ಅಂತ್ಯಕ್ರಿಯೆಯಲ್ಲಿ ಪಾರ್ಥಿವ ಶರೀರದ ತಲೆಯ ಮೇಲೆ ಕಾಲಿಡಬಹುದೇ?

ಸಿಂಧನೂರು

ಪೂಜ್ಯ ಶರಣಬಸವಪ್ಪ ಅಪ್ಪ ಅವರು ಲಿಂಗೈಕ್ಯರಾಗಿ ಅವರ ಅಂತ್ಯಕ್ರಿಯೆ ಮಾಡುವ ಪೂರ್ವದಲ್ಲಿ ಒಬ್ಬ ಕಿರಿಯ ವಯಸ್ಸಿನ ಸ್ವಾಮಿಗಳು ತಮ್ಮ ಎರಡೂ ಪಾದಗಳನ್ನು ಅವರ ತಲೆಯ ಮೇಲೆ ಇಟ್ಟದ್ದು ಕರ್ನಾಟಕದಾದ್ಯಂತ ಚರ್ಚೆಗೆ ಒಳಪಟ್ಟಿದೆ.

ಇದು ನಮ್ಮ ಸಂಪ್ರದಾಯದ ಪ್ರಕಾರ ಮಾಡಬೇಕಾದ ಆಚರಣೆ ಎಂದು ಅದನ್ನು ಸಮರ್ಥಿಸುವವರು ಹೇಳಿದರೆ, 95 ವರ್ಷ ಬದುಕಿ ಒಂದು ಶ್ರೇಷ್ಠ ದಾಸೋಹ ಪರಂಪರೆಯ ಶರಣಬಸವೇಶ್ವರ ಪೀಠದ ಉಸ್ತುವಾರಿ ಹೊತ್ತು ನಡೆಸಿದ, ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡಿದ ಒಬ್ಬ ಸಾಧಕ ಜೀವಿಯ ತಲೆಯ ಮೇಲೆ ಕಿರಿಯ ವಯಸ್ಸಿನ ಸ್ವಾಮೀಜಿ ಕಾಲಿಡುವದು ಅಮಾನವೀಯ ಎನ್ನುವ ವೈಚಾರಿಕರ ಮಾತು ಮತ್ತೊಂದೆಡೆ.

ಈ ವಿಷಯದ ಕುರಿತು ಕಲಬುರ್ಗಿಯ ಅಭಿಯಾನದಲ್ಲಿ ಹುಡುಗಿಯೊಬ್ಬಳು ಪ್ರಶ್ನೆ ಮಾಡಿದಾಗ, ಸಾಣೆಹಳ್ಳಿಯ ಪೂಜ್ಯ ಪಂಡಿತಾರಾಧ್ಯರು, ಇದು ಕೆಲವು ವಿವೇಕ ಇಲ್ಲದವರು ಮಾಡುವ ಕೆಲಸ ಎಂದು ಹೇಳಿದ್ದನ್ನೇ, ಕೆಲವು ಪತ್ರಿಕೆಗಳು ವಿವಾದ ಎನ್ನುವಂತೆ ಬರೆದದ್ದು ಸುದ್ದಿಯಾಯಿತು.

ಹಾಗಾದರೆ ಈ ಎರಡು ನಿಲುವುಗಳಲ್ಲಿ ಯಾವುದು ಸರಿ, ಸೃಷ್ಟಿಯ ನೆಲೆಯಲ್ಲಿ ಶರಣ ಸಿಂದ್ಧಾಂತ ಏನು ಹೇಳುತ್ತದೆ? ಎನ್ನುವುದನ್ನು ತಾತ್ವಕವಾಗಿ ವಚನಗಳ ಪರಿಭಾಷೆಯ ಆಧಾರದ ಮೇಲೆ ತಿಳಿಯುವದು ಇಂದಿನ ಅವಶ್ಯಕತೆಯಾಗಿದೆ.

ಮಾನವ ಶರೀರ ಮತ್ತು ಸೃಷ್ಟಿಕರ್ತನ ಸಂಬಂಧ

ಮಾನವ ಶರೀರ ಮತ್ತು ಸೃಷ್ಟಿಕರ್ತನ ಶಕ್ತಿ ಸಂಬಂಧದ ಬಗ್ಗೆ ಆರಿಯುವದು ಮುಖ್ಯ. ಮಾನವ ಶರೀರದ ಉತ್ತಮಾಂಗವಾದ ಕುತ್ತಿಗೆಯ ಮೆಲ್ಬಾಗ ಸೃಷ್ಟಿ ಶಕ್ತಿಯ ಜೊತೆ ಸಂಬಂಧ ಹೊಂದಿರುವುದನ್ನು ವಚನಕಾರರು ಸ್ಪಷ್ಟವಾಗಿ ವಿವರಿಸುತ್ತಾರೆ.

ಸಂಗಮೇಶ್ವರದ ಅಪ್ಪಣ್ಣನವರ ಈ ವಚನ ನೋಡೋಣ:

ಪರಶಿವನ ಚಿತ್ಕಲೆ ಜಗತ್ತಿನ ಶಿರೋಮಧ್ಯಕ್ಕೆ ಬಿಂಬಿಸಿ, ಅದಕ್ಕೆ ಚೈತನ್ಯಗೊಳಿಸಿದಲ್ಲಿ, ಅದೇ ಪರಮಾತ್ಮನಾಯಿತ್ತು. ಆ ಪರಮಾತ್ಮನೆ ಜಗತ್ತಿನ ಭ್ರೂಮಧ್ಯಕ್ಕೆ ಬಿಂಬಿಸಿದಲ್ಲಿ, ಅದೇ ಅಂತರಾತ್ಮನಾಯಿತ್ತು. ಆ ಅಂತರಾತ್ಮನೇ ಜಗತ್ತಿನ ಹೃದಯಕ್ಕೆ ಬಿಂಬಿಸಿದಲ್ಲಿ, ಅದೇ ಜೀವಾತ್ಮನಾಯಿತ್ತು. ಆ ಜೀವಾತ್ಮನೇ ಘಟ, ಅಂತಾರಾತ್ಮನೇ ಪ್ರಾಣ, ಪರಮಾತ್ಮನೇ ಸರ್ವಸಾಕ್ಷಿಕ. ಆ ಸಾಕ್ಷಿಕನೇ ವಸ್ತು, ಆ ಪರವಸ್ತು. ಈ ಜೀವಾಂತರಾದಿಗಳೆಂಬ ಅಂಗಪ್ರಾಣಕ್ಕೆ ಪಂಚವಿಂಶತಿತತ್ವಂಗಳೆಂಬ ಪಾಶವಂ ತೊಡಿಸಿ, ಅಂತದನೇ ಪಶುವೆನಿಸಿ, ತಾನದಕ್ಕೆ ಪತಿಯಾಗಿ, ಅಲ್ಲಿ ನಾನಾ ವಿನೋದಂಗಳಂ ವಿನೋದಿಸಿತ್ತು. (ಸಂಸ್ಕೃತಿ ಶ್ಲೋಕ )—- ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಯ್ಯನು ಇಂತೀ ಪರಿಯಲ್ಲಿ ಅಡಗಿರ್ದ, ಸರ್ವಜಗತ್ತನ್ನು. 9/322

ಸಂಗಮೇಶ್ವರದ ಅಪ್ಪಣ್ಣ ಶರಣರು ಮೇಲಿನ ವಚನ ಭಾವ ಈ ರೀತಿ ಇದೆ.

1) ಮಾನವನ ಶರೀರದ ತಲೆಯ ಮೆಲ್ಬಾಗವೇ ಶಿರೋಮಧ್ಯ (ಬ್ರಹ್ಮ ರಂದ್ರ) ನೇರವಾಗಿ ಜಗತ್ತಿನ ಶಿರೋಮಧ್ಯದ ಸಂಬಂಧ ಹೊಂದಿದೆ. ಅದು ಸರ್ವ ಸಾಕ್ಷಿಕ ಪರವಸ್ತುವಿನ ತಾಣವಾಗಿದೆ.

2) ಮಾನವನ ಶರೀರದ ಬ್ರುಮಧ್ಯ ಎರಡು ಕಣ್ಣುಗಳ ಮಧ್ಯದ ಭಾಗ ಮೆಲ್ಬಾಗ ಆ ಪರವಸ್ತುವಿನ ಪ್ರಾಣಚೇತನ ಸಂಬಂಧ ಹೊಂದಿದೆ. ಅದು ನೇರವಾಗಿ ಜಗತ್ತಿನ ಬ್ರಮಧ್ಯದ ಸಂಬಂಧ ಹೊಂದಿದೆ. ಅದು ಸರ್ವ ಸಾಕ್ಷಿಕ ಪರವಸ್ತುವಿನ ಪ್ರಾಣಶಕ್ತಿ ತಾಣವಾಗಿದೆ.

3) ಮಾನವನ ಶರೀರದ ತಲೆ ಮತ್ತು ತಲೆಯ ಹಿಂಬಾಗದ ಮಧ್ಯ ಹೃದಯ ಜೀವಾತ್ಮನ ನೆಲೆ ಎನಿಸಿದೆ. ಆ ಹೃದಯ ಮಧ್ಯದ ಜೀವಾತ್ಮ ಎಲ್ಲ ಜೀವಿಗಳ ಹೃದಯದ ಜೀವಿಗಳೊಡನೆ ನೇರವಾಗಿ ಸಂಬಂಧ ಹೊಂದಿದೆ. ಅದು ಸರ್ವ ಸಾಕ್ಷಿಕ ಪರಮನ ಅಂಶಿಕವಾದ ಜೀವನ (ಮಾನವನ) ತಾಣವಾಗಿದೆ.

ಈ ರೀತಿಯಲ್ಲಿ ಸೃಷ್ಟಿಕರ್ತ ಮಾನವನ ಉತ್ತಮಾಂಗದಲ್ಲಿ (ತಲೆ) ನೆಲೆಸಿದ್ದಾನೆ. ಆದರೆ ಆತನೇ ತನ್ನನ್ನ ಜಗತ್ತಿಗೆ ಮರೆಮಾಡಿಕೊಳ್ಳುವ ದೃಷ್ಟಿಯಿಂದ ಸೃಷ್ಟಿಮಾಡಿದ ಮಾಯಾಪರದೆ ಇರುವ ಕಾರಣ ಜೀವನ ಪರಮನ ಸಂಬಂಧ ಅಸಂಬಂಧವಾಗಿದೆ.

ಮಾಯಾಪರದೆಯ ಕಾರಣದಿಂದ ಅಂತರಂಗದ ಆಸಂಬಂಧವನ್ನು ಅಳಿಸಲು ಬಸವಣ್ಣನವರು ಆವಿಷ್ಕರಿಸಿದ ಸೂತ್ರವೇ ಇಷ್ಟಲಿಂಗ. ಇದನ್ನು ಸಾಧಿಸಿದ ಸಮರ್ಥ ಗುರು ಮಾತ್ರ ಶಿಷ್ಯನಿಗೆ ಹಸ್ತ ಮಸ್ತಕ (ಕೈ ಮತ್ತು ತಲೆಯ ಮೇಲೆ ಕೈಇರಿಸಿ) ಸಂಯೋಗ ಮಾಡಿ, ಶಿಷ್ಯನೊಳಗೆ ಇರುವ ಬೆಳಕಿನ ಸ್ವರೂಪದ ದರ್ಶನ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಾನೆ. ಇದು ಶರಣರು ಕೊಟ್ಟ ದೀಕ್ಷಾ ಸಂಬಂಧ.

ಅಂತ್ಯಕ್ರಿಯೆ ಯಲ್ಲಿ ಮಾಡಬೇಕಾದುದು

ಸಾಧಕರು ಅಥವಾ ಸಾಮಾನ್ಯರು ದೇಹ ಬಿಟ್ಟರೆ ಅದು ಜಡವಾಗುತ್ತದೆ. ಅದಕ್ಕೆ ಶವ ಅಥವಾ ಪಾರ್ಥಿವ ಶರೀರ ಎನ್ನುತ್ತೇವೆ. ಇದನ್ನು ಅಂತ್ಯಕ್ರಿಯೆ ಮಾಡುವ ಸಂಧರ್ಭದಲ್ಲಿ ಅದಕ್ಕೆ ಪೂಜೆ ಸಲ್ಲಿಸಬೇಕಾಗುತ್ತದೆ, ಆದರೆ ದೇಹ ಜಡವಾಗಿರುವದರಿಂದ ಅದನ್ನ ಲಿಂಗಾಯತ ತತ್ವದಲ್ಲಿ ಪೂಜಿಸುವಂತಿಲ್ಲ. ಹಾಗಾಗಿ ಒಬ್ಬ ಸಾಧಕ ಜಂಗಮ ಆ ದೇಹವನ್ನು ಸಂಪರ್ಕ ಮಾಡಿ ಅದನ್ನೇ ಚೇತನ್ಯ ಗೊಳಿಸಿ ಪೂಜಿಸುವದು ಲಿಂಗಾಯತ ತತ್ವ. ಇದನ್ನು ಯಾರಾದರೋ ಮಾಡಬಹುದು. ಹಸ್ತಮಸ್ತಕ ಸಂಯೋಗದಲ್ಲಿ ಕೈಯಿಂದ ಸಂಪರ್ಕಿಸಿ ಜಂಗಮಗೊಳಿಸಿದಂತೆ, ಜಡ ಶರೀರಕ್ಕೂ ಕೈಯಿಂದ ಮುಟ್ಟಿ ಅದರ ಅಂತ್ಯಕ್ರಿಯೆ ನೆರವೇರಿಸಬಹುದು. ಆದರೆ ಮಾನವ ಶರೀರದ ಉತ್ತಮಾಂಗ (ಶಿವನ ಸಂಪರ್ಕದ ನೆಲೆ) ಆದ ತಲೆಯ ಮೇಲೆ ಕಾಲಿಡುವುದನ್ನು ಯಾವ ತತ್ವಶಾಸ್ತ್ರಗಳು ಒಪ್ಪುವ ಸಂಗತಿಯಲ್ಲ. ಈ ಕ್ರಿಯೆಗೆ ಎಲ್ಲಿಯೂ ಆಧಾರಗಳಿಲ್ಲ. ಇದನ್ನ ಅರಿಯದವರು ಅಂದರೆ ಈ ಜ್ಞಾನದ ವಿವೇಕ ಇಲ್ಲದವರು ಮಾತ್ರ ಇದನ್ನು ಮಾಡುತ್ತಾರೆ, ಎಂದು ಕಲಬುರ್ಗಿಯಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರು ಹೇಳಿದ್ದು.

ಅವರ ಹೇಳಿಕೆ ಸೈಂಧಾತಿಕವಾಗಿ ಸಮರ್ಥನೀಯವಾಗಿದೆ. ಅದು ಯಾರ ಮೇಲಿನ ದ್ವೇಷವು ಅಲ್ಲ, ಅಲ್ಲಿ ಯಾರ ಅವಹೇಳನವೂ ಇರುವದಿಲ್ಲ, ಎನ್ನುವುದನ್ನು ಪ್ರಾಜ್ಞರು ಅರಿಯಬೇಕಾಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *