ನಂಜನಗೂಡು:
‘ಬಸವಮಾಸ’ ಕಾರ್ಯಕ್ರಮದ ಅಂಗವಾಗಿ ಬಸವಾದಿ ಶರಣೆ ಅಕ್ಕಮಹಾದೇವಿ ಕುರಿತು 11ದಿನಗಳ ಕಾಲ ಪ್ರವಚನ ನೀಡಿದ, ವಿಜಯಪುರದ ಚಂದ್ರಕಲಾ ಮಾತಾಜಿ ಅವರಿಗೆ ಬಸವ ಮಾಸ ಸಮಿತಿಯಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಗೌರವಿಸಿ ಬೀಳ್ಕೊಡಲಾಯಿತು.
ಮಾತಾಜಿಯವರ 11ದಿನಗಳ ಪ್ರವಚನ ಆಲಿಸಿದ ಬಸವ ಮಾಸ ಸಮಿತಿಯ ಸದಸ್ಯರಾದ ಕಣೇನೂರು ನಾಗೇಶ ಅವರು ಮಾತನಾಡಿ, ಇಂತಹ ಪ್ರವಚನಗಳು ಪ್ರತಿ ಗ್ರಾಮ, ತಾಲೂಕು, ಜಿಲ್ಲಾಮಟ್ಟದಲ್ಲಿ ನಡೆಯಬೇಕು. ಶರಣರ ಜೀವನ ಮೌಲ್ಯ ಅರಿತರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆಂದರು.

ಶಿಕ್ಷಕಿ ಮೀನಾಕ್ಷಿ ಅವರು ಮಾತಾಡಿ, 11 ದಿನಗಳು ಕಳೆದದ್ದೆ ಗೋತ್ತಾಗಲಿಲ್ಲ ಮತ್ತೆ 2026ನೇ ಇಸವಿ ಮಾತಾಜಿ ಪ್ರವಚನ ಆಲಿಸುವ ಭಾಗ್ಯ ನಮಗೆಲ್ಲ ಸಿಗಲಿ ಎಂದರು.
ಮಾತಾಜಿಯವರ 11 ದಿನಗಳ ಉತ್ತರ ಕರ್ನಾಟಕದ ಭಾಷೆ ಮಿಶ್ರಿತ ಪ್ರವಚನ ಬಹಳ ಇಷ್ಟವಾಯಿತೆಂದು ಅನೇಕ ಭಕ್ತರು ಸಂತೋಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟೀಯ ರೈತ ದಿನವನ್ನು ಆಚರಿಸಲಾಯಿತು. ವಚನಗಳಲ್ಲಿ ಶರಣರು ರೈತರ ಬಗ್ಗೆ ಹೇಳಿದ್ದನ್ನು ಮಾತಾಜಿ ತಿಳಿಸಿ ಹೇಳಿದರು.

ಸಮಾರಂಭ, ಮನೆಗಳಲ್ಲಿ ಎಲೆ, ತಟ್ಟೆಗಳಲ್ಲಿ ಪ್ರಸಾದ ಚೆಲ್ಲದೆ, ಅದು ಅನ್ನಪ್ರಸಾದವೆಂದು ಬೆಲೆಕೊಟ್ಟರೆ ರೈತರ ಶ್ರಮಕ್ಕೆ ನಾವು ನೀಡುವ ಗೌರವವೆಂದು ತಿಳಿಸಿದರು. ಅನ್ನ ಚೆಲ್ಲದಂತೆ ಪ್ರತಿಜ್ಞೆ ಮಾಡಬೇಕೆಂದು ಹಾಜರಿದ್ದ ಭಕ್ತರಲ್ಲಿ ವಿನಂತಿಸಿದರು.
ಕಾರ್ಯಕ್ರಮದ ದಾಸೋಹ ಸೇವೆಯನ್ನು ನಂಜನಗೂಡು ಜೆಎಸ್ಸೆಸ್ ಐಟಿಐ ಉಪನ್ಯಾಸಕ ಕೆ.ವಿ. ನಾಗೇಶ ಸಲ್ಲಿಸಿದರು. ನಿರೂಪಣೆ ಚನ್ನಪ್ಪ, ಪ್ರಾರ್ಥನೆ ಜ್ಯೋತಿ ಸುರೇಶ, ಸ್ವಾಗತ ಮಹಾಂತೇಶ ಸಿ., ವಂದನಾರ್ಪಣೆ ಚಿನ್ಮಯ ಮಹೇಶ ಅವರು ಮಾಡಿದರು.

ಫ.ಗು. ಹಳಕಟ್ಟಿ ನಗರದಲ್ಲಿ ನಡೆದಿರುವ ಬಸವಮಾಸದ ಪ್ರವಚನ ಕಾರ್ಯಕ್ರಮ ಬೇರೆ ಬೇರೆ ಅನುಭಾವಿಗಳಿಂದ ಜನೇವರಿ 11ರವರೆಗೆ ಮುಂದುವರೆಯಲಿದೆ. ವಿವಿಧ ಕಾರ್ಯಕ್ರಮಗಳು ಸಹ ನಡೆಯುತ್ತವೆ.
