ಪಟಾಕಿ ಖರ್ಚಿನಲ್ಲಿ ವಚನ ಕಂಠಪಾಠ ಸ್ಪರ್ಧೆ ಶುರು ಮಾಡಿದ ಸಿದ್ಧಲಿಂಗ ಸ್ವಾಮೀಜಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

‘ಅರ್ಧಗಂಟೆ ಸಂಭ್ರಮಕ್ಕೆ 4 ಲಕ್ಷ ರುಪಾಯಿ ಸುಡುತಿದ್ವಿ ಅಂತ ಬೇಜಾರಿತ್ತು.’

ಬೆಂಗಳೂರು

ನೆಲಮಂಗಲದ ಪವಾಡಶ್ರೀ ಬಸವಣ್ಣ ದೇವರ ಮಠದ ವಚನ ಕಂಠಪಾಠ ಸ್ಪರ್ಧೆ ಎಪ್ರೀಲ್ 19 ನಡೆಯಲಿದೆ.

ಮೂರು ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಒಂದು ಲಕ್ಷ, 75 ಸಾವಿರ, 50 ಸಾವಿರ ಬಹುಮಾನ ಘೋಷಿಸಿ ಬಸವಣ್ಣ ದೇವರಮಠದ ಪೀಠಾಧಿಪತಿ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ರಾಜ್ಯದಲ್ಲೇ ದೊಡ್ಡ ಸಂಚಲನ ಮೂಡಿಸಿದ್ದಾರೆ.

ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಮಾತನಾಡಿದ ಸ್ವಾಮೀಜಿ ಬಸವ ಜಯಂತಿಯಲ್ಲಿ ಪಟಾಕಿ ಹೊಡೆದು ಹಣ ಹಾಳು ಮಾಡುವ ಬದಲು ವಚನ ಕಂಠಪಾಠ ಸ್ಪರ್ಧೆ ಶುರು ಮಾಡಿದೆವು ಎನ್ನುತ್ತಾರೆ.

ಈ ವಚನ ಕಂಠಪಾಠ ಸ್ಪರ್ಧೆಯ ಆಲೋಚನೆ ಹೇಗೆ, ಯಾವ ರೀತಿಯಾಗಿ ಇದು ಬಂತು?

ಪ್ರತಿ ವರ್ಷ ಬಸವ ಜಯಂತಿಯನ್ನು ನೆಲಮಂಗಲದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಮೊದಲು ಎಲ್ಲಾ ಪಟಾಕಿ ಹೊಡೆದು ಖುಷಿ ಪಡುತ್ತಿದ್ದರು. ಆದರೆ ನನಗದು ಬಹಳ ಬೇಜಾರಿನ ವಿಷಯವಾಗಿತ್ತು.

ಸುಮ್ಮನೆ 20 ನಿಮಿಷ, ಅರ್ಧಗಂಟೆಯ ಸಂಭ್ರಮಕ್ಕೆಲ್ಲ 3 ಅಥವಾ 4 ಲಕ್ಷ ರುಪಾಯಿ ಸುಟ್ಟು ಹಾಕಿ ಬಿಡ್ತೀವಲ್ಲ ಅನ್ನೋದು ಬೇಸರ ತರಿಸಿಬಿಡೋದು.

ಅದನ್ನು ತಪ್ಪಿಸಬೇಕಲ್ಲ ಅನ್ನೋ ಉದ್ದೇಶದಿಂದ ಅದೇ ಸಮಯದಲ್ಲಿ ವಚನ ಸ್ಪರ್ಧೆ ಯಾಕೆ ಮಾಡಬಾರದು ಎಂಬ ಆಲೋಚನೆ ಮಾಡಿದೆವು. 2024ರಲ್ಲಿ ಅದು ಶುರುವಾಗಿ ಈಗ ಮೂರನೇ ವರ್ಷದ ಸ್ಪರ್ಧೆ ನಡೆಯುತ್ತಿದೆ. ಹಣ ಹಾಳು ಮಾಡುವ ಬದಲು ಶರಣರ ವಚನಗಳ ಬಗ್ಗೆ ಜಾಗೃತಿ ಮೂಡುತ್ತಿದೆ.

ಮೊದಲು ಎಲ್ಲಾ ಪಟಾಕಿ ಹೊಡೆದು ಖುಷಿ ಪಡುತ್ತಿದ್ದರು.

ವಚನ ಸ್ಪರ್ಧೆಗೆ ಪ್ರತಿಕ್ರಿಯೆ ಹೇಗೆ ಬರುತ್ತಿದೆ, ತಮ್ಮ ಅನುಭವವೇನು?

