ಕೆಎಲ್‌ಇ ನೂತನ ಕಾರ್ಯಾಧ್ಯಕ್ಷರಾಗಿ ಅಮಿತ ಪ್ರಭಾಕರ ಕೋರೆ ಆಯ್ಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಡಾ. ಪ್ರಭಾಕರ ಕೋರೆಯವರ ಹಠಾತ್ ನಿರ್ಗಮನದಿಂದ ತೆರವಾಗಿದ್ದ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ (ಕೆಎಲ್‌ಇ) ಕಾರ್ಯಾಧ್ಯಕ್ಷ ಹುದ್ದೆಗೆ ಅವರ ಪುತ್ರ ಅಮಿತ ಕೋರೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಅಮಿತ ಕೋರೆ ಅವರನ್ನು ಸಂಸ್ಥೆಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಿಸಲಾಯಿತು. ನಾಲ್ಕು ದಶಕಗಳ ಕಾಲ ಕಾರ್ಯಾಧ್ಯಕ್ಷರಾಗಿದ್ದ ಪ್ರಭಾಕರ ಕೋರೆ ಅವರನ್ನು ಗೌರವಾನ್ವಿತ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.

ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಜಂಟಿ ಕಾರ್ಯದರ್ಶಿ ಡಾ.ಎಸ್.ಎಸ್.ಜಲಾಲಪುರೆ, ಡಾ. ಪಿ.ಆರ್.ಕಡಕೋಳ ಹಾಗೂ ಅಧಿಕಾರಿ ವರ್ಗದವರು ಇದ್ದರು.

46ರ ಹರೆಯದ ಅಮಿತ 2010ರಿಂದ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಿದಾನಂದ ಬಸಪ್ರಭು ಕೋರೆ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ, ನವದೆಹಲಿಯ ನ್ಯಾಷನಲ್‌ ಫೆಡರೇಶನ್‌ ಆಫ್‌ ಕೋ-ಆಪರೇಟಿವ್‌ ಶುಗರ್‌ ಫ್ಯಾಕ್ಟರಿಸ್‌ನ ಉಪಾಧ್ಯಕ