ವಚನಾನಂದ ಸ್ವಾಮೀಜಿ ಶ್ವಾಸ ಪೀಠ ತ್ಯಜಿಸಲು ಮಾರ್ಚ್ 24 ಗಡುವು

ಬಸವ ಮೀಡಿಯಾ
ಬಸವ ಮೀಡಿಯಾ

‘ಮಠವನ್ನು ಗೆಸ್ಟ್ ಹೌಸ್ ಮಾಡಿಕೊಳ್ಳಲು ಬಿಡುವುದಿಲ್ಲ’

ದಾವಣಗೆರೆ

ಹರಿಹರ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಬೆಂಗಳೂರಿನ ಶ್ವಾಸ ಯೋಗ ಪೀಠವನ್ನು ತ್ಯಜಿಸಿ ಇದೇ 24ರಂದು ನಡೆಯಲಿರುವ ಟ್ರಸ್ಟ್‌ ಸಭೆಯಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಬೇಕು, ಎಂದು ಗುರುಪೀಠದ ಟ್ರಸ್ಟ್‌ನ ಮುಖಂಡರು ಗಡುವು ನೀಡಿದ್ದಾರೆ

“ತಿಂಗಳಲ್ಲಿ ಒಂದೆರಡು ದಿನ ಮಾತ್ರ ಗುರುಪೀಠದಲ್ಲಿರುವ ಅವರು ಮಿಕ್ಕಿದ ದಿನ ಬೇರೆಡೆ ಇರುವುದನ್ನು ಒಪ್ಪಲು ಸಾಧ್ಯವಿಲ್ಲ. ಮಠವನ್ನು ಗೆಸ್ಟ್‌ಹೌಸ್‌ ಮಾಡಿಕೊಳ್ಳಲು ಬಿಡುವುದಿಲ್ಲ,” ಎಂದು ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸ್ವಾಮೀಜಿಯವರು ಶ್ವಾಸ ಯೋಗ ಪೀಠ ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಬಗ್ಗೆ ಈಗಾಗಲೇ 6 ಬಾರಿ ಸ್ವಾಮೀಜಿಗೆ ತಿಳಿಸಿದ್ದರೂ, ಅವರು ಅಂತಿಮ ನಿರ್ಧಾರ ಕೈಗೊಂಡಿಲ್ಲ, ಎಂದು ಹೇಳಿದರು.

ತೆಗೆಯುವ ಉದ್ದೇಶವಿಲ್ಲ

ಸ್ವಾಮೀಜಿಯವರನ್ನು ಗುರುಪೀಠದಿಂದ ತೆಗೆಯುವ ಉದ್ದೇಶವಿಲ್ಲ. ಅವರು ಶ್ವಾಸ ಯೋಗ ಪೀಠ ತ್ಯಜಿಸಿ, ಇಲ್ಲಿಯೇ ಉಳಿಯುವ ವಿಶ್ವಾಸವಿದೆ. ತ್ಯಜಿಸದಿದ್ದರೆ, ಟ್ರಸ್ಟ್‌ನ ಮುಖಂಡರು ಸಭೆ ನಡೆಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳು‌ತ್ತೇವೆ’ ಎಂದು ಉಮಾಪತಿ ಹೇಳಿದರು.

ಪೀಠದ ಗುರುಗಳಾಗಿ ವಚನಾನಂದ ಸ್ವಾಮೀಜಿ ಏನು ಮಾಡುತ್ತಾರೋ, ಅಂತಹದ್ದು ಆಗಬೇಕಾಗಿದೆ. ಆದರೆ, ಮಠದಲ್ಲಿ ಸ್ವಾಮೀಜಿಯವರನ್ನು ಪೀಠದಿಂದ ತೆಗೆಯಲು ಸಭೆ ಕರೆದಿದ್ದಾರೆಂದು ಸುಳ್ಳು ಸುದ್ದಿ ಹರಡಿ, ಗದ್ದಲ ಎಬ್ಬಿಸಿದ್ದು ಸರಿಯಲ್ಲ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

ಸಮಾಜದ ಹಿರಿಯ ಮುಖಂಡ ಬಸವರಾಜ ದಿಂಡೂರು ಮಾತನಾಡಿ, 2018ರಲ್ಲಿ ವಚನಾನಂದ ಸ್ವಾಮೀಜಿ ಪಂಚಮಸಾಲಿ ಪೀಠಕ್ಕೆ ಬರುವುದಾದರೆ ಶ್ವಾಸ ಪೀಠವನ್ನು ಒಂದು ವರ್ಷದಲ್ಲಿ ತ್ಯಜಿಸುವಂತೆ ಹೇಳಿದ್ದೆವು. ಈ ಬಗ್ಗೆ ಒಪ್ಪಂದವಾಗಿತ್ತು. ಇನ್ನೂ ಸಹ ಕಾಲ ಮಿಂಚಿಲ್ಲ, ವಚನಾನಂದ ಸ್ವಾಮೀಜಿ ಶ್ವಾಸ ಪೀಠ ತ್ಯಜಿಸಿ, ಪಂಚಮಸಾಲಿ ಪೀಠದಲ್ಲಿ ಮುಂದುವರಿಯಲಿ ಎಂದರು.

ವರ್ತನೆಯ ಬಗ್ಗೆ ಆಕ್ಷೇಪ

ಹಿರಿಯ ಮುಖಂಡ ಬಾವಿ ಬೆಟ್ಟಪ್ಪ ವಚನಾನಂದ ಸ್ವಾಮೀಜಿ ಏನೇನೋ ಪದ ಬಳಸಿ, ಅವಾಚ್ಯವಾಗಿ ಮಾತನಾಡುವುದು ಸರಿಯಲ್ಲ. ಸ್ವಾಮೀಜಿ ಬಾಯಿಯಿಂದ ಇಂತಹ ಪದ ಬರಬಾರದು, ನಿಮ್ಮ ನಡತೆ ಬದಲಿಸಿಕೊಳ್ಳಿ. ಸ್ವಾಮೀಜಿ ವರ್ತನೆಯಲ್ಲಿ ವ್ಯತ್ಯಾಸವಾದರೆ ಬೈಲಾ ಪ್ರಕಾರ ಬದಲಾವಣೆಗೆ ಅವಕಾಶವಿದೆ, ಎಂದು ಹೇಳಿದರು.

‘10 ದಿನ ಎಂದು ಹೇಳಿ ವಿದೇಶ ಪ್ರವಾಸ ಕೈಗೊಳ್ಳುವ ಶ್ರೀಗಳು, 40 ದಿನ ಕಳೆದರೂ ವಾಪಸ್ ಬರುವುದಿಲ್ಲ. ಪ್ರಯಾಗರಾಜ್‌ಗೂ ಹೋಗಿ ಬಂದರು. ಸಮುದಾಯದ ಬಡಜನರ ಬಗೆಗಿನ ಕಾಳಜಿಯಾಗಲೀ, ಸಂಸ್ಕಾರವಾಗಲೀ ಅವರಲ್ಲಿ ಕಾಣುತ್ತಿಲ್ಲ’ ಎಂದು ಉಮಾಪತಿ ಬೇಸರ ವ್ಯಕ್ತಪಡಿಸಿದರು.

‘ಹರಜಾತ್ರೆಯನ್ನು ಸರಳವಾಗಿ ಮಾಡುವಂತೆ ಹೇಳಿದ್ದೆವು. ಆದರೆ, ತಮಗೆ ತಿಳಿದಂತೆ ಸ್ವಾಮೀಜಿ ಮಾಡಿದರು. ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಸಂತೋಷ ಲಾಡ್‌ ವೇದಿಕೆಯಲ್ಲಿಲ್ಲದಿದ್ದರೂ ಅಂತಹವರಿಗೆ ಹೊಗಳಿ, ಚಪ್ಪಾಳೆ ತಟ್ಟುವಂತೆ ಸಮಾಜಕ್ಕೆ ಕರೆ ನೀಡುತ್ತಾರೆಂದರೆ ಇದನ್ನು ಸಮಾಜ ಸಂಘಟನೆ ಎನ್ನಬೇಕೆ,’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅವ್ಯವಹಾರ ನಡೆದಿಲ್ಲ

