ಬೆಂಗಳೂರು ವಚನಾಮೃತ ಕಾರ್ಯಕ್ರಮದಲ್ಲಿ ‘ಸಮಾನತೆ’ಯ ಮೇಲೆ ಮುಕ್ತ ಚರ್ಚೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಬಸವ ನಗರದ ಬಸವ ಸೇವಾ ಸಮಿತಿಯ ಮಾಸಿಕ ೬೩ನೇ ವಚನಾಮೃತ ಕಾರ್ಯಕ್ರಮ ರಾಮಯ್ಯ ರೆಡ್ಡಿ ಕಾಲೋನಿಯ ಶರಣ ದಂಪತಿಗಳಾದ  ಶೋಭಾ ಮತ್ತು ಬಿ. ಶಿವಶಂಕರ ರೆಡ್ಡಿ ಅವರ ನಿವಾಸದಲ್ಲಿ ಭಾನುವಾರ ನಡೆಯಿತು.

ಪಿ.ಎಸ್. ಸಾಲಿಮಠ ಸಭಾಧ್ಯಕ್ಷರಾಗಿ ಆಯ್ಕೆಯಾದ ಕಾರ್ಯಕ್ರಮದಲ್ಲಿ ಸಮತೆ ಮತ್ತು ಸಮಾನತೆ ವಿಷಯ ಕುರಿತು ಚರ್ಚಿಸಲಾಯಿತು.

ಸಮಿತಿ ಅಧ್ಯಕ್ಷ  ಡಾ. ಮಲ್ಲಿಕಾರ್ಜುನ ಹಂಜಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಿವಶರಣರು ಸಮಾನತೆ ಬಯಸಿದ ಕಾರಣಗಳು ಮತ್ತು ಸಮಾನತೆಯನ್ನು ಸಂಪಾದಿಸಲು ಅವರು ಕಂಡುಕೊಂಡ ಮಾರ್ಗಗಳ ಕುರಿತು ಚರ್ಚಿಸಲು ಸಭಿಕರಿಗೆ ಅಹ್ವಾನ ನೀಡಿದರು.

ಶಾಬಾದಿ ಗುರುಗಳು ಸಮಾನತೆ ಸಮಾಜದಲ್ಲಿ ಅತ್ಯಂತ ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಹಲವಾರು ಸುಧಾರಣೆಗಳು ಬಂದಿದ್ದರೂ ಇನ್ನೂ ಹೆಚ್ಚಿನ ಪ್ರಗತಿಯಾಗಬೇಕೆಂದು ಹೇಳಿದರು.

ಜಗನ್ನಾಥ ಅವರು ಬಸವಾದಿ ಶರಣರ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಮೆಲುಕು ಹಾಕುತ್ತಾ, ಶರಣರು ಸಾಧಿಸಿದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಸಮಾನತೆಯನ್ನು ಸ್ಮರಿಸಿದರು.

ವಿದ್ಯಾ ಲಾಲಗೊಂಡರ ಅವರು, ಲಿಂಗ ಸಮಾನತೆಯನ್ನು ಪ್ರಪ್ರಥವಾಗಿ ಅನುಷ್ಠಾನಕ್ಕೆ ತಂದ ಶರಣ ಸಂಪ್ರದಾಯವನ್ನು ಕೊಂಡಾಡಿದರು. ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಸಿಎಸ್ ಆರ್ ವ್ಯವಸ್ಥೆಯನ್ನು ತರುವಲ್ಲಿ ಶರಣರು ಮಂಡಿಸಿದ ಸಮಾನತೆಯ ಮಂತ್ರ ದಾರಿ ದೀಪದಂತೆ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಕಲ್ಲಿನಾಥ ಅವರು ಧರ್ಮದ ಉನ್ನತಿಗಾಗಿ ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯನ್ನು ಸಾರಿದ ಶರಣರ ಕೊಡುಗೆ ಅದ್ವಿತೀಯ ಎಂದರು. ಹಿಂದು, ಕ್ರೈಸ್ತ, ಇಸ್ಲಾಂ, ಬೌದ್ಧ, ಸಿಖ್ ಧರ್ಮಗಳಲ್ಲಿ ಇರದ ಸಮಾನತೆಯನ್ನು ಶರಣರು ನಮಗೆ ಕಲಿಸಿದರು ಎಂದು ಅಭಿಪ್ರಾಯಪಟ್ಟರು.

ಎ.ಎಸ್. ಓಂಕಾರಪ್ಪ ಅವರು ಅಲ್ಲಮಪ್ರಭುಗಳ ವಚನ, ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ಎಂಬ ವಿಚಾರವನ್ನು ವಿಸ್ತರಿಸುತ್ತಾ ಶರಣರ ಜಾಣ್ಮೆಯನ್ನು ಕೊಂಡಾಡಿದರು.

ಎ.ಎಸ್. ಓಂಕಾರಪ್ಪ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ ವಚನವನ್ನು ವಿವರಿಸಿದರು. ಹಿರಿಯರಾದ ಮಲ್ಲೇಶಗೌಡ ಪಾಟೀಲರು ಶರಣರ ಸಮಾನತೆ ತತ್ವ ಜನಮನದಲ್ಲಿ ಪ್ರಭಾವ ಬೀರಿದ ರೀತಿ ವರ್ಣಿಸಿದರು.

ಎಚ್ ಏಎಲ್ ಕಾರ್ಮಿಕ ಮುಖಂಡರಾದ ನಾಗರಾಜ ಬಸವ ಸೇವಾ ಸಮಿತಿ ಕಾರ್ಯ ವೈಖರಿಯನ್ನು ಪ್ರಶಂಸಿಸುತ್ತಾ, ಸಮಾನತೆಯನ್ನು ಸಮಾಜದಲ್ಲಿ ತರುವತ್ತ ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಬಸವ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ, ಮನಸ್ಸಿನ ಸ್ಥಿತಿಯನ್ನು ಎತ್ತರಕ್ಕೆ ಜಗತ್ತಿನಲ್ಲಿರುವ ಅಸಮಾನತೆಯನ್ನು ನೀಗಬಹುದು. ಇದರಿಂದ ಸಮಾಧಾನ ಚಿತ್ತ, ಏಕಾಗ್ರತೆ ಮತ್ತು ಇಟ್ಟ ಗುರಿಯನ್ನು ಸಾಧಿಸಲೂ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಭಾಧ್ಯಕ್ಷರಾದ ಸಾಲಿಮಠ ಅವರು ಬಸವಾದಿ ಶರಣರು ಸಾಧಿಸಿದ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಪರಿಸರ ಸಮಾನತೆಯನ್ನು ಕೊಂಡಾಡಿದರು.

ಸಮಿತಿಯ ಹಿಂದಿನ ಅಧ್ಯಕ್ಷರಾದ ಆರ್ ಡಿ ಪಾಟೀಲ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಣ್ಣೇಗೌಡರು, ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲಮ್ಮ ಮತ್ತು ರಾಜಕೀಯ ನಾಯಕರಾದ ಮನೋಜಕುಮಾರ, ಗಿರಿಜಮ್ಮ, ಖಜಾಂಚಿ ಮಲ್ಲಿಕಾರ್ಜುನ ಕಲಹಾಳ, ಸಹಕಾರ್ಯದರ್ಶಿ ವೀರೇಶ ಜಿ. ಕೆ, ಹಿರಿಯರಾದ ನಾಗಿರೆಡ್ಡಿ ಹಾಗೂ ಶಿವಶಂಕರ ರೆಡ್ಡಿ ಅವರ ಬಂಧು ಬಳಗದವರು ಉಪಸ್ಥಿತರಿದ್ದರು.

ಚರ್ಚೆಯಲ್ಲಿ ಭಾಗವಹಿಸಿದ ಮತ್ತು ಪ್ರಾರ್ಥನೆ ಮಾಡಿದ ಎಲ್ಲರಿಗೂ ಶರಣ ಸಾಹಿತ್ಯವನ್ನೊಳಗೊಂಡ ಪುಸ್ತಕಗಳನ್ನು ವಿತರಿಸಲಾಯಿತು. ಸಮಿತಿಯ ಪರವಾಗಿ ಸಭಾಧ್ಯಕ್ಷರನ್ನು ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ಶರಣ ಶಿವಶಂಕರ ದಂಪತಿಗಳನ್ನು ಸನ್ಮಾನಿಸಲಾಯಿತು.

ರಾಜೇಶ್ವರಿ ಪಾಟೀಲ ಅವರ ಪ್ರಾರ್ಥನೆ, ಎ.ಎಸ್. ಓಂಕಾರಪ್ಪ ಸ್ವಾಗತ, ವಂದನಾರ್ಪಣೆ ನಡೆಸಿಕೊಟ್ಟರು. ಶಕುಂತಲಾ ಸಾಲಿಮಠ ವಚನ ಮಂಗಲ ಹಾಡಿದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *