ವರ್ಣ ಸಂಕರದ ವಿವಾಹದ ನಂತರ ಶರಣರು ಎಳೆಹೂಟೆ ಶಿಕ್ಷೆ ಅನುಭವಿಸಿದ್ದು ವಿಜಯದಶಮಿಯಂದು.
ಈ ದುರಂತದ ಇತಿಹಾಸ ವಿವರಿಸುವ ಸಿದ್ದು ಯಾಪಲಪರವಿ ಅವರ “ಮರಣವೇ ಮಹಾನವಮಿ ಕಲ್ಯಾಣ ಫೈಲ್ಸ್” ವಿಡಿಯೋ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದೆ.
ಒಂಬತ್ತು ನಿಮಿಷದ ಈ ವಿಡಿಯೋ ಸಂಕ್ಷಿಪ್ತವಾಗಿ ಕಲ್ಯಾಣ ಕ್ರಾಂತಿಯ ಕೇಂದ್ರ ಘಟನೆಯಾಗಿದ್ದ ಹರಳಯ್ಯ, ಮಧುವರಸ ಕುಟುಂಬಗಳ ನಡುವಿನ ವೈವಾಹಿಕ ಸಂಬಂಧವನ್ನು ವಿವರಿಸುತ್ತದೆ.
ಇದರಲ್ಲಿ ಆಶ್ಚರ್ಯದ ಸಂಗತಿಯೆಂದರೆ ಇದು ಒಂದು ವರ್ಷದ ಹಳೆ ವಿಡಿಯೋ. 2023 ವಿಜಯದಶಮಿಯ ಸಂದರ್ಭದಲ್ಲಿ ಲಿಂಗಾಯತರ ಇತಿಹಾಸವನ್ನು ಪರಿಚಯ ಮಾಡಿಕೊಡಲು ಸಿದ್ದು ಯಾಪಲಪರವಿ ಈ ವಿಡಿಯೋ ಮಾಡಿದರು.
ಆದರೆ ವಿಡಿಯೋಗೆ ಬಂದ ಪ್ರತಿಕ್ರಿಯೆ ಬಹಳ ನೀರಸವಾಗಿತ್ತು. “ಒಂದು ತಿಂಗಳು ಸತತವಾಗಿ ನನಗೆ ಗೊತ್ತಿದ್ಧ ಎಲ್ಲರ ಜೊತೆ, ಎಲ್ಲಾ ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿಕೊಂಡೆ. ಆದರೆ ಯಾರೂ ನೋಡಲಿಲ್ಲ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಸಿಕ್ಕರು ತಮ್ಮ ಧರ್ಮವನ್ನು ಎಷ್ಟು ಕಾಳಜಿಯಿಂದ ಉಳಿಸಿಕೊಂಡಿದ್ದಾರೆ, ಲಿಂಗಾಯತರಲ್ಲಿ ಏಕೆ ಇಂತಹ ಮನೋಭಾವ ಕಾಣುವುದಿಲ್ಲ. ಕಲ್ಯಾಣ ಕ್ರಾಂತಿಯಂತಹ ವಿಷಯದಲ್ಲಿಯೂ ಲಿಂಗಾಯತರು ಆಸಕ್ತಿ ತೋರಿಸುವುದಿಲ್ಲ ಎಂದು ಬೇಸರವಾಗಿತ್ತು, ಎಂದು ಹೇಳುತ್ತಾರೆ.
ಆದರೆ ಒಂದು ವಾರದಿಂದ ಈ ವಿಡಿಯೋ ಮತ್ತೆ ಬೆಳಕಿಗೆ ಬಂದು, ಹಂಚಿಕೆಯಾಗಲು ಶುರುವಾಯಿತು. ಕಳೆದ ಎರಡು ಮೂರು ದಿನಗಳಿಂದ ಲಿಂಗಾಯತರಿಗೆ ಸಂಬಂಧವಿಲ್ಲದ ವಾಟ್ಸ್ ಆಪ್, ಫೇಸ್ಬುಕ್ ಪುಟಗಳಲ್ಲಿಯೂ ವೈರಲ್ ಆಗಿ ಹೋಯಿತು. “ನೆನ್ನೆಯಿಂದ ಬಹಳ ಕರೆಗಳು ಬರ್ತಾ ಇವೆ, ಗೊತ್ತಿಲದೇ ಇರುವವರೂ ಸಂದೇಶ ಕಳಿಸುತ್ತಿದ್ದಾರೆ,” ಎನ್ನುತ್ತಾರೆ.
ಕಳೆದ ಕೆಲವು ವರ್ಷಗಳಿಂದ 500ಕ್ಕೂ ಹೆಚ್ಚು ವಿಡಿಯೋ ಸಿದ್ದು ಯಾಪಲಪರವಿ ಅವರು ಮಾಡಿದ್ದಾರೆ. ಆದರೆ ಈ ರೀತಿ ಒಂದು ವರ್ಷದ ಹಳೆ ವಿಡಿಯೋ ವೈರಲ್ ಆಗಿರುವುದು ಇದೇ ಮೊದಲು.
ಒಂದು ವರ್ಷದಿಂದ ಮಲಗಿದ್ದ ವಿಡಿಯೋ ಈಗ ತಕ್ಷಣ ಎದ್ದು ಒಡಲು ಕಾರಣವೇನು?
ಇದಕ್ಕೆ ಹಲವಾರು ಉತ್ತರಗಳಿರಬಹುದು, ಆದರೆ ವಚನ ದರ್ಶನ ತಂಡದ ಮಂಗಾಟಗಳ ಕಡೆ ಬೆರಳು ಮಾಡುವುದು ಅನಿವಾರ್ಯ ಅನಿಸುತ್ತದೆ.
ಲಿಂಗಾಯತರು ಹಿಂದೂಗಳು, ಬಸವಣ್ಣ ತೋರಿಸಿದ್ದು ಭಕ್ತಿ ಮಾರ್ಗ, ವಚನಗಳು ವೇದ ಉಪನಿಷತ್ತುಗಳ ಮುಂದುವರೆದ ಭಾಗ ಎಂದು ವಾದಿಸುತ್ತಾ RSSನವರು 10 ನಗರಗಳಲ್ಲಿ ಅದ್ದೊರಿಯಾಗಿ, ಅಬ್ಬರದ ಪ್ರಚಾರದ ಮಧ್ಯ ಒಂದೇ ಪುಸ್ತಕ ಬಿಡುಗಡೆ ಮಾಡಿದ್ದಾರೆ.
ಕಲ್ಯಾಣದಲ್ಲಿ ಕ್ರಾಂತಿ ನಡೆಯಲಿಲ್ಲ, ವಚನಗಳನ್ನು ಯಾರೂ ಬರೆಯಲಿಲ್ಲ ಎಂದು ಪದೇ ಪದೇ ಹೇಳುತ್ತಿರುವ ಅವರ ಮಾತು ಈಗ ಸಾಮಾನ್ಯ ಲಿಂಗಾಯತರನ್ನೂ ಮುಟ್ಟಿ ಅವರನ್ನು ಕೆರಳಿಸಲು ಆರಂಭಿಸಿದೆ. ಅವರಿಂದ ಬರುತ್ತಿರುವ ತೀಕ್ಷ್ಣ ಪ್ರತಿಕ್ರಿಯೆಯ ಸೂಚನೆ ಈ ವಿಡಿಯೋ ವೈರಲ್ ಆಗಿರುವುದು.
ಇತ್ತೀಚೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ಅವರು ವಚನ ದರ್ಶನ ಕಲ್ಯಾಣದ ನೆನಪನ್ನು ಅಳಿಸುವ ಪ್ರಯತ್ನ ಎಂದು ಕರೆದಿದ್ದರು. ಈ ಮಾತನ್ನು ಈಗ ಬಹಳಷ್ಟು ಬಸವ ಅನುಯಾಯಿಗಳು ಒಪ್ಪಿಕೊಳ್ಳುವ ಹಾಗೆ ಕಾಣಿಸುತ್ತಿದೆ.