ವಿಜಯಪುರ
ಬೆಳಗಾವಿ ರಾಯಬಾಗದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಬಸವತತ್ವದ ಸ್ವಾಮೀಜಿಗಳನ್ನು ‘ಬಸವ ತಾಲಿಬಾನಿಗಳು’ ಎಂದು ಕರೆದಿರುವುದನ್ನು ಜಿಲ್ಲಾ ರಾಷ್ಟ್ರೀಯ ಬಸವ ಸೇನೆ ತೀವ್ರವಾಗಿ ಖಂಡಿಸಿದೆ.
ಸಂಘಟನೆಯ ಪತ್ರಿಕಾ ಹೇಳಿಕೆಯಲ್ಲಿ, ಶಾಂತಿದೂತ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಉಗ್ರವಾದಿ ತಾಲಿಬಾನ್ ಸಂಘಟನೆಯೊಂದಿಗೆ ಹೋಲಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಅಸಂಖ್ಯಾತ ಬಸವಾಭಿಮಾನಿಗಳಲ್ಲಿ ಅತೀವ ಬೇಸರವನ್ನು ತರಿಸಿದೆ.
ಕೆಲವು ದಿನಗಳ ಹಿಂದೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಮಠಾಧೀಶರ ಕುರಿತು ಅಶ್ಲೀಲ, ಆವಾಚ್ಯ ಶಬ್ದಗಳಿಂದ ಕನ್ನೇರಿ ಸ್ವಾಮಿ ಸಾರ್ವಜನಿಕವಾಗಿ ನಿಂದಿಸಿದ್ದರು.
ತದನಂತರ ವಿಜಯಪುರ ಜಿಲ್ಲಾಧಿಕಾರಿಗಳು ಕನೇರಿ ಸ್ವಾಮಿಗಳನ್ನು ಎರಡು ತಿಂಗಳುಗಳ ಕಾಲ ಜಿಲ್ಲೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು. ಘನತೆವೆತ್ತ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದು, ಕನ್ನೇರಿ ಸ್ವಾಮಿಗಳಿಗೆ ನೀವು ಒಳ್ಳೆಯ ಪ್ರಜೆಯಲ್ಲ ಎಂದು ಛೀಮಾರಿ ಹಾಕಿದ್ದವು. ಆದರೂ ಇದರಿಂದ ಕಿಂಚಿತ್ತೂ ಬುದ್ದಿ ಕಲಿಯದ ಕನ್ನೇರಿ ಸ್ವಾಮಿಗಳು ಮತ್ತೆ ತಮ್ಮ ಕೊಳಕು ಬಾಯಿಯಿಂದ ಮತ್ತೊಮ್ಮೆ ಕೆಟ್ಟ ನಾಲಿಗೆ ಹರಿಬಿಟ್ಟಿದ್ದಾರೆ.
ಕರ್ನಾಟಕದ ಸಾಂಸ್ಕೃತಿಕ ನಾಯಕ, ಲಿಂಗಾಯತ ಧರ್ಮಗುರು, ಶಾಂತಿದೂತ, ಸಮಾನತೆಯ ಹರಿಕಾರ, ಸ್ತ್ರೀಕುಲೋದ್ದಾರಕ, ದೀನ ದಲಿತೋದ್ದಾರಕ, ಪ್ರಜಾಪ್ರಭುತ್ವವಾದಿ ಅಪ್ಪ ಬಸವಣ್ಣನವರನ್ನು ವೈರುದ್ಯ ದಿಕ್ಕಿನಲ್ಲಿರುವ ತಾಲಿಬಾನ್ ಎಂಬ ಉಗ್ರ ಸಂಘಟನೆಯೊಂದಿಗೆ ಜೋಡಿಸಿರುವುದು ಅಕ್ಷಮ್ಯ ಅಪರಾಧ, ದೇಶದ್ರೋಹದ ಮಾತು.
ಅಲ್ಲದೆ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದನ್ನು ಅರಿತಿದ್ದರೂ, ಬಸವಣ್ಣನವರನ್ನು ಉಗ್ರವಾದದ ತಾಲಿಬಾನ್ ಹೋಲಿಕೆ ಸಹಿಸಲಸಾದ್ಯವಾದ ಮಾತಾಗಿದೆ. ಈ ಮಾತನ್ನು ಕರ್ನಾಟಕದ ಜನ ಒಪ್ಪಲಿಕ್ಕೆ ಸಾದ್ಯವಿಲ್ಲ.
ಆದ್ದರಿಂದ ಕೂಡಲೇ ಕರ್ನಾಟಕ ಸರಕಾರ, ವಿಜಯಪುರ ಜಿಲ್ಲಾಧಿಕಾರಿಗಳು ಕನೇರಿ ಸ್ವಾಮಿಯ ಮೇಲೆ ಸುಮೋಟೊ ಕೇಸ್ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕು. ಅಲ್ಲದೇ ಕರ್ನಾಟಕ ಪ್ರವೇಶಿಸದಂತೆ ಶಾಶ್ವತ ನಿರ್ಬಂಧ ವಿಧಿಸಬೇಕು.
ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಕನ್ನೇರಿ ಸ್ವಾಮಿಗಳು ಪದೇ ಪದೇ ವಿಶ್ವಗುರು ಬಸವಣ್ಣನವರು, ಅವರ ತತ್ವಗಳು, ಬಸವ ಮಠಾಧೀಶರನ್ನು, ಅನುಯಾಯಿಗಳನ್ನು ಅತ್ಯಂತ ಕಟುವಾಗಿ, ಅಶ್ಲೀಲವಾಗಿ ಟೀಕಿಸುತ್ತ ಸಮಾಜದಲ್ಲಿ ಕೋಮುಗಲಭೆಗಳನ್ನು ಎಬ್ಬಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶ ಹೊಂದಿದ್ದಾರೆ.
ಆದ್ದರಿಂದ ಇಂತಹ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಕನ್ನೇರಿ ಸ್ವಾಮಿಯನ್ನು ಕರ್ನಾಟಕಕ್ಕೆ ಪ್ರವೇಶ ಮಾಡದಂತೆ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಬಹಿಷ್ಕಾರ ಆದೇಶವನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಬಸವಪರ ಸಂಘಟನೆಗಳೆಲ್ಲವೂ ಸೇರಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದೆಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾದ್ಯಕ್ಷ ಡಾ. ರವಿಕುಮಾರ ಬಿರಾದಾರ, ಪಧಾಧಿಕಾರಿಗಳಾದ ಶಾಂತವೀರ ಥಾಲಭಾವಡಿ, ನಿಂಗಪ್ಪ ಸಂಗಾಪುರ, ವಿರತೀಶಾನಂದ ಶ್ರೀಗಳು, ಚಂದ್ರಕಲಾ ಪಾಟೀಲ ಗುಣದಾಳ, ಪ್ರದೀಪ್ ತೊರವಿ, ಪ್ರಭುಗೌಡ ಪಾಟೀಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
