ಯಾದಗಿರಿ
ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಸೆಪ್ಟೆಂಬರ್ ೪ ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಯಶಸ್ವಿಯಾಗಿ ಆಯೋಜಿಸಲು ಲಿಂಗಾಯತ, ಪ್ರಗತಿಪರ ಸಂಘಟನೆಗಳ ಸಮಾಲೋಚನಾ ಸಭೆ ಬುಧವಾರ ನಡೆಯಿತು.
ಸಭೆಯ ನೇತೃತ್ವವನ್ನು ಗುರುಮಠಕಲ್ಲ ಖಾಸಾಮಠದ ಪೂಜ್ಯ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅವರು ಮಾತನಾಡುತ್ತ, ಜಿಲ್ಲೆಯಲ್ಲಿ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಎಲ್ಲರೂ ಸೇರಿಕೊಂಡು ಮಾಡೋಣ. ಅದಕ್ಕೆ ಬೇಕಾದಂತಹ ಸಂಪನ್ಮೂಲಕ್ಕಾಗಿ ಎಲ್ಲರ ಸಹಾಯ ಸಹಕಾರ ಕೇಳೋಣ ಎಂದರು.

ಯಾದಗಿರಿ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಶರಣ ಗುಂಡಪ್ಪ ಕಲಬುರ್ಗಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ಎಲ್ಲಾ ಜಾತಿ ಜನಾಂಗಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಗುರುಮಠಕಲ್ ಶ್ರೀಗಳು ಅವಿರತವಾಗಿ ಶ್ರಮಿಸುತ್ತಿದ್ದು, ಅವರಿಗೆ ಎಲ್ಲ ಸಂಘ-ಸಂಸ್ಥೆ, ಸಮುದಾಯಗಳ ಜನರು ಸ್ಪಂದಿಸುತ್ತಾರೆ, ಅವರ ನೇತೃತ್ವದಲ್ಲಿ ಅಭಿಯಾನ ಮಾಡುತ್ತೇವೆ ಎಂದರು.
ಲಿಂಗಾಯತ ಮಠಾಧೀಶರ ಒಕ್ಕೂಟದ ಪರವಾಗಿ ಬಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೇವರು, ಬಸವಣ್ಣನವರು ಇಂಗ್ಲೆಂಡ್ ದೇಶಕ್ಕೆ ತಲುಪಿದರೂ ಕೂಡಾ ನಾವು ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ. ಬಸವತತ್ವ ಎಲ್ಲರಿಗೂ ಬೇಕಾಗಿದೆ. ಬಸವಾದಿ ಶರಣರ ತತ್ವಾದರ್ಶ ಜನಮಾನಸದಲ್ಲಿ ಬಿತ್ತುವ ಹಾಗೂ ಸಮಸಮಾಜದ ನಾಡು ಕಟ್ಟುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜೆಎಲ್ಎಂ ರಾಜ್ಯ ನಾಯಕರಾದ ಬಸವರಾಜ ಧನ್ನೂರ ಅವರು, ಎಷ್ಟೇ ಅಡೆತಡೆಗಳಾದರೂ ಬಸವತತ್ವ ಸಂಸ್ಕೃತಿ ಅಭಿಯಾನದ ಈ ಕಾರ್ಯ ನಡೆಯಲೆಬೇಕು. ಸರ್ವಸಮಾನತೆ, ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯಂಥ ತತ್ವಗಳ ಮೂಲಕ ಲಿಂಗಾಯತ ತತ್ವ, ಲಿಂಗಾಯತ ಧರ್ಮ ಉಳಿಸಿ ಬೆಳಸಬೇಕಾಗಿದೆ ಎಂದರು.
ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಮಾತನಾಡಿ, ನಾವೆಲ್ಲ ಒಂದಾಗಬೇಕು. ಇಲ್ಲದೇ ಹೋದರೆ ನಮ್ಮ ಬಸವತತ್ವ ಉಳಿಯಲಾರದು. ಒಂದಾಗಿ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು.
ಸ್ಥಳಿಯ ನಾಯಕರಾದ ಬಸವರಾಜ ಜೈನ ಯಾದಗಿರಿಗೆ ಬಂದಿರುವ ಈ ಅವಕಾಶವನ್ನು ಎಲ್ಲರೂ ಒಕ್ಕಟ್ಟಿನಿಂದ ಯಶಸ್ವಿ ಕಾರ್ಯಕ್ರಮ ಮಾಡೋಣ ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಘಟನೆ ಮಾಡುವುದು. ಅಭಿಯಾನ ಆಗಮನದ ಬಗ್ಗೆ, ಅದರ ಮಹತ್ವದ ಅರಿವು ಮೂಡಿಸುವ ಬಗ್ಗೆ ಕೂಡಲೇ ಕಾರ್ಯಪ್ರವೃತ್ತ ಆಗುವುದೆಂದು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ನಿರಡಗುಂಬ ಶ್ರೀಗಳು ಮತ್ತು ಜಾ. ಲಿಂ. ಮಹಾಸಭೆಯ ಕಲಬುರ್ಗಿ ಜಿಲ್ಲಾಧ್ಯಕ್ಷ ಶರಣ ಪ್ರಭುಲಿಂಗ ಮಹಾಗಾಂವಕರ, ರಾಯಚೂರು ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ವೇದಿಕೆಯಲ್ಲಿದ್ದು ಮಾತನಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಬಿರಾದಾರ, ಚನ್ನಪ್ಪಗೌಡ ಮೋಸಂಬಿ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವೆಂಕಪ್ಪ ಆಲೆಮನೆ, ರಾಜಶೇಖರಗೌಡ ಚಾಮನಹಳ್ಳಿ, ಇಂದೂಧರ, ಮರಪ್ಪ ಚಟ್ಟರಕರ್ ಸೇರಿದಂತೆ ರೈತ, ದಲಿತ ಸಂಘಟನೆಗಳು, ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂ. ಮಹಾಸಭಾ ಮುಖಂಡರು, ಬಸವಾಭಿಮಾನಿಗಳು ಉಪಸ್ಥಿತರಿದ್ದರು.