ಬೆಂಗಳೂರು
ಧಾರವಾಡದಲ್ಲಿ ಇಂದು “ಬಸವಶೈವದಲ್ಲಿ ಹಿಂದುತ್ವ” ಎಂಬ ಪುಸ್ತಕ ಬಿಡುಗಡೆ ಮಾಡಲು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.
ಈ ಪುಸ್ತಕ ಮುಂಚೆ ದಾವಣಗೆರೆ, ಬಬಲೇಶ್ವರಗಳಲ್ಲಿ ಬಿಡುಗಡೆಯಾಗಿದ್ದು, ಈಗ ಮತ್ತೊಮ್ಮೆ ಲೋಕಾರ್ಪಣೆಯಾಗುತ್ತಿದೆ.
ಕಳೆದ ವರ್ಷ ವಿವಿಧ ವೈದಿಕಶಾಹಿ ಲೇಖಕರ ಲೇಖನಗಳನ್ನು ಒಳಗೊಂಡ “ವಚನ ದರ್ಶನ” ಎಂಬ ಲೇಖನಗಳ ಸಂಗ್ರಹ ಕೂಡ ನಾಡಿನೆಲ್ಲೆಡೆ ಹಿಂದೂಪರ ಸಂಘಟನೆಗಳಿಂದ ಬಿಡುಗಡೆಯಾಗಿತ್ತು.
ವಚನ ಧರ್ಮವನ್ನು ಹಿಂದೂ ಧರ್ಮದಲ್ಲಿನ ಒಂದು ಶಾಖೆಯಾಗಿ, ಬಸವಣ್ಣನವರನ್ನು ಕೇವಲ ಒಬ್ಬ ಸಮಾಜ ಸುಧಾರಕನನ್ನಾಗಷ್ಟೇ ಬಿಂಬಿಸಲು ನಡೆಸಿದ ಈ ಕುತಂತ್ರಕ್ಕೆ ಬಸವಾಭಿಮಾನಿಗಳ ತೀಕ್ಷ್ಣ ಪ್ರತಿಕ್ರಿಯೆಯೂ ಬಂದಿತ್ತು.
ವೈದಿಕಶಾಹಿಗಳ ಈ ಹುನ್ನಾರ ಬಯಲಿಗೆಳೆಯಲು ಬಸವ ಸಂಘಟನೆಗಳು ‘ವಚನ ನಿಜದರ್ಶನ’, ‘ವಚನ ದರ್ಶನ: ಸತ್ಯ Vs ಮಿಥ್ಯ’ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿ ಅದನ್ನು ಹಲವಾರು ಕಡೆ ಬಿಡುಗಡೆ ಮಾಡಿದ್ದರು.
ಈ ಹಿಂದುತ್ವದ ಪುಸ್ತಕಗಳು ಕೇವಲ ಸಾಹಿತ್ಯಿಕ ಪ್ರಯತ್ನಗಳಲ್ಲ. ಇವು ಲಿಂಗಾಯತ ಧರ್ಮದ ಅಸ್ಮಿತೆಯ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಸಾಂಸ್ಕೃತಿಕ ಆಕ್ರಮಣ. ಬಸವಣ್ಣನವರನ್ನು ಹಿಂದೂ ಶೈವ ಮಾಡಿ, ಹಿಂದುತ್ವದೊಳಗೆ ಲಿಂಗಾಯತವನ್ನು ಮುಳುಗಿಸುವ ಪ್ರಯತ್ನ.
ಲಿಂಗಾಯತ ಧರ್ಮವು 12ನೇ ಶತಮಾನದಲ್ಲೇ ವೇದ, ವರ್ಣಾಶ್ರಮ, ಬ್ರಾಹ್ಮಣಿಕ ಆಚಾರಗಳನ್ನು ನಿರಾಕರಿಸಿ ಹುಟ್ಟಿದ ಪ್ರತಿರೋಧದ ಧರ್ಮ. ಅದು ದೇವಾಲಯ, ಶಾಸ್ತ್ರ ಜಾತಿ ಕೇಂದ್ರಿತ ಧರ್ಮವಲ್ಲ.
ಈ ಪುಸ್ತಕಗಳು ವಚನಗಳು ಉಪನಿಷತ್ತುಗಳ ಕನ್ನಡ ಅನುವಾದ ಎಂದು ಹೇಳುವುದು ಕೇವಲ ಅಜ್ಞಾನವಲ್ಲ; ಅದು ವಚನ ಚಳುವಳಿಯನ್ನು ನಿಷ್ಕ್ರೀಯಗೊಳಿಸುವ ವೈದಿಕಶಾಹಿಗಳ ದುರುದ್ದೇಶ.
ಇಲ್ಲಿ ಹಿಂದುತ್ವಕ್ಕೆ ಬಸವಣ್ಣನವರು ಬೇಕಾಗಿರುವುದಾದರೂ ಏಕೆ ಎಂಬ ಪ್ರಶ್ನೆಗೂ ನಾವು ಉತ್ತರ ಶೋಧಿಸಬೇಕು.
ಬಸವಣ್ಣನವರ ತತ್ವಗಳು ಹಿಂದುತ್ವದ ಮೂಲಭೂತ ತತ್ವಗಳಿಗೆ ವಿರುದ್ಧ. ಅವರನ್ನು ವಿರೋಧಿಸಲಾಗದೆ ಕುತಂತ್ರದಿಂದ ವಶಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಇದೊಂದು ರೀತಿಯ ಸಾಂಸ್ಕೃತಿಕ ಅಪಹರಣ. ಜೊತೆಗೆ ಇವರಿಗೆ ಒಂದು ದೊಡ್ಡ ಸಮುದಾಯದ ಬೆಂಬಲ ಕಳೆದುಕೊಳ್ಳುವ ಭಯವೂ ಇದೆ.
ಇಂತಹ ಪುಸ್ತಕದ ಬಿಡುಗಡೆ ಕುರಿತು ನಿರ್ಲಕ್ಷ್ಯವಹಿಸಿ ಎನ್ನುವವರಿಗೆ — ಒಂದು ಎಚ್ಚರಿಕೆಯ ಗಂಟೆ. ಇದು ಕೇವಲ ಒಂದೆರಡು ಪುಸ್ತಕಗಳ ಪ್ರಶ್ನೆಯಲ್ಲ, ಇದು ನಾಳೆಯ ಪಠ್ಯಪುಸ್ತಕಗಳ ಪ್ರಶ್ನೆ.
ಲಿಂಗಾಯತರು ಇಂದು ಮಾತನಾಡದಿದ್ದರೆ, ನಾಳೆ ಬಸವಣ್ಣನವರನ್ನು ಹಿಂದೂ ಧರ್ಮದ ಸುಧಾರಕ ಎಂದು ಪಠ್ಯಗಳಲ್ಲಿ ಓದಬೇಕಾಗುತ್ತದೆ.
ಇವರು ಇತಿಹಾಸವನ್ನು ಮರು ಬರೆಯುವ ಮೊದಲು, ನಾವು ಪ್ರತಿರೋಧಿಸಬೇಕಾಗಿದೆ.
ಇಂದಿನ ಬಸವಧರ್ಮೀಯರು ಗೋಣು ಹಾಕುವ ಮುಗ್ಧರಲ್ಲ. ಕುತಂತ್ರವನ್ನು ಬಗ್ಗು ಬಡಿಯಲು ಸದಾ ಸಿದ್ಧರಿರುವ ಗಣಾಚಾರಿಗಳು ಎಂಬುದನ್ನು ವೈದಿಕಶಾಹಿಗಳು ಅರಿತರೆ ಕ್ಷೇಮ.


ವಚನ ದರ್ಶನ ವಿರೋಧ ವಚನ ನಿಜದರ್ಶನ’, ‘ವಚನ ದರ್ಶನ: ಸತ್ಯ Vs ಮಿಥ್ಯ’ ಪುಸ್ತಕ ಪ್ರಚಾರ ಕಾರ್ಯಕ್ರಮಗಳನ್ನ ಸ್ಥಗಿತ ಗೊಳಿಸದೆ ಪ್ರತಿ ಊರಿಗೂ ತಲುಪಿಸುವ ಕಾರ್ಯಕ್ರಮ ಮುಂದುವರೆಯಬೇಕಿತ್ತು.
ಲಿಂಗಾಯತ ವಿರೋಧಿ ತಂಡದಬಾಲ ಕತ್ತರಿಸಿ. ನಮ್ಮಲ್ಲಿ ಬಾಲ ಬಡುಕರು ಅವರ ಹಿಂದೆ ಹೋಗುವ ನಾಯಕರನ್ನ ಮುಂದೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ. ಇದಕ್ಕೆ ಪ್ರತಿ ತಂತ್ರ ಮಾಡಿದರೆ ಲಿಂಗಾಯತ ಉಳಿಸಲು ಕಂಕಣ ಕಟ್ಟಿ ಹೋರಾಡಿ ಜಯ್ ಲಿಂಗಾಯತ 👍🏻👏🏻👏🏻