ಗದಗ:
ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಶ್ರೀ ಜಗದ್ಗುರು ತೋಂಟದಾರ್ಯ ಮಠದ ೨೦೨೫ನೇ ಸಾಲಿನ ಜಾತ್ರಾ ಮಹೋತ್ಸವದ ಮಹಾಪ್ರಸಾದ ವಿತರಣೆ ಮತ್ತು ೨೦೨೬ನೇ ಸಾಲಿನ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆ ಗುರುವಾರ ನಡೆಯಿತು.
೨೦೨೬ನೇ ಸಾಲಿನ ಜಾತ್ರಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಾಜಿ ಸಚಿವರಾದ ಎಸ್.ಎಸ್ ಪಾಟೀಲ, ಎಂ.ಸಿ. ಐಲಿ, ಬಾಲಚಂದ್ರ ಭರಮಗೌಡರ, ಎಸ್.ಎಸ್. ಪಟ್ಟಣಶೆಟ್ಟಿ, ಗಂಗಾಧರ ಹಿರೇಮಠ, ಶೇಖಣ್ಣ ಕವಳಿಕಾಯಿ, ವಿರುಪಣ್ಣ ಬಳ್ಳೊಳ್ಳಿ, ಕೆ.ಎಚ್. ಬೇಲೂರು, ಕೆ.ಎಸ್. ಚಟ್ಟಿ, ಎಮ್. ಎಸ್. ಅಂಗಡಿ ಮುಂತಾದವರನ್ನೊಳಗೊಂಡ ಹಿರಿಯ ಭಕ್ತರ ಸಮಿತಿಯು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಈ ವರ್ಷದ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ವಿನಾಯಕ ಮಾನ್ವಿ, ಉಪಾಧ್ಯಕ್ಷರನ್ನಾಗಿ ಶಿವಯ್ಯ ನಾಲ್ವತ್ವಾಡಮಠ, ಸುಭಾಷ ಚನ್ನಪ್ಪನವರ, ಸುಧಾ ಹುಚ್ಚಣ್ಣವರ, ಕೋಶಾಧ್ಯಕ್ಷರಾಗಿ ವಿರುಪಾಕ್ಷಪ್ಪ ದಲಾಲಿ, ಸಹಕೋಶಾಧ್ಯಕ್ಷರಾಗಿ ಈರಣ್ಣ ಗಡಗಿ, ಕಾರ್ಯದರ್ಶಿಗಳಾಗಿ ಚೇತನ ಅಂಗಡಿ, ಸಹಕಾರ್ಯದರ್ಶಿಗಳಾಗಿ ಎಮ್. ಎಚ್. ಹೂಗಾರ, ಚಂದ್ರಶೇಖರ ಜಿ. ರಾಜೂರ, ಎಸ್.ಎಂ. ಪವಾಡಿಗೌಡ್ರ, ಸಂಘಟನಾ ಕಾರ್ಯದರ್ಶಿಯಾಗಿ ಉಮೇಶಗೌಡ ಪಾಟೀಲ, ಯಲ್ಲೂಸಾ ಮೋತಿಲಾಲಸಾ ಹಬೀಬ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿನಾಯಕ ಮಾನ್ವಿ ಮಾತನಾಡಿ, ಜಾತ್ರೆಯನ್ನು ಎಲ್ಲ ಭಕ್ತರ ಸಹಕಾರದೊಂದಿಗೆ ಯಶಸ್ವಿಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿ ಮಾತನಾಡುತ್ತಾ, ೨೦೨೫ ನೇ ಸಾಲಿನ ಜಾತ್ರಾ ಮಹೋತ್ಸವದ ಸರ್ವಪದಾಧಿಕಾರಿಗಳು ಅತ್ಯಂತ ಕ್ರಿಯಾಶೀಲರಾಗಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಅದೇ ರೀತಿ ೨೦೨೬ ನೇ ಸಾಲಿನ ಜಾತ್ರಾ ಮಹೋತ್ಸವವನ್ನು ಸರ್ವ ಸದ್ಭಕ್ತರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ವೈಶಿಷ್ಠ್ಯಪೂರ್ಣವಾಗಿ ಆಚರಿಸಬೇಕು.
ಜಾತ್ರೆಗಳು ಕೇವಲ ಸಾಂಪ್ರದಾಯಿಕ ಹಿನ್ನೆಲೆಯನ್ನು ಹೊಂದಿರದೆ, ಜನಸಾಮಾನ್ಯರ ಜ್ಞಾನದೀವಿಗೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಪುಸ್ತಕಗಳ ಬಿಡುಗಡೆ, ಕೃಷಿ ಚಟುವಟಿಕೆ, ನಾಡಿನ ಸಾಹಿತಿಗಳಿಂದ ಉಪನ್ಯಾಸ ಹೀಗೆ ಅನೇಕ ಮೌಲಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಹಾಕಿದ ಬಸವಪಥದಲ್ಲಿಯೇ ಈ ಜಾತ್ರೆಯು ಸಾಗಲಿದ್ದು, ಸಕಲ ಸದ್ಭಕ್ತರು ಜಾತ್ರಾ ಪದಾಧಿಕಾರಿಗಳೊಂದಿಗೆ ಜಾತ್ರೆಯನ್ನು ಅಥಪೂರ್ಣವಾಗಿ ಆಚರಿಸಬೇಕೆಂದು ಕರೆ ನೀಡಿದರು.
ಕಳೆದ ೨೦೨೫ನೇ ಸಾಲಿನ ಜಾತ್ರಾ ಸಮಿತಿಯ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಅವರು ಸರ್ವರನ್ನೂ ಸ್ವಾಗತಿಸಿದರು. ಎಂ.ಸಿ. ಐಲಿ ಅವರು ನಿರೂಪಣೆ ಮಾಡಿದರು. ಪ್ರಕಾಶ ಅಸುಂಡಿ, ಜೆ.ಕೆ. ಜಮಾದಾರ ಪ್ರಾಸ್ತಾವಿಕವಾಗಿ ಜಾತ್ರೆ ನಡೆದು ಬಂದ ಇತಿಹಾಸವನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಅನೇಕರು ಭಾಗವಹಿಸಿದ್ದರು.
