ಪಾಂಡೋಮಟ್ಟಿಯಲ್ಲಿ ಬಸವತತ್ವ ಸಮ್ಮೇಳನ
ಚನ್ನಗಿರಿ:
12ನೇ ಶತಮಾನದ ಬಸವಾದಿ ಶರಣರ ಜ್ಞಾನದ ಕ್ರಾಂತಿಯನ್ನು ಇಂದಿನ ಯುವಪೀಳಿಗೆಗೆ, ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಾರ್ಯಕ್ರಮಗಳಾಗಬೇಕು ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಬಸವತತ್ವ ಸಮ್ಮೇಳನ, ಶ್ರೀ ಸಂಗಮನಾಥ ಮಹಾಸ್ವಾಮಿಗಳ 64ನೇ ವರ್ಷದ ಸ್ಮರಣೋತ್ಸವ, ಶ್ರೀ ಚನ್ನಬಸವ ಮಹಾಸ್ವಾಮಿಗಳ 19ನೇ ವರ್ಷದ ಸ್ಮರಣೋತ್ಸವ ಹಾಗೂ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಬಸವಾದಿ ಶರಣರ ವಚನ ಸಾಹಿತ್ಯದಿಂದ ಅವರ ಇತಿಹಾಸ, ಸಮಸಮಾಜ ನಿರ್ಮಾಣಕ್ಕಾಗಿ ಶರಣರು ಮಾಡಿದ ಹೋರಾಟಗಳು ತಿಳಿಯುತ್ತಿವೆ. 12ನೇ ಶತಮಾನದಲ್ಲಿ ಬಸವಣ್ಣನವರ ವಚನ ಸಾಹಿತ್ಯವನ್ನು ನಾಶ ಮಾಡಲು ಬಹುದೊಡ್ಡ ಪ್ರಯತ್ನ ನಡೆಯಿತು. ಶರಣರ ತ್ಯಾಗ ಬಲಿದಾನದ ಹೋರಾಟದಿಂದ ವಚನ ಸಾಹಿತ್ಯ ಉಳಿದಿದೆ.
ವಚನಗಳು ಇಲ್ಲದೇ ಹೋಗಿದ್ದರೆ ಬಸವಣ್ಣ ಯಾರು ಎಂದು ಈಗ ಕೇಳುವ ಪರಿಸ್ಥಿತಿ ಬರುತ್ತಿತ್ತು. ಈ ಕಾರ್ಯಕ್ರಮ ಕೂಡ ನಡೆಯುತ್ತಿರಲಿಲ್ಲ. ಆ ಸಂದರ್ಭದಲ್ಲಿ ಹೋರಾಟ ಮಾಡಿದ ಶರಣರನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬಸವತತ್ವವನ್ನು ನಾಶ ಮಾಡಲು ಏಕೆ ಹೊರಟರು ಎಂದು ಚರ್ಚೆ ಮಾಡುವುದು ಅವಶ್ಯಕತೆ ಇದೆ ಎಂದರು.
ಬುದ್ಧನ ತತ್ವಗಳು, ಬಸವಣ್ಣನವರ ಸಮಸಮಾಜದ ಪರಿಕಲ್ಪನೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕಾನೂನುಗಳನ್ನಾಗಿ ರೂಪಿಸಿದರು. ಇದರಿಂದಾಗಿ ನಾವೆಲ್ಲರೂ ಇಂದು ಉತ್ತಮ ರೀತಿಯಲ್ಲಿ ಜೀವಿಸಲು ಸಾಧ್ಯವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ತತ್ವ- ಆದರ್ಶಗಳು ಈ ಭೂಮಿ ಇರುವತನಕ ಶಾಶ್ವತವಾಗಿರಲಿದೆ.

ಬಸವತತ್ವವನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸುವಲ್ಲಿ ಮಠಗಳು ಸಲ್ಲಿಸುತ್ತಿರುವ ಕಾರ್ಯ ಅಪಾರವಾಗಿದೆ. ಪಾಂಡೋಮಟ್ಟಿ ಮಠ, ಪೂಜ್ಯ ಗುರುಬಸವ ಸ್ವಾಮೀಜಿ ಬಸವತತ್ವದ ಕಾರ್ಯಕ್ರಮ ನಿರಂತರ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಮಾತನಾಡಿ, ರಾಜಕಾರಣದಲ್ಲಿ ಇರುವವರಿಗೆ ಸೇವಾಮನೋಭಾವನೆ ಇರಬೇಕಾಗಿದೆ. ಸೇವನೆ ಮಾಡುವ ಉದ್ದೇಶಕ್ಕಾಗಿ ರಾಜಕಾರಣ ಮಾಡಬಾರದು.
