ಇಂದು ಮುಂದು ಎಂದೆಂದೂ ಲಿಂಗಾಯತ ಸ್ವತಂತ್ರ ಧರ್ಮ: ಪೂಜ್ಯ ಬಸವಲಿಂಗ ಪಟ್ಟದ್ದೇವರು

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

‘ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವಾಗಿದೆ. ಇಂದು ಮುಂದು ಎಂದೆಂದೂ ಲಿಂಗಾಯತ ಸ್ವತಂತ್ರ ಧರ್ಮವಾಗಿರಲಿದೆ’ ಎಂದು ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಸ್ಪಷ್ಟಪಡಿಸಿದರು.

ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ಪೂಜ್ಯ ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರು ಸೋಮವಾರ ಸುದ್ದಿಘೋಷ್ಠಿಯಲ್ಲಿ ಮಾತನಾಡಿ ಅನುಭವ ಮಂಟಪ ಉತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಗೆ ಸಂಬಂಧಿಸಿದಂತೆ ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಲಿಂಗಾಯತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು.

ವೀರಶೈವ ಲಿಂಗಾಯತ ಮಹಾಸಭೆ ಒಂದಾದರೆ ಕೆಲಸ ಬೇಗ ಆಗುತ್ತದೆ ಎಂದು ಪಕ್ಕದಲ್ಲೇ ಕುಳಿತಿದ್ದ ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಉದ್ದೇಶಿಸಿ ಹೇಳಿದರು. ಅದಕ್ಕೆ ಖಂಡ್ರೆಯವರು ‘ನಾವೆಲ್ಲ ಒಂದಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಹಿಂದೆ, ಇಂದು, ಮುಂದೆ, ಮುಂದೆಂದಿಗೂ ವೀರಶೈವ, ಲಿಂಗಾಯಿತ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಇತ್ತೀಚೆಗೆ ನೀಡಿದ್ದ ಹೇಳಿಕೆಯ ಹಿನ್ನಲೆಯಲ್ಲಿ ಶ್ರೀಗಳ ಹೇಳಿಕೆಯೂ ಬಂದಿದೆ. ಈ ಮುಂಚೆ ಬಿದರಿ ಅವರು ಲಿಂಗಾಯತ ಅನ್ನುವುದು ಒಂದು ಪಂಥ. ನಾವು ಈಗ ಪ್ರತ್ಯೇಕ‌ ಧರ್ಮ ಅಂತ ಹೇಳಲ್ಲ, ಎಂದು ಭಾಷಣ ಮಾಡಿದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಅನುಭವ ಮಂಟಪ ಉತ್ಸವ

ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿ ಹಾಗೂ ಸಮ ಸಮಾಜದ ತತ್ವಾದರ್ಶಗಳ ಪ್ರಸಾರಕ್ಕಾಗಿ ಆರಂಭಿಸಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನ. 23, 24ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಧುನಿಕ ಅನುಭವ ಮಂಟಪದ ಸ್ಥಾಪಕರೂ ಆದ ಭಾಲ್ಕಿ ಹಿರೇಮಠ ಸಂಸ್ಥಾನದ ಚನ್ನಬಸವ ಪಟ್ಟದ್ದೇವರು ಬಸವತತ್ವ ಪ್ರಸಾರಕ್ಕಾಗಿ ಅನುಭವ ಮಂಟಪ ಉತ್ಸವ ಆರಂಭಿಸಿದ್ದರು. ಅದನ್ನು 45 ವರ್ಷಗಳಿಂದ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಈಶ್ವರ ಬಿ. ಖಂಡ್ರೆ ವಿವರಿಸಿದರು.

ಅನುಭವ ಮಂಟಪ ಉತ್ಸವದ ಅಂಗವಾಗಿ ನ. 4ರಿಂದಲೇ ‘ಆರೋಗ್ಯ ಆಧ್ಯಾತ್ಮ’ ಕುರಿತು ಪ್ರವಚನ ಆರಂಭಗೊಂಡಿದೆ. 21ರಂದು ಕೊನೆಗೊಳ್ಳಲಿದೆ. ಯೋಗ, ವಚನ ಪಾರಾಯಣ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗುತ್ತಿವೆ. ನ. 23, 24ರಂದು ಮುಖ್ಯ ಕಾರ್ಯಕ್ರಮಗಳು ನಡೆಯಲಿದ್ದು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದರು.

Share This Article
2 Comments
  • ಶಂಕರಬಿದರಿಯವರು ಎಲ್ಲರನ್ನು ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಿರಬಹುದು….ಆದರೆ ಲಿಂಗಾಯತವು ಸರ್ವ ರೀತಿಯಲ್ಲೂ ಧರ್ಮವೇ ಆಗಿರುವುದು ಸತ್ಯ..

    ಪಾಯಸ ಮತ್ತು ಹುಳಿ ಒಂದಾಗಲು ಕಷ್ಟ ಮತ್ತು ಅವೈಜ್ಞಾನಿಕ. ಅದರಂತೆಯೇ ವೀರಶೈವ ಚಿಂತನೆಗಳನ್ನ ಲಿಂಗಾಯತಕ್ಕೆ ಬೆರಸುವುದು ಸರಿಯಾಗದ ಮಾತು.

  • ನಿಕರ ಹಾಗೂ ಸ್ಪಷ್ಠತೆ ಇಲ್ಲದ ಮುಖಂಡರ ಮಾತುಗಳೇ ಇದುವರೆವಿಗು ಧರ್ಮವನ್ನು ದಾರಿತಪ್ಪಿಸಿ ಧರ್ಮಿಯರನ್ನು ಗೊಂದಲದಲ್ಲಿಟ್ಟಿರುವುದು.

Leave a Reply

Your email address will not be published. Required fields are marked *