ಬಸವಕಲ್ಯಾಣ:
ಬಸವಕಲ್ಯಾಣದಲ್ಲಿ ನಡೆಯುವ ೪೬ನೆಯ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-೨೦೨೫ ನಿಮಿತ್ತ, ನವೆಂಬರ್ ೨೩ ರಿಂದ ೨೮, ೨೦೨೫ ರಏಳು ದಿವಸಗಳ ವರೆಗೆ ನಡೆಯುವ ಸಾಮೂಹಿಕ ವಚನ ಪಾರಾಯಣ ಕುರಿತು ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಚನ ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷರಾಗಿ ರವೀಂದ್ರ ಕೋಳಕೂರ ಅವರಿಗೆ ನೇಮಕ ಮಾಡಲಾಯಿತು. ಪ್ರವಚನ ಸಮಿತಿಯ ಅಧ್ಯಕ್ಷರಾಗಿ ಜಗನ್ನಾಥ ಪತಂಗೆ, ಸೈಕಲ್ ಜಾಥಾ ಅಧ್ಯಕ್ಷರಾಗಿ ಲಕ್ಷ್ಮೀಕಾಂತ ಜ್ಯಾಂತೆ ನೇಮಕಗೊಂಡರು.

ಈ ಸಂದರ್ಭದಲ್ಲಿ ಗುರುಬಸವ ಪಟ್ಟದ್ದೇವರು ಮಾತನಾಡುತ್ತ, ಬಸವಾದಿ ಶರಣರ ಅನುಭಾವದಿಂದ ಹೊರಹೊಮ್ಮಿದ ವಚನಗಳೇ ನಮ್ಮ ಧರ್ಮಗ್ರಂಥವಾಗಿ ರೂಪತಾಳಿದೆ. ಇಂದು ನಾವು ನಮ್ಮ ಜೀವನ ಸುಖಿ ಮತ್ತು ಸಂತೃಪ್ತ ಮಾಡಿಕೊಳ್ಳಬೇಕಾದರೆ, ನಮಗೆ ವಚನಗಳ ಅಧ್ಯಯನ ಬಹಳ ಅವಶ್ಯಕವಾಗಿದೆ.
ಅದರಲ್ಲಿಯೂ ವಿಶೇಷವಾಗಿ ಬಸವಣ್ಣನವರ ವಚನಗಳು ದುಃಖಿತರನ್ನು ಸಮಾಧಾನ ಪಡಿಸುತ್ತವೆ. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬುತ್ತವೆ. ಬಡವ, ದೀನ, ದುಃಖಿತರ ಕುರಿತು ಪ್ರೀತಿಯನ್ನು ಹೆಚ್ಚಿಸುತ್ತವೆ.
ಧಾರ್ಮಿಕ ತತ್ವಗಳ ಜೊತೆಗೆ ಬದುಕುವ ವಿಧಾನವನ್ನು ಕಲಿಸಿಕೊಡುತ್ತವೆ. ಬಸವಣ್ಣನವರ ವಚನಗಳು ನಮಗೆ ಪರಮಾತ್ಮನ ಸನ್ನಿಧಿಯಲ್ಲಿಯೇ ಒಯ್ದು ಬಿಡುತ್ತವೆ. ಅಲ್ಲಿಯ ಬೆಳಕಿನೊಳಗಿನ ಬೆಳಗಿನಲ್ಲಿ ನಮ್ಮನ್ನು ತೇಲಿಬಿಡುತ್ತವೆ. ಆಗ ನಮಗೆ ಪರಮಾತ್ಮನ ದರ್ಶನವೇ ಆಗುತ್ತದೆ. ಅದಕ್ಕಾಗಿ ನಾವು ಸಾಮೂಹಿಕ ವಚನ ಪಾರಾಯಣ ಮಾಡಬೇಕು.
ಸಾಮೂಹಿಕ ವಚನ ಪಾರಾಯಣ ಮಾಡುವುದರಿಂದ ಬಸವಾದಿ ಶರಣರ ದೈವಿಕರುಣೆ ನಮ್ಮ ಕುಟುಂಬದ ಮೇಲೆ ಶ್ರೀರಕ್ಷೆಯಾಗಿ ನಿಲ್ಲುತ್ತದೆ, ಆದರಿಂದ ಎಲ್ಲರೂ ಈ ಸಾಮೂಹಿಕ ವಚನ ಪಾರಾಯಣದಲ್ಲಿ ಭಾಗಿಯಾಗಬೇಕೆಂದು ಹೇಳಿದರು.
ಶರಣ ಕಮ್ಮಟ – ಅನುಭವ ಮಂಟಪ ಉತ್ಸವದ ಕರಪತ್ರ ಪ್ರದರ್ಶಿಸಿ, ಘೋಷಣೆ ಹಾಕಲಾಯಿತು. ಪೂಜ್ಯ ಬಸವಲಿಂಗ ಸ್ವಾಮಿಗಳು, ಪೂಜ್ಯ ಬಸವದೇವರು ಸಮ್ಮುಖ ವಹಿಸಿದರು.

ಜಗನ್ನಾಥ ಪತಂಗೆ, ಸಿದ್ದಣ್ಣ ಭೂಮಾ, ಶಿವಕುಮಾರ ಬಿರಾದಾರ, ವಿರೇಶ ಕುಂಬಾರ, ಅಶೋಕ ಕುಂಬಾರ, ಸಂಗಮೇಶ ಬೆಲ್ಲೆ ಮುಂತಾದವರು ಉಪಸ್ಥಿತರಿದ್ದರು.