ವೈಜ್ಞಾನಿಕತೆ, ವೈಚಾರಿಕತೆ, ಪಾರದರ್ಶಕತೆ, ಪ್ರಾಮಾಣಿಕತೆಯಿಂದ ರಾಜಕಾರಣ ಮಾಡಿದವರು ಸದಾ ಸ್ಮರಣೆಯಲ್ಲಿ ಇರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವಗುರು ಬಸವ ಶ್ರೀ ಪ್ರಶಸ್ತಿಯನ್ನು ಶಿಕ್ಷಣತಜ್ಞ ನಾಡೋಜ ಡಾ.ವುಡೇ ಪಿ. ಕೃಷ್ಣ ಅವರಿಗೆ ನೀಡಿ ಗೌರವಿಸಲಾಯಿತು.
ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅತಿಥಿಯಾಗಿದ್ದರು. ಅವರು ಮಾತನಾಡುತ್ತ, ವಿಶ್ವಗುರು ಬಸವಣ್ಣನವರ ತತ್ವ- ಆದರ್ಶಗಳನ್ನು ಇಂದಿನ ಯುವಜನತೆಗೆ ತಿಳಿಸಬೇಕು. ಸಮಾಜದಲ್ಲಿ ಸೌಹಾರ್ದದಿಂದ ಬದುಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ನಾವು ಆಚರಿಸುವ ಜೊತೆಗೆ ಮುಂದಿನ ಪೀಳಿಗೆಗೆ ಇವುಗಳನ್ನು ವರ್ಗಾಯಿಸಬೇಕು. ಬಸವತತ್ವ ತಿಳಿಸುವ ಕೆಲಸ ದಿನನಿತ್ಯದ ಕಾರ್ಯವಾಗಬೇಕೆಂದರು.
ಬಸವಣ್ಣನವರ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ. ಧಾರ್ಮಿಕ ನಂಬಿಕೆಗಳು ನಮ್ಮ ದೌರ್ಬಲ್ಯವಲ್ಲ, ಅದು ಈ ಮಣ್ಣಿನ ಶಕ್ತಿಯಾಗಿದೆ. ಯಾವುದೇ ಧರ್ಮ ಇನ್ನೊಬ್ಬರ ಮನಸ್ಸಿಗೆ ನೋವು ಉಂಟು ಮಾಡಬಾರದು. ಬದಲಿಗೆ ಇನ್ನೊಬ್ಬರ ನೋವಿಗೆ ಮುಲಾಮು ಆಗಬೇಕಾಗಿದೆ. ಇಂತಹ ಹಲವಾರು ತತ್ವ- ಆದರ್ಶಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಜವಾಬ್ದಾರಿ ಸಮಾಜ, ಸ್ವಾಮೀಜಿಗಳ ಮೇಲಿದೆ. ಮಾನವೀಯ ಮೌಲ್ಯಗಳು ಮಾತ್ರ ಸಮಾಜದಲ್ಲಿ ಪ್ರಮುಖವಾಗಬೇಕು, ಅವು ಮಾತ್ರ ಉಳಿಯುತ್ತವೆ ಎಂದರು.

ವಿವಿಧ ಮಠಗಳ ಮಠಾಧೀಶರಾದ ಶ್ರೀ ಗುರುಬಸವ ಪಟ್ಟಾದಾರ್ಯ ಸ್ವಾಮಿಗಳು, ರಾಜಯೋಗಿ ಗುರುಬಸವ ಮಹಾಸ್ವಾಮಿಗಳು, ಸೋಮಶಂಕರ ಮಹಾಸ್ವಾಮಿಗಳು, ಬಸವಲಿಂಗ ಮಹಾಸ್ವಾಮಿಗಳು, ಗುರುಮಹಾಂತ ಮಹಾಸ್ವಾಮಿಗಳು, ಮಹಾಂತ ಮಹಾಸ್ವಾಮಿಗಳು, ಚಂದ್ರಶೇಖರ ಮಹಾಸ್ವಾಮಿಗಳು ಸಭೆಯಲ್ಲಿ ಹಾಜರಿದ್ದು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಜೀವವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ, ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ, ಮಾಜಿ ಶಾಸಕ ಮಾಡಾಳ ವಿರೂಪಾಕ್ಷಪ್ಪ, ಮಹಿಮಾ ಪಟೇಲ್, ಸಿ. ನಾಗರಾಜ, ವೀರೇಶ ನಾಯ್ಕ, ರವಿ ಬೋಸರಾಜು ಮತ್ತಿತರರು ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಬಸವಭಕ್ತರು ಹಾಜರಿದ್ದರು.
