ದಾವಣಗೆರೆ
ಹರಿಹರದ ಲಿಂಗಾಯತ ಪಂಚಮಸಾಲಿ ಪೀಠದಿಂದ ಯೋಗಗುರು ವಚನಾನಂದ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ.
ಇಂದು ಗುರುಪೀಠದಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ 12 ಮಂದಿ ಧರ್ಮದರ್ಶಿಗಳು ಭಾಗವಹಿಸಿ ಸ್ವಾಮೀಜಿಯನ್ನು ಪೀಠದಿಂದ ತೆಗೆಯಲು ನಿರ್ಣಯಿಸಿದರು.
ಶ್ವಾಸಪೀಠ ಅಥವಾ ಹರಿಹರ ಪೀಠ ಎರಡರಲ್ಲಿ ಒಂದನ್ನು ಮಾರ್ಚ್ 24ರ ಒಳಗೆ ಆಯ್ಕೆ ಮಾಡಿಕೊಳ್ಳಲು ಧರ್ಮದರ್ಶಿಗಳು ಸ್ವಾಮೀಜಿಗೆ ಗಡುವು ನೀಡಿದ್ದರು. ಆದರೆ ಸ್ವಾಮೀಜಿ ಇದಕ್ಕೆ ಸ್ಪಂದಿಸದಿದ್ದುದ್ದು ಈ ಕ್ರಮಕ್ಕೆ ಕಾರಣವೆಂದು ಹೇಳಲಾಗಿದೆ.
ಮಾರ್ಚ್ 24 ನಡೆಯಬೇಕಿದ್ದ ಧರ್ಮದರ್ಶಿಗಳ ಸಭೆಯನ್ನು ಪೋಲೀಸರ ಸಲಹೆ ಮೇರೆಗೆ ಮುಂದಕ್ಕೆ ಹಾಕಲಾಗಿತ್ತು. ದಾವಣಗೆರೆಯಲ್ಲಿ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಸಭೆಗೆ ಬೇಕಾದ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುವುದಿಲ್ಲವೆಂದು ಪೊಲೀಸರು ಹೇಳಿದ್ದರು.
ಇಂದು ಟ್ರಸ್ಟ್ ಸಭೆ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಕೆ.ಎಂ. ಜ್ಯೋತಿಪ್ರಕಾಶ್, ಬಸವರಾಜ ದಿಂಡೂರ, ಬಾವಿ ಬೆಟ್ಟಪ್ಪ, ಚಂದ್ರಶೇಖರ ಪೂಜಾರ್ ಸೇರಿದಂತೆ 12 ಟ್ರಸ್ಟಿಗಳು ಭಾಗವಹಿಸಿದರು.
ಟ್ರಸ್ಟ್ ಸಭೆಯ ಬಳಿಕ ಮಾತನಾಡಿದ ಟ್ರಸ್ಟಿ ಬಸವರಾಜ ದಿಂಡೂರ ಅವರು, “ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠ ಈ ಎರಡರಲ್ಲಿ ಒಂದನ್ನು ಆಯ್ಕೆಮಾಡುವಂತೆ ಸೂಚಿಸಲಾಗಿತ್ತು. ಆದರೆ, ಸ್ವಾಮೀಜಿಗಳು ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದರು.
ಮತ್ತೊಬ್ಬ ಟ್ರಸ್ಟಿ ಜಿ.ಪಿ. ಪಾಟೀಲ್, “ಇದು ಟ್ರಸ್ಟ್ನ ವೈಯಕ್ತಿಕ ನಿರ್ಧಾರವಲ್ಲ, ಸಮಾಜದ ಒಟ್ಟಾರೆ ಅಭಿಪ್ರಾಯದ ಮೇರೆಗೆ ತೆಗೆದುಕೊಳ್ಳಲಾದ ತೀರ್ಮಾನ. ಸ್ವಾಮೀಜಿ ಶ್ವಾಸಗುರು ಪೀಠವನ್ನು ಬಿಡದೇ ಇರುವುದೇ ಪ್ರಮುಖ ಕಾರಣ. ಉಳಿದ ಕಾರಣಗಳನ್ನು ಅಧಿಕೃತವಾಗಿ ತಿಳಿಸಲಾಗುತ್ತದೆ” ಎಂದು ಹೇಳಿದರು.
ಸಭೆ ನಂತರ ಟ್ರಸ್ಟಿಗಳು ಬಿಗಿ ಭದ್ರತೆಯೊಂದಿಗೆ ಶಾಲಾ ವಾಹನದಲ್ಲಿ ಸ್ಥಳ ತೊರೆದರು.
