವುದು,
      ಬಡ ಕುಟುಂಬಗಳು, ಹಿಂದುಳಿದ ವರ್ಗಗಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುವುದು
      ಸಂವಿಧಾನದ ಮಹತ್ವವನ್ನು ನಮ್ಮ ಕರ್ತವ್ಯವನ್ನು ತಿಳಿಸುವುದು
      ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಪಣ ತೊಡುವುದು
      ಬಾಗಿದ ತಲೆ ಮುಗಿದ ಕೈಯಾಗಿರಿಸಿಕೊಂಡು ಪರಿವಾರದ ಸದಸ್ಯನಾಗಿ ದೇಶ ಸೇವೆ ಮಾಡುತ್ತೇನೆಂದು ಪ್ರಮಾಣ ಮಾಡುವುದು.

      • *ವಚನ ಪರಿವಾರ*
        ಮುಂಜಾನೆ ಮತ್ತು ಸಾಯಂಕಾಲ ಗಾರ್ಡನ್ಗಳಲ್ಲಿ ವಾಕಿಂಗ್ ಗೆ ಬರುವ ಜನರು ಒಂದು ಸ್ಥಳದಲ್ಲಿ ಸೇರುತ್ತಾರೆ ಅಲ್ಲಿ ನಾವು ವಚನಗಳನ್ನು ಪ್ರಚಾರ ಮಾಡಲು ಇದೊಂದು ಒಳ್ಳೆಯ ಅವಕಾಶ.
        ನಾಲ್ಕೆ ಜನ ಇರಲಿ, ಇಬ್ಬರೆ ಇರಲಿ, ಒಬ್ಬರೆ ಇರಲಿ ನಮಗೆ ಪ್ರೇರಣೆ ಬಂದ ದಿನ ನಾವೆ ಪ್ರಚಾರ ಆರಂಭ ಮಾಡೋಣ. ಯಾವುದೆ ವೇದಿಕೆ ಬೇಕಾಗಿಲ್ಲ, ಮೈಕ್ ಅವಶ್ಯಕತೆ ಇಲ್ಲ, ಹಣ ಬೇಕಾಗಿಲ್ಲ.‌ ಸಮಯ, ಇಚ್ಛಾಶಕ್ತಿ ಇದ್ದರೆ ಸಾಕು
        ಎಲ್ಲಿ ನಾಲ್ಕು ಜನ ಸೇರಿ ವಚನ ಚಿಂತನೆ ಮಾಡುತ್ತಾರೊ ಅದೆ ಅನುಭವ ಮಂಟಪ.
        ಪ್ರತಿದಿನ ವಾಕಿಂಗ್ ಮಾಡುವವರು ಇದನ್ನು ಆರಂಭಿಸಬೇಕು.
        ಬಸವ ವಿರೋಧಿಗಳು ಹಳ್ಳಿ ಹಳ್ಳಿಗೆ ಹೋಗಿ ಬಸವಾದಿಶರಣರ ತತ್ವ ತಿರುಚಿ ಸುಳ್ಳಿನ ಕಥೆ ಹೆಣೆದು ಪ್ರಚಾರ ಆರಂಭಿಸಿದ್ದಾರೆ
        ಅವರ ಕುತಂತ್ರಕ್ಕೆ ನಾವು ವೈಚಾರಿಕವಾಗಿ ರಚನಾತ್ಮಕವಾಗಿ ಉತ್ತರ ಕೊಡೋಣ.

Leave a Reply

Your email address will not be published. Required fields are marked *