೧೬ ಜೋಡಿ ಸಾಮೂಹಿಕ ಕಲ್ಯಾಣ ಮಹೋತ್ಸವ
ಚಿತ್ರದುರ್ಗ:
ಸತಿ-ಪತಿಗಳ ಜೀವನದಲ್ಲಿ ಜ್ಞಾನದಷ್ಟೇ ಪರಸ್ಪರ ನಂಬಿಕೆಯು ಬಹಳ ಮುಖ್ಯ. ಇಂದು ಇಡೀ ಜಗತ್ತು ಭಾರತದ ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಮ್ಮ ಕೌಟುಂಬಿಕ ಮೌಲ್ಯಗಳು ಅಷ್ಟು ಮಹತ್ವ ಪೂರ್ಣವಾಗಿವೆ ಎಂದು ಡಾ. ಬಸವಪ್ರಭು ಸ್ವಾಮಿಗಳು ಹೇಳಿದರು.
ನಗರದ ಬಸವ ಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಗುರುವಾರ ನಡೆದ ೩೬ನೇ ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೩ ಜತೆ ಅಂತರ್ಜಾತಿ ವಿವಾಹ ಸೇರಿದಂತೆ ೧೬ ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದರು.

ಶ್ರೀಮಠವು ಸರ್ವಜನಾಂಗದ ಮಠದವಾಗಿದೆ. ೧೨ನೇ ಶತಮಾನದ ಬಸವಾದಿ ಶರಣರ ಆದರ್ಶಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವುದಕ್ಕೆ ಇಂದಿನ ಕಲ್ಯಾಣ ಮಹೋತ್ಸವದಲ್ಲಿ ೩ ಜೋಡಿ ಅಂತರ್ಜಾತಿ ವಿವಾಹ ನೆರವೇರುತ್ತಿರುವುದು ಉತ್ತಮ ನಿದರ್ಶನವಾಗಿದೆ ಎಂದರು.
ಮಾನವನಿಗೆ ಹೊಟ್ಟೆ ಹಸಿವು ಎಷ್ಟು ಮುಖ್ಯವೋ ನೆತ್ತಿಯ ಹಸಿವು ಕೂಡ ಅಷ್ಟೇ ಮುಖ್ಯ. ದೇಹವೆಂಬ ಕೊಡದಲ್ಲಿ ಸುಜ್ಞಾನವನ್ನು ತುಂಬಿಕೊಳ್ಳಬೇಕು. ಅಹಂಕಾರದ ಬದಲಾಗಿ ಜ್ಞಾನವನ್ನು ತುಂಬಿಕೊಂಡಾಗ ಅದು ಯಾವತ್ತೂ ತುಳುಕುವುದಿಲ್ಲ.

ಎಷ್ಟೋ ಸಂಸಾರಗಳು ಭೌತಿಕ ಸಂಪತ್ತಿಗಾಗಿ ಮನಸ್ತಾಪಗೊಂಡು ವಿಚ್ಛೇದನಕ್ಕೆ ಒಳಗಾಗುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಹಾಗಾಗಿ ಸತಿ ಪತಿಗಳು ಪರಸ್ಪರರ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಸುಖ ಜೀವನವನ್ನು ನಡೆಸಬೇಕೆಂದು ತಿಳಿ ಹೇಳಿದರು.
ಸಮ್ಮಖವಹಿಸಿ ಮಾತನಾಡಿದ ಶ್ರೀ ಬಸವನಾಗಿದೇವ ಸ್ವಾಮಿಗಳು, ಅತ್ಯಂತ ಸಾತ್ವಿಕವಾದ ಜೀವನ ಸಾಗಿಸಲು ಗುರು-ಹಿರಿಯರ, ಶರಣರ, ಪುಣ್ಯಪುರಷರ ಸತ್ಸಂಗವಿರಬೇಕು. ನಮ್ಮ ದೇಹ, ಮನಸ್ಸು, ಪ್ರಾಣ ಈ ಮೂರನ್ನು ಉಪಯೋಗಿಸಿಕೊಂಡು ನಾವು ವಿಶ್ವಪ್ರಜ್ಞೆಯನ್ನು ಹೊಂದಬೇಕು. ಸತಿ-ಪತಿಗಳಾಗಲಿರುವ ನವದಂಪತಿಗಳು ತಮ್ಮ ಆಲೋಚನೆಗಳನ್ನು ಕುಟುಂಬದಾಚೆಗೆ ವಿಸ್ತರಿಸಿಕೊಂಡು ವಿಶ್ವಮಾನವರಾಗಬೇಕೆಂದರು.
ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಶ್ರೀಮಠದ ಸಾಮೂಹಿಕ ಕಲ್ಯಾಣ ಮಹೋತ್ಸವವು ಅತ್ಯಂತ ಸರಳವಾಗಿ ನಡೆಯುವಂಥದ್ದು ಮತ್ತು ಕಡಿಮೆ ಖರ್ಚಿನದು. ಇದರ ಅನುಕೂಲವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಪೈಲ್ವಾನ್ ತಿಪ್ಪೇಸ್ವಾಮಿ ಮಾತನಾಡಿ, ಸಾಲವಿಲ್ಲದ ಮದುವೆ ಎಂದರೆ ಅದು ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವಾಗಿದೆ. ನಿಮ್ಮ ಮಕ್ಕಳ ಮದುವೆಗಾಗಿ ಸಾಲ ಮಾಡಿ ಜೀವನಪೂರ್ತಿ ಕಷ್ಟಗಳನ್ನು ಅನುಭವಿಸುವುದಕ್ಕಿಂತ ಇಂತಹ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಂಡು ನೀವು ನಿಮ್ಮ ಕುಟುಂಬದವರು ನೆಮ್ಮದಿ ಜೀವನ ಸಾಗಿಸಿರಿ ಎಂದರು.
ಕಾರ್ಯಕ್ರಮದಲ್ಲಿ ಲಿಂಗಾಯತ ನೌಕರರ ಸಂಘದಿಂದ ಹೊರತರಲಾದ ಗೋಡೆ ಕ್ಯಾಲೆಂಡರ್‌ನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಗಿರೀಶಾಚಾರ‍್ಯ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿ, ವಂದಿಸಿದರು.