ವಚನ ಸ್ಪರ್ಧೆ ಬಹಳ ಸಂತೋಷ, ಮನಸ್ಸಿಗೆ ತೃಪ್ತಿ ತಂದಿದೆ. ಇದರಿಂದ ಒಂದು ಸಾರ್ಥಕತೆಯ ಭಾವ ಸಿಕ್ಕಿದೆ. ಕಳೆದ ವರ್ಷ ಮೂರುವರೆ ವರ್ಷದ ಹೆಣ್ಣು ಮಗುವಿಂದ 91 ವರ್ಷದ ವಯೋವೃದ್ಧರವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ನೂರಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿದ್ದರು. ಕೊನೆಗೆ 56 ಜನ ಬಂದು ಭಾಗವಹಿಸಿದರು.

ವಚನ ಸ್ಪರ್ಧೆಯಿಂದ ಒಂದು ಸಾರ್ಥಕತೆಯ ಭಾವ ಸಿಕ್ಕಿದೆ.

2025ರಲ್ಲಿ ಸ್ಪರ್ಧಿಗಳೆಲ್ಲ ಸೇರಿ ಒಂದೇ ದಿನ 8,976 ವಚನಗಳು ಪಠಣ ಮಾಡಿದರು. 2024ರಲ್ಲಿ 6,800 ವಚನ ಪಠಣ ಆಗಿದ್ದವು.

ಕಳೆದ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ 8ನೇ ತರಗತಿಯ ಲಾವಣ್ಯ 1,051 ವಚನ ಹೇಳಿದರು. ಹಾಸನದ ನೀಲಾ 1014 ವಚನ ಹೇಳಿದರು.


2025ರ ವಚನ ಸ್ಪರ್ಧೆಯ ವಿಜೇತರ ಮೆರವಣಿಗೆ

ತಮ್ಮ ಬೇರೆ ಕಾರ್ಯಕ್ರಮಗಳೇನು?

ಮಕ್ಕಳಲ್ಲಿ ಬಸವಾದಿ ಶರಣರ ಬಗ್ಗೆ, ವಚನಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಮಕ್ಕಳ ವಚನ ಕಂಠಪಾಠ ಸ್ಪರ್ಧೆಗೆ ‘ವಚನ ಶಿಕ್ಷಣ’ ಅನ್ನುವ ಪುಸ್ತಕ ಮುದ್ರಣ ಮಾಡಿದ್ದೇವೆ. ಆ ಪುಸ್ತಕ ಎಲ್ಲಾ ಶಾಲಾ ಮಕ್ಕಳಿಗೆ ಮೊದಲೇ ಕೊಡುತ್ತೇವೆ. ಒಂದೊಂದು ಶಾಲೆಯಿಂದ 15 ಮಕ್ಕಳನ್ನು ಕಳಿಸಬೇಕು ಅಂತ ಹೇಳುತ್ತೇವೆ. ಆಸಕ್ತಿ ಇರುವ ಪೋಷಕರೆಲ್ಲ ವಚನಗಳನ್ನು ಮಕ್ಕಳಿಗೆ ಚೆನ್ನಾಗಿ ಅಭ್ಯಾಸ ಮಾಡಿಸಿ, ಸ್ಪರ್ಧೆಗೆ ಕಳಿಸಿಕೊಡುತ್ತಾರೆ.

ಮಕ್ಕಳಲ್ಲಿ ಬಸವಾದಿ ಶರಣರ ಬಗ್ಗೆ, ವಚನಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಮಕ್ಕಳಿಗೂ ಮೊದಲನೇ ಬಹುಮಾನವಾಗಿ 5 ಸಾವಿರ, ಎರಡನೆಯದಕ್ಕೆ 4, ಮೂರನೇಯದು 3 ಸಾವಿರ‌ ಕೊಡುತ್ತೇವೆ. ಸಮಾಧಾನಕರವಾಗಿ ಒಂದೊಂದು ತರಗತಿಗೆ ಐದು ಬಹುಮಾನ ಕೊಡುತ್ತೇವೆ. ಈ ವರ್ಷದಿಂದ ಒಂದನೇ ತರಗತಿಗೂ ಮಕ್ಕಳಿಗೂ ವಿಸ್ತರಿಸುತ್ತೇವೆ.

ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಚನ್ನಬಸವಣ್ಣ ಜಯಂತಿ ಮಾಡ್ತೇವೆ. ಅದರಲ್ಲಿ ಮೂರರಿಂದ ಆರು ವರ್ಷದ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸುತ್ತೇವೆ. ಹೋದ ವರ್ಷ ಬೇಬಿ ಸಿಟ್ಟಿಂಗ್, ಎಲ್ಕೆಜಿ, ಯುಕೆಜಿಯ 380 ಜನ ಮಕ್ಕಳು ಭಾಗವಹಿಸಿದ್ದರು. ಮೂರು ವರ್ಷದಿಂದ ಈ ಸ್ಪರ್ಧೆ ಮಾಡುತ್ತಾ ಇದ್ದೇವೆ.

