ಹಣ ಬಾಕಿ: ಅನುಭವ ಮಂಟಪ ನಿರ್ಮಾಣ ಮತ್ತಷ್ಟು ವಿಳಂಬ ಸಾಧ್ಯತೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಸರಕಾರ ಗುತ್ತಿಗೆದಾರರಿಗೆ ಸಕಾಲಿಕವಾಗಿ ಹಣ ಪಾವತಿ ಮಾಡದಿರುವ ಕಾರಣ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಕಾಮಗಾರಿ ಶುರುವಾದಾಗ ಅನುಭವ ಮಂಟಪದ ಅನಾವರಣವನ್ನು ಡಿಸೆಂಬರ್ 2025ಕ್ಕೆ ನಡೆಸುವ ಗುರಿಯನ್ನು ಹೊಂದಲಾಗಿತ್ತು. ನಂತರ ಅದನ್ನು ಒಂದು ವರ್ಷ ಮುಂದಕ್ಕೆ ಹಾಕಲಾಗಿತ್ತು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಮಾರ್ಚ್ 2027ರ ಒಳಗೆ ಕಾಮಗಾರಿ ಮುಗಿಸಲಾಗುವುದು ಎಂದು ಹೇಳಿದ್ದರು.

ತುರ್ತಾಗಿ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖಂಡ್ರೆ ಜನವರಿ 29 ಪತ್ರ ಬರೆದಿದ್ದಾರೆಂದು ದಿ ಫೈಲ್ ವರದಿ ಮಾಡಿದೆ.

ಶೇ.70ರಷ್ಟು ಪ್ರಗತಿ ಸಾಧಿಸಿರುವ ಅನುಭವ ಮಂಟಪ ಕಾಮಗಾರಿಯನ್ನು ಮುಂದುವರೆಸಲು 250 ಕೋಟಿ ರೂ. ಅಗತ್ಯವಿದೆ.

ಗುತ್ತಿಗೆದಾರರ ಬಿಲ್‌ ಪಾವತಿಸಲು, ಯೋಜನೆಯ ಸಮಾಲೋಚಕರ ಶುಲ್ಕ ಪಾವತಿ, ಫ್ರೂಫ್ ಚೆಕ್ಕಿಂಗ್, ಪರುಷ ಕಟ್ಟೆಯ ಅಭಿವೃದ್ದಿ ಕೆಲಸ ಸೇರಿ ಒಟ್ಟು 100 ಕೋಟಿ ರೂ. ಬೇಕಿದೆ.

2026ರ ಮಾರ್ಚ್ ಅಂತ್ಯದವರೆಗೆ ಬರುವ ಬಿಲ್‌ಗಳ ಪಾವತಿಗಾಗಿ ಸುಮಾರು 150 ಕೋಟಿ ರೂ. ಪಾವತಿಬೇಕಿದೆ. ಎಲ್ಲಾ ಸೇರಿ ಒಟ್ಟಾರೆ 250 ಕೋಟಿ ರೂ ಅಗತ್ಯವಿದೆ, ಎಂದು ಖಂಡ್ರೆ ಪತ್ರದಲ್ಲಿ ಹೇಳಿದ್ದಾರೆ.

ಅನುಭವ ಮಂಟಪ ನಿರ್ಮಿಸಲು ಸರಕಾರದಿಂದ 742 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಳೆದ ಅಕ್ಟೊಬರ್ ತಿಂಗಳಲ್ಲಿಯೂ ಹಣ ಬಿಡುಗಡೆಯ ವಿಳಂಬದಿಂದ ಕಾಮಗಾರಿ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿತ್ತು.

74 ಕೋಟಿ ಬಿಲ್ ಪಾವತಿ ಬಾಕಿಯಿದ್ದರಿಂದ ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರ ಶಿರ್ಕೆ ನಿರ್ಮಾಣ ಕಂಪನಿ ಈ ವಿಷಯದಲ್ಲಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿತ್ತು.

‘ಕಾಮಗಾರಿ ಬಿಲ್ ಪಾವತಿಸಲು ವಿಳಂಬವಾಗಿರುವುದರಿಂದ ಪೂರೈಕೆದಾರರು ಸರಕು ಸಾಮಾಗ್ರಿಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಲಿದ್ದಾರೆ. ಇದು ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ಕಂಪೆನಿಯು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿತ್ತು.

ನಂತರ ಕಂದಾಯ ಇಲಾಖೆಯು ಕೋರಿಕೆ ಮೊತ್ತದ ಪೈಕಿ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, 24 ಕೋಟಿ ರೂ.ಗಳನ್ನು ಬಾಕಿ ಇರಿಸಿಕೊಂಡಿತ್ತು, ಎಂದು ದಿ ಫೈಲ್ ವರದಿ ಮಾಡಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
2 Comments
  • ಅಭಿವೃದ್ಧಿ ಕೆಲಸದಲ್ಲಿ ಮಾನ್ಯ ಉಸ್ತುವಾರಿ ಮಂತ್ರಿಗಳು, ಕಾಳಜಿ ವಹಿಸಿದ್ದು ತುಂಬ ಸಂತೋಷ. ಈಗ ಬೇಗ ಹಣ ಬಿಡುಗಡೆ ಮಾಡಿ, ಮುಂದಿನ ಎಲ್ಲ ಕೆಲಸಗಳು, ಸಾಂಗವಾಗಿ ಸಾಗಲಿ. ಗುತ್ತಿಗೆದಾರರ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಮಾಡಿದ ತಮ್ಮ ಕಾಳಜಿಗೆ ನಮ್ಮ, ಬಸವ ಭಕ್ತರ ಪರವಾಗಿ ಅನಂತ ಶರಣು ಶರಣಾರ್ಥಿಗಳು. ಎಲ್ಲರೂ ಶುಭವಾಗಲಿ.

Leave a Reply

Your email address will not be published. Required fields are marked *