ಚನ್ನಬಸವೇಶ್ವರ ಗುರುಕುಲ ಉಚಿತ ಶಿಕ್ಷಣಕ್ಕೆ ಪ್ರವೇಶ ಪರೀಕ್ಷೆ

ಬಸವ ಮೀಡಿಯಾ
ಬಸವ ಮೀಡಿಯಾ

ಪ್ರತಿ ವರ್ಷ 30 ಮಕ್ಕಳಿಗೆ ಊಟ, ವಸತಿ ಸಹಿತ ಉಚಿತ ಶಿಕ್ಷಣ

ಭಾಲ್ಕಿ:

ಕನ್ನಡ ಮಾಧ್ಯಮದ ಶಿಕ್ಷಣ ಉತ್ತೇಜನದ‌ ಜತೆಗೆ 6 ರಿಂದ 10ನೇ ತರಗತಿವರೆಗೆ ಬಡ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು‌ ತಿಳಿಸಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಇಂದಿನ ಆಧುನಿಕ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣದ ಭರಾಟೆಯಲ್ಲಿ ಕನ್ನಡ ಮಾಧ್ಯಮದ ಶಿಕ್ಷಣ ಕುಸಿಯುತ್ತಿದೆ ಎನ್ನುವ ಆತಂಕ ಎಲ್ಲರಲ್ಲಿ ಕಾಡುತ್ತಿದೆ. ಇಂತಹ ವ್ಯವಸ್ಥೆಯ ಮಧ್ಯೆ ಕನ್ನಡ ಮಾಧ್ಯಮ ಶಿಕ್ಷಣದ ಮೌಲ್ಯ ಎತ್ತಿ ಹಿಡಿಯಲು ಕಳೆದ ಎರಡು ವರ್ಷಗಳಿಂದ ಪ್ರತಿವರ್ಷ 30 ಮಕ್ಕಳಿಗೆ ಉಚಿತ ಶಿಕ್ಷಣ, ಐಐಟಿ, ನೀಟ್ ನಂತಹ ತರಬೇತಿ ಜತೆಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಹಾಗಾಗಿ 2026ನೇ ಸಾಲಿನಲ್ಲಿ 30 ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಅರ್ಜಿ ಆಹ್ವಾನಿಸಿ ಪರೀಕ್ಷೆ ಏರ್ಪಡಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಕ್ರಮವಾಗಿ ಮೊದಲ 30 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳು 6 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ 5 ವರ್ಷ ಉಚಿತ ಶಿಕ್ಷಣ, ಕೋಚಿಂಗ್, ಊಟ, ವಸತಿ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಫೆ.15 ಮತ್ತು 22 ರಂದು ಪರೀಕ್ಷೆ: ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ 6 ರಿಂದ 10ನೇ ತರಗತಿ ವರೆಗೆ ಉಚಿತ ಶಿಕ್ಷಣ ಕಲ್ಪಿಸಲು ಚನ್ನಬಸವೇಶ್ವರ ಗುರುಕುಲದಲ್ಲಿ ಫೆ.15 ಮತ್ತು 22 ರಂದು ಭಾನುವಾರ ಪರೀಕ್ಷೆ ಏರ್ಪಡಿಸಲಾಗಿದೆ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು‌ ತಿಳಿಸಿದರು.

ಗಡಿಭಾಗದಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು‌ ವಿದ್ಯಾದೇಗುಲ ತೆರೆದು ಶಿಕ್ಷಣದ ಪಾವಿತ್ರತತೆ ಕಾಪಾಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ ಅಷ್ಟೇ ಅಲ್ಲದೇ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ನಮ್ಮ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣದಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ಕನ್ನಡ ಮಾಧ್ಯಮದ ಶಿಕ್ಷಣ ತನ್ನದೇ ಆದ ಮೌಲ್ಯ ಹೊಂದಿದೆ. ಹಾಗಾಗಿ ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಈ ಸೌಲಭ್ಯ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು.

5 ಸಾವಿರ ಮಕ್ಕಳು ನೋಂದಣಿ: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಪಾಲಕರು ಉತ್ಸುಕತೆ ತೋರಿದ್ದಾರೆ. ಈಗಾಗಲೇ ಪರೀಕ್ಷೆ ಬರೆಯಲು 5 ಸಾವಿರ ಮಕ್ಕಳು ತಮ್ಮ‌ ಹೆಸರು ನೋಂದಾಯಿಸಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದರು.

ಪರೀಕ್ಷೆಯಲ್ಲಿ 100 ಅಂಕದ ಬಹು ಆಯ್ಕೆ ಪ್ರಶ್ನೆಗಳು ಇರಲಿದ್ದು ಕನ್ನಡ 20, ಇಂಗ್ಲಿಷ್ 20, ಗಣಿತ 30, ಪರಿಸರ ಅಧ್ಯಯನ 20 ಮತ್ತು ಮಾನಸಿಕ ಸಾಮರ್ಥ್ಯ ವಿಷಯ 10 ಅಂಕಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಹಾಲಿಂಗ ಸ್ವಾಮೀಜಿ, ಉದ್ಯಮಿ ಸೋಮನಾಥಪ್ಪ ಅಷ್ಟೂರೆ, ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪತ್ರಕರ್ತ ಜಯರಾಜ ಪಾತ್ರೆ ಇದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *