ಕಲಬುರಗಿ:
ರವಿವಾರ ಕಲಬುರಗಿ ಬಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠದ ಪೂಜ್ಯ ಬಸವಲಿಂಗ ಪಟ್ಟದ್ದೇವರಿಗೆ ಡಾ. ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, “ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದ ಜತ್ತಿಯವರು ವಿಶ್ವಕ್ಕೆ ಬಸವ ತತ್ತ್ವ ಪ್ರಸಾರವಾಗುವಲ್ಲಿ ಕಾರಣಭೂತರಾಗಿದ್ದಾರೆ. ಕರ್ನಾಟಕದಲ್ಲಿ ಮಠಗಳು ಬಸವತತ್ತ್ವ ಪ್ರಸಾರ ಮಾಡಿದಕ್ಕಿಂತಲೂ ಹೆಚ್ಚಾಗಿ ಡಾ. ಬಿ.ಡಿ. ಜತ್ತಿಯವರು ನಾಡಿಗೆ ಬಸವ ತತ್ತ್ವ ನಿಡಿದ್ದಾರೆ,” ಎಂದು ಹೇಳಿದರು.
ಡಾ. ಬಿ.ಡಿ. ಜತ್ತಿಯವರು ಹಣೆಯ ಮೇಲೆ ಯಾವಾಗಲೂ ವಿಭೂತಿ ಧರಿಸುತ್ತಿದ್ದರು. ರಾಷ್ಟ್ರಪತಿ ಹುದ್ದೆ ಬಿಟ್ಟರೂ ಬಿಡುವೆ ಆದರೆ ಯಾವುದೇ ಕಾರಣಕ್ಕೂ ವಿಭೂತಿ ಹಚ್ಚವುದನ್ನು ಬಿಡುವುದಿಲ್ಲ ಎಂದು ಹೇಳುತ್ತಿದ್ದರು ಎಂದು ಬೆಂಗಳೂರು ಬಸವ ಸಮಿತಿಯು ಅಧ್ಯಕ್ಷರಾದ ಡಾ. ಅರವಿಂದ ಜತ್ತಿಯವರು ನೆನಪಿಸಿಕೊಂಡರು.
ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ ಅವರು ಮಾತನಾಡಿ ಬಸವ ಸಮಿತಿಯ ವಚನ ಅನುವಾದ ಯೋಜನೆಗೆ ಜತ್ತಿಯವರು ಪ್ರಾಥಮಿಕ ರೂಪರೇಷ ಹಾಕಿದ್ದರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ. ವಿಲಾಸವತಿ ಖೂಬಾ, ರಾಜೇಂದ್ರ ಖೂಬಾ, ಡಾ. ಆನಂದ ಸಿದ್ದಾಮಣಿ, ಕಲ್ಲಪ್ಪ ವಾಲಿ, ಉದ್ದಂಡಯ್ಯ ಬಂಡಪ್ಪ ಕೇಸೂರು, ಗುರುಶಾಂತಮ್ಮ, ದರೆಪ್ಪ, ಹಾಜರಿದ್ದರು. ಡಾ. ಜಯಶ್ರಿ ದಂಡೆ ಅವರು ಪ್ರಶಸ್ತಿ ಪತ್ರ ಓದಿದರು.