ಜನರನ್ನು ಪ್ರೀತಿಸುವುದೇ ದೇಶ ಪ್ರೇಮ: ಕಿತ್ತೂರು ಉತ್ಸವದಲ್ಲಿ ಸಿದ್ದರಾಮಯ್ಯ

ಬಸವ ಮೀಡಿಯಾ
ಬಸವ ಮೀಡಿಯಾ

ಕಿತ್ತೂರು

ಮುಖ್ಯಮಂತ್ರಿ ಸಿದ್ದರಾಮಯ್ಯ “ಚೆನ್ನಮ್ಮನ ಕಿತ್ತೂರು ಉತ್ಸವ ೨೦೨೪”ರ ಸಮಾರೋಪ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿದರು.

ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ವಿಜಯೋತ್ಸವದ 200ನೇ ವರ್ಷದ ನೆನಪಿಗಾಗಿ ಆಚರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತ ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರನ್ನು ಪ್ರೀತಿಸಬೇಕು ಎಂಬುವುದನ್ನು ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಶೂರ ಸಂಗೊಳ್ಳಿ ರಾಯಣ್ಣ ಕಲಿಸಿಕೊಟ್ಟಿದ್ದಾರೆ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ ದೇಶಪ್ರೇಮ ಎಂದು ಹೇಳಿದರು.

ದೇಶದ ಜನರನ್ನು ಪ್ರೀತಿಸಿ, ದೇಶದ ಜನರ ಸ್ವಾತಂತ್ರ್ಯ ರಕ್ಷಣೆಗಾಗಿ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರಾಣತ್ಯಾಗ ಮಾಡಿದ್ದಾರೆ, ಇದು ಅತ್ಯುನ್ನತವಾದ ತ್ಯಾಗ. ಇವರ ಆದರ್ಶವನ್ನು ಇವತ್ತಿನ ಪೀಳಿಗೆ ಪಾಲಿಸಬೇಕಿದೆ ಎಂದರು.

ಬಸವಣ್ಣನವರ ಆಶಯದಂತೆ ಜಾತಿ, ಮೌಡ್ಯ, ಕಂದಾಚಾರಗಳನ್ನು ತಿರಸ್ಕರಿಸಬೇಕಿದೆ ಎಂದು ಕರೆ ನೀಡಿದರು.

ಇದರೊಂದಿಗೆ ಮೂರು ದಿನಗಳ ಐತಿಹಾಸಿಕ ಕಿತ್ತೂರು ಉತ್ಸವ ಹಾಗೂ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮನ 200ನೇ ವಿಜಯೋತ್ಸವಕ್ಕೆ ಶುಕ್ರವಾರ ಅದ್ದೂರಿ ತೆರೆಬಿದ್ದಿತು.

ಈ ಬಾರಿಯ ಕಿತ್ತೂರು ಉತ್ಸವ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ವೀರರಾಣಿ ಕಿತ್ತೂರು ಚನ್ನಮ್ಮನ ಇತಿಹಾಸ ಮೆಲಕು ಹಾಕಲಾಯಿತು. ಚನ್ನಮ್ಮನ ಧೈರ್ಯ, ಸಾಹಸವನ್ನು ಮುಂದಿನ ಪೀಳಿಗೆಗೆ ಸಂದೇಶ ಸಾರುವ ಕೆಲಸವೂ ನಡೆಯಿತು.

ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಮಹಿಳಾ ಗೋಷ್ಠಿ, ರಸಮಂಜರಿ ಕಾರ್ಯಕ್ರಮ, ಕುಸ್ತಿ ಪಂದ್ಯ, ಜಲಕ್ರೀಡೆ ಮತ್ತಿತರ ಕಾರ್ಯಕ್ರಮಗಳು ಕಿತ್ತೂರು ಉತ್ಸವಕ್ಕೆ ಮೆರಗು ನೀಡಿದವು.

ರಾಣಿ ಚನ್ನಮ್ಮ ವೇದಿಕೆಯಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಡಾಲಿ ಧನಂಜಯ ಅವರು, ಟಗರು ಚಿತ್ರದ ಸಂಭಾಷಣೆ ಮೂಲಕ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟರು. ಬಸವಣ್ಣನ ವಚನದ ಮೂಲಕ ಭಕ್ತಿಯ ಕಡೆಗೂ ಸೆಳೆದರು.

ಗಾಯಕ ಜಸ್‌ಕರಣ್ ಅವರು, ದ್ವಾಪರ ದಾಟುತ ನನ್ನನೆ ಸೇರಲು ಬಂದ ರಾಧಿಕೆ ಗೀತೆ ಮೂಲಕ ಜನರನ್ನು ಸೆಳೆದರೆ, ದಿವ್ಯಾ ರಾಮಚಂದ್ರನ್‌ ಅವರು, ‘ಗಿಲ್ಲಕೊ ಶಿವ ಗಿಲ್ಲಕೊ’ ಹಾಡು ಹಾಡಿ ರಂಜಿಸಿದರು. ಶರಣ ಮತ್ತು ಸ್ಯಾಂಡಲ್‌ವುಡ್‌ ತಾರೆಯರ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.

ಗುರವಾರ ಮಹಿಳೆಯರಿಗಾಗಿಯೇ ಮೀಸಲಿಡಲಾಗಿದ್ದು ವಿಶೇಷ, ಮಹಿಳೆಯರ ಬೈಕ್ ಡ್ಯಾಲಿ, ಅಟೋಟಗಳು, ಮುಖ್ಯ ವೇದಿಕೆಯ ಮೇಲೆ ಮಹಿಳಾ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮಹಿಳೆಯರಿಗೆ ಸಿಂಹಪಾಲು ನೀಡಿದ್ದು ಮಹಿಳೆಯರ ಪಾಲಿಗೆ ಜಾತ್ರೆಯಂತಾಗಿತ್ತು.

ಚನ್ನಮ್ಮನ ವಿಜಯೋತ್ಸವ 200ನೇ ವರ್ಷಾಚರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ, ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತವರ ತಂಡದಿಂದ ರಸಮಂಜರಿ ಕಾರ್ಯಕ್ರಮ, ಕಿತ್ತೂರು ಉತ್ಸವದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್‌, ಖ್ಯಾತ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್ ಅವರ ಸಂಗೀತ ಸುಧೆ ಕಾರ್ಯಕ್ರಮ ಜನಮನ ಸೊರೆಗೊಂಡವು.

ದ್ವಿಶತಮಾನೋತ್ಸವಕ್ಕೆ ಜನ ನಿರೀಕ್ಷೆಗೆ ಮೀರಿ ಹರಿದುಬಂದರು. ರಾಣಿ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸಾಹಿತ್ಯ ಗೋಷ್ಠಿಗಳು ಮತ್ತು ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಕಾಡಿತು. ಆದರೆ, ಇಳಿಹೊತ್ತಿನ ನಂತರ ವೇದಿಕೆಯಲ್ಲಿ ಜನರು ಕಿಕ್ಕಿರಿದು ಸೇರಿ, ಸಂಗೀತದ ರಸದೌತಣ ಅನುಭವಿಸಿದರು.

ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಕಲ್ಮಠ, ನಿಚ್ಚಣಿಕೆಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಬಾಬಾಸಾಹೇಬ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮುಖ್ಯ ಸಚೇತಕರಾದ ಅಶೋಕ ಪಟ್ಟಣ್, ಶಾಸಕರಾದ ಮಹಂತೇಶ ಕೌಜಲಗಿ, ಪ್ರಕಾಶ್ ಹುಕ್ಕೇರಿ, ಭರಮಗೌಡ ಕಾಗೆ, ವಿಶ್ವಾಸ್ ವೈದ್ಯ, ಆಸಿಫ್ ಸೇಠ್, ಬುಡಾ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಜಿಂಗಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *