ಇಂದು ಡಾ. ಫ.ಗು. ಹಳಕಟ್ಟಿಯವರ ಜನ್ಮದಿನ. ಅವರು ಸಂಪಾದಿಸಿ ಪ್ರಕಟಿಸುತ್ತಿದ್ದ ಶಿವಾನುಭವ ಪತ್ರಿಕೆಯ ಜನ್ಮಶತಮಾನೋತ್ಸವ ವರ್ಷವಿದು.
ಬೆಳಗಾವಿ
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸದೇ ಹೋಗಿದ್ದರೆ, ವಚನ ಸಾಹಿತ್ಯದ ಸಮಗ್ರ ದರ್ಶನ ನಮಗಾಗುತ್ತಿರಲಿಲ್ಲ.
ತಮ್ಮ ಸಮಸ್ತ ಬದುಕನ್ನೇ ಶರಣ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಮೀಸಲಿಟ್ಟ ಡಾ. ಹಳಕಟ್ಟಿಯವರು ಶಿವಾನುಭವ ಪತ್ರಿಕೆ ಮೂಲಕ ಮೂವತ್ತೈದು ವರ್ಷಗಳ ಕಾಲ ಶರಣ ಸಾಹಿತ್ಯವನ್ನು ಅವ್ಯಾಹತವಾಗಿ ಪ್ರಕಟಿಸಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದರು.
೧೯೨೬ ಫೆಬ್ರವರಿ ೧೧ ರಂದು ಡಾ. ಫ.ಗು. ಹಳಕಟ್ಟಿಯವರು ‘ಹಿತಚಿಂತಕ ಮುದ್ರಣಾಲಯ’ವನ್ನು ಸ್ಥಾಪಿಸಿದರು. ಅದೇ ತಿಂಗಳಿಂದ ಶಿವಾನುಭವ ಪತ್ರಿಕೆಯ ಪ್ರಕಟಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ೩೫ ವರ್ಷಗಳ ಸುದೀರ್ಘ ಕಾಲ ಶಿವಾನುಭವ ಪತ್ರಿಕೆಯನ್ನು ಎಂತಹ ಗಂಡಾಂತರ ಬಂದರು ನಿಲ್ಲಿಸಿದೆ ಪ್ರಕಟಿಸಿದ್ದು ಅವರ ಶರಣ ಶ್ರದ್ಧೆಗೆ ಹಿಡಿದ ಕನ್ನಡಿ.
ಶಿವಾನುಭವ ಪತ್ರಿಕೆಗೆ ಆ ಹೆಸರಿಡಲು ಕಾರಣವೇನು? ಎಂಬುದನ್ನು ಅವರೇ ಒಂದೆಡೆ ಹೀಗೆ ಪ್ರಸ್ತಾಪಿಸಿದ್ದಾರೆ:
‘ಶಿವಶರಣರ ತತ್ವಗಳ ಉದ್ದೇಶವು ಶಿವನ ಅನುಭವ. ಎಂದರೆ ಶಿವನನ್ನು ಕಾಣುವುದು ಅಥವಾ ಅರಿಯುವುದೇ ಮುಖ್ಯವಾಗಿದ್ದರಿಂದಲೂ, ಬಸವಾದಿ ಪ್ರಮಥರು ಕಲ್ಯಾಣ ಪಟ್ಟಣದಲ್ಲಿದ್ದಾಗ ತಮ್ಮ ಶರಣರ ಕೂಟಕ್ಕೆ ‘ಶಿವಾನುಭವ ಮಂಟಪ’ ಎಂಬ ಹೆಸರನ್ನು ಇಟ್ಟದ್ದರಿಂದಲೂ ನಾನು ಈ ಪತ್ರಿಕೆಗೆ ‘ಶಿವಾನುಭವ’ ಎಂದು ಹೆಸರಿಟ್ಟೆನು. ಇಂಗ್ಲಿಷ್ ಭಾಷೆಯಲ್ಲಿ ಶಿವಾನುಭವ ತತ್ವಗಳನ್ನು ‘ಮಿಸ್ಟಿಶಿಜಂ’ ಎಂದು ಕರೆಯಬಹುದು. ಈ ಇಂಗ್ಲಿಷ್ ಶಬ್ದವು ಅದರ ಸ್ವರೂಪವನ್ನು ಚೆನ್ನಾಗಿ ವಿವರಿಸುವಂಥದ್ದಿರುತ್ತದೆ’ ಡಾ. ಹಳಕಟ್ಟಿಯವರ ಈ ನುಡಿಗಳ ಆಶಯದಂತೆಯೇ ಶಿವಾನುಭವ ಓತಪ್ರೋತವಾಗಿ ಪ್ರಕಟವಾಯಿತು.
ಡಾ. ಫ. ಗು. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸುತ್ತಿದ್ದ ‘ಶಿವಾನುಭವ’ಪತ್ರಿಕೆಯು ಕನ್ನಡ ಧಾರ್ಮಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆದಿತ್ತು. ಆರಂಭದ ಎರಡು ವರ್ಷಗಳ ಅವಧಿಯಲ್ಲಿ ಈ ಪತ್ರಿಕೆಯು ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿತ್ತು. ನಂತರದ ದಿನಗಳಲ್ಲಿ ಅದು ಮಾಸಪತ್ರಿಕೆಯ ರೂಪವನ್ನು ಪಡೆದುಕೊಂಡಿತು. ಡಾ. ಹಳಕಟ್ಟಿಯವರು ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಈ ಪತ್ರಿಕೆಯ ಪ್ರಕಟಣಾ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿದರು.
ಸುಮಾರು 35 ವರ್ಷಗಳ ಕಾಲ ಯಾವುದೇ ವಿರಾಮವಿಲ್ಲದೆ ಪ್ರಕಟಗೊಂಡ ‘ಶಿವಾನುಭವ’ ಪತ್ರಿಕೆಯು ಕನ್ನಡ ಪತ್ರಿಕಾ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿದೆ. ಉನ್ನತ ತತ್ವಪ್ರಚಾರ, ಧಾರ್ಮಿಕ ಚಿಂತನೆ, ಸಾಹಿತ್ಯಿಕ ಅರಿವು ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಂಡ ಈ ಪತ್ರಿಕೆಯು ಕನ್ನಡ ಜನತೆಗೆ ಅಪಾರವಾದ ಜ್ಞಾನ ಸಂಪತ್ತನ್ನು ನೀಡಿತು.

‘ಶಿವಾನುಭವ’ಕೇವಲ ಒಂದು ಪತ್ರಿಕೆಯಾಗಿರಲಿಲ್ಲ; ಅದು ಒಂದು ಚಳವಳಿಯಾಗಿತ್ತು. ಶರಣ ಸಾಹಿತ್ಯ, ವಚನ ಪರಂಪರೆ, ಧಾರ್ಮಿಕ ಮೌಲ್ಯಗಳು ಮತ್ತು ಮಾನವೀಯ ಚಿಂತನೆಗಳನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಅದು ನಿರ್ವಹಿಸಿತು. ಕನ್ನಡ ನಾಡಿನ ಸಾಹಿತ್ಯ ಶ್ರೇಷ್ಠತೆ, ಇತಿಹಾಸದ ವೈಭವ, ಸಂಸ್ಕೃತಿಯ ಆದರ್ಶ ಮತ್ತು ಧರ್ಮದ ಮಾನವೀಯ ಮುಖವನ್ನು ಜನರಿಗೆ ಪರಿಚಯಿಸುವಲ್ಲಿ ಈ ಪತ್ರಿಕೆ ಪ್ರಮುಖ ಪಾತ್ರ ವಹಿಸಿತು.
ಈ ಪತ್ರಿಕೆಯ ಮೂಲಕ ನೂರಾರು ವಿದ್ವಾಂಸರು, ಸಂಶೋಧಕರು ಮತ್ತು ಸಾಹಿತಿಗಳು ತಮ್ಮ ಲೇಖನಗಳನ್ನು ಪ್ರಕಟಿಸಿ ಜನರಲ್ಲಿ ಜ್ಞಾನ ಮತ್ತು ಅರಿವಿನ ಬೆಳಕನ್ನು ಮೂಡಿಸಿದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಜನರಲ್ಲಿ ಅಭಿಮಾನವನ್ನು ಬೆಳೆಸುವಲ್ಲಿ ‘ಶಿವಾನುಭವ’ದ ಪಾತ್ರ ಅಪಾರವಾಗಿದೆ.
ವಿಶೇಷವಾಗಿ, ಕನ್ನಡದ ವಚನ ಸಾಹಿತ್ಯದ ಪುನರುಜ್ಜೀವನದಲ್ಲಿ ಡಾ. ಫ. ಗು. ಹಳಕಟ್ಟಿಯವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಅವರು ತಮ್ಮ ವೈಯಕ್ತಿಕ ಜೀವನದ ಸುಖ-ಸೌಕರ್ಯಗಳನ್ನು ಕಡೆಗಣಿಸಿ, ವಚನ ಸಾಹಿತ್ಯದ ಸಂಗ್ರಹ, ಸಂರಕ್ಷಣೆ ಮತ್ತು ಪ್ರಕಟಣೆಗೆ ತಮ್ಮ ಬದುಕನ್ನೇ ಅರ್ಪಿಸಿದರು. ಅಜ್ಞಾನ ಮತ್ತು ನಿರ್ಲಕ್ಷ್ಯದ ಅಂಧಕಾರದಲ್ಲಿದ್ದ ಕನ್ನಡಿಗರಿಗೆ ಶರಣರ ವಿಚಾರಧಾರೆ, ವಚನಗಳ ಮೌಲ್ಯ ಮತ್ತು ಆಧ್ಯಾತ್ಮಿಕ ಚಿಂತನೆಯ ಬೆಳಕನ್ನು ನೀಡಿದ ಕಾರ್ಯ ‘ಶಿವಾನುಭವ’ದ ಮೂಲಕ ಸಾಧ್ಯವಾಯಿತು.
‘ಶಿವಾನುಭವ’ಪತ್ರಿಕೆಯ ಹಳೆಯ ಸಂಪುಟಗಳು ಇಂದಿಗೂ ಸಂಶೋಧಕರು, ಸಾಹಿತ್ಯಾಸಕ್ತರು ಮತ್ತು ಧರ್ಮಜಿಜ್ಞಾಸುಗಳಿಗೆ ಅಮೂಲ್ಯವಾದ ಆಕರಗಳಾಗಿವೆ. ಅವುಗಳಲ್ಲಿ ಪ್ರಕಟವಾದ ಲೇಖನಗಳು, ಚರ್ಚೆಗಳು ಮತ್ತು ಸಂಶೋಧನಾ ಬರಹಗಳು ಕನ್ನಡ ಸಾಹಿತ್ಯ, ವಚನ ಚಳವಳಿ ಮತ್ತು ಧಾರ್ಮಿಕ ಚಿಂತನೆಯ ಅಧ್ಯಯನಕ್ಕೆ ಮಹತ್ವದ ಮೂಲ ಸಾಮಗ್ರಿಗಳಾಗಿವೆ.
ಇಂತಹ ಅಪರೂಪದ ಶಿವಾನುಭವ ಪತ್ರಿಕೆಯೊಂದಿಗೆ ನನ್ನದು ಎರಡು ದಶಕಗಳ ನಂಟು. ನಾಗನೂರು ರುದ್ರಾಕ್ಷಿಮಠದಲ್ಲಿ ಪೂಜ್ಯ ಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು (ಇಂದಿನ ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು) ೧೯೯೫ರಲ್ಲಿ ‘ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ವನ್ನು ಸ್ಥಾಪಿಸಿದರು. ಇದರ ಪ್ರಥಮ ನಿರ್ದೇಶಕರಾಗಿ ಬಂದವರು ನಮ್ಮ ನಾಡಿನ ಹಿರಿಯ ಗ್ರಂಥಾಲಯ ವಿಜ್ಞಾನಿಗಳಾಗಿದ್ದ ಡಾ. ಎಸ್. ಆರ್. ಗುಂಜಾಳ ಅವರು.
ಡಾ. ಎಸ್. ಆರ್. ಗುಂಜಾಳ ಅವರು ಡಾ. ಹಳಕಟ್ಟಿಯವರನ್ನು ಅತ್ಯಂತ ಸಮೀಪದಿಂದ ಕಂಡಿದ್ದರು. ಹಳಕಟ್ಟಿಯವರು ಲಿಂಗೈಕ್ಯರಾದ ಸಂದರ್ಭದಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಂಸ್ಮರಣ ಗ್ರಂಥ ‘ವಚನ ಪಿತಾಮಹ’ಗ್ರಂಥದ ಕೊನೆಯಲ್ಲಿ ಡಾ. ಎಸ್. ಆರ್. ಗುಂಜಾಳ ಅವರು ‘ಡಾ. ಹಳಕಟ್ಟಿಯವರು ಶಿವಾನುಭವ ಗ್ರಂಥಮಾಲೆಯ ಮೂಲಕ ಪ್ರಕಟಿಸಿದ ಸಮಗ್ರ ಸಾಹಿತ್ಯದ ಸೂಚಿ’ಯನ್ನು ರಚಿಸಿದ್ದರು. ಇನ್ನೂ ವಿಶೇಷವೆಂದರೆ ೧೯೭೨ರಲ್ಲಿ ಡಾ. ಫ.ಗು.ಹಳಕಟ್ಟಿಯವರ ಜೀವನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಕೀರ್ತಿಯೂ ಡಾ. ಎಸ್. ಆರ್. ಗುಂಜಾಳ ಅವರಿಗೆ ಸಲ್ಲುತ್ತದೆ.
ಐ.ಬಿ.ಎಚ್. ಪ್ರಕಾಶನದಿಂದ ಪ್ರಕಟವಾದ ‘ಹಳಕಟ್ಟಿ ಫಕೀರಪ್ಪನವರು’ ಪುಸ್ತಕಕ್ಕೆ ೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಪ್ರಾಪ್ತವಾಯಿತು. ಈ ಕೃತಿಯು ಈಗಾಗಲೇ ಹತ್ತು ಮುದ್ರಣಗಳನ್ನು ಕಂಡಿದೆ. ಹತ್ತು ಸಾವಿರ ಪ್ರತಿಗಳು ಜನರಿಗೆ ತಲುಪಿವೆ. ಹೀಗಾಗಿ ಡಾ. ಗುಂಜಾಳ ಅವರಿಗೆ ಡಾ. ಹಳಕಟ್ಟಿಯವರು ಸಂಪಾದಿಸುತ್ತಿದ್ದ ಶಿವಾನುಭವ ಪತ್ರಿಕೆಯ ಮಹತ್ವ ತಿಳಿದಿತ್ತು.
ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಡಾ. ಗುಂಜಾಳ ಅವರು ಈ ಶಿವಾನುಭವ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಕರ್ನಾಟಕದ ಮೂಲೆ ಮೂಲೆಗೆ ಹೋಗಿ ೩೫ ವರ್ಷಗಳ ಎಲ್ಲ ಸಂಪುಟ-ಸಂಚಿಕೆಗಳನ್ನು ಸಂಗ್ರಹಿಸಿದರು. ಇದಕ್ಕೆ ಪೂಜ್ಯ ಶ್ರೀಗಳು ಎಲ್ಲ ರೀತಿಯ ಸಹಾಯ ಮಾಡಿದರು. ಕೆಲವರ ಹತ್ತಿರ ಇದ್ದ ಸಂಚಿಕೆಗಳನ್ನು ನೀಡಲು ಸಾಧ್ಯವಿಲ್ಲವೆಂದಾಗ, ಅವುಗಳನ್ನು ಜೆರಾಕ್ಷ್ ಮಾಡಿಸಿ ತಂದು ಗ್ರಂಥಾಲಯಕ್ಕೆ ಸೇರಿಸಿದರು. ಹೀಗೆ ಸಂಗ್ರಹಿಸಿದ ಎಲ್ಲ ಸಂಚಿಕೆಗಳನ್ನು ಸಂಪುಟಗಳಂತೆ ಬೈಂಡ್ ಮಾಡಿಸಿದರು. ಆಗ ಶಿವಾನುಭವ ಪತ್ರಿಕೆಯ ಒಂದು ಸಮಗ್ರ ಚಿತ್ರಣ ಗೋಚರಿಸತೊಡಗಿತು.
ನನಗೆ ಡಾ. ಗುಂಜಾಳ ಗುರುಗಳು ಶಿವಾನುಭವ ಪತ್ರಿಕೆಯ ಸೂಚಿ ಮಾಡಬೇಕೆಂದು ತಿಳಿಸಿದರು. ನಾನು ಮತ್ತು ವಿ.ಡಿ. ರಾಚನಾಯ್ಕರ್ ಗುರುಗಳು ಕೂಡಿ ಒಂದು ವರ್ಷಗಳ ಕಾಲ ಸತತ ಪರಿಶ್ರಮ ವಹಿಸಿ, ಆ ಲೇಖನಗಳ ಪಟ್ಟಿಯನ್ನು ಸಿದ್ಧಪಡಿಸಿದೆವು. ಡಾ. ಗುಂಜಾಳ ಗುರುಗಳು ಆ ಪಟ್ಟಿಯನ್ನು ವಿಷಯಾನುಗುಣವಾಗಿ ವಿಂಗಡಿಸಿ ಒಂದು ಪೂರ್ಣಪ್ರಮಾಣದ ಸೂಚಿ ಸಿದ್ಧಪಡಿಸಿದರು. ಸಿದ್ಧವಾದ ಶಿವಾನುಭವ ಪತ್ರಿಕೆಯ ಲೇಖನ ಸೂಚಿ ಕೃತಿಯನ್ನು ಪ್ರಕಟಿಸಲು ಡಾ. ಗುಂಜಾಳ ಗುರುಗಳು ತುಂಬ ಶ್ರಮ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಪುಸ್ತಕ ಪ್ರಾಧಿಕಾರ ಮೊದಲಾದ ಸಂಘ ಸಂಸ್ಥೆಗಳಿಗೆ ಪ್ರಕಟಿಸಲು ಮನವಿ ಮಾಡಿದರು. ಆದರೆ ಸೂಚಿ ಪ್ರಕಟವಾಗಲಿಲ್ಲ. ಆಗ ಡಾ.ಗುಂಜಾಳ ಗುರುಗಳು ಒಂದು ದಿನ ಸಾಯಂಕಾಲ ಇದನ್ನು ‘ನಾನೇ ಸ್ವತಃ ಹಣ ಹಾಕಿ ಪ್ರಕಟ ಮಾಡುವೆ’ಎಂದು ಆಲೋಚಿಸುವಷ್ಟರಲ್ಲಿ, ಒಂದು ವಾಹನದಲ್ಲಿ ವಿಜಯಪುರದ ಡಾ. ಹಳಕಟ್ಟಿ ಸಂಶೋಧನ ಕೇಂದ್ರದ ಅಧ್ಯಕ್ಷರನ್ನು ಒಳಗೊಂಡು ಐದಾರು ಜನ ಗ್ರಂಥಾಲಯಕ್ಕೆ ಬಂದರು.
ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಅಪ್ಪಣೆಯ ಮೇರೆಗೆ ಆ ಹಿರಿಯರು ಗ್ರಂಥಾಲಯಕ್ಕೆ ಆಗಮಿಸಿದ್ದರು. ಬಂದ ಹಿರಿಯರಲ್ಲಿ ಶಿವಯೋಗಿ ತಂಬಾಕೆ, ಡಾ. ಎಂ. ಎಸ್. ಮದಭಾವಿ ಮೊದಲಾದವರು ಇದ್ದರು. ಅವರೆಲ್ಲ ‘ಪೂಜ್ಯ ಶ್ರೀ ಸಿದ್ಧೇಶ್ವರ ಅಪ್ಪಗಳವರು ತಮ್ಮ ಹತ್ತಿರ ಕಳಿಸಿದ್ದಾರೆ. ನಾವು ಬಿ.ಎಲ್.ಡಿ.ಇ. ಸಂಸ್ಥೆಯ ಮೂಲಕ ಡಾ. ಹಳಕಟ್ಟಿ ಸಂಶೋಧನ ಕೇಂದ್ರ ಎಂಬ ಬೃಹತ್ ಕಟ್ಟಡವನ್ನು ೭೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದೇವೆ. ಅದರ ಲೋಕಾರ್ಪಣೆ ಸಮಾರಂಭಕ್ಕೆ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಹತ್ತಿರ ಹೋದಾಗ, ಅವರು ಈ ಸಂಶೋಧನ ಕೇಂದ್ರದಲ್ಲಿ ಏನಾದರೂ ಕ್ರಿಯಾತ್ಮಕ ಕೆಲಸಗಳಾದರೆ ನಾವು ಬರುವೆವು ಎಂದು ಹೇಳಿದರು.
ಅದಕ್ಕೆ ಪೂಜ್ಯರು ಬೆಳಗಾವಿಯಲ್ಲಿರುವ ಡಾ. ಗುಂಜಾಳ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿ, ಅವರ ಮಾರ್ಗದರ್ಶನ ಪಡೆಯಿರಿ ಎಂದು ಹೇಳಿ ಕಳಿಸಿದ್ದಾರೆಂದು’ವಿಜಯಪುರದ ಹಿರಿಯರು ಹೇಳಿದರು.
ಡಾ. ಗುಂಜಾಳ ಗುರುಗಳಿಗೆ ಸಖೇದಾಶ್ಚರ್ಯವಾಯಿತು. ಕೇವಲ ಐದು ನಿಮಿಷಗಳ ಹಿಂದೆ ನನ್ನ ಮುಂದೆ ‘ಶಿವಾನುಭವ ಪತ್ರಿಕೆ ಲೇಖನ ಸೂಚಿ’ಹೇಗೆ ಪ್ರಕಟಿಸುವುದು? ಎಂದು ಚಿಂತಿಸುತ್ತಿದ್ದರು. ಆದರೆ ವಿಜಯಪುರದ ಹಳಕಟ್ಟಿ ಸಂಶೋಧನ ಕೇಂದ್ರದ ಪದಾಧಿಕಾರಿಗಳೇ ಈಗ ಕಣ್ಣುಮುಂದೆ ಕುಳಿತಿದ್ದರು. ಆಗ ಡಾ. ಗುಂಜಾಳ ಗುರುಗಳು ತಾವು ಸಿದ್ಧಪಡಿಸಿದ ‘ಶಿವಾನುಭವ ಪತ್ರಿಕೆಯ ಲೇಖನ ಸೂಚಿ’ಹಸ್ತಪ್ರತಿಯನ್ನು ಅವರ ಮುಂದೆ ಇಟ್ಟರು. ಅವರು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಗಮನಕ್ಕೆ ತಂದು, ಅದನ್ನು ಹಳಕಟ್ಟಿ ಸಂಶೋಧನ ಕೇಂದ್ರದ ಲೋಕಾರ್ಪಣೆ ದಿನವೇ ಬಿಡುಗಡೆ ಮಾಡೋಣ ಎಂದು ಹೇಳಿ, ತಕ್ಷಣ ಸಂಸ್ಥೆಯಿಂದ ಐವತ್ತು ಸಾವಿರ ರೂಪಾಯಿಗಳನ್ನು ಕಳಿಸಿಕೊಟ್ಟರು. ಕೇವಲ ಒಂದು ವಾರದಲ್ಲಿ ‘ಶಿವಾನುಭವ ಪತ್ರಿಕೆಯ ಲೇಖನ ಸೂಚಿ’ಯು ಗದುಗಿನ ತ್ವರಿತ ಮುದ್ರಣಾಲಯದಲ್ಲಿ ಮುದ್ರಣವಾಗಿ ಸಿದ್ಧವಾಯಿತು.
೨ ಜುಲೈ ೨೦೦೨ರಂದು ವಿಜಯಪುರದಲ್ಲಿ ಈ ಸೂಚಿಯು ಪೂಜ್ಯ ಸಿದ್ಧೇಶ್ವರ ಅಪ್ಪಗಳವರಿಂದ ಲೋಕಾರ್ಪಣೆಯಾಯಿತು. ಆಗ ಈ ಸೂಚಿಯನ್ನು ನೋಡಿದ ಪೂಜ್ಯರು, ಡಾ. ಹಳಕಟ್ಟಿಯವರು ಜೀವನಮಾನದುದ್ದಕ್ಕೂ ಪ್ರಕಟಿಸಿದ ಸಮಗ್ರ ಸಾಹಿತ್ಯವನ್ನು ಡಾ. ಗುಂಜಾಳ ಅವರು ತುಂಬ ಶ್ರಮ ಶ್ರದ್ಧೆಯಿಂದ ಸಂಗ್ರಹಿಸಿದ್ದಾರೆ. ಈ ಸಾಹಿತ್ಯ ಮತ್ತೆ ಪ್ರಕಟವಾಗಬೇಕು ಎಂದು ಹೇಳಿದರು. ಆಗ ತಕ್ಷಣ ಡಾ. ಎಂ.ಬಿ. ಪಾಟೀಲ ಅವರು ಅದಕ್ಕೆ ಎಷ್ಟೇ ಲಕ್ಷ ಖರ್ಚಾದರು, ಅದನ್ನು ನಾವು ಪ್ರಕಟಿಸುತ್ತೇವೆ ಎಂದು ವೇದಿಕೆ ಮೇಲೆಯೇ ಘೋಷಿಸಿದರು.
ನಂತರ ಕಾರ್ಯಪ್ರವೃತ್ತರಾದ ಡಾ. ಹಳಕಟ್ಟಿ ಸಂಶೋಧನ ಕೇಂದ್ರದ ಪದಾಧಿಕಾರಿಗಳು ತಕ್ಷಣ ಒಂದು ಜೆರಾಕ್ಷ್ ಯಂತ್ರವನ್ನು ಖರೀದಿಸಿ, ಬೆಳಗಾವಿಗೆ ಕಳಿಸಿಕೊಟ್ಟರು. ಆಗ ನಾನು ತುಂಬ ಶ್ರಮವಹಿಸಿ, ಶಿವಾನುಭವ ಪತ್ರಿಕೆಯ ಎಲ್ಲ ಸಂಚಿಕೆಗಳನ್ನು ಜೆರಾಕ್ಷ್ ಮಾಡಿ ಕಳಿಸುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡೆ. ಇದರ ಪರಿಣಾಮವಾಗಿ “ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯದ ೧೪ ಸಂಪುಟಗಳು ಪ್ರಕಟವಾದವು. ಪ್ರಾಯಶಃ ಪೂಜ್ಯ ಶ್ರೀ ಡಾ. ಸಿದ್ಧರಾಮ ಸ್ವಾಮೀಜಿ ಅವರು ಮತ್ತು ಡಾ. ಗುಂಜಾಳ ಗುರುಗಳು ಈ ಕುರಿತು ಆಸಕ್ತಿ ವಹಿಸದೇ ಹೋಗಿದ್ದರೆ, ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯವೆನ್ನುವುದು ಗಗನ ಕುಸುಮವಾಗುತ್ತಿತ್ತು. ಡಾ. ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಪುನುರುತ್ಥಾನಗೊಳಿಸಿದ ಕೀರ್ತಿ ಈ ಇಬ್ಬರೂ ಮಹಾನುಭಾವರಿಗೆ ಸಲ್ಲಬೇಕು.”
‘ಶಿವಾನುಭವ’ಪತ್ರಿಕೆಯ ಲೇಖನ ಸೂಚಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಅದರಲ್ಲಿರುವ ಸಮಗ್ರ ಲೇಖನಗಳನ್ನು ಓದುವ ಅವಕಾಶ ನನಗೆ ದೊರೆಯಿತು. ಆ ಅಧ್ಯಯನದ ಮೂಲಕ ಲಿಂಗಾಯತ ಧರ್ಮ, ಅದರ ಸಂಸ್ಕೃತಿ, ಇತಿಹಾಸ ಮತ್ತು ಸಾಹಿತ್ಯ ಪರಂಪರೆಯ ಕುರಿತು ಒಂದು ಸಮಗ್ರವಾದ ಅರಿವು ನನ್ನಲ್ಲಿ ಮೂಡಿತು. ಈ ಸಂದರ್ಭದಲ್ಲಿ ಡಾ. ಫ. ಗು. ಹಳಕಟ್ಟಿಯವರು ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಾಹಿತ್ಯ ಲೋಕಕ್ಕೆ ಎಂತಹ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಮನವರಿಕೆಯಾಯಿತು.
ಡಾ. ಹಳಕಟ್ಟಿಯವರು ಕೇವಲ ಒಬ್ಬ ಸಂಪಾದಕರಾಗಿರಲಿಲ್ಲ; ಅವರು ವಚನ ಸಾಹಿತ್ಯದ ಸಂರಕ್ಷಕರು, ಸಂಶೋಧಕರು ಮತ್ತು ಪುನರುಜ್ಜೀವನದ ಹರಿಕಾರರಾಗಿದ್ದರು. ಬಸವಣ್ಣನವರು ಮತ್ತು ಬಸವಾದಿ ಶಿವಶರಣರ ವಚನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಜನಸಾಮಾನ್ಯರಿಗೂ ಹಾಗೂ ವಿದ್ವಾಂಸರಿಗೂ ತಲುಪಿಸುವಲ್ಲಿ ಅವರು ಮಾಡಿದ ಕಾರ್ಯ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಅಜರಾಮರವಾಗಿದೆ.
‘ಶಿವಾನುಭವ’ಪತ್ರಿಕೆಯಲ್ಲಿ ಬಸವಾದಿ ಶಿವಶರಣರ ವಚನಗಳು, ವಚನ ಸಂಕಲನಗಳು, ಲಿಂಗಾಯತ ರಾಜಮನೆತನಗಳ ಇತಿಹಾಸ, ಹರಿಹರನ ಸಮಗ್ರ ರಗಳೆಗಳು, ಲಿಂಗಾಯತ ಕಾವ್ಯ ಪರಂಪರೆ ಮೊದಲಾದ ಅನೇಕ ಮಹತ್ವದ ವಿಷಯಗಳು ನಿರಂತರವಾಗಿ ಪ್ರಕಟಗೊಂಡಿವೆ. ಈ ಎಲ್ಲ ವಿಷಯಗಳನ್ನು ಒಂದೇ ವೇದಿಕೆಯಲ್ಲಿ ಅಧ್ಯಯನ ಮಾಡುವ ಅವಕಾಶ ದೊರಕಿರುವುದು ಒಂದು ಅಪೂರ್ವ ಅನುಭವವಾಗಿದೆ.
ಈ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಓದುವ ಮತ್ತು ಅವುಗಳಲ್ಲಿರುವ ಅಮೂಲ್ಯ ಮಾಹಿತಿಯನ್ನು ಕಣ್ಣಾರೆ ನೋಡುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಒಂದು ಸೌಭಾಗ್ಯವೆಂದು ಭಾವಿಸುತ್ತೇನೆ. ಏಕೆಂದರೆ ಅವು ಕೇವಲ ಹಳೆಯ ಪತ್ರಿಕೆಗಳಲ್ಲ; ಅವು ಒಂದು ಧರ್ಮ, ಒಂದು ಸಂಸ್ಕೃತಿ ಮತ್ತು ಒಂದು ಸಾಹಿತ್ಯ ಚಳವಳಿಯ ಜೀವಂತ ದಾಖಲೆಗಳಾಗಿವೆ. ಇಂದಿಗೂ ‘ಶಿವಾನುಭವ’ಪತ್ರಿಕೆಯ ಸಂಚಿಕೆಗಳು ಲಿಂಗಾಯತ ಧರ್ಮದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಅಮೂಲ್ಯ ಆಕರಗಳಾಗಿ ಉಳಿದಿವೆ.
ಧಾರ್ಮಿಕ ಚಿಂತನೆ, ಸಾಮಾಜಿಕ ಇತಿಹಾಸ, ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ಅಧ್ಯಯನ ಮಾಡುವವರಿಗೆ ಅವು ಅಪಾರವಾದ ಮಾಹಿತಿಯ ಸಂಪತ್ತನ್ನು ಒದಗಿಸುತ್ತವೆ.

‘ಶಿವಾನುಭವ’ಪತ್ರಿಕೆಯ ಆರಂಭವಾಗಿ ಸುಮಾರು ನೂರು ವರ್ಷಗಳ ಕಾಲ ಕಳೆದಿದೆ. ಈ ದೀರ್ಘ ಅವಧಿಯಲ್ಲಿ ಪತ್ರಿಕೆಯು ಅನೇಕ ಏರುಪೇರುಗಳನ್ನು ಕಂಡರೂ ತನ್ನ ಮೂಲ ಧ್ಯೇಯವಾದ ಜ್ಞಾನ ಪ್ರಸಾರ, ಧಾರ್ಮಿಕ ಚಿಂತನೆ ಮತ್ತು ಸಾಹಿತ್ಯ ಸೇವೆಯಿಂದ ಹಿಂದೆ ಸರಿಯಲಿಲ್ಲ. ಒಂದು ಶತಮಾನಕ್ಕೂ ಹೆಚ್ಚು ಕಾಲ ನಿರಂತರವಾಗಿ ಒಂದು ವಿಚಾರಧಾರೆಗೆ ಸೇವೆ ಸಲ್ಲಿಸಿದ ಪತ್ರಿಕೆಗಳು ವಿರಳ.
“ಈ ಶತಮಾನೋತ್ಸವದ ಸಂದರ್ಭದಲ್ಲಿ ‘ಶಿವಾನುಭವ’ಪತ್ರಿಕೆಯ ಹುಟ್ಟು, ಬೆಳವಣಿಗೆ, ಅದರ ಸಾಮಾಜಿಕ ಪಾತ್ರ ಮತ್ತು ಕನ್ನಡ ಸಾಹಿತ್ಯ-ಸಂಸ್ಕೃತಿಗೆ ನೀಡಿದ ಕೊಡುಗೆಯ ಕುರಿತು ಒಂದು ಸಮಗ್ರ ಅಧ್ಯಯನ ಗ್ರಂಥ ಪ್ರಕಟವಾದರೆ, ಅದು ಕೇವಲ ಇತಿಹಾಸದ ದಾಖಲೆಯಾಗುವುದಿಲ್ಲ; ಬದಲಾಗಿ ಭೂತಕಾಲದ ಮೌಲ್ಯಗಳನ್ನು ವರ್ತಮಾನದ ದೃಷ್ಟಿಯಿಂದ ಪುನರ ಅವಲೋಕಿಸುವ ಮಹತ್ವದ ಪ್ರಯತ್ನವಾಗುತ್ತದೆ.”
ಅಂತಹ ಅಧ್ಯಯನವು ಡಾ. ಹಳಕಟ್ಟಿಯವರ ಅಪಾರ ಸೇವೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವುದರ ಜೊತೆಗೆ, ಲಿಂಗಾಯತ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯ ಪಥವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ‘ಶಿವಾನುಭವ’ದಂತಹ ಪತ್ರಿಕೆಗಳು ನಮ್ಮ ಸಾಂಸ್ಕೃತಿಕ ಸ್ಮೃತಿಯ ಭಾಗವಾಗಿದ್ದು, ಅವುಗಳ ಸಂರಕ್ಷಣೆ ಮತ್ತು ಅಧ್ಯಯನ ಮುಂದುವರಿಯಬೇಕಾದ ಅಗತ್ಯವಿದೆ.

ತಮ್ಮ ಈ ವಿವರವಾದ ಶಿವಾನುಭದ ಪತ್ರಿಕೆ ಬಗ್ಗೆ ಬಹಳ ಜನರಿಗೆ ಗೊತ್ತಿರಲಿಲ್ಲ. ವಿಷಯ ತಿಳಿದು ಬಹಳ ಸಂತೋಷ. ಸೇವೆಗಾಗಿ ದುಡಿದ ಎಲ್ಲ ಮಹನೀಯರಿಗೆ , ಸಂಘ ಸಂಸ್ಥೆಗಳಿಗೂ ಧನ್ಯವಾದಗಳು. ಫ ಗು ಹಳಕಟ್ಟಿಯವರ ಜನ್ಮದಿನ ಮತ್ತು ಶಿವಾನುಭವ ಪತ್ರಿಕೆಯ ಶತಮಾನೋತ್ಸವ ಸಂದರ್ಭದಲ್ಲೂ ಎಲ್ಲರಿಗೂ ಶುಭವಾಗಲಿ. ಶರಣು ಶರಣಾರ್ಥಿ.
ಈ ಸುದೀರ್ಘ ಲೇಖನ ಓದಿ ನನ್ನ ಕಣ್ಣು ತುಂಬಿ ಬಂತು. ವಚನ ಸಾಹಿತ್ಯದ ಪಿತಾಮಹ ಫ ಗು ಹಳಕಟ್ಟಿ ಅವರ ಶಿವಾನುಭವ ಪತ್ರಿಕೆಯ ಹಾಗೂ ತದ ನಂತರ dr S R ಗುಂಜಾಳ ಸರ್ ಅವರು dr ಫ ಗು ಹಳಕಟ್ಟಿ ಅವರ ಜೀವನ ಚರಿತ್ರೆ ಬರೆದಿದ್ದು ಹೀಗೆ ತೆರೆಯ ಮರೆಗೆ ಎಷ್ಟೋ ಜನ ಮಹಾನುಭಾವರು ಶರಣ ಪರಂಪರೆಗೆ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
ಇವೆಲ್ಲವನ್ನೂ ಈಗಿನ ಪೀಳಿಗೆಗೆ ತಲುಪಿಸುತ್ತಿರುವ ಲೇಖಕರಾದ ಪ್ರಕಾಶ್ ಗಿರಿಮಲ್ಲನವರ ಹಾಗೂ ನಿಮಗೂ ಅನಂತ ಅನಂತ ಧನ್ಯವಾದಗಳು.
ತುಂಬಾ ಅಪರೂಪದ ವಿವರಗಳನ್ನೊಳಗೊಂಡ ಬರಹ.