ಯಾದಗಿರಿ
‘ಬಸವಣ್ಣ ಬಾಲಕರಿರುವಾಗಲೇ ತನ್ನ ಅಕ್ಕನಿಗೆ ನೀಡದ ಜನಿವಾರ ದೀಕ್ಷೆ ತನಗೆ ಬೇಡ ಎಂದು ಧಿಕ್ಕರಿಸಿದ ಬಂಡಾಯಗಾರ. ಎಲ್ಲರಿಗೂ ಸಮಾನತೆಯ ತತ್ವವನ್ನು ಅನುಸರಿಸುವಂತೆ ತಿಳಿ ಹೇಳಿದ ಮಹಾವ್ಯಕ್ತಿ ಬಸವಣ್ಣ’ ಎಂದು ರಾಷ್ಟ್ರೀಯ ಬಸವ ದಳ ಮಹಿಳಾ ಗಣದ ನಾಯಕಿ, ಕಲಬುರಗಿಯ ಜಗದೇವಿ ಚಟ್ಟಿ ಅಭಿಪ್ರಾಯಪಟ್ಟರು.
ನಗರದ ಹಿಂದಿ ಪ್ರಚಾರ ಸಭಾ ಹತ್ತಿರದ ಅಮೃತೇಶ್ವರ ದೇವಸ್ಥಾನದಲ್ಲಿ ಈಚೆಗೆ ವಿಶ್ವ ಮಹಿಳಾ ದಿನದ ಅಂಗವಾಗಿ ರಂಗ ಬಳಪ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ ‘ಮಹಿಳೆ ಅಸ್ಮಿತೆಯ ಸವಾಲುಗಳು’ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ವಚನಗಳಲ್ಲಿ ಸ್ತ್ರೀ ಸಂವೇದನೆ’ ಕುರಿತು ಅವರು ಮಾತನಾಡಿದರು.
ಮೌಲ್ಯಯುತ ಬದುಕಿಗೆ ವಿದಾಯ ಹೇಳಿದ್ದರಿಂದಲೇ ಸೌಜನ್ಯ, ನಿರ್ಭಯ ಪ್ರಕರಣಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆಯೆಂದು ವಿಷಾದಿಸಿದರು.

ರಂಗ ಬಳಪದ ನಿರ್ದೇಶಕ ರಾಜೇಂದ್ರ ಕುಮಾರ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದರೂ ಹೆಣ್ಣನ್ನು ದ್ವಿತೀಯ ದರ್ಜೆಯಾಗಿಯೇ ಪರಿಗಣಿಸಿದೆ. ಹಳ್ಳಿಗಳಲ್ಲಿ ದುಡಿದ ಮಹಿಳಾ ರೈತರು ಪುರುಷರಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತಿರುವುದರಿಂದಲೇ ನಾವು ಉಸಿರಾಡುತ್ತಿದ್ದೇವೆ. ಹೀಗಾಗಿ ಜಗತ್ತಿನ ಆರ್ಥಿಕತೆಗೆ ಮಹಿಳೆಯರ ಅಪಾರ ಕೊಡುಗೆ ಇದೆ. ಮಹಿಳೆಗೆ ಸಮಾನ ಸ್ಥಾನಮಾನ ಕಲಿಸಿಕೊಟ್ಟ ವ್ಯಕ್ತಿತ್ವದ ನೆಲೆ ಶಿವತತ್ವ, ಅದು ಅರ್ಧನಾರೀಶ್ವರ ತತ್ವವಾಗಿದೆ ಎಂದು ಹೇಳಿದರು. ಪತ್ರಕರ್ತ ವೈಜನಾಥ ಹಿರೇಮಠ ಮಾತನಾಡಿದರು.

ಸಾಹಿತಿಗಳಾದ ಸಾಯಪ್ಪ ಮುನಿ, ಕವಿತಾ ಜುಗೇರಿ, ಸುಮಂಗಲಾ, ಹನುಮಂತ, ಅನ್ನಪೂರ್ಣ ಭಂಡಾರಿ ಮಹಿಳಾ ದಿನದ ವಿಶೇಷ ಕವಿತೆ ಓದಿದರು.
ವಿಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಬಣ್ಣ ಪ್ರಾರ್ಥಿಸಿದರು. ಹನುಮಂತ ವಂದಿಸಿದರು. ಶಿವಕುಮಾರ ಜುಲ್ಫಿ ನಿರೂಪಿಸಿದರು.