ಆಮೇಲೆ ಪ್ರತಿ ತಿಂಗಳು ಪೌರ್ಣಮಿ ದಿವಸ ಶರಣ ಸಂಸ್ಕೃತಿ ಅಭಿಯಾನ ಅಂತ ಮಾಡುತ್ತೇವೆ. ಬೇರೆ ಬೇರೆ ಕಾಯಕ ಮಾಡುತ್ತಿರುವವರಿಗೆ ಆಯಾ ಶರಣರ ಹೆಸರಲ್ಲಿ ಪ್ರಶಸ್ತಿ ಕೊಡುತ್ತಾ ಬಂದಿದ್ದೇವೆ.

ನಮಗ ಗೊತ್ತಿರುವ ಹಾಗೆ 10-12 ಶರಣರನ್ನು ಬಿಟ್ಟರೆ ಬೇರೆ ಶರಣರುಗಳ ಪರಿಚಯಾನೇ ಇಲ್ಲ ಜನರಿಗೆ. ವಚನ ಸಾಹಿತ್ಯ ಗೊತ್ತಿರುವವರು, ಮಠದ ಸ್ವಾಮಿಗಳನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಬಹಳ ಜನ ಆ ಶರಣರ ಹೆಸರನ್ನೇ ಕೇಳಿಲ್ಲ ಅವರ ವಚನವನ್ನೂ ಕೇಳಿಲ್ಲ.

10-12 ಶರಣರನ್ನು ಬಿಟ್ಟರೆ ಬೇರೆ ಶರಣರುಗಳ ಪರಿಚಯಾನೇ ಇಲ್ಲ

ಸಧ್ಯದಲ್ಲೇ ಶರಣರ ಚಳುವಳಿಗೆ ಒಂಬೈನೂರು ವರ್ಷ ತುಂಬುತ್ತದೆ . ಅದಕ್ಕಾಗಿಯೇ ಒಂದು ಒಳ್ಳೆಯ ಕಾರ್ಯಕ್ರಮ ಮಾಡಬೇಕೆಂಬ ಚಿಂತನೆ, ಆಲೋಚನೆ ಮಾಡ್ತಾ ಇದ್ದೇವೆ. ಅದರ ತಯಾರಿಗೆ ಈಗಾಗಲೇ ಒಂದು 150 ಜನ ಸೇರಿಕೊಂಡು ಮಾಡುತ್ತಿದ್ದಾರೆ.

ಅದು ಯಾವ ರೀತಿ, ಹೇಗೆ, ಏನು ಮಾಡಬೇಕು ಎನ್ನುವ ಚಿಂತನೆ ಸಾಗಿದೆ. ವಿಭಿನ್ನ, ವಿಶೇಷವಾಗಿ ಮಾಡಬೇಕು ಅಂತಾ ಅಂದ್ಕೊಂಡಿದ್ದೇವೆ. ನಮ್ಮ ಗುರುಗಳು ಆಶೀರ್ವಾದ ಹೇಗೆ ಮಾಡುತ್ತಾರೆ ಹಾಗೆ ಕಾರ್ಯಕ್ರಮ ನಡೆಯುತ್ತೆ. ಮತ್ತೆ ಬಸವಣ್ಣನವರು ಆಶೀರ್ವಾದ ಹೇಗೆ ಮಾಡುತ್ತಾರೋ ಹಾಗೆ ಕಾರ್ಯಕ್ರಮ ನಡೆಯುತ್ತೆ. ಬಸವ ಮೀಡಿಯಾದ ಸಹಕಾರ ನಮಗೆಲ್ಲ ಇರಲಿ.

ನಮ್ಮದು ಬಸವ ಪರಂಪರೆಯ ಮಠ. ಬಸವಣ್ಣನವರ ಸೇವೆ ಮಾಡಲು ನಮ್ಮ ಗುರುಗಳು ನಮಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ.

ನಮ್ಮದು ಬಸವ ಪರಂಪರೆಯ ಮಠ. ಬಸವಣ್ಣನವರ ಸೇವೆ ಮಾಡಲು ನಮ್ಮ ಗುರುಗಳು ನಮಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ಸೇವೆ ಮಾಡಲಿಲ್ಲ ಅಂತಂದರೆ ನಮ್ಮ ಗುರುಗಳಿಗೆ ನಾವು ಭಕ್ತಿ ಸಮರ್ಪಣೆ ಮಾಡಿದಂತಾಗುವುದಿಲ್ಲ ಅನ್ನುವ ದೃಷ್ಟಿಯಿಂದ ನಮ್ಮ ಕೈಲಾದ ಸೇವೆ ಮಾಡುತ್ತ ಇದ್ದೇವೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *