ವೈದಿಕ ಧರ್ಮ ವಿರೋಧಿಸುವ ಅಲ್ಲಮ ಪ್ರಭುಗಳ 20 ವಚನಗಳು

ಪುರಾಣವೆಂಬುದು ಪುಂಡರ ಗೋಷ್ಠಿ; ಮೀಯದೆ ಮೀನು? ಮೀಯದೆ ಮೊಸಳೆ? ನಾ ದೇವನಲ್ಲದೆ ನೀ ದೇವನೆ

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ.

ಸಂಘ ಪರಿವಾರ ಬಬಲೇಶ್ವರದಲ್ಲಿ ನಡೆಸಿದ ಕನ್ನೇರಿ ಸ್ವಾಮಿ ಪರ ಸಮಾವೇಶದಲ್ಲಿ ಈ ಪುಸ್ತಕ ಮತ್ತೆ ಬಿಡುಗಡೆಯಾಯಿತು.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ಅಲ್ಲಮ ಪ್ರಭುಗಳ ಕೆಲವೊಂದು ವಚನಗಳು:

1) ದೇವರು ನಮ್ಮೊಳಗಿನ ಚೈತನ್ಯವೇ ವಿನಃ ಕಲ್ಲು ಮಣ್ಣು ಕಟ್ಟಿಗೆಗಳ ವಿಗ್ರಹಗಳಲ್ಲ.

ದೇಹದೊಳಗೆ ದೇವಾಲಯವಿದ್ದು
ಮತ್ತೆ ಬೇರೆ ದೇವಾಲಯವೇಕೆ
ಎರಡಕ್ಕೆ ಹೇಳಲಿಲ್ಲಯ್ಯ ಗುಹೇಶ್ವರ
ನೀನು ಕಲ್ಲಾದರೆ ನಾನೇನಪ್ಪೆನು.

2) ಪೌರಾಣಿಕ ಶಿವನ ತಿರಸ್ಕಾರ

ತ್ರಿಪುರವನುರುಹಿದ ತ್ರಿಣೇತ್ರನಲ್ಲ,
ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ,
ಖಂಡಕಪಾಲಿಯಲ್ಲ ಮುಂಡಧಾರಿಯಲ್ಲ,
ಮಂಡಲದೊಳಗೆ ಬಂದು ಸುಳಿವಾತನಲ್ಲ,
ಈಶ್ವರನಲ್ಲ ಮಹೇಶ್ವರನಲ್ಲ,
ಗುಹೇಶ್ವರನೆಂಬ ಲಿಂಗ ಅಪಾರ ಮಹಿಮನು.

3) ಕಲ್ಲನ್ನೇ ದೇವರೆಂದು ಪೂಜಿಸುವುದು ತಪ್ಪು

ಕಲ್ಲ, ದೇವರೆಂದು ಪೂಜಿಸುವರು-ಆಗದು ಕಾಣಿರೊ.
ಅಗಡಿಗರಾದಿರಲ್ಲಾ!
ಮುಂದೆ ಹುಟ್ಟುವ ಕೂಸಿಂಗೆ
ಇಂದು ಮೊಲೆಯ ಕೊಡುವಂತೆ ಗುಹೇಶ್ವರ!

3)ಕಲ್ಲು ಮಣ್ಣುಗಳಿಂದ ಕಟ್ಟಿದ ಕಟ್ಟಡಕ್ಕಿಂತ ದೇಹವೇ ದೇಗುಲ

ಕಾಲೇ ಕಂಬಗಳಾದವೆನ್ನ, ದೇಹವೇ ದೇಗುಲವಾಯಿತ್ತಯ್ಯಾ!
ಎನ್ನ ನಾಲಗೆಯೆ ಗಂಟೆ, ಶಿರ ಸುವರ್ಣದ ಕಳಸ-ಇದೇನಯ್ಯಾ!
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷ್ಠೆ,
ಪಲ್ಲಟವಾಗದಂತಿದ್ದೆನಯ್ಯಾ

3) ಕಲ್ಲಿನ ದೇವಸ್ಥಾನ ಕಟ್ಟಿ ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ

ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ

4) ಸ್ಥಾವರ ಪೂಜೆಯ ನಿಷ್ಠುರ ವಿರೋಧ

ಕಾಯವೆಂಬ ದೇಗುಲದಲ್ಲಿ ಜೀವವೆಂಬ ದೇವರು,
ಕರಣೇಂದ್ರಿಯಂಗಳೆಂಬ ಸ್ಥಾನಿಕರ ಕೈಯಲ್ಲಿ ಪೂಜಿಸಿಕೊಂಬುದು
ಗುಹೇಶ್ವರಲಿಂಗಕ್ಕೆ ದೂರ!

5) ವೇದ, ಶಾಸ್ತ್ರ, ಪುರಾಣ, ಆಗಮಗಳನ್ನು ಓದಿ ಏನು ಪ್ರಯೋಜನ?

ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು.
ನೀನೆತ್ತ ನಾನೆತ್ತಲೆಂದು-
ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ

6) ವೇದ ಶಾಸ್ತ್ರ ಪುರಾಣಗಳಿಂದ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ

ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು

7) ಸನಾತನ ಧರ್ಮದಲ್ಲಿ ಹೆಣ್ಣು ಮಾಯೆ. ಆದರೆ ನಮ್ಮ ಮನೋ ಚಂಚಲತೆಯೇ ಮಾಯೆ.

ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ.

8) ವ್ರತಗಳಿಂದ ಏನೂ ಪ್ರಯೋಜನವಿಲ್ಲ

ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ.
ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ.
ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ.
ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ …
ಇವು ಷಡುಸ್ಥಲಕ್ಕೆ ಹೊರಗು.
ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.

9) ತೀರ್ಥಯಾತ್ರೆಗೆ ಹೋಗಿ, ಗಂಗೆಯಲ್ಲಿ ಮುಳುಗಿದರೆ
ದೇವರು ಸಿಗುವುದಿಲ್ಲ

ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ.
ನಿಚ್ಚಕ್ಕಿನ ಗಮನವಂದಂದಿಗೆ;
ಅತ್ತಲಿತ್ತ ಹರಿವ ಮನವ ಚಿತ್ರದಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.

10) ವೇದ, ಶಾಸ್ತ್ರ, ಪುರಾಣಗಳು ಕೇವಲ ಬಾಯಿ ಚಪಲದವು

ವೇದಂಗಳೆಂಬವು ಬ್ರಹ್ಮನ ಬೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಗಳೆಂಬವು ಋಷಿಯ ಮರುಳಾಟ.
ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ
ಇಂತು ಇವನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು!

11) ವೇದ, ಶಾಸ್ತ್ರ ಪುರಾಣಗಳು ಏನನ್ನೂ ಸಾಧಿಸಲಾರದವು

ವೇದ ವೇದಿಸಲರಿಯದೆ ಕೆಟ್ಟವು, ಶಾಸ್ತ್ರ ಸಾದಿಸಲರಿಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರು ತಮ್ಮ ತಮ್ಮ ಅರಿಯದೆ ಕೆಟ್ಟರು:
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?

12) ವೇದ, ಶಾಸ್ತ್ರ, ಪುರಾಣಗಳು ಇಷ್ಟಲಿಂಗಕ್ಕೆ ಪ್ರಮಾಣವಲ್ಲ

ವೇದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ
ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ !
ಅಂಗಸಂಗದ ಮಧ್ಯದಲ್ಲಿಟ್ಟು ಬೈಚಿಟ್ಟು ಬಳಸಿದ
ಗುಹೇಶ್ವರಾ ನಿಮ್ಮ ಶರಣ.

13) ಪುರಾಣವೆಂಬುದು ಪುಂಡರ ಗೋಷಿ

ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು

14) ಸಿಕ್ಕಿಸಿಕ್ಕಿದನ್ನೆಲ್ಲ ದೇವರೆಂದು ಪೂಜಿಸುವುದು ಬೇಡ

ವೇದ ದೈವವೆಂದು ನುಡಿವರು, ಶಾಸ್ತ್ರ ದೈವವೆಂದು ನುಡಿವರು,
ಪುರಾಣ ದೈವವೆಂದು ನುಡಿವರು, ಕಲ್ಲು ದೈವವೆಂದು ನುಡಿವರು,
ಕಾಷ್ಠ ದೈವವೆಂದು ನುಡಿವರು, ಪಂಚಲೋಹ ದೈವವೆಂದು ನುಡಿವರು,
ಇವರೆಲ್ಲ ಸಕಲದಲಾದ ಸಂದೇಹವನೆ ಪೂಜಿಸಿ ಸತ್ತು ಹೋದರಲ್ಲಾ !
ಸಮಸ್ತ ಪ್ರಾಣಿಗಳೂ-ತಾಯನರಿಯದ ತರ್ಕಿಗಳು,
ತಂದೆಯನರಿಯದ ಸಂದೇಹಿಗಳು.
ತನು ಪೃಥ್ವಿಯಿಂದಲಾಯಿತ್ತು ಮನ ವಾಯುವಿನಿಂದಲಾಯಿತ್ತು.
ಕಲ್ಲು ಕಾಷ್ಠ ಸಕಲ-ನಿಷ್ಕಲದಿಂದಲಾಯಿತ್ತು.
ವಾಯುವಾಧಾರದ ಪವನಸಂಯೋಗದ ಅನಾಹತ ಚಕ್ರದಿಂದ ಮೇಲಣ
ಆಜ್ಞಾಚಕ್ರದಲ್ಲಿ ನಿಂದು; ಅನಂತಕೋಟಿಬ್ರಹ್ಮಾಂಡಗಳ ಮೆಟ್ಟಿ-
ಕಾಯದ ಕಣ್ಣ ಮುಚ್ಚಿ, ಜ್ಞಾನದ ಕಣ್ಣ ತೆರೆದು ನೋಡಲ್ಕೆ,
ಅಲ್ಲಿ ಒಂದು ನಿರಾಕಾರ ಉಂಟು.
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ,
ಅಲ್ಲಿ ಒಂದು ನಿಶ್ಶೂನ್ಯವುಂಟು.
ಆ ನಿಶ್ಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,
ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ !

15) ವೇದ ಘನವಲ್ಲ

ವೇದ ಘನವೆಂಬೆನೆ, ವೇದ ನಾದದೊಳಗಡಗಿತ್ತು.
ನಾದ ಘನವೆಂಬೆನೆ, ನಾದ ಬಿಂದುವಿನೊಳಗಡಗಿತ್ತು.
ಬಿಂದು ಘನವೆಂಬೆನೆ, ಬಿಂದು ಅಂಗದೊಳಗಡಗಿತ್ತು.
ಅಂಗ ಘನವೆಂಬೆನೆ, ಅಂಗ ಲಿಂಗದೊಳಗಡಗಿತ್ತು.
ಲಿಂಗ ಘನವೆಂಬೆನೆ, ಲಿಂಗ ನಿಶ್ಚಿಂತದೊಳಗಡಗಿತ್ತು.
ನಿಶ್ಚಿಂತ ಘನವೆಂಬೆನೆ, ನಿಶ್ಚಿಂತ ನಿರಾಳದೊಳಗಡಗಿತ್ತು.
ನಿರಾಳ ಘನವೆಂಬೆನೆ, ನಿರಾಳ ನಿರೂಪದೊಳಗಡಗಿತ್ತು.
ನಿರೂಪ ನಿಃಕಳಂಕ ನಿಃಶೂನ್ಯ ನಿರಂಜನ ಪರಾಪರ ನೀನೇ
ಗುಹೇಶ್ವರಾ.

16) ಪೂಜೆ ಮಾಡಿ ಲಾಭಕ್ಕೆ ಫಲ ಬೇಡುವುದು ಅನ್ಯಾಯ

ಮಜ್ಜನಕ್ಕೆರೆದು ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ ?
ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ ?
ಸೈದಾನವ ನರ್ಪಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ !

17) ನೀರಿನಲ್ಲಿ ಮುಳುಗುವುದು ದೇವರ ಪೂಜೆಯೇ?

ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ,
ಮೀಯದೆ ಮೀನು? ಮೀಯದೆ ಮೊಸಳೆ?
ತಾ ಮಿಂದು, ತನ್ನ ಮೀಯದನ್ನಕ್ಕರ
ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ?

18) ತಮ್ಮ ಹೆಂಡತಿಯರ ಮೋಹದ ಬಲೆಯಲ್ಲಿ ಸಿಲುಕಿರುವ ಬ್ರಹ್ಮ, ವಿಷ್ಣು, ರುದ್ರ ಪ್ರಭಾವಿ ದೇವರುಗಳೇ?

ಬ್ರಹ್ಮಂಗೆ ದೂರುವೆನೆ? ಸರಸ್ವತಿಯ ವಿಕಾರ.
ವಿಷ್ಣುವಿಂಗೆ ದೂರುವೆನೆ? ಲಕ್ಷ್ಮಿಯ ವಿಕಾರ.
ರುದ್ರಂಗೆ ದೂರುವೆನೆ? ದೇವಿಯ ವಿಕಾರ.
ಇನ್ನಾರಿಗೆ ದೂರುವೆ ಕಾಮನ ಹುಯ್ಯಲ?
ಎಲ್ಲರೂ ತಮ್ಮ ತಮ್ಮ ಅವಸ್ಥೆಯ ಕಳೆಯಲಾರರು.
ಪರದೈವವೆಂಬಂತೆ ನಾನು ಹೇಳಾ ಗುಹೇಶ್ವರಾ ?

19) ಪೌರಾಣಿಕ ಶಿವನ ಸ್ಪಷ್ಟ ನಿರಾಕರಣೆ

ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ.
ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ.
ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ
ಲಿಂಗದ್ರೋಹಿಗಳು ನೀವು ಕೇಳಿರೆ.
ಭೈರವನು ಭಯಂಕರಹರನ ಮಗನೆಂಬ
ಭವಹರಗುರುದ್ರೋಹಿಗಳು ನೀವು ಕೇಳಿರೆ.
ಅಜಾತನ ಚರಿತ್ರ ಪವಿತ್ರ.
ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ
ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ,
ಆದಿಯ ಲಿಂಗ ಅನಾದಿಯ ಶರಣ
ಗುರುವಿನ ಗುರು ಪರಮಗುರುವರ[ನ]
ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು
ವೈದಿಕರು ಸೃಷ್ಟಿ ಮಾಡಿದ ವಿಗ್ರಹದ ದೇವರನ್ನು ಕುರಿತು ಅಲ್ಲಮರು ಪ್ರಶ್ನೆ ಕೇಳುತ್ತಾರೆ ನಾ ದೇವನೇ ವಿನಃ ಜಡತ್ವದಿಂದ ಕೂಡಿದ ವಿಗ್ರಹವಾದ ನೀ ದೇವನು ಅಲ್ಲ ಎಂದು ಹೇಳಿದ ವಚನ

20) ನಾ ದೇವನಲ್ಲದೆ ನೀ ದೇವನೆ?

ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.-
ನಾ ದೇವ ಕಾಣಾ ಗುಹೇಶ್ವರಾ !

20) ವೇದ, ಶಾಸ್ತ್ರ, ಪುರಾಣ, ಆಗಮಗಳು ಓದಿದವರಿಗೆ ಸಂಪಾದನೆಯ ಮಾರ್ಗವಷ್ಟೇ.

ವೇದ ಘನವೆಂಬುದೊಂದು ಸಂಪಾದನೆ.
ಶಾಸ್ತ್ರ ಘನವೆಂಬುದೊಂದು ಸಂಪಾದನೆ.
ಪುರಾಣ ಘನವೆಂಬುದೊಂದು ಸಂಪಾದನೆ.
ಆಗಮ ಘನವೆಂಬುದೊಂದು ಸಂಪಾದನೆ.
ಅಹುದೆಂಬುದೊಂದು ಸಂಪಾದನೆ.
ಅಲ್ಲವೆಂಬುದೊಂದು ಸಂಪಾದನೆ.
ಗುಹೇಶ್ವರನೆಂಬ ಮಹಾಘನದ
ನಿಜಾನುಭಾವಸಂಪಾದನೆಯ ಅರಿಯದ ಕಾರಣ
ಹಲವು ಸಂಪಾದನೆಗಳಾದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FoRS2gZkHkaEzqaRtWk0ZP

Share This Article
1 Comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು