ಲಿಂಗಾಯತರ ರಾಜಕೀಯ ಪ್ರಜ್ಞೆಯ ಬಗ್ಗೆ ಅನುಮಾನವಿದೆ

ಬ್ರಾಹ್ಮಣ ಮತ್ತು ಲಿಂಗಾಯತ ಜನಪ್ರತಿನಿಧಿಗಳ ನಡೆ-ನುಡಿ ನೋಡಿ ನೀವೇ ಹೇಳಿ

ದಾವಣಗೆರೆ

ಲಿಂಗಾಯಿತರಿಗೆ ರಾಜಕೀಯ ಪ್ರಜ್ಞೆ ಇದೆಯೇ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಬಹುತೇಕ ಜನರು ಏಕಿಲ್ಲ ಎಂದು ಉತ್ತರ ಕೊಡಬಹುದು.

ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿ ಗಳು, ಅಸಂಖ್ಯಾತ ಮಂತ್ರಿಗಳು, ಶಾಸಕರು, ಸಂಸದರು ವಿವಿಧ ಪಕ್ಷಗಳ ಭಾರಿ ಮುಖಂಡರನ್ನು ನೀಡಿರುವ ಸಮಾಜ ರಾಜಕೀಯವಾಗಿ ಪ್ರಜ್ಞಾವಂತವಾಗಿದೆ ಎಂದು ಯಾರಾದರೂ ಊಹಿಸಬಹುದು.

ಮೇಲ್ನೋಟಕ್ಕೆ ಇದು ಸರಿ ಎನಿಸಿದರೂ ಆಳವಾಗಿ ಶೋಧಿಸಿದರೆ ಲಿಂಗಾಯಿತರ ರಾಜಕೀಯ ಪ್ರಜ್ಞೆಯ ಬಗ್ಗೆ ಅನುಮಾನ ಬರುತ್ತದೆ.

ಕೆಲವು ಉದಾಹರಣೆಗಳನ್ನು ನೋಡಿ:

ಹರಪನಹಳ್ಳಿ, ಚಿತ್ರದುರ್ಗ, ತಿಪಟೂರು, ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತರು ಬಹುಸಂಖ್ಯಾತರಾದರೂ ಅಲ್ಲಿ ಗೆಲ್ಲುವವರು ಲಿಂಗಾಯತೇತರರು.

ಲಿಂಗಾಯತ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಲಿಂಗಾಯತರೇ ಗೆಲ್ಲಬೇಕೆನ್ನುವ ನಿಯಮವಿಲ್ಲ. ಆದರೆ ಇಲ್ಲಿ ಗೆದ್ದವರು ಲಿಂಗಾಯತ ವಿರೋಧಿ ಕೆಲಸ ಮಾಡಿದರೂ ಲಿಂಗಾಯತರು ಅವರಿಗೆ ಮತ ಹಾಕುತ್ತಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಗೋಳಾಡಿಸಿದವರಲ್ಲಿ ಹರಪನಹಳ್ಳಿಯ ಕರುಣಾಕರರೆಡ್ಡಿ ಪ್ರಮುಖ ಮುಖ. ಆದರೆ ಅವರಿಗೆ ಲಿಂಗಾಯತ ಮತಗಳು ಪಕ್ಕಾ.

ಚಿತ್ರದುರ್ಗದ ತಿಪ್ಪಾರೆಡ್ಡಿ ಯಡಿಯೂರಪ್ಪ ವಿರುದ್ಧ ಕೆಲಸ ಮಾಡಿದ್ದರೂ ಜನ ಅವರನ್ನು ಮತ್ತೆ ಗೆಲ್ಲಿಸಿದ್ದರು.

ಲಿಂಗಾಯತರು ಪ್ರಬಲವಾಗಿ ಇರುವ ತಿಪಟೂರು ಕ್ಷೇತ್ರದಲ್ಲಿ ಆರೆಸ್ಸೆಸ್ ನಾಯಕ ನಾಗೇಶ್ ಗೆದ್ದು ಶಿಕ್ಷಣ ಮಂತ್ರಿ ಆಗಿ ಬಸವಾದಿ ಶರಣರ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ತಿರುಚಿಸಿದ್ದರು.

ಕರುಣಾಕರ ರೆಡ್ಡಿ, ತಿಪ್ಪಾರೆಡ್ಡಿ, ನಾಗೇಶ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಕಾಣುತ್ತಿರುವುದು ಪ್ರಹ್ಲಾದ್ ಜೋಷಿ. ರಾಜ್ಯಮಟ್ಟದಲ್ಲಿ ಇವರ ಲಿಂಗಾಯತ ವಿರೋಧಿ ರಾಜಕೀಯದ ಬಗ್ಗೆ ಪ್ರತ್ಯೇಕವಾಗಿ ಬರೆಯುವಷ್ಟು ಸಾಮಗ್ರಿಯಿದೆ. ಧಾರವಾಡ ಕ್ಷೇತ್ರದಲ್ಲಿ ಇವರ ಲಿಂಗಾಯತ ವಿರೋಧಿ ಚಟುವಟಿಕೆಗಳ ಬಗ್ಗೆಯೂ ಪ್ರತ್ಯೇಕವಾಗಿ ಬರೆಯುವಷ್ಟು ಸಾಮಗ್ರಿಯಿದೆ.

ಲಿಂಗಾಯತರಲ್ಲಿ ಸರಿಯಾದ ರಾಜಕೀಯ ಪ್ರಜ್ಞೆ ಇದ್ದಿದ್ದರೆ ಪ್ರಹ್ಲಾದ್ ಜೋಷಿಯಂತವರು ಗೆಲ್ಲಲು ಅಥವಾ ಈ ರೀತಿ ವರ್ತಿಸಲು ಸಾಧ್ಯವೇ?

ಲಿಂಗಾಯತರು ಒಂದು ಪಕ್ಷದ ಓಟು ಬ್ಯಾಂಕ್ ಆಗಿರುವುದರಿಂದ ಅವರಿಗೇನು ಲಾಭವಾಗಿದೆ ಎನ್ನುವುದನ್ನೂ ಪತ್ತೆ ಹಚ್ಚಬೇಕು.

ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳು ಇವೆ. ಇವುಗಳಲ್ಲಿ ಕನಿಷ್ಠ ಐದಾರು ಕ್ಷೇತ್ರದಲ್ಲಿ ಲಿಂಗಾಯತ ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಆದರೆ ಯಾವ ಪಕ್ಷವೂ ಲಿಂಗಾಯತರಿಗೆ ಬೆಂಗಳೂರಿನಲ್ಲಿ ಟಿಕೆಟ್ ಕೊಡುವುದಿಲ್ಲ.

ಲಿಂಗಾಯತರು ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಕಾರಣಕ್ಕೆ ಜೆಡಿಎಸ್, ಕಾಂಗ್ರೆಸ್ ಟಿಕೆಟ್ ಕೊಡುವುದಿಲ್ಲ. ಹೇಗಿದ್ದರೂ ಲಿಂಗಾಯತರು ಮತ ಹಾಕೇ ಹಾಕುತ್ತಾರೆ ಎಂಬ ಕಾರಣಕ್ಕೆ ಬಿಜೆಪಿ ಬೇರೆ ಸಮುದಾಯದ ಜನರಿಗೆ ಟಿಕೆಟ್ ಕೊಡುತ್ತಾರೆ.

ಬಹಳ ಕಡಿಮೆ ಸಂಖ್ಯೆಯಲ್ಲಿ ಇರುವ ನಾಯ್ಡುಗಳಿಗೆ ಬಿಜೆಪಿ ಟಿಕೆಟ್ ಕೊಟ್ಟು ಗೆಲ್ಲಿಸುತ್ತದೆ ಆದರೆ ಲಿಂಗಾಯತರಿಗೆ ಟಿಕೆಟ್ ಕೊಡುವುದಿಲ್ಲ.

ಲಿಂಗಾಯತರಿಗೆ ರಾಜಕೀಯ ಪ್ರಜ್ಞೆ ಇಲ್ಲ ಎನ್ನಲು ಇನ್ನೊಂದು ಉದಾಹರಣೆ ನೋಡಿ.

ಬೆಂಗಳೂರಿನ ಬ್ರಾಹ್ಮಣ ಸಮುದಾಯದ ಜನ ಹೆಚ್ಚು ಇರುವ ಬಸವನಗುಡಿಯಲ್ಲಿ ಬಿಜೆಪಿ 2004ರಲ್ಲಿ ಸುಬ್ಬಾರೆಡ್ಡಿ ಅವರಿಗೆ ಟಿಕೆಟ್ ಕೊಟ್ಟಿತು. ಸುಬ್ಬಾರೆಡ್ಡಿ 1999ರಲ್ಲಿ ಆಯ್ಕೆಯಾಗಿದ್ದ ಹಾಲಿ ಬಿಜೆಪಿ ಶಾಸಕ ಕೂಡ ಆಗಿದ್ದರು.

ಸುಬ್ಬಾರೆಡ್ಡಿ ಮತ್ತೆ ಗೆದ್ದರೆ ಬ್ರಾಹ್ಮಣ ಕ್ಷೇತ್ರದಲ್ಲಿ ಬ್ರಾಹ್ಮಣೇತರ ನಾಯಕತ್ವ ಗಟ್ಟಿಯಾಗುತ್ತದೆ ಎಂಬ ಕಾರಣಕ್ಕೆ ಆ ಸಮುದಾಯದ ಒಂದು ದೊಡ್ಡ ಬಣ ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಗೆಲ್ಲಿಸಿತು. ಪಾಠ ಕಲಿತ ಬಿಜೆಪಿ ಆಗಿನಿಂದ ಅಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಮಾತ್ರ ಮಣೆ ಹಾಕಿದೆ.

ಈ ರೀತಿಯ ಚಿಂತನೆ, ವರ್ತನೆ ಲಿಂಗಾಯತರಲ್ಲಿ ಎಲ್ಲಿ ಕಂಡಿದ್ದೇವೆ?

ಬಿಜೆಪಿ ಕೇಂದ್ರದಲ್ಲಿ ಆರು ಬಾರಿ ಅಧಿಕಾರಕ್ಕೆ ಬಂದಿದೆ. ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಪಾಲುದಾರರಾಗಿ ಒಂದು ಬಾರಿ. ವಾಜಪೇಯಿ ಎರಡು ಬಾರಿ ಮತ್ತು ಮೋದಿ ಮೂರು ಬಾರಿ.

ಇಷ್ಟು ಬಾರಿ ಸರ್ಕಾರ ರಚನೆಯಾದರೂ, ಲಿಂಗಾಯತ ಸಮುದಾಯ ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಟ್ಟರೂ, ಇಲ್ಲಿಯವರೆಗೆ ಆ ಪಕ್ಷ ಲಿಂಗಾಯತರಿಗೆ ಒಂದೇ ಒಂದು ಕ್ಯಾಬಿನೆಟ್ ಸ್ಥಾನ ಕೊಟ್ಟಿಲ್ಲ.

ಪ್ರತಿ ಬಾರಿ ಕರ್ನಾಟಕದಿಂದ ಬ್ರಾಹ್ಮಣ ವ್ಯಕ್ತಿಯೇ ಕ್ಯಾಬಿನೆಟ್ ಸಚಿವರಾಗಿದ್ದಾರೆ.

ಯತ್ನಾಳ್, ಜಿ ಎಂ ಸಿದ್ದೇಶ್ವರ, ಸುರೇಶ್ ಅಂಗಡಿ, ಸೋಮಣ್ಣ ಇವರೆಲ್ಲ ಸ್ಥಳೀಯವಾಗಿ ಮಾತ್ರ ಧೀಮಂತ ನಾಯಕರು. ಇವರೆಲ್ಲಾ ಕೇಂದ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ರಾಜ್ಯ ಮಂತ್ರಿಗಳು ಮಾತ್ರ.

ಲಿಂಗಾಯತರು ರಾಜಕೀಯ ಪ್ರಜ್ಞೆಯಿಂದ ಮತ ಹಾಕುವ ಬುದ್ದಿವಂತಿಕೆ ಬೆಳೆಸಿಕೊಂಡಿದ್ದರೆ ಇದು ಸಾಧ್ಯವಾಗುತ್ತಿತ್ತೇ?

ಇಷ್ಟೊಂದು ಲಿಂಗಾಯತ ಜನಪ್ರತಿನಿಧಿಗಳು ಇದ್ದರೂ ಸಹ ಒಬ್ಬನೇ ಒಬ್ಬ ಜನಪ್ರತಿನಿಧಿ ನಾನು ಬಸವಣ್ಣನವರ ಅನುಯಾಯಿ ಎಂದು ಎದೆಯುಬ್ಬಿಸಿ ಹೇಳುವ ತಾಕತ್ತು ತೋರುವುದಿಲ್ಲ. ಯಾಕೆ?

ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆಯಿದ್ದಿದ್ದರೆ ಇಂತವರನ್ನು ಮನೆಗೆ ಕಳಿಸುತ್ತಿದ್ದರು. ಸಮಾಜ, ಬಸವತತ್ವ, ಸಂವಿಧಾನಗಳ ಪರವಾಗಿರುವ ಜಾಗೃತ ಅಭ್ಯರ್ಥಿಗಳನ್ನು ಮಾತ್ರ ಆರಿಸುತ್ತಿದ್ದರು.

ಬ್ರಾಹ್ಮಣ ಕ್ಷೇತ್ರಗಳಲ್ಲಿ ಬ್ರಾಹ್ಮಣ ಜನಪ್ರತಿನಿಧಿಗಳ ನಡೆ ನುಡಿ ನೋಡಿ. ಅವರು ಯಾವಾಗಲಾದರೂ ತಮ್ಮ ಸಮಾಜದ ಬೇರೆ ಮುಖಂಡರಿಗೆ, ಸ್ವಾಮೀಜಿಗಳಿಗೆ, ತತ್ವ ಸಿದ್ದಾಂತಕ್ಕೆ ದ್ರೋಹ ಬಗೆಯುವುದು ನೋಡಿದ್ದೀರಾ?

ಈಗ ಲಿಂಗಾಯತ ಕ್ಷೇತ್ರಗಳಲ್ಲಿ ಲಿಂಗಾಯತ ಜನಪ್ರತಿನಿಧಿಗಳ ನಡೆ ನುಡಿ ನೋಡಿ. ಎರಡನ್ನು ಹೋಲಿಸಿ ಹೇಳಿ ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಇದೆಯೋ ಇಲ್ಲವೋ?

ಲಿಂಗಾಯತ ಸಮಾಜದಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಕೆಲಸ ಬೇಗನೆ ಶುರು ಮಾಡಬೇಕು. ಬಸವ ಶಕ್ತಿ ಸಮಾವೇಶವನ್ನು ಎಲ್ಲಾ ಬಸವ ಸಂಘಟನೆಗಳು ಸೇರಿ ನಡೆಸಬೇಕಾಗಿರುವುದು ಈ ಕಾರಣಕ್ಕೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
7 Comments
  • ನಿಜ ನಿಮ್ಮ ಮಾತು ಮತ್ತು ತರ್ಕ ಒಪ್ಪುತ್ತೇನೆ. ಖಂಡಿತವಾಗಿಯೂ ಲಿಂಗಾಯತರಿಗೆ ರಾಜಕೀಯ ಪ್ರಜ್ಞೆ ಕಡಿಮೆಯೇ ಅಥವಾ ಇಲ್ಲಾ ಎಂದೂ ಹೇಳಬಹುದು. ಈ ಹಿನ್ನೆಲೆಯಲ್ಲಿ ಬಸವ ಶಕ್ತಿ ಸಮಾವೇಶದ ತುರ್ತು ಅಗತ್ಯವಿದೆ.

  • ಉತ್ತಮ ಉದಾಹರಣೆಗಳನ್ನ ನೀಡಿದ್ದೀರಾ ಇದೆಲ್ಲವು ಸತ್ಯ ಲಿಂಗಾಯತರು ಜಾಗೃತರಾಗಬೇಕಿದೆ

  • ಬಸವನಗುಡಿ 2004. ಅಲ್ಲಿ ಆಗಿದ್ದೇನೆಂದರೆ ಸುಬ್ಬರೆಡಿ ಯಡಿಯೂರಪ್ಪನವರ ಅಭ್ಯರ್ಥಿ. ಅವರನ್ನು ಆರೆಸ್ಸೆಸ್ ಸೋಲಿಸಿತು. ಲಿಂಗಾಯತರಲ್ಲಿಯೂ ಇದೇ ರೀತಿಯ ಜಾಗೃತಿ ಬರಬೇಕು. ಅಭಿಯಾನದ ತರವೇ ಎಲ್ಲಾ ಜಿಲ್ಲೆಗಳಲ್ಲಿ ಬಸವ ಶಕ್ತಿ ಅಮಾವೇಶಗಳು ನಡೆಯಲಿ.

    • ಆರ್ಎಸ್ಎಸ್ ಕೃಪಾ ಪೋಷಿತ ಅಭ್ಯರ್ಥಿಗಳನ್ನ ಸೋಲಿಸಲು ಏನು ಮಾಡ್ಬೇಕೊ ಅದನ್ನ ಲಿಂಗಾಯತರಾದ ನಾವು ಮಾಡಬೇಕು. ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತ ಪಡಿಸುತ್ತಾ ಇರುವುದೇ ಈ ಸಂಘ ಪರಿವಾರ.

  • ಇಲ್ಲಿ ರಾಜಕೀಯ ಪ್ರಜ್ಞೆ ಇದೆ ಆದರೆ ಅದು ಮಾರಾಟ ಆಗುತ್ತಿದೆ. ಪ್ರಜ್ಞೆ ಪರಿಕ್ಷಿಸ ಬೇಕಾದರೆ ನ್ಯಾಯವಾದ ಚುನಾವಣೆ ನಡೆಯಬೇಕು.

  • ಅಸಲಿಗೆ ಲಿಂಗಾಯತರಲ್ಲಿ ಧರ್ಮ ಪ್ರಜ್ಞೆಯೇ ಇಲ್ಲ. ಅದು ಸೀಮಿತ ಜಾತಿ ಪ್ರಜ್ಞೆಯಾಗಿ ಮಾತ್ರ ಉಳಿದಿದೆ. ಮೊದಲು ರಿಪೇರಿ ಆಗಬೇಕಾಗಿದ್ದು ಇದು. ನಾವೆಲ್ಲ ಬಸವಾದಿ ಶರಣರ ಎಷ್ಟೋ ವಚನಗಳ ಮೂಲಕ ವಾದ ಮಂಡಿಸಿದರೂ ಲಿಂಗಾಯತರೇ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು ಎಂದು ಯೋಚಿಸಿದಾಗ ನನಗೆ ಅನಿಸಿದ್ದು, ಲಿಂಗಾಯತರಲ್ಲಿ ಆಳವಾಗಿ ಬೇರೂರಿರುವ ವೀರಶೈವದ ಆಚರಣೆಗಳು. ಇವೆಲ್ಲವೂ ವಚನಗಳ ವಿರುದ್ಧ ಇದ್ದರೂ ಬಹುತೇಕ ಲಿಂಗಾಯತರು ತಮ್ಮ ಜೀವನದ ಎಲ್ಲ ಹಂತಗಳಲ್ಲಿ ಇವನ್ನೇ ಆಚರಿಸುತ್ತಿರುವುದು. ಇದಕ್ಕೆ ಪ್ರತಿಯಾಗಿ, ವಚನಗಳ ಆಶಯವನ್ನು ಬಿಂಬಿಸುವ ಮತ್ತು ಅವಕ್ಕೆ ಪೂರಕವಾಗಿರುವ ಕ್ರಿಯಾ ಆಚರಣೆಗಳನ್ನು ಹುಟ್ಟು ಹಾಕಿ ಅವನ್ನು ಮಾತ್ರ ಪಾಲಿಸುವಂತೆ ಮಾಡುವ ಜವಾಬ್ದಾರಿ ಎಲ್ಲ ವಿರಕ್ತ ಮಠಗಳ ಸ್ವಾಮಿಗಳ ಹಾಗೂ ಲಿಂಗಾಯತ ಚಿಂತಕರ ಹೆಗಲ ಮೇಲಿದೆ.

    ಲಿಂಗಾಯತರು ತಮ್ಮ ಧರ್ಮದ ಮೇಲೆ ಬದ್ಧತೆ ತೋರಿದರೆ ಮಾತ್ರ ರಾಜಕೀಯ ಪ್ರಜ್ಞೆ ಮೂಡಬಹುದು.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು