ವಿಜಯಪುರ
ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಯ ಜಿಲ್ಲಾ ಪ್ರವೇಶ ನಿಷೇಧಿಸುವ ಕುರಿತು ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಬೀರೂರು ಗ್ರಾಮದ ಬಸವ ಪರಂಪರೆಯ ವಿರಕ್ತಮಠದ ಧಾರ್ಮಿಕ ಸಭೆಯಲ್ಲಿ ಕನ್ನೇರಿ ಸ್ವಾಮಿ ಲಿಂಗಾಯತ ಮಠಾಧೀಶರನ್ನು ” …. ಮಕ್ಕಳು” ಎಂದು ನಿಂದಿಸುವುದರೊಂದಿಗೆ “ಇಂತಹವರನ್ನು ….. ಹೊಡೆಯುತ್ತೇನೆ” ಎಂದು ಅತ್ಯಂತ ಅವಮಾನಕರ ಶಬ್ದ ಬಳಸಿದ್ದರೆ. ಪ್ರತಿಷ್ಠಿತ ಒಕ್ಕೂಟದ ಮಠಾಧೀಶರನ್ನು ಹೆದರಿಸುವ ಮತ್ತು ಹಿಂಸಾತ್ಮಕ ಹಲ್ಲೆ ಮಾಡುವ ಉದ್ದೇಶದಿಂದ ಕೀಳು ಮಟ್ಟದ ಭಾಷೆಯನ್ನು ಬಳಸಿ ಸಮಸ್ತ ಲಿಂಗಾಯತ ವಿರಕ್ತ ಮಠಗಳ ಪೀಠಾಧಿಪತಿಗಳನ್ನು ಅವಮಾನಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸನ್ನು ಕಂಡು ಹೊಟ್ಟೆ ಉರಿಯಿಂದ ಯಾರನ್ನೋ ಮೆಚ್ಚಿಸಲು ಈ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.
ಇಂತಹ ಹೇಳಿಕೆಗಳು ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ತರುವುದಲ್ಲದೆ, ಸಮಾಜದಲ್ಲಿ ಉದ್ರೇಕ ಮತ್ತು ದ್ವೇಷವನ್ನು ಹರಡಲು ಕಾರಣವಾಗುತ್ತದೆ. ಇದು ಲಿಂಗಾಯತ ಧರ್ಮದ ಪೀಠಾಧಿಪತಿಗಳ ಅವಹೇಳನವಾಗಿರುವುದರಿಂದ ಲಿಂಗಾಯತ ಧರ್ಮಿಯರು ರೊಚ್ಚಿಗೇಳುವ ಸಂಭವ ಇರುತ್ತದೆ.

ಇದು ಭಾರತೀಯ ದಂಡ ಸಂಹಿತೆಯ (ಬಿ.ಎನ್.ಎಸ್) ಕೆಳಗಿನ ವಿಧಿಗಳನ್ನು ಉಲ್ಲಂಘಿಸುತ್ತದೆ:
ಕಲಂ: 196 ಸಮುದಾಯಗಳ ಮಧ್ಯೆ ಶತ್ರುತ್ವ ಹುಟ್ಟಿಸುವುದು.
ಕಲಂ: 299 ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯ.
ಕಲಂ: 356 ಸುಮಾರು ನಾಲ್ಕು ನೂರು ಮಠಾಧೀಶರ ಮಾನಹಾನಿ.
ಕಲಂ: 352 ಉದ್ದೇಶಪೂರ್ವಕವಾಗಿ ಶಾಂತಿ ಭಂಗ ಮಾಡುವ ಉದ್ದೇಶದಿಂದ ಮಾಡಿದ ಅವಮಾನದ ಹೇಳಿಕೆಯಾಗಿದೆ.
ಹೀಗಾಗಿ ಈ ಕುರಿತು ಸೂಕ್ತ ತನಿಖೆ ನಡೆಸಿ, ಕನ್ನೇರಿ ಸ್ವಾಮೀಜಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅದಲ್ಲದೆ ಸದರಿ ಸ್ವಾಮಿ 15, 16 ಮತ್ತು 17 ರಂದು ಬಸವನಬಾಗೇವಾಡಿಗೆ ಭೇಟಿ ನೀಡುತ್ತಿದ್ದು, ಅಲ್ಲಿ ಆತ ಬಸವಭಕ್ತರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಕಾರಣ ಆತನಿಗೆ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿಷೇಧಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ, ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಯಮನಪ್ಪ ಸಿದರೆಡ್ಡಿ, ಶ್ರೀಶೈಲ ದೊಡ್ಡಮನಿ, ಶಿವರಾಜ ಕಟ್ಟಿಮನಿ, ಸೋಮು ರಣದೇವಿ ಉಪಸ್ಥಿತರಿದ್ದರು.