ಹಿಂದುವಾಗಿ ಸಾಯಲಾರೆ ಎಂದು ಬೌದ್ಧರಾದ ಅಂಬೇಡ್ಕರ್ ಅವರ ಸ್ಮರಣೆ
ಗುಳೇದಗುಡ್ಡ:
ಮನೆಯಲ್ಲಿ ಮಹಾಮನೆ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪರಿನಿರ್ವಾಣ ದಿನವನ್ನು ಶನಿವಾರ ಬಸವಕೇಂದ್ರದ ವತಿಯಿಂದ ಬಸವರಾಜ ಶಿವಪ್ಪ ಕಲ್ಯಾಣಿ ಅವರ ಮನೆಯಲ್ಲಿ ಜರುಗಿತು.
ಅಂದು ಚಿಂತನೆಗೆ ಆಯ್ದುಕೊಂಡ ವಚನ ಬಸವ ತಂದೆಗಳವರದು –
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯ
ಅವರಸ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯ
ಸಹಜ ಭಾವ ನಿಜೈಕ್ಯ, ಕೂಡಲಸಂಗಮದೇವನೊಬ್ಬನೇ ದೇವ.
ವಚನ ಚಿಂತನೆಯ ಪ್ರಾರಂಭದಲ್ಲಿ ಶರಣ ಮಹಾಲಿಂಗಪ್ಪ ಕರನಂದಿಯವರು – ಹನ್ನೆರಡೆಯ ಶತಮಾನದಲ್ಲಿ ಧರ್ಮ ಗುರು ಬಸವಣ್ಣನವರು ಉದಯವಾಗುವದಕ್ಕಿಂತ ಮುಂಚೆ ಜನರು ಅನೇಕ ಕಂದಾಚಾರಗಳಿಗೆ ಒಳಗಾಗಿದ್ದರು. ಕಲ್ಲು, ಮಣ್ಣು, ಲೋಹ ಮೊದಲಾದ ದೇವರನ್ನು ನೆಚ್ಚಿ, ಶೋಷಣೆಗೆ ಒಳಗಾಗಿದ್ದರು.
ಅಂಥ ಪರಿಸ್ಥಿತಿಯಲ್ಲಿ ಜನರನ್ನು ಮೌಢ್ಯದಿಂದ ಮೇಲೆತ್ತಲು ಹಾಗೂ ನಿಜವಾದ ದೇವರು ಯಾರು? ಎಂಬುದನ್ನು ಈ ವಚನದಲ್ಲಿ ತಿಳಿಹೇಳಿದ್ದಾರೆ. ನಾಶವಾಗುವ ಹಾಗೂ ವಿಕೃತವಾಗುವ ಕಲ್ಲು, ಕಟ್ಟಿಗೆ, ಲೋಹ ಇತ್ಯಾದಿಗಳಿಂದ ಮಾಡಿದ ದೇವರುಗಳು ದೇವರುಗಳಲ್ಲ. ಅವುಗಳಿಗಿಂತ ವಿಕೃತವಾಗದಿರುವ ನಮ್ಮ ಕುರುಹಾಗಿರುವ ಇಷ್ಟಲಿಂಗವೇ ಶ್ರೇಷ್ಠ.

ಇಷ್ಟಲಿಂಗದ ಪೂಜೆಯೆಂದರೆ ಅದು ಅನುಸಂಧಾನ ಮಾತ್ರ. ಇದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ಈ ಇಷ್ಟಲಿಂಗ ನಮಗೆ ಕಾಯಕವನ್ನು ಕಲಿಸುತ್ತದೆ. ಅದು ದಾಸೋಹಕ್ಕೆ ದಾರಿ ತೋರಿಸುತ್ತದೆ. ಇದರಿಂದ ಮನೆತನ, ರಾಷ್ಟ್ರ ಸುಭಿಕ್ಷೆವಾಗುತ್ತವೆ. ಹೀಗಾಗಿ ವೇದ ಸುಳ್ಳಾದರೂ ವಚನ ಸುಳ್ಳಾಗದು ಎಂದು ಹೇಳಿದರು.