ಟ್ರಸ್ಟಿಗಳ ವಿರುದ್ಧ ಘೋಷಣೆ
ಮಠದ ಪ್ರವೇಶದ್ವಾರ ಬಳಿ ಜಮಾವಣೆಗೊಂಡಿದ್ದ ಭಕ್ತರು ಟ್ರಸ್ಟಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿ ಉದ್ವಿಗ್ನವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮಠದ ಸುತ್ತಮುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಭಕ್ತರನ್ನು ನಿಯಂತ್ರಿಸಲು ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು.
ಆಡಳಿತಾಧಿಕಾರಿ ರಾಜಕುಮಾರ್ ಅವರ ನೇತೃತ್ವದಲ್ಲಿ ನೆರದಿದ್ದ ಸ್ವಾಮೀಜಿಯ ಬೆಂಬಲಿಗರು ಧರ್ಮದರ್ಶಿಗಳು ಲೆಕ್ಕ ಕೊಡಬೇಕೆಂದು ಆಗ್ರಹಿಸಿದರು.
ಸಮಾಜದ ಜನ ಹೇಳಿದಂತೆ ಕೇಳುತ್ತೇನೆ
ಉಚ್ಚಾಟನೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವಚನಾನಂದ ಸ್ವಾಮೀಜಿ ಇಂದು ಸಭೆ ನಡೆಯುವ ಬಗ್ಗೆ ಯಾವುದೇ ನೋಟಿಸ್ ಸಹ ನೀಡಿಲ್ಲ. ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ, ಪಂಚಮಸಾಲಿ ಮಠ 12 ಜನರ ಮಠ ಅಲ್ಲ, ಎಂದು ಹೇಳಿದರು.
ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಸಮಾಜದ ಜನ ಹೇಳಿದಂತೆ ಕೇಳುತ್ತೇನೆ ಎಂದರು.
ಕರ್ನಾಟಕದಲ್ಲಿ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿಗಳು ಇಂದು ಗಟ್ಟಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಹಿಂದೆ ಸಿದ್ದಲಿಂಗ ಸ್ವಾಮೀಜಿ ಇರಬಹುದು, ಈಗ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.
ಟ್ರಸ್ಟಿಗಳ ಬಗ್ಗೆ ಮಾತನಾಡಿದ ಅವರು, ಕೆಲವರಿಗೆ ನಾವು ಹಿಂದೂಗಳು ಎಂದು ಹೇಳಬಾರದು. ಇನ್ನು ಕೆಲವರಿಗೆ ಲಿಂಗಾಯತ ಹಿಂದೂ ಎನ್ನಬಾರದು. ಮಠದಲ್ಲಿ ಬಸವಣ್ಣನವರ ಫೋಟೋ ಹಾಕಲು ಸಹ ಬಿಟ್ಟಿರಲಿಲ್ಲ ಎಂದು ದೂರಿದರು.

ಸ್ವಾಮಿಗಳು ಜನರಿಗೆ ಪ್ರಚೋದನಕಾರಿಯಾಗಿ ಮಾತನಾಡಬಾರದು. ರಾಜಕೀಯ ಹೊಗೆ ಕಣಬಾರದು.
ವಚನಾನಂದ ಸ್ವಾಮೀಜಿಯವರು ಲಿಂಗಾಯತ ಧರ್ಮ ಒಂದು ಬಹು ದೊಡ್ಡ ಪಂಗಡವಾದ ಪಂಚಮಸಾಲಿ ಪೀಠಕ್ಕಿಂತ ಬ್ರಾಹ್ಮಣರ ಮಂತ್ರಾಲಯ ರಾಘವೇಂದ್ರ ಮಠಕ್ಕೆ ಸೇರಿ ಶಾಶ್ವತವಾಗಿ ಗುರು ರಾಘವೇಂದ್ರ ರ ಪುತ್ತಲಿ ಮೇಲೆ ಹೊತ್ತು ಮೆರವಣಿಗೆ ಮಾಡುವುದಕ್ಕೆ ಲಾಯಕ್ಕು. ಅವರು ಹರಿಹರ ಪಂಚಮಸಾಲಿ ಪೀಠಕ್ಕೆ ನಾಲಾಯಕ್.
ಬಸವ ಧರ್ಮಕ್ಕೆ ಜಯವಾಗಲಿ ಜನಸಾಮಾನ್ಯರಿಗೆ ಶುಭವಾಗಲಿ 👍❤️👌💐🙏
ಅವರೇ ಕೆಲವು ಭಕ್ತರನ್ನು ತಮಗೆ ಬೆಂಬಲಿಸಿ ಪ್ರತಿಭಟನೆ ಮಾಡಲು ದುಡ್ಡು ಕೊಟ್ಟು ಕರೆಸಿರಬೇಕು