ಚರ್ಚೆ: ‘ಬಸವ ಸಂಸ್ಕೃತಿ ಅಭಿಯಾನ’ ನಿರಂತರ ಚಳವಳಿಯಾಗಲಿ

ಲಿಂಗಾಯತ ಮಠಾಧೀಶರ ವಿರುದ್ಧ ಮನುವಾದಿಗಳಿಗೆ ಎಲ್ಲಿಲ್ಲದ ಮತ್ಸರವಿದೆ.

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಡಾ ವಡ್ಡಗೆರೆ ನಾಗರಾಜಯ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

1) ಬಸವ ಸಂಸ್ಕೃತಿ ಅಭಿಯಾನ ಕನ್ನಡ ಸಮಾಜಕ್ಕೆ ಏನು ಸಂದೇಶ ನೀಡಿದೆ? ಅದರ ಪರಿಣಾಮವೇನು?

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ “ಬಸವ ಸಂಸ್ಕೃತಿ ಅಭಿಯಾನ” ಅತ್ಯಂತ ಯಶಸ್ವಿಯಾಗಿ ನಡೆಯಿತು.

ಬಸವ ಸಂಸ್ಕೃತಿ ಅಭಿಯಾನದಿಂದಾಗಿ ಬಹುಮುಖ್ಯವಾಗಿ ಶರಣರ ಸತ್ಯಶುದ್ಧ ಕಾಯಕ ಪರಿಕಲ್ಪನೆ, ಅಸಂಗ್ರಹ ಸರಳ ಆರ್ಥಿಕ ತತ್ವ, ತ್ರಿವಿಧ ದಾಸೋಹ, ಲಿಂಗ ಸಮಾನತಾ ತತ್ವ, ದಯಾರ್ಶ ಮೌಲ್ಯ, ಸಹಜೀವನ ಸೌಹಾರ್ದತೆ, ಅನುಭಾವ ಅಥವಾ ಅಧ್ಯಾತ್ಮ ಇನ್ನೂ ಮುಂತಾದ ತತ್ವಾದರ್ಶಗಳನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಲು ಈ ಅಭಿಯಾನವು ನೆರವಾಯಿತು.

ಧಾರ್ಮಿಕ ಜಿಜ್ಞಾಸುಗಳು ಹಾಗೂ ಬಸವ ತತ್ವದ ಚಿಂತಕರು ನಡೆಸಿದ ಪ್ರವಚನ- ಚರ್ಚೆ- ಸಂವಾದ – ಉಪನ್ಯಾಸಗಳಿಂದ ಪ್ರಾಥಮಿಕ ವಿದ್ಯಾರ್ಥಿಗಳಿಂದ ಹಿಡಿದು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರವರೆಗೆ ವಚನ ಸಂವಾದ, ವಚನ ಸಂಗೀತ ಗಾಯನ, ಕಿರು ನಾಟಕ ಮತ್ತು ಬೀದಿ ನಾಟಕ ಪ್ರದರ್ಶನಗಳಿಂದ ಶರಣರ ಜೀವನದರ್ಶನದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು.

ಕರ್ನಾಟಕದ ಮೂಲೆಮೂಲೆಗಳಲ್ಲಿ ಐದು ನೂರಕ್ಕೂ ಹೆಚ್ಚು ಮಠಾಧೀಶರು ಹಾಗೂ ಲಕ್ಷಾಂತರ ಬಸವಾನುಯಾಯಿಗಳ ಪಾಲ್ಗೊಳ್ಳುವಿಕೆಯಿಂದಾಗಿ ಈ ಅಭಿಯಾನವು, ಕೋಮುವಾದಿ ವಿಷಗಾಳಿಯನ್ನು ತೊಡೆದು ಹಾಕಲು ಹಾಗೂ ಲಿಂಗಾಯತ ಮೌಲ್ಯಗಳನ್ನು ಮರು ವ್ಯಾಖ್ಯಾನಿಸಲು ಹಾಗೂ ‘ಬಸವ ಧರ್ಮ’ ಪಾಲನೆಯ ಜಾಗೃತಿ ಮೂಡಿಸಲು ಆ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಬಹುದೊಡ್ಡ ಸಾಧ್ಯತೆಯನ್ನು ನಿರ್ಮಾಣ ಮಾಡಿಕೊಟ್ಟಿದೆ.

2) ಅಭಿಯಾನ ಮತ್ತು ಅದರಲ್ಲಿ ಭಾಗವಹಿಸಿದ ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಕೋಪ ತಾಪ ಬಂದಿರುವುದು ಯಾಕೆ?

ಇದು ಬಹಳ ಗಂಭೀರವಾದ ಪ್ರಶ್ನೆ. ಬ್ರಾಹ್ಮಣ ಯಾಜಮಾನ್ಯದ ಹಿಂದೂಧರ್ಮವು ನಿಜಾರ್ಥದಲ್ಲಿ ವೈದಿಕ ಧರ್ಮವೇ ಆಗಿರುತ್ತದೆ. ವೈದಿಕಾರ್ಯರು ಯಾವತ್ತಿಗೂ ಅವೈದಿಕ ನೆಲೆಗಳನ್ನು ರೂಕ್ಷವಾಗಿಯೇ ಹತ್ತಿಕ್ಕಲು ಚರಿತ್ರೆಯುದ್ದಕ್ಕೂ ನಡೆಸಿರುವ ಪ್ರಯತ್ನಗಳು ನಮ್ಮ ಚರಿತ್ರೆಯ ಪುಟಗಳನ್ನು ರಕ್ತರಂಜಿತಗೊಳಿಸಿರುವುದನ್ನು ನಾವು ಕಂಡಿದ್ದೇವೆ.

ವೈದಿಕಾರ್ಯರ ಧರ್ಮಶಾಸ್ತ್ರ ಗ್ರಂಥಗಳನ್ನು ನಿರಾಕರಿಸುವ ಲಿಂಗಾಯತ ಮಠಾಧೀಶರ ವಿರುದ್ಧ ಮತ್ತು ಬಸವಾನುಯಾಯಿಗಳ ವಿರುದ್ಧ ಮನುವಾದಿಗಳಿಗೆ ಎಲ್ಲಿಲ್ಲದ ಮತ್ಸರವಿದೆ. ಯಾಕೆಂದರೆ ಮನುವಾದಿಗಳು ಸ್ಥಿತಿ ಪಾಲಕರೇ ಹೊರತು ಸ್ಥಿತಿ ಪರಿವರ್ತಕರಲ್ಲ.

