ರಾಯಚೂರಿನಲ್ಲಿ ಮೂರು ದಿನಗಳ ಲಿಂಗಾನುಸಂಧಾನ ಕಾರ್ಯಾಗಾರ

ರಾಯಚೂರು:

ನಗರದ ಬಸವ ಕೇಂದ್ರದಲ್ಲಿ ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಆಶ್ರಯದಲ್ಲಿ ಮೂರುದಿನದ “ಲಿಂಗಾನುಸಂಧಾನ” ಕಾರ್ಯಾಗಾರ ಆರಂಭಗೊಂಡಿತು.

ಮೊದಲ ದಿನದ ಕಾರ್ಯಕ್ರಮದಲ್ಲಿ ‘ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ’ ವಿಷಯ ಕುರಿತು ಚಿಕ್ಕೋಡಿಯ ಚಿಂತಕ, ವೈದ್ಯರಾದ ಡಾ.ದಯಾನಂದ ನೂಲಿ ಇಷ್ಟಲಿಂಗದ ಮಹತ್ವ ಮತ್ತು ಆರೋಗ್ಯದ ದೃಷ್ಟಿಯಿಂದ ಆಗುವ ಪರಿಣಾಮ, ಉಪಯೋಗಗಳ ಕುರಿತು ಸ್ಕ್ರೀನ್ ಮುಖಾಂತರ ಪ್ರಾತ್ಯಕ್ಷತೆಯೊಂದಿಗೆ ಉಪನ್ಯಾಸ ನೀಡಿದರು.

ಅಂಗವೇ ಲಿಂಗ, ಲಿಂಗವೇ ಅಂಗ ಹಾಗೂ ಅದರ ಸ್ವರೂಪ, ‘ಓಂ ನಮಃ ಶಿವಾಯ’ ಷಡಕ್ಷರಿ ಮಂತ್ರದ ಮಹತ್ವ ಜೊತೆಗೆ ಶಿವಯೋಗದ ಆರಂಭ ಹಾಗೂ ಲಿಂಗಪೂಜಾ ವಿಧಾನವನ್ನು ಮತ್ತು ಲಿಂಗತತ್ವಗಳ ಮಹತ್ವವನ್ನು ತಿಳಿಸಿಕೊಟ್ಟರು.

ಗುರು ಮುಟ್ಟಿ ಗುರುವಾಗುವುದೇ ನಿಜವಾದ ಲಿಂಗಾಯತ ಧರ್ಮ. ಕಾಯಕ ಜೀವಿಗಳಾದ ಲಿಂಗಾಯತ ಧರ್ಮಿಯರು ಲಿಂಗಾರ್ಚನೆ ಮಾಡಿ, ಸಕಲ ಪದಾರ್ಥಗಳನ್ನು ಲಿಂಗಕ್ಕರ್ಪಿಸಿ ಲಿಂಗ ಬೋಗೋಪಭೋಗಿಗಳಾಗಿರುವುದರಿಂದ ಅವರು ಪರಶಿವನ ಸ್ವರೂಪವೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಡಾ. ಸರ್ವಮಂಗಳಾ ಸಕ್ರಿ ಅವರು ರಚಿಸಿದ ‘ಬಯಲ ಭಿತ್ತಿಯಲಿ ಶರಣರ ತತ್ವಶೋಧ’ ಪುಸ್ತಕವನ್ನು ದಯಾನಂದ ನೂಲಿ ಅವರು ಹಾಗೂ ಡಾ. ದಯಾನಂದ ನೂಲಿ ಅವರು ರಚಿಸಿದ ‘ಮರುಳಶಂಕರ ದೇವರು ಅನುಭಾವಯಾತ್ರೆ’ ಗ್ರಂಥವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಅವರು ಲೋಕಾರ್ಪಣೆ ಮಾಡಿದರು. ಪುಸ್ತಕಗಳ ಪರಿಚಯವನ್ನು ಪಿ.ರುದ್ರಪ್ಪ ಅವರು ಮಾಡಿದರು.

ಇಂದು ಜನರಲ್ಲಿ ಬಸವಣ್ಣನವರ ಬಗ್ಗೆ, ಶರಣರ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಶರಣತತ್ವದ ಅಧ್ಯಯನದಿಂದ ಅನುಭಾವಕ್ಕೆ ಹೋಗಬೇಕಾದರೆ ಪ್ರತಿದಿನ ಅಂತರ್ಜಾಲದಲ್ಲಿ ನಡೆಯುವ ‘ಸ್ವಾನುಭಾವ ನೆಲೆ’ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ರುದ್ರಪ್ಪ ಹೇಳಿದರು.

ಲೇಖಕಿ ಡಾ. ಸರ್ವಮಂಗಳಾ ಸಕ್ರಿ ಅವರು ಮಾತನಾಡಿ, ಬಸವ ಕೇಂದ್ರದ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಜಯಶ್ರೀ ಮಹಾಜನಶೆಟ್ಟಿ ಅವರು ಡಾ. ದಯಾನಂದ ನೂಲಿ ಅವರ ಪರಿಚಯ ಪತ್ರವನ್ನು ಓದಿದರು. ಇದೇ ಸಂದರ್ಭದಲ್ಲಿ ಪುಸ್ತಕ ರಚನೆಯ ಕರ್ತೃಗಳಾದ ಡಾ.ದಯಾನಂದ ನೂಲಿ, ಡಾ.ಸರ್ವಮಂಗಳಾ ಸಕ್ರಿ, ಪ್ರಸಾದ ದಾಸೋಹಿಗಳಾದ ಅಮರೇಗೌಡ ಪಾಟೀಲ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹರವಿ ನಾಗನಗೌಡರ ಹಾಗೂ ಡಾ.ಸಿ.ವ್ಹಿ.ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ರಾಚನಗೌಡ ಕೋಳೂರು ವಹಿಸಿದ್ದರು.

ವಚನ ಪ್ರಾರ್ಥನೆಯನ್ನು ಸರಿತಾ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಮಸ್ತ ಶರಣ, ಶರಣೆಯರು ಉಪಸ್ಥಿತರಿದ್ದರು. ವಚನದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *