ಸಾಣೇಹಳ್ಳಿ
ನಾಡಿನ ಎಲ್ಲ ಮಠಗಳು ಬಡವರಿಗೆ ಅನ್ನದಾಸೋಹ, ಜ್ಞಾನದಾಸೋಹವನ್ನು ನೀಡುತ್ತವೆ. ಆದರೆ ಸಾಣೇಹಳ್ಳಿ ಮಠವು ರಂಗದಾಸೋಹದ ಮೂಲಕ ಜನರನ್ನು ಸಂಸ್ಕಾರವಂತರನ್ನಾಗಿ ಮಾಡುತ್ತಿದೆ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಶ್ಲಾಘಿಸಿದರು.
ಇಲ್ಲಿನ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾಥಿಗಳು ಬುಡಕಟ್ಟು ಜನರ ಕಷ್ಟನಷ್ಟಗಳ ಕುರಿತು ಹೇಳುತ್ತ, ಕಾಡು ಉಳಿಸಲು ಗಿಡ ನೆಡಿ ಎಂದು ಮುಖ್ಯಮಂತ್ರಿ ಚಂದ್ರು ಅವರನ್ನು ಆಹ್ವಾನಿಸಿದಾಗ ಅವರು ಸಸಿ ನೆಟ್ಟು ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಿದ್ಧಗಂಗಾ ಮಠದಲ್ಲಿ ಓದುವಾಗ ತೂಕದ ವಿದ್ಯಾರ್ಥಿಯಾಗದೆ ಭಂಡ ವಿದ್ಯಾಥಿಯಾಗಿದ್ದೆ. ಅಂಥ ವಿದ್ಯಾರ್ಥಿಗಳನ್ನು ಮಠವು ಕಲಿಸಿತು. ಆ ಮಠದ ಹಾಗೆ ಸಾಣೇಹಳ್ಳಿ ಮಠವೂ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹ ಕೊಡುತ್ತ ನಾಟಕಗಳ ಮೂಲಕ ನಿರಂತರವಾಗಿ ಜನರನ್ನು ಎಚ್ಚರಿಸುತ್ತಿದೆ. ಇದು ಅದ್ಭುತ ಕೆಲಸವಾಗಿದೆ ಎಂದು ಪ್ರಶಂಶಿಸಿದರು.

ರಾಜ್ಯದ, ದೇಶದ ಹಿತ ಕಾಪಾಡಲು ಮಾನವ ಸಂವಿಧಾನ ಕೊಟ್ಟಿದ್ದು ಬಸವಣ್ಣನವರು. ಕಳಬೇಡ, ಕೊಲಬೇಡ ಎನ್ನುವ ವಚನದ ಮೂಲಕ. ಇಂಥ ಆಶಯವನ್ನು ಹೊತ್ತ ಶಿವಸಂಚಾರದ ಮೂರು ನಾಟಕಗಳು ಮನರಂಜನೆಗೆ ಅಲ್ಲ, ಸಮಾಜ ತಿದ್ದಲು ತಿರುಗಾಟಕ್ಕೆ ಸಜ್ಜಾಗಿವೆ ಎಂದು ಹೇಳಿದರು.
ರಂಗಭೂಮಿ ಜೀವಂತ ಕಲೆ. ಹೇಗೆಂದರೆ ರಾಮಾಯಣ, ಮಹಾಭಾರತವನ್ನು ಎಲ್ಲರೂ ಓದಲು ಸಾಧ್ಯವಿಲ್ಲ. ಆದರೆ ನಾಟಕಗಳ ಮೂಲಕ ರಾಮಾಯಣ, ಮಹಾಭಾರತವನ್ನು ಜನರಿಗೆ ತಿಳಿಸಬಹುದು. ಇಂಥ ನಾಟಕಗಳನ್ನು ಆಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಸಾಣೇಹಳ್ಳಿ ಎಂದು ವಿವರಿಸಿದರು.

ಜನರ ಎದುರು ಮುಖ್ಯಮಂತ್ರಿ ನಾಟಕವನ್ನು ಕಳೆದ 45 ವರುಷಗಳಿಂದ ಅಭಿನಯಿಸುತ್ತಿರುವೆ. ಈ ಮೂಲಕ ಮುಖ್ಯಮಂತ್ರಿ ಪಟ್ಟವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಮಾಡಲು ಅಸಾಧ್ಯ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಿತ್ತು ಹಾಕುವ ಛಾನ್ಸ್ ಇದೆ. ಆದರೆ ನನ್ನ ಮುಖ್ಯಮಂತ್ರಿ ಸ್ಥಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