ಪ್ರೊ. ಗಾಯತ್ರಿದೇವಿ ಕಲ್ಯಾಣಿಯವರು ಮಾತನಾಡುತ್ತ, ನಮಗೆ ಬಸವಣ್ಣನವರೇ ಬೆಳಕು. ಅವರ ವಚನಗಳೇ ದಾರಿದೀಪ. ವಚನವೆಂದರೆ ಪ್ರಮಾಣ. ಈ ಪ್ರಮಾಣದಿಂದ ಜನರ ಅಂಧಶ್ರದ್ಧೆಗಳನ್ನು ತೆಗೆದು ಹಾಕಿ ಬೆಳಕನ್ನು ನೀಡಿ, ಶೋಷಣೆಯನ್ನು ತಪ್ಪಿಸುತ್ತದೆ.
ಹಲವು ದೇವರನ್ನು ನಂಬಿ ಹಾಳಾಗುವುದಕ್ಕಿಂತ ಇಷ್ಟಲಿಂಗ ನಂಬಿ ಉದ್ಧಾರವಾಗುವುದು ಒಳಿತು. ಅಸ್ತಿತ್ವ ಇರದಿರುವ ದೇವರನ್ನೆಂತು ನಂಬುವದು. ಈ ವ್ಯರ್ಥ ಪ್ರಯತ್ನ ಮಾಡದೇ ನಿಜವಸ್ತುವಿನತ್ತ ಸಾಗಲು ಇಷ್ಟಲಿಂಗ ಸಹಕಾರಿಯಾಗುತ್ತದೆ. ಸಮಾಜದಲ್ಲಿ ದ್ವೇಷಭಾವನೆ ಇರದೆ ಸದ್ಭಾವನೆ ಮೂಡಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಹೇಳಿದರು.
ಉದ್ಯಮಿ ಮಹಾಂತೇಶ ಸಿಂದಗಿಯವರು – ಕೂಡಲ ಸಂಗಮದೇವರನ್ನು ಅರಿಯುವ ಮನ ಎಲ್ಲರಲ್ಲಿಲ್ಲ. ಅಂತಹ ದೇವರನ್ನು ಕಾಣಲು ಕಲಿಸಿದಾತ ಅಪ್ಪ ಬಸವಣ್ಣ. ಕಾಡುವ ಯಾವುದೇ ವ್ಯಕ್ತಿ ದೇವರಲ್ಲ. ಮಹರ್ಷಿ ಅರವಿಂದರ ಬಾಲ್ಯದ ಪ್ರಸಂಗವೊಂದನ್ನು ಉದಾಹರಿಸಿ ಅನೇಕ ಸ್ಥಾವರ ದೇವರುಗಳು ತಮ್ಮ ಮೈಮೇಲೆ ಓಡಾಡುವ ಇರುವೆ, ಇಲಿ ಇತ್ಯಾದಿಗಳಿಂದ ರಕ್ಷಿಸಿಕೊಳ್ಳವಾದವು. ಅದು ಹೇಗೆ ನಮ್ಮನ್ನು ರಕ್ಷಿಸುತ್ತದೆ? ಎಂದು ಪ್ರಶ್ನಿಸಿ, ನಮ್ಮನ್ನು ರಕ್ಷಿಸಿ ನಮ್ಮ ಅರಿವನ್ನು ನಮಗೆ ತಿಳುಹಿಸುವ ಇಷ್ಟಲಿಂಗವೇ ದೇವರು. ಅದೇ ಮುಂದೆ ಮಹಾಲಿಂಗ ರೂಪದಲ್ಲಿ ನಮ್ಮನ್ನು ಉದ್ಧಾರಗೈಯುತ್ತದೆ. ಕಾರಣ ನಾವು ಅರಿತು, ಆಚಾರದಿಂದ ಬದುಕಬೇಕು ಎಂದು ಹೇಳಿದರು.
ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು ಈ ವಚನವನ್ನು ವಿಶ್ಲೇಷಿಸಿ ಸಧ್ಯದ ನಮ್ಮ ಭಾರತೀಯರ ನಡವಳಿಕೆಯನ್ನು ಕಂಡಂತೆ ಹೇಳಿದ ಬಸವಾನುಯಾಯಿಗಳ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿದರು.
ಅಶಾಶ್ವತವಾದ ಅರಗು ತಿಂದು ಕರಗುವ, ಉರಿಯಕಂಡು ಮುರುಟುವ ಮುಂತಾದ ದೇವತೆಗಳನ್ನು ಪೂಜಿಸುವ ಜನ ಖಾವಿ ಹಾಕಿದರೇನು ಯಾವ ಬಣ್ಣದ ದಿರಿಸನ್ನು ಹಾಕಿದರೇನು, ಮಾತಿನಲ್ಲಿ ಅಟ್ಟಿಮೆಟ್ಟಿ ಇತ್ಯಾದಿ ಪದ ಪ್ರಯೋಗಿಸುವವರು ಧರ್ಮದ ಹೆಸರಿನಲ್ಲಿ ಇತ್ತೀಚೆಗೆ ಬಸವಾನುಯಾಯಿಗಳನ್ನು ನಿಂದಿಸುವ ಭಯ ಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆ ಅಂಜಿದರಾಗದು ಅಳುಕಿದರಾಗದು ಎಂಬ ವಚನ ಸದಾ ನಮ್ಮ ಸ್ಮರಣೆಯಲ್ಲಿರಬೇಕು. ಬಹುಶಃ ಇಂಥ ಜನರನ್ನು ಉದ್ದೇಶಿಸಿಯೇ ಈ ವಚನವನ್ನು ಅಪ್ಪನವರು ಹೇಳಿದಂತಿದೆ.
ಇಲ್ಲಿನ ಕೂಡಲಸಂಗಮದೇವ ವಿಕೃತವಾಗುವ, ನಾಶವಾಗುವ ದೇವರಲ್ಲ. ಆತ ಸಹಜಭಾವ ಹಾಗೂ ನಿಜೈಕ್ಯ. ಆ ವಿಶ್ವಚೈತನ್ಯವು ರೂಪಗೊಳ್ಳುವ ಮುನ್ನ ಇರುವ, ಗುಡ್ಡ ಬೆಟ್ಟ ಆಕಾಶಗಳಿಲ್ಲದ ಮುನ್ನವೇ ಇದ್ದುದು. ಅದೇ ಸಹಜ ಸ್ಥಿತಿ. ಅನಂತರ ಈ ಕಾಣಬರುವ ಜಗತ್ತು ನಿರ್ಮಾಣವಾಗಿದ್ದು ಇದನ್ನು ಅರಿಯಲು ಇಷ್ಟಲಿಂಗಬೇಕು. ಅದೇ ಬೆಳಕಿನ ಪಥ. ಜೊತೆಗೆ ನಿಜವಾದ ಐಕ್ಯವೆಂದರೆ ಎಲ್ಲ ಬಗೆಯ ಅಂಗಗುಣಗಳನ್ನು ತೊರೆದು ಲಿಂಗಭಾವದಲ್ಲಿ ಬದುಕುವುದು ನಿಜೈಕ್ಯ.
ಇಲ್ಲಿ ಮಾನವ ಮಹಾದೇವನಾಗಿ ಬಾಳುವುದರಿಂದ ಅಲ್ಲಿ ಸಮಾನತೆ ಇದೆ. ಕೇಡಿಲ್ಲದ ಹೆದರಿಕೆಯಿಲ್ಲದ ಸದಾಶಾಂತವಾದ ಸುಖವಿದೆ. ಅದೇ ಕೂಡಲ ಸಂಗಮನಾಥನ ಇರುವು. ಇದೇ ಸುಂದರ ಸಮಾಜ; ಇದರಲ್ಲಿ ಬದುಕುವುದೇ ಶರಣರ ಆಶಯವಾಗಿತ್ತು ಎಂಬುದು ಇಂದಿನ ವಚನದ ಸಾರವಾಗಿದೆ.
ಜೊತೆಗೆ ಇಂದೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಾಪರಿನಿರ್ವಾಣದ ದಿನ. ಬಸವಾದಿ ಶರಣರು ತಮ್ಮ ವಚನಗಳ ಮೂಲಕ, ನಡೆಯ ಮೂಲಕ ಕಟ್ಟಬಯಸಿದ ಸಮಾಜವನ್ನು ಭಾರತದ ಸಂವಿಧಾನವನ್ನಾಗಿ ರೂಪಿಸಿದವರು ಅಂಬೇಡ್ಕರ್ .
ಅವರು ಇಲ್ಲಿನ ಧಾರ್ಮಿಕ ಹಾಗೂ ಸಾಮಾಜಿಕ ಬದುಕಿನ ಹೀನಸ್ಥಿತಿಯನ್ನು ಕಂಡೇ “ನಾನು ಹಿಂದುವಾಗಿ ಹುಟ್ಟಿದೆ; ಆದರೆ ಹಿಂದುವಾಗಿ ಸಾಯಲಾರೆ” ಎಂದು ನಿರ್ಧಾರ ಮಾಡಿ ಬೌದ್ಧ ಮತವನ್ನು ಸ್ವೀಕರಿಸಿ ಡಿಸೆಂಬರ ಆರನೇ ದಿನಾಂಕ ಸಾವಿರದ ಒಂಬತ್ತು ನೂರಾ ಐವತ್ತಾರರಂದು ಪರಿನಿರ್ಮಾಣ ಹೊಂದಿದರು. ಅದಕ್ಕಾಗಿ ಇಂದಿನ ಮಹಾಮನೆ ಕಾರ್ಯಕ್ರಮದೊಂದಿಗೆ ಈ ಮಹಾಪರಿನಿರ್ಮಾಣ ದಿನವನ್ನು ಆಚರಿಸಲಾಯಿತು ಎಂದು ಪ್ರೊ. ಸಿದ್ಧಲಿಂಗ ಬರಗುಂಡಿಯವರು ಹೇಳಿದರು.
ಇದೇ ಸಂದರ್ಭದಲ್ಲಿ ಸಹೋದರಿ ಪೂರ್ಣಿಮಾ ಮೆಂತೇದ ಹಾಗೂ ಅವರ ಸಹೋದರಿ ಅವರು ಕೇಳಿದ ಲಿಂಗ ನಿರೀಕ್ಷಣೆ, ಮಹಾಮಂತ್ರವನ್ನು ಎಷ್ಟುಬಾರಿ ಜಪಿಸಬೇಕು ಮುಂತಾಗಿ ಕುತೂಹಲಕಾರಿ ಪ್ರಶ್ನೆಗಳಿಗೆ ಅನುಭಾವಿಗಳು ಉತ್ತರ ನೀಡಿದರು. ಇದರ ಫಲವಾಗಿ ಹಲವು ಮಹಿಳೆಯರು ಆಸಕ್ತಿ ತೋರಿ ಮುಂದಿನ ದಿನಗಳಿಂದ ತಾವೂ ಈ ಮಹಾಮನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸ್ವಯಂ ಹೇಳಿಕೊಂಡಿದ್ದು ಮಹಾಮನೆಯ ಸದಸ್ಯರಿಗೆ ಹೆಚ್ಚಿನ ಸಂತೋಷ ಮತ್ತು ಉತ್ಸಾಹವನ್ನು ತರಿಸಿತು.
ಗುಳೇದಗುಡ್ಡದಲ್ಲಿ ರೇಶ್ಮಿಯ ಕೈಮಗ್ಗಳು ಇಲ್ಲವೇನು ಎನ್ನಿಸುವಷ್ಟು ಕಡಿಮೆಯಾಗಿರುವ ಸಂದರ್ಭದಲ್ಲಿ ಮಹಾಮನೆಯ ದಂಪತಿಗಳಾದ ಬಸವರಾಜ ಕಲ್ಯಾಣಿ ಇವರ ದಾಸ ದುಗ್ಗಳೆಯಂತೆ ಕಂಡುಬಂದರು. ಅವರು ತಮ್ಮ ಕೈಮಗ್ಗದ ಕಾಯಕದ ಮಗ್ಗವನ್ನು ಅದರ ಭಾಗಗಳನ್ನು ವಿವರವಾಗಿ ತೋರಿಸಿಕೊಟ್ಟಿದ್ದು ಭಾಗವಹಿಸಿದವರಿಗೆಲ್ಲ ಮುದವನ್ನುಂಟು ಮಾಡಿತು.

ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು ರಾಚಣ್ಣ ಕೆರೂರ ಅವರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನುಗೈದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಶೇಖಾ, ಮಹಾಲಿಂಗಪ್ಪ ಕರನಂದಿ, ಪ್ರೊ. ಬಸವರಾಜ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಚಂದ್ರಶೇಖರ ತೆಗ್ಗಿ, ಪ್ರೊ. ಸುರೇಶ ರಾಜನಾಳ, ದಾಕ್ಷಾಯಣಿ ತೆಗ್ಗಿ, ಪ್ರೊ. ಸುರೇಶ ರಾಜನಾಳ ದಂಪತಿ, ಬಸವರಾಜ ಖಂಡಿ, ಕುಮಾರ ಅರುಟಗಿ, ಸಮಾಜದ ಹಿರಿಯ ಜೀವಿಗಳು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
