ಮುದ್ದೇಬಿಹಾಳ
ಕರ್ನಾಟಕದ ಸಾಮಾಜಿಕ ಮತ್ತು ರಾಷ್ಟ್ರೀಯ ಚಳುವಳಿಗಳ ಇತಿಹಾಸದಲ್ಲಿ ಅಮರ ಹೆಸರು ಎಂದರೆ ಹರ್ಡೇಕರ ಮಂಜಪ್ಪ. ಸಮಾಜ ಸುಧಾರಕ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಜಕೀಯ ಚಿಂತಕರಾಗಿ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. “ಕರ್ನಾಟಕದ ಗಾಂಧಿ” ಎಂಬ ಗೌರವಕ್ಕೆ ಪಾತ್ರರಾದ ಮಂಜಪ್ಪನವರು 1889ರ ಫೆಬ್ರವರಿ 18ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಅಲ್ಪ ಶಿಕ್ಷಣ ಪಡೆದಿದ್ದರೂ ಸ್ವಯಂ ಪ್ರಯತ್ನದಿಂದ ಇಂಗ್ಲೀಷ್ ಕಲಿತು, ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು.
“ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ
ಕಾಯವ ನಿಶ್ಚಯಿಸದೆ!”
1906ರಲ್ಲಿ “ಧನುರ್ಧಾರಿ”ಎಂಬ ಸಾಪ್ತಾಹಿಕ ಪತ್ರಿಕೆಯನ್ನು ಆರಂಭಿಸಿ ಸಾಮಾಜಿಕ ಜಾಗೃತಿ ಮೂಡಿಸಿದರು. ಸ್ವದೇಶಿ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು, ಬಸವಣ್ಣನವರ ಸಮಾನತೆ, ಅಹಿಂಸೆ ಮತ್ತು ಸತ್ಯದ ತತ್ವಗಳಿಂದ ಪ್ರೇರಿತರಾದರು. ಬಸವ ತತ್ವಗಳ ಪ್ರಸಾರಕ್ಕಾಗಿ ಅನೇಕ ಕಿರುಪುಸ್ತಕಗಳನ್ನು ರಚಿಸಿ, ಲಿಂಗಾಯತ ಸಮಾಜದಲ್ಲಿ ಏಕತೆ ಬೆಳೆಸಲು ಶ್ರಮಿಸಿದರು.
“ಹೊತ್ತಾರೆ ಎದ್ದು ಶಿವಲಿಂಗದೇವನ
ದೃಷ್ಟಿ(ಯಾ)ರೆ ನೋಡದವನ ಸಂಸಾರವೇನವನ?
ಬಾಳುವೆಣನ ಬೀಳುವೆಣನ ಸಂಸಾರವೇನವನ?
ನಡೆವೆಣನ ನುಡಿವೆಣನ ಸಂಸಾರವೇನವನ?
ಕರ್ತೃ ಕೂಡಲಸಂಗಮದೇವಾ,
ನಿಮ್ಮ ತೊತ್ತುಗೆಲಸವ ಮಾಡದವನ ಸಂಸಾರವೇನವನ?!”
1913ರಲ್ಲಿ ದಾವಣಗೆರೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ‘ಬಸವ ಜಯಂತಿ’ ಆಚರಣೆಯನ್ನು ಆರಂಭಿಸಿದವರು ಇವರೇ. ಈ ಮೂಲಕ ಬಸವಣ್ಣನವರ ಸಂದೇಶವನ್ನು ಜನಮಾನಸಕ್ಕೆ ತಲುಪಿಸುವ ಐತಿಹಾಸಿಕ ಹೆಜ್ಜೆಯನ್ನು ಇಟ್ಟರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ‘ಬಸವೇಶ್ವರ ಸೇವಾ ದಳ’ ರಚಿಸಿ ಮಹತ್ವದ ಪಾತ್ರವಹಿಸಿದರು ಹಾಗೂ ಮಹಾತ್ಮ ಗಾಂಧೀಜಿಗೆ ಬಸವಣ್ಣನವರ ಕುರಿತ ಪುಸ್ತಕವನ್ನು ಸಮರ್ಪಿಸಿದರು.
ಖಾದಿ ಪ್ರಚಾರಕ್ಕಾಗಿ ‘ಖಾದಿ ವಿಜಯ’ಮಾಸಪತ್ರಿಕೆ ನಡೆಸಿ, ‘ಖಾದಿಯ ವಿಜ್ಞಾನ’ಗ್ರಂಥ ರಚಿಸಿದರು. ಹರಿಹರ ಸಮೀಪ ತುಂಗಭದ್ರಾ ನದಿತೀರದಲ್ಲಿ “ಸತ್ಯಾಗ್ರಹ ಆಶ್ರಮ”ಸ್ಥಾಪಿಸಿ, ಸಾತ್ವಿಕ ಹಾಗೂ ಶಿಸ್ತಿನ ಜೀವನ ನಡೆಸಿದರು. ಬ್ರಹ್ಮಚರ್ಯ ವ್ರತ ಕೈಗೊಂಡು, ಸರಳ ಜೀವನದ ಮೂಲಕ ಸಮಾಜಕ್ಕೆ ಮಾದರಿಯಾದರು.
“ಸಂಸಾರವೆಂಬುದೊಂದು ಗಾಳಿಯ ಸೊಡರು!
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ”
‘ಗಾಂಧಿ ಚರಿತ್ರೆ’, ‘ಬುದ್ಧ ಚರಿತ್ರೆ’, ‘ಬಸವ ಚರಿತ್ರೆ’, ‘ಬಸವ ಬೋಧಾಮೃತ’ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದರು. 1947ರ ಜನವರಿ 3ರಂದು ಅವರು ನಿಧನರಾದರೂ, ಅವರ ಚಿಂತನೆಗಳು ಇಂದಿಗೂ ಸಮಾಜದಲ್ಲಿ ಪ್ರೇರಣೆಯ ಜ್ಯೋತಿಯಾಗಿ ಬೆಳಗುತ್ತಿವೆ.
“ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,
ಕೂಡಲಸಂಗಮದೇವಾ”
ಸಮಾನತೆ, ಸತ್ಯ, ಅಹಿಂಸೆ ಮತ್ತು ಸಮಾಜಸೇವೆ – ಈ ನಾಲ್ಕು ಸ್ತಂಭಗಳ ಮೇಲೆ ಜೀವನ ಕಟ್ಟಿದ ಹರ್ಡೇಕರ ಮಂಜಪ್ಪ ಅವರು ‘ಬಸವ ಜಯಂತಿ’ಸಾರ್ವಜನಿಕ ಆಚರಣೆಯ ಮೂಲಕ ಬಸವ ತತ್ವಗಳಿಗೆ ನವಚೈತನ್ಯ ನೀಡಿದ ಮಹನೀಯರು. ಅವರ ಸ್ಮರಣೆ ಸಮಾಜಕ್ಕೆ ಸದಾ ದಾರಿದೀಪವಾಗಿರುತ್ತದೆ.