‘ವೇದವೆಂಬುದು ಓದಿನ ಮಾತು’ ಎಂದು ಹೇಳಿದ ಅಲ್ಲಮಪ್ರಭು ಹಾಗೂ ‘ವೇದಕ್ಕೆ ಒರೆಯ ಕಟ್ಟುವೆ’ ಎಂದು ಹೇಳಿದ ಬಸವಣ್ಣನ ಆಶಯಗಳಿಗೆ ತಕ್ಕಂತೆ ‘ವೇದವೆಂಬ ಓದಿನ ಮಾತಿಗೆ’ ಒರೆಯ ಕಟ್ಟಿದ ಅಂಬೇಡ್ಕರ್ ಭಾರತದ ಸಂವಿಧಾನವನ್ನು ಬರೆಯುವ ಮೂಲಕ ವೇದಗಳನ್ನು ಬಿಸಾಡಿದರು. ಸಂವಿಧಾನವನ್ನು ನಮ್ಮ ಕೈಗೆ ಕೊಟ್ಟರು.

ಅನುಭಾವಿ ವಚನಕಾರ ಅಲ್ಲಮಪ್ರಭು, ‘ಶಾಸ್ತ್ರವೆಂಬುದು ಸಂತೆಯ ಸುದ್ದಿ’ ಎಂದು ಹೇಳಿದರೆ ಬಸವಣ್ಣನವರು ‘ಶಾಸ್ತ್ರಗಳಿಗೆ ನಿಗಳವನಿಕ್ಕುವೆ’ ಎಂದರು. ಬಸವಾಲ್ಲಮರ ಆಶಯಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಸಂತೆಯ ವ್ಯಾಪಾರ ವಹಿವಾಟಿನ ಸದ್ದು ಗದ್ದಲಗಳ ಸುದ್ದಿಯಂತಹ ಶಾಸ್ತ್ರಗ್ರಂಥಗಳಿಗೆ ಅಂಬೇಡ್ಕರ್ ಭಾರತದ ಸಂವಿಧಾನವನ್ನು ರಚಿಸುವ ಮೂಲಕ ನಿಗಳ(ಬೆಂಕಿ) ಹಚ್ಚಿದ್ದಾರೆ.

ಇದರ ಸಂಕೇತವಾಗಿ ಮನು ಬರೆದ ಮನುಸ್ಮೃತಿಗೆ ಬೆಂಕಿ ಹಚ್ಚುವ ಮೂಲಕ ಅಂಬೇಡ್ಕರ್ ಬಸವಾಲ್ಲಮರ ಆಶಯವನ್ನು ಈಡೇರಿಸಿದ್ದಾರೆ. ವಚನಕಾರರ ಅಂದಿನ ಸಂಸತ್ತಾಗಿ ಕಾರ್ಯನಿರ್ವಹಿಸುತ್ತಿದ್ದ ಅನುಭವ ಮಂಟಪದ ಕಾಯಕ ಜೀವಿಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಚನಗಳೇ ಅವರಿಗೆ ಸಂವಿಧಾನವಾಗಿದ್ದವು.

ಮನುಸ್ಮೃತಿಗೆ ಬೆಂಕಿ ಹಚ್ಚುವ ಮೂಲಕ ಅಂಬೇಡ್ಕರ್
ಬಸವಾಲ್ಲಮರ ಆಶಯವನ್ನು ಈಡೇರಿಸಿದ್ದಾರೆ.

ಬಸವಾದಿ ಪ್ರಮಥರ ವಚನಗಳ ಆಶಯಗಳು ಧರ್ಮಾತೀತ ಮತ್ತು ಸೀಮಾತೀತವಾಗಿ ಮುಟ್ಟುತ್ತವೆ ಎಂಬುದನ್ನು ಯಾರೂ ನಿರಾಕರಿಸಲಾಗದು. ಬಸವಣ್ಣನಂತೆ ಮತ್ತು ಬಸವಣ್ಣನ ಕಾರಣದಿಂದ ಜನಿವಾರ ಕಿತ್ತೆಸೆದು ಬಂದ ಯಾವ ಬ್ರಾಹ್ಮಣ ವಚನಕಾರನಿದ್ದಾನೆ? ಹೀಗೆ ಯಾರೇ ಪ್ರಶ್ನಿಸಬಹುದು. ಬ್ರಾಹ್ಮಣರ ಮಧುವರಸ ತನ್ನ ಮಗಳನ್ನು ಸಮಗಾರರ ಮಗನಿಗೆ ಕೊಟ್ಟು ಬಸವಣ್ಣನ ನೇತೃತ್ವದಲ್ಲಿ ಲಿಂಗಾಯತೀಕರಿಸಿ ಮದುವೆ ಮಾಡಿದ ಕಾರಣ ಶರಣರ ಕಗ್ಗೊಲೆಗಳೇ ನಡೆದವು.

ಬಸವಣ್ಣನವರು ತಮ್ಮ ಆಶಯಗಳನ್ನು ಅನುಷ್ಠಾನಕ್ಕೆ ತರಲಾಗದಂತೆ ಅಡ್ಡಿಪಡಿಸಿದ್ದು ಬ್ರಾಹ್ಮಣರು. ಅಂಬೇಡ್ಕರ್ ಅವರು ಸಂವಿಧಾನ ಬರೆಯುವಾಗ ಇದೇ ವರ್ಗ ಅಡ್ಡಿಪಡಿಸಿದ್ದಾರೆಂಬುದು ನಮಗೇಕೆ ಅರ್ಥವಾಗುತ್ತಿಲ್ಲ? ಅಂಬೇಡ್ಕರ್ ಅವರು ಎಲ್ಲಾ ಧರ್ಮೀಯರನ್ನು ಸಂವಿಧಾನದ ಮೂಲಕ ಇಡೀ ಭಾರತಾದ್ಯಂತ ಅಖಂಡವಾಗಿ ತಬ್ಬಲು ಸಾಧ್ಯವಾಗಿದೆ. ಹೀಗೆ ಆಡಳಿತ ಸೂತ್ರದಲ್ಲಿ ವಚನಗಳು ಸಮಗ್ರ ಭಾರತವನ್ನು ತಬ್ಬುತ್ತವೆಯೇ? ತಬ್ಬಲಾರವಲ್ಲವೇ? ಹೀಗೆ ವಾದ ಹೂಡಬಹುದು.

ಬಸವಣ್ಣನವರ ಮುಂದುವರೆದ ರೂಪವೇ ಅಂಬೇಡ್ಕರ್. ಅಂಬೇಡ್ಕರ್ ರವರು ವಚನಕಾರರ ಆಶಯಗಳನ್ನು ಸಂವಿಧಾನದ ರಾಜಕೀಯ ಸೂತ್ರದಿಂದ ಸಕಲರ ನಡೆಯಾಗಿ ಅಳವಡಿಸಿದರು. ಅಂಬೇಡ್ಕರ್ ರವರ ಸಂವಿಧಾನವನ್ನಾಗಲೀ ಶರಣರ ವಚನಗಳನ್ನಾಗಲೀ ಖುರಾನ್ ಭಗವದ್ಗೀತೆಗಳಂತೆ ಪವಿತ್ರವೆಂದು ಪೂಜನೀಯಗೊಳಿಸುವುದು ಬೇಡ. ಖುರಾನ್ ಭಗವದ್ಗೀತೆಗಿಂತಲೂ ಸಂವಿಧಾನ ಮತ್ತು ವಚನಗಳು ಅತ್ಯಂತ ಮಹತ್ವದವೆಂದು ನಾವು ತಿಳಿಯಬೇಕಾಗಿದೆ. ಬಸವಾದಿ ಪ್ರಮಥರ ವಚನಗಳನ್ನು ಮತ್ತು ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಹೊಸ ಪ್ರವೇಶಿಕೆಯಿಂದ ಅಭ್ಯಾಸ ಮಾಡಲು ಇಡೀ ಭಾರತೀಯರು ತೊಡಗಿಕೊಳ್ಳಬೇಕಾದ ಅಗತ್ಯವಿದೆ.

ಬಸವ ಸಂಸ್ಕೃತಿ ಅಭಿಯಾನದಲ್ಲಿ ಶರಣರ ಮತ್ತು ಅಂಬೇಡ್ಕರ್ ಅವರ ಇಂತಹ ಕ್ರಾಂತಿಕಾರಿ ಚಿಂತನೆಗಳನ್ನು ಪ್ರಚಾರ ಮಾಡುವ ಲಿಂಗಾಯತ ಪೂಜ್ಯರ ವಿರುದ್ಧ ಮತ್ತು ಲಿಂಗಾಯತ ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಕೋಪ ತಾಪ ಬಂದಿರುವುದು ವೈದಿಕ ಧರ್ಮದ ಬೇರುಗಳು ಕಳಚುತ್ತಿವೆ ಎಂಬ ಭಯದಿಂದಲೇ ಎಂಬುದನ್ನು ನಾವು ಗ್ರಹಿಸಬೇಕಾಗಿದೆ.

ಬಸವತತ್ವ ಕೋಮು ವಿಷಗಾಳಿಗೆ ಅಡಚಣೆಯಾಗಿದೆ

3) ಅಭಿಯಾನಕ್ಕೆ ಪ್ರತಿಯಾಗಿ ಈಗ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಸಿದ್ಧವಾಗುತ್ತಿದ್ದಾರೆ. ಲಿಂಗಾಯತ ಮಠಾಧಿಪತಿಗಳ, ಮುಖಂಡರ ಮೇಲೆ ಕೆಲವು ಹಿಂದುತ್ವ ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಇವರ ಉದ್ದೇಶವೇನು?

ಬಸವ ಸಂಸ್ಕೃತಿ ಅಭಿಯಾನಕ್ಕೆ ಪ್ರತಿಯಾಗಿ ಕೆಲವು ಹುಸಿ ಲಿಂಗಾಯತರು ಮತ್ತು ವೀರಶೈವರು ಕಾಳಕೂಟ ಸಾಂಸ್ಕೃತಿಕ ಪೊಲೀಸುಗಿರಿ ನಡೆಸುತ್ತಾ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಲಿಂಗಾಯತ ಮಠಾಧಿಪತಿಗಳ, ಮುಖಂಡರ ಮೇಲೆ ಕೆಲವು ಹಿಂದುತ್ವ ಪ್ರತಿಪಾದಕ ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿರುವುದರ ಹಿಂದೆ ಹುಸಿ ದೇಶಭಕ್ತರ ಬಹುದೊಡ್ಡ ಕೈವಾಡವಿದೆ. ಶರಣರು ಯಾವತ್ತೂ ಹಿಂದೂಧರ್ಮದ ಮೌಲ್ಯಗಳನ್ನು ಒಪ್ಪಿದವರಲ್ಲ. ಬಸವದ್ರೋಹಿಗಳ ಈ ಪರಿಯ ಪ್ರಯತ್ನ ಸಮಾಜಕ್ಕೆ ಕೋಮುವಾದದ ದಳ್ಳುರಿ ಹಚ್ಚುವ ಮೂಲಕ ಹಿಂದುತ್ವವನ್ನು ಹೇರುವ ಹವಣಿಕೆಯೇ ಹೊರತು ಮತ್ತೇನಲ್ಲ.

ಹನ್ನೆರಡನೇ ಶತಮಾನದಲ್ಲಿ ವಚನಕಾರರ ವಚನಗಳನ್ನು ಹಿಂದೂಧರ್ಮೀಯರು ಸುಟ್ಟು ಹಾಕಿದ್ದು ಯಾಕೆ? ಶರಣರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ ಕೊಂದು ಹಾಕಿದ್ದು ಯಾಕೆ ? ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಳ್ಳುವ ಲಿಂಗಾಯತರು ಈ ಪ್ರಶ್ನೆಗಳಿಗೆ ಉತ್ತರ ಹುಡುಕಲಿ ಸಾಕು. “ಬಸವಾದಿ ಶರಣರ ಹಿಂದೂ ಸಮಾವೇಶ” ಆಯೋಜನೆ ಯಾರ ವಿರುದ್ಧ ಅಥವಾ ಯಾರ ಪರ ? ಎಂಬುದು ಆಗ ಅರ್ಥವಾದೀತು.

4) ಇದು ಲಿಂಗಾಯತರ ಸಮಸ್ಯೆ ಮಾತ್ರವೇ ಅಥವಾ ಈ ಘರ್ಷಣೆ ಇಡೀ ಸಮಾಜದ ಮೇಲೆ ಪರಿಣಾಮ ಬೀರಲಿದೆಯೇ?

ಇಂತಹ ಸಾಂಸ್ಕೃತಿಕ ಘರ್ಷಣೆಯ ಬೆಳವಣಿಗೆ ಲಿಂಗಾಯತರ ಸಮಸ್ಯೆ ಮಾತ್ರವಲ್ಲದೇ ಒಟ್ಟಾರೆ ಇಡೀ ಸಮಾಜದ ಮೇಲೆ ಅಡ್ಡಪರಿಣಾಮ ಬೀರಲಿದೆ. ಯಾಕೆಂದರೆ ಲಿಂಗಾಯತವು ಬೌದ್ಧ ಮತ್ತಿತರ ದೇಶಿ ಸಿದ್ಧ ಪಥಗಳಲ್ಲಿ ಹಾಗೂ ಅಂಬೇಡ್ಕರ್ ಅವರ ಚಿಂತನಾಧಾರೆಗಳಲ್ಲಿ ತನ್ನ ಸಮಾನಾಂತರ ಮತ್ತು ಕುಲಮೂಲ ಗುರುತುಗಳನ್ನು ಕಂಡುಕೊಳ್ಳಬೇಕಿದೆ.

ವಿಪರ್ಯಾಸವೆಂದರೆ ಕೆಲವು ಲಿಂಗಾಯತರು ಹಾಗೂ ಲಿಂಗಾಯತೇತರ ಸಮುದಾಯಗಳ ಜನ ಬಸವಪ್ರಣೀತ ತತ್ವಾದರ್ಶಗಳಿಗೆ ವಿರುದ್ಧವಾದ ವೈದಿಕಾರ್ಯರ ಸಾಂಸ್ಕೃತಿಕ ಹೇರಿಕೆಗಳನ್ನು ಆವಾಹಿಸಿಕೊಳ್ಳುತ್ತಿದ್ದಾರೆ. ಲಿಂಗಾಯತರು ವೈದಿಕಾರ್ಯರ ಹುಸಿ ಶ್ರೇಷ್ಠತೆಯ ‌ಅಪಪ್ರಥೆಗಳನ್ನು ನೀಗಿಕೊಳ್ಳಬೇಕು. ಬಸವಣ್ಣನವರ ತಾತ್ವಿಕತೆಯ ವಿರುದ್ಧ ಕೆಲವು ಲಿಂಗಾಯತರು ಮತ್ತು ವೀರಶೈವರು, ಅಂಬೇಡ್ಕರ್ ತಾತ್ವಿಕತೆಯ ವಿರುದ್ಧ ಕೆಲವು ದಲಿತರು ಮತ್ತು ಕುವೆಂಪು ಅವರ ತಾತ್ವಿಕತೆಯ ವಿರುದ್ಧ ಕೆಲವು ಒಕ್ಕಲಿಗರು ಬ್ರಾಹ್ಮಣ್ಯದ ವೈರಸ್ ನಿಂದ ಬಾಧಿತರಾಗಿ ನಡೆಯುತ್ತಿರುವ ಕಾರಣದಿಂದಾಗಿ ಈ ಜಾತ್ಯತೀತ ನಾಯಕರನ್ನು ಜಾತಿಯ ಕೇಂದ್ರದಲ್ಲಿರಿಸಿ ನೋಡುವ ಕುರೂಪ ನೋಟವು ಪ್ರಾಪ್ತವಾಗಿದೆ.

ಇದರಿಂದಾಗಿರುವ ದೊಡ್ಡ ಅಪಾಯವೆಂದರೆ ಈ ಎಲ್ಲಾ ಬಂಡುಕೋರ ನಾಯಕರು ಯಾವ ರಾಜಕೀಯ ಮತ್ತು ಧಾರ್ಮಿಕ ಸಿದ್ಧಾಂತವನ್ನು ವಿರೋಧಿಸಿದರೋ ಅಂತಹ ಶಕ್ತಿಗಳೊಂದಿಗೆ ಅನೈತಿಕ ಕೂಡಾವಳಿ ಏರ್ಪಟ್ಟಿದೆ. “ಹಿಂದೂ ನಾವೆಲ್ಲರೂ ಒಂದು” ಎಂದು ಕೇವಲ ಘೋಷಣೆ ಕೂಗುವ ಧರ್ಮದಲ್ಲಿ ಎಲ್ಲಾ ಜಾತಿಗಳು ಸಾಮಾಜಿಕ ಶ್ರೇಣೀಕೃತ ಚೌಕಟ್ಟಿನಲ್ಲಿ ಮೇಲು ಕೀಳೆಂದು ಬಡಿದಾಡುತ್ತಿವೆ. ಇದನ್ನು ನೀಗಲು ‘ಬಸವ ಸಂಸ್ಕೃತಿ ಅಭಿಯಾನ’ ಒಂದು ನಿರಂತರವಾದ ಚಳವಳಿಯಾಗಬೇಕಿದೆ.

5) ಹಿಂದುತ್ವಕ್ಕೆ ಹೊಂದದವರಿಗೆ ಇಂದು ಧಾರ್ಮಿಕ ಸ್ವಾತಂತ್ರ್ಯವಿದೆಯೇ? ಇದಕ್ಕೆ ನಾವೇನು ಮಾಡಬೇಕು?

ಬ್ರಾಹ್ಮಣ್ಯ ಮತ್ತು ಹಿಂದುತ್ವದೊಂದಿಗೆ ರಾಜಿ ಮಾಡಿಕೊಳ್ಳದವರಿಗೆ ಇಂದು ಧಾರ್ಮಿಕ ಸ್ವಾತಂತ್ರ್ಯಕ್ಕೆ ದೊಡ್ಡ ತೊಡಕುಗಳು ಎದುರಾಗಿವೆ. ಶರಣರು ಕುಂಕುಮ ಧರಿಸಲಿಲ್ಲ. ಲಿಂಗಾಯತರು ಕುಂಕುಮ ಧರಿಸುತ್ತಾರಲ್ಲಾ? ಅವರು ಹುಸಿ ದೇಶಭಕ್ತರೆಂದು ತೋರಿಸಿಕೊಳ್ಳಲು ಕುಂಕುಮ ಧರಿಸುವ ಪರಿಸ್ಥಿತಿಯನ್ನು ತಂದೊಡ್ಡಲಾಗಿದೆ. ‘ಶರಣರ ನೊಸಲಿಗೆ ವಿಭೂತಿಯೇ ಶೃಂಗಾರ’ ಹೊರತು ಗಂಡಸರು ಕೂಡಾ ಕೇಸರಿ ಕುಂಕುಮ- ತಿಲಕ ಧರಿಸುವುದು ಒಂದು ಸಾಂಸ್ಕೃತಿಕ ಕುರೂಪವೇ ಆಗಿದೆ.

ನಿಜವಾದ ಬಸವಾನುಯಾಯಿಗಳು ಇಷ್ಟಲಿಂಗವನ್ನಲ್ಲದೆ ಬೇರೆ ದೇವರುಗಳನ್ನು ಪೂಜಿಸುವಂತಿಲ್ಲ. ಯಾಕೆಂದರೆ ಶರಣರು, ‘ಗುರು- ಲಿಂಗ- ಜಂಗಮ’ ಎಂಬ ಪರಿಕಲ್ಪನೆಯಲ್ಲಿ ಶಿವನನ್ನು ಹೊರತಾಗಿ ಗೌರಿ(ಪಾರ್ವತಿ)ಯನ್ನಾಗಲೀ ಅಥವಾ ಗಣಪತಿಯನ್ನಾಗಲೀ ಪೂಜಿಸುವುದಿಲ್ಲ. ವಚನಗಳಲ್ಲಿ ಉಲ್ಲೇಖಿಸುವುದಿಲ್ಲ‌‌‌. ಶಿವ ಎಂಬುದು ವ್ಯಕ್ತಿಯಲ್ಲ, ಪ್ರಜ್ಞೆ ! ಲಿಂಗಾಯತರು ಇದನ್ನು ಅರ್ಥಮಾಡಿಕೊಳ್ಳಬೇಕು.

6) ಈ ರೀತಿಯ ದಾಳಿ ಮುಂದುವರೆದರೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ನಾವು ಕಳೆದುಕೊಳ್ಳುತೇವೆಯೇ?

ಸಾಂಸ್ಕೃತಿಕ ಪೊಲೀಸುಗಿರಿಯ ದಾಳಿಗಳು ಮುಂದುವರೆದಷ್ಟೂ ಸಂವಿಧಾನವು ನಮಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮೂಲಭೂತ ನಾಗರಿಕ ಹಕ್ಕುಗಳು ದಮನಿಸಲ್ಪಡುತ್ತವೆ.

ಮತಾಂತರ ಮತ್ತು ಹೊಸ ಮತದ ಸ್ಥಾಪನೆ ಇರದಿದ್ದರೆ ಬೌದ್ಧ ಜೈನ ಸಿಖ್ ಲಿಂಗಾಯತ ಧರ್ಮಗಳು ಹುಟ್ಟುತ್ತಲೇ ಇರಲಿಲ್ಲ. ಹೀಗಾಗಿ ಲಿಂಗಾಯತವು ಎಲ್ಲಾ ಧರ್ಮೀಯರಿಗೂ ಮುಕ್ತವಾಗಿ ತೆರೆದುಕೊಳ್ಳುವ ಅಗತ್ಯವಿದೆ. ಲಿಂಗಾಯತ ಧರ್ಮವು ದಲಿತ ಮೂಲದ್ದು ಎಂಬುದನ್ನಾಗಲೀ ಅಥವಾ ಈಗಿನ ಬಹುತೇಕ ಲಿಂಗಾಯತರು ಮೂಲದಲ್ಲಿ ದಲಿತರಾಗಿದ್ದು ಎಂಬುದನ್ನಾಗಲೀ ಮರೆಯಬಾರದು.

ಅಂತಹ ದಲಿತರ ವಿರುದ್ಧ ಲಿಂಗಾಯತರು ಅಸ್ಪೃಶ್ಯತೆ ಆಚರಿಸಿದರೆ ಇನ್ನು ಮುಂದೆ ದಲಿತರಲ್ಲಿ ಅಂಬೇಡ್ಕರರಂತೆಯೇ ಪ್ರಥಮ ಸ್ಥಾನದಲ್ಲಿರುವ ಬಸವಣ್ಣನವರನ್ನು ಲಿಂಗಾಯತರೇ ಪ್ರತಿಬಂಧಿಸುವ ಪ್ರಯತ್ನವಾಗಿಬಿಡುತ್ತದೆ. ಆಗ ಹಿಂದೂವಾದಿಗಳು ಒತ್ತಾಯಿಸುತ್ತಿರುವ ಮತಾಂತರ ನಿಷೇಧ ಕಾಯ್ದೆ ಜಾರಿಯ ಪ್ರಯತ್ನಗಳಿಗೆ ಲಿಂಗಾಯತರು ಮೌನ ಸಮ್ಮತಿ ನೀಡಿದಂತಾಗುತ್ತದೆ. ಹಾಗಾಗಬಾರದು. ಹಿಂದೂಧರ್ಮದ ತಾರತಮ್ಯ ದೌರ್ಜನ್ಯಗಳಿಗೆ ಮೌನವಾಗಿ ಕೆಲವು ಲಿಂಗಾಯತರು ಸಮ್ಮತಿಯ ಮುದ್ರೆಯೊತ್ತಿದ್ದಾರೆ. ಇದು ಅತ್ಯಂತ ಅಮಾನವೀಯ ಬೆಳವಣಿಗೆ.

7) ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಕೆಟ್ಟ ಭಾಷೆ ಬಳಸುತ್ತಿದ್ದಾರೆ (ಸೂ* ಮಗ, ಮೆಟ್ಟು, ಮುಖ ತಿ** ಇತ್ಯಾದಿ) ಹಿಂದುತ್ವವಾದಿಗಳಿಗೆ ಬೇರೆಯವರ ಮೇಲೆ ಇಂತಹ ಭಾಷೆ ಸುಲುಭವಾಗಿ ಪ್ರಯೋಗಿಸಲು ಹೇಗೆ ಸಾಧ್ಯ?

“ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ, ಜರಿದವರೆನ್ನ ಜನ್ಮಬಂಧುಗಳೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ ಕೂಡಲಸಂಗಮದೇವಾ” ಎಂದಿದ್ದಾರೆ ಬಸವಣ್ಣ.

ಕೆಲವೊಮ್ಮೆ ನಮ್ಮ ಸಂದರ್ಭಗಳನ್ನು ಇತರರು ಅರ್ಥಮಾಡಿಕೊಳ್ಳುವುದರಲ್ಲಿ ಎಡವಿ ಅಥವಾ ಬುದ್ಧಿಗೇಡಿತನದಿಂದ ನಮ್ಮನ್ನು ಜರಿದು ನುಡಿಯುವುದುಂಟು. ಅಂಥವರ ಬೈಗುಳ ನೂರ್ಮಡಿಸಲಿ. ಆ ಮೂಲಕವಾದರೂ ಅವರ ಎದೆಯ ಕಾವು ತಣ್ಣಗಾಗಲಿ. “ಬೈದವರೆನ್ನ ಬಂಧುಗಳೆಂಬೆ” ಎಂದ ಬಸವಣ್ಣನವರ ವಚನವಾಕ್ಯವನ್ನು ನಾವು ಹೇಗೆ ಸ್ವೀಕರಿಸಬೇಕೋ ತಿಳಿಯುತ್ತಿಲ್ಲ.

ಬೈಗುಳ ಭಿಕ್ಷೆಯನ್ನು ಬುದ್ಧಗುರುವಿನ ನಿರಶನ ಪಜ್ಞದಂತೆ ನಾವೆಂದಿಗೂ ಸ್ವೀಕರಿಸದೆ ವಾಪಸ್ ಹಿಂತಿರುಗಿಸಲಿರುವ ಕಾಣಿಕೆಯೆಂದೂ ನಮ್ಮನ್ನು ಬೈದ ಬಂಧುಗಳು ತಿಳಿಯುವಂತಾಗಲಿ ಎಂದು ಬುದ್ಧನ ವಾಕ್ಯವನ್ನು ಹೇಗೆ ಗ್ರಹಿಸಬೇಕೋ ತಿಳಿಯುತ್ತಿಲ್ಲ. ಆದರೆ ಸತ್ಯದ ಮಾರ್ಗದಲ್ಲಿ ನಡೆದ ಬುದ್ಧಗುರು, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಮೊದಲಾದ ಮಹನೀಯರಿಗೇ ಸ್ತುತಿ ನಿಂದೆಗಳು ತಪ್ಪಲಿಲ್ಲ.

“ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ?” ಎಂಬ ಜನಪದರ ಗಾದೆಮಾತು ಲಿಂಗಾಯತ ಪೂಜ್ಯರ ಮತ್ತು ಮುಖಂಡರ ವಿರುದ್ಧ ಹೊಲಸು ಬಯ್ಗುಳ ಪ್ರಯೋಗಿಸುವ ದುರುಳರನ್ನು ನೋಡಿಯೇ ಹುಟ್ಟಿರಬಹುದು ಅನ್ನಿಸುತ್ತದೆ.

8) ಸಾರ್ವಜನಿಕ ಸಂವಾದದಲ್ಲಿ ಎಲ್ಲರೂ ಸಭ್ಯತೆ ಕಳೆದುಕೊಳ್ಳಬೇಕೇ? ಹಿಂದುತ್ವವಾದಿಗಳ ಮೇಲೆ ಮೇಲೆ ಇದೇ ಭಾಷೆ ಬಳಸಬೇಕೇ?

ಧಾರ್ಮಿಕ ಅಧಿಕಾರದ ಗದ್ದುಗೆಯಲ್ಲಿರುವ ಕೆಲವು ಮಠಾಧೀಶರು, ರಾಜಕಾರಣಿಗಳು ಮುಂತಾದ ಸಾರ್ವಜನಿಕ ವ್ಯಕ್ತಿಗಳು ಇತ್ತೀಚಿಗೆ ತಾವು ನಡೆದದ್ದೇ ದಾರಿ – ಆಡಿದ್ದೇ ಮಾತು ಎಂಬ ಠೇಂಕಾರವನ್ನು ಮೆರೆಯುತ್ತಿದ್ದಾರೆ. ಸಾರ್ವಜನಿಕ ಚರ್ಚೆ ಸಂವಾದಗಳಲ್ಲಿ ಸಭ್ಯತೆಯ ಎಲ್ಲೆ ಮೀರಿ ಅಸಭ್ಯವೂ ಆಶ್ಲೀಲವೂ ಅಸಾಂವಿಧಾನಿಕವೂ ಆದ ಪದ ಪ್ರಯೋಗಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಇಳಿದುಬಿಟ್ಟಿದ್ದಾರೆ.

ನಡೆ ನುಡಿಗಳಲ್ಲಿ ಸಾತ್ವಿಕತೆ ತೋರಬೇಕಾದ ಮಠಾಧಿಪತಿಗಳು ಕೂಡಾ ಸಾರ್ವಜನಿಕ ಲಜ್ಜೆಯಿರದೆ ತಮ್ಮ ನಾಲಿಗೆಯನ್ನು ಮನಬಂದಂತೆ ಹರಿಯಬಿಡುತ್ತಿದ್ದಾರೆ. ಧಾರ್ಮಿಕತೆ ಮತ್ತು ಸಚ್ಚಾರಿತ್ರ್ಯ ಕುರಿತು ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸಬೇಕಾದ ವ್ಯಕ್ತಿಗಳೇ ತಮ್ಮ ಸ್ಥಾನದ ಘನತೆಯನ್ನು ಮರೆತು ಹಾದಿ ತಪ್ಪುತ್ತಿದ್ದಾರೆಂದರೆ ಏನರ್ಥ? ಭಿನ್ನಮತ ಅಥವಾ ಭಿನ್ನಾಭಿಪ್ರಾಯ ಇರಿಸಿಕೊಂಡೇ ಆರೋಗ್ಯಕರ ಸಂವಾದ ನಡೆಸುವುದೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು.

ಶರಣರ ಅನುಭವ ಮಂಟಪ ಆರೋಗ್ಯಕರ ಸಂವಾದದ ವೇದಿಕೆಯಾಗಿತ್ತು. ಧಾರ್ಮಿಕ ಅಧಿಕಾರರೂಢರು ಮತ್ತು ರಾಜಕಾರಣಿಗಳು ಪ್ರಜಾಸತ್ತಾತ್ಮಕವಾಗಿ ಮುಖಾಮುಖಿಯಾಗಬೇಕಾದ ನಮ್ಮ ವ್ಯವಸ್ಥೆಯಲ್ಲಿ ಟೀಕೆ-ಟಿಪ್ಪಣಿಗಳು ಸಾರ್ವಜನಿಕವಾಗಿ ಒಪ್ಪಿತ ಸ್ಥಿತಿಯಲ್ಲಿರಬೇಕೇ ಹೊರತು ಸಭ್ಯತೆಯ ಎಲ್ಲೆ ಮೀರಬಾರದು.‌

ಸೈದ್ಧಾಂತಿಕ ವೈರುಧ್ಯದ ಕಾರಣದಿಂದ ಧಾರ್ಮಿಕ ಮುಖಂಡರು ಮತ್ತು ರಾಜಕೀಯ ನಾಯಕರು ಪರಸ್ಪರ ಹೊಲಸು ಮಾತು ಪ್ರಯೋಗಿಸುವ ಅಥವಾ ಚಾರಿತ್ರ್ಯ ಹರಣ ಮಾಡುವ ಕೀಳು ಮಟ್ಟಕ್ಕೆ ಇಳಿಯಬಾರದು. ಈ ಬೆಳವಣಿಗೆಯನ್ನು ‘ಪ್ರಚಾರ ಗಿಟ್ಟಿಸುವ’ ತಂತ್ರವಾಗಿ ಅವರು ಬಳಸಿದ ಪಕ್ಷದಲ್ಲಿ ಅದು ಅಸಹ್ಯದ ಸಂಗತಿಯೇ ಸರಿ. ಯಾವತ್ತೂ ಸೈದ್ಧಾಂತಿಕ ನೆಲೆಯಲ್ಲಿ ನಡೆಯಬೇಕಾದ ಬೌದ್ಧಿಕ ಚರ್ಚೆ ಸಂವಾದಗಳು ಕೆಳಮಟ್ಟಕ್ಕೆ ಇಳಿದಾಗ, ಚರ್ಚೆಯ ಮೂಲ ಆಶಯವೇ ಮೂಲೆಗುಂಪಾಗುತ್ತದೆ. ವ್ಯಕ್ತಿತ್ವದ ಘನತೆಯನ್ನು ಕಾಪಾಡಿಕೊಳ್ಳಲಾರದೆ ಕೀಳು ವರ್ತನೆಯಲ್ಲಿ ತೊಡಗುವ ಯಾರನ್ನೂ ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ‌.

9) ಈ ವಿವಾದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆಯೇ?

ಬಲಪಂಥೀಯ ಶಕ್ತಿಗಳನ್ನು ಬಲಪಡಿಸುವ ಸಂಗತಿಗಳು ಶಕ್ತಿರಾಜಕಾರಣಕ್ಕಿಂತಲೂ ಸಾಂಸ್ಕೃತಿಕ ರಾಜಕಾರಣದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಬಲಪಂಥೀಯ ವಿಚಾರಧಾರೆ ಮತ್ತು ಆಲೋಚನಾ ಕ್ರಮ ಬಲಗೊಂಡಾಗ ಜನಸಾಮಾನ್ಯರ ಬದುಕಿನ ಲಯ ಅಸ್ತವ್ಯಸ್ತವಾಗುತ್ತದೆ. ಜನಸಾಮಾನ್ಯರ ಪರವಾದ ಎಡಪಂಥೀಯ ಆಲೋಚನೆಗೆ ನೆಲೆ ಇಲ್ಲದಂತಾಗುತ್ತದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಲಿಂಗಾಯತ ಸಾಹಿತಿಗಳು ಮತ್ತು ಪತ್ರಕರ್ತರೇ ಹೆಚ್ಚಾಗಿ ಹಿಂದೂ ವೈದಿಕಶಾಹಿ ಪ್ರೇರಿತ ಮತೀಯವಾದಿಗಳಿಂದ ಹತ್ಯೆಯಾಗಿದ್ದಾರೆ.‌ ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ, ಸಂಶೋಧಕ ಪ್ರೊ.ಎಂ.ಎಂ.ಕಲಬುರ್ಗಿ, ಪತ್ರಕರ್ತೆ- ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಮುಂತಾದವರು ಹಿಂದೂ ವೈದಿಕಶಾಹಿಯ ವಿರುದ್ಧ ಪ್ರತಿರೋಧ ಒಡ್ಡಿ ಹತ್ಯೆಯಾದ ಬಂಡುಕೋರ ಲಿಂಗಾಯತರು.

ಅಂತೆಯೇ ಶರಣ ಚಳವಳಿ ಮತ್ತು ಲಿಂಗಾಯತಕ್ಕೆ ಸಂಬಂಧಿಸಿದ ಕೃತಿಗಳೇ ಹೆಚ್ಚಾಗಿ ವಿವಾದಿತ ಕೃತಿಗಳಾಗಿ ಸರ್ಕಾರದಿಂದ ನಿಷೇಧಿಸಲ್ಪಟ್ಟಿವೆ.

ಇಂತಹ ಹತ್ಯೆ ಮತ್ತು‌ ವಿವಾದಗಳೆಲ್ಲವೂ ಯಾಕಾಗಿ ನಡೆದವೆಂಬುದರ ಹಿಂದಿರುವ ಜಾತಿ ರಾಜಕಾರಣವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಪಟ್ಟಭದ್ರ ವೈದಿಕಶಾಹಿಯ ವಿರುದ್ಧ ಪ್ರತಿರೋಧ ಎದುರಾದಾಗಲೆಲ್ಲಾ ಹೀಗೆ ಮತೀಯ ಶಕ್ತಿಗಳು ಪ್ರತಿರೋಧದ ಧ್ವನಿಗಳನ್ನು ಅಡಗಿಸಿವೆ. ಕೆಲವು ಧಾರ್ಮಿಕ ಕೋಮು ಗಲಭೆಗಳು‌ ಮತ್ತು ಹತ್ಯೆಗಳು ಸಹಜವಾಗಿ ವೈದಿಕದೊಂದಿಗೆ ಅಕ್ರಮ ಕೂಡಾವಳಿ ಮಾಡಿಕೊಂಡಿರುವ ಮಠಾಧಿಪತಿಗಳಿಂದ ಮತ್ತು ಸಾಮಾಜಿಕ ಮುಖಂಡರಿಂದ ಪ್ರೇರಿತವಾಗಿ ನಡೆದಿವೆ.

ಹಿಂದೂ ಮತೀಯವಾದದ ಪ್ರಭಾವದಿಂದ ಸಮಾಜದಲ್ಲಿ ಉಂಟಾಗಿರುವ ಅಂಧಕಾರ, ಮೌಢ್ಯ, ಸಂಪ್ರದಾಯಗಳ ವಿರುದ್ಧ ದನಿ ಎತ್ತಿ ಹತ್ಯೆಯಾಗಿ ಹೋಗಿರುವ ಇಂತಹ ನಿಷ್ಠುರವಾದಿ ವ್ಯಕ್ತಿತ್ವಗಳು ನಮಗೆ ಮತ್ತೆ ದೊರಕುವುದು ತುಂಬಾ ಅಪರೂಪ. ಇವರ ಹತ್ಯೆಗಳಿಂದಾಗಿ ವೈಚಾರಿಕ ಮನೋಭಾವದ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಚಳವಳಿಗಾರರು ಮತ್ತು ಸಂಶೋಧಕರಿಗೆ ಬಹುಮುಖ್ಯ ಪ್ರೇರಣೆಯ ಸೆಲೆಗಳು ಬತ್ತಿಹೋದಂತಾಗಿದೆ. ಸತ್ಯದ ನಾಲಗೆಯನ್ನು ಅಸತ್ಯದ ಚೂರಿಯಿಂದ ಕುಯ್ಯಲು ಸಾಧ್ಯವಿಲ್ಲ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
5 Comments
  • ಡಾ ವಡ್ಡಗೆರೆ ನಾಗರಾಜಯ್ಯ, ಅನಂತ ಶರಣಾರ್ಥಿಗಳು.

    ನಿಮ್ಮ ನೇರ, ದಿಟ್ಟ ಉತ್ತರಗಳು, ನಿಜವಾಗಿಯು ಕಣ್ಣು ತೆರೆಸುತ್ತವೆ.

  • ಬಸವಣ್ಣನವರ ಲೋಕದ ಒಳಿತಿನ ಆಶಯಗಳನ್ನ ಸಹಿಸಲು ಆಗದ ಅದೇ ಶಕ್ತಿಗಳೇ ಇಂದಿಗೂ ಮತ್ತಷ್ಟು ಕ್ರೌರ್ಯವನ್ನು ಮೊರೆಯುತ್ತಾ ಸಾಗಿ ಬರುತ್ತಿವೆ. ಇಂತಹ ಸಮಯದಲ್ಲಿ ಅತ್ಯಂತ ಸಮಯೋಚಿತವಾಗಿ ಮೂಡಿ ಬಂದಿದೆ ಈ ಬರಹ. ಬಸವಾದಿ ಶರಣರ ನಡೆಜಾಡಿನೊಳಗೆ ತಿಳಿವಳಿಕೆಯ ಪಾಕವಾಗಿ ಮೂಡಿಬಂದಿದೆ. ಇಂತಹ ನಿಜಶರಣರ ತಾತ್ವಿಕ ಬರಹಗಳು ಓದುಗರಿಗೆ ಮತ್ತಷ್ಟು ಸಿಗುವಂತಾಗಲಿ..

  • ಮಾನ್ಯರು ಅತ್ಯಂತ ಸಹನೆ ಸಾಯಂಮ ದಿಂದ ವಿಚಾರಗಳನ್ನು ಮಂಡಿಸಿದ್ದಾರೆ, ಇಂತಹ ಸಾಯಂಮಾಷಿಲಾತೇ ಯನ್ನು ನಾವು ಹೊಂದಿರಬೇಕು. ಮಿತಿಮೀರಿದಾಗ ಗಣಾಚಾರವನ್ನು ಹೊಂದದೆ ಇರಬಾರದು. ರಾಡಿಎಬ್ಬಿಸುವ ಕೋಮುವಾದಿಗಳಿಗೆ ಕಾನೂನಾತ್ಮಕವಾಗಿ ಪ್ರತಿಭಾತಿಸಲು ಹಿಂಜರಿಯಬಾರದು.

  • ಡಾ. ವಡ್ಡಗೇರಿ ನಾಗರಾಜಯ್ಯಾ ಅಂತವರನ್ನ ಈ ಬಸವ ಸಂಸ್ಕೃತಿ ಅಭಿಯಾನ ದಲ್ಲಿ ಭಾಗವಹಿಸಲು ಅವಕಿಶ ಕೊಟ್ಟರೆ ವೈದಿಕರು ಬಿಲ ಬೀರುತ್ತಾ ಈರಲಿಲ್ಲ..

    ಮುಂದೆ ಆದರೂ ಲಿಂಗಾಯತ ಧರ್ಮದಲ್ಲಿ ಬರುವ ೧೦೩ ಕಾಯಕ ಶರಣರ ಸೇರೀಸಿಕೊಂಡು ಕಾರ್ಯಕ್ರಮ ಮಾಡಬೇಕು..

  • . ಡಾ. ವಡ್ಡಗೇರಿ ನಾಗರಾಜಯ್ಯಾ ಅಂತವರನ್ನ ಈ ಬಸವ ಸಂಸ್ಕೃತಿ ಅಭಿಯಾನ ದಲ್ಲಿ ಭಾಗವಹಿಸಲು ಅವಕಿಶ ಕೊಟ್ಟಿದ್ಧರೆ ವೈದಿಕರು ಬಾಲ ಬಿಚ್ಚತ್ತಾ ಇರಲಿಲ್ಲ..

    ಮುಂದೆ ಆದರೂ ಲಿಂಗಾಯತ ಧರ್ಮದಲ್ಲಿ ಬರುವ ೧೦೨ ಕಾಯಕ ಶರಣರ ಸೇರಿಸಿಕೊಂಡು ಕಾರ್ಯಕ್ರಮ ಮಾಡಬೇಕು..

Leave a Reply

Your email address will not be published. Required fields are marked *