ಇತ್ತೀಚೆಗೆ ಸ್ವಾಮೀಜಿ ಆಪ್ತರಾಗಿರುವ ಆಡಳಿತಾಧಿಕಾರಿ ರಾಜಕುಮಾರ್ ಟ್ರಸ್ಟಿಗಳಿಂದ ಹಣಕಾಸಿನ ಅವ್ಯವಹಾರವಾಗಿದೆ ಎಂದು ಅಪಾದಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಉಮಾಪತಿ ಟ್ರಸ್ಟ್‌ನಿಂದ ಅವ್ಯವಹಾರ ನಡೆದಿಲ್ಲ, ಎಂದು ಹೇಳಿದರು.

“ಪ್ರತೀ ವರ್ಷವೂ ಸರ್ಕಾರಕ್ಕೆ, ಸಮುದಾಯಕ್ಕೆ ಲೆಕ್ಕ ನೀಡಿದ್ದೇವೆ. ಹಾಲಿ ಟ್ರಸ್ಟಿಗಳನ್ನು ತೆಗೆದು ಅವರು ಸೂಚಿಸಿದವರನ್ನು ಟ್ರಸ್ಟಿಗಳನ್ನಾಗಿ ಮಾಡಲು ಸ್ವಾಮೀಜಿ ಹೇಳಿದ್ದರು. ಅವರ ಮಾತಿಗೆ ನಾವು ಒಪ್ಪದಿದ್ದಾಗ, ಲೆಕ್ಕಪತ್ರದ ವಿಚಾರ ತಂದಿದ್ದಾರೆ’ ಎಂದರು.

ಸೋಲ್ ಟ್ರಸ್ಟಿ ಬೇಡಿಕೆ

ಸ್ವಾಮೀಜಿ ಟ್ರಸ್ಟಿಗಳನ್ನೇ ಬದಲಿಸಲು ಹೇಳುತ್ತಿದ್ದರು. ಸೋಲ್ ಟ್ರಸ್ಟ್ ಮಾಡಿದರೆ, ತಾವು ಮುನ್ನಡೆಸುವುದಾಗಿ ಹೇಳುತ್ತಿದ್ದರು. ಪಂಚಮಸಾಲಿ ಪೀಠವನ್ನು 1994ರಿಂದ ಎಲ್ಲರೂ ಪ್ರಯತ್ನಪಟ್ಟು, ಸಾಕಷ್ಟು ಪರಿಶ್ರಮದಿಂದ ಕಟ್ಟಿದ್ದೇವೆ. ಅಂತಹ ಮಠದ ಟ್ರಸ್ಟಿಗಳನ್ನು ಬದಲಿಸುವಂತೆ ಹೇಳುವುದು, ಸೋಲ್ ಟ್ರಸ್ಟ್ ಮಾಡುವಂತೆ ಹೇಳಿದರೆ ಏನರ್ಥ ಎಂದು ಅವರು ಉಮಾಪತಿ ಪ್ರಶ್ನಿಸಿದರು.

ಸಮಾಜದ ಹಿರಿಯ ನಾಯಕ ಬಾವಿ ಬೆಟ್ಟಪ್ಪ, ಪಿ.ಡಿ.ಶಿರೂರು, ಜ್ಯೋತಿಪ್ರಕಾಶ, ಕಳಸನಗೌಡ, ನಾಗಣ್ಣ ಚಿತ್ರದುರ್ಗ, ಹಾವೇರಿ ಮಹೇಶ, ನಿಡೋಣಿ, ಬಾಬಣ್ಣ, ಪರಮೇಶ ಪಟ್ಟಣಶೆಟ್ಟಿ, ವಸಂತ, ಪುಷ್ಪಾ ಹುಲ್ಲತ್ತಿ, ರಶ್ಮಿ ಕುಂಕೋದ್‌, ಕೊಟ್ರೇಶ, ಕಕ್ಕರಗೊಳ್ಳ ಮಂಜುನಾಥ ಪುರವಂತರ, ರವಿಕುಮಾರ ಬಾತಿ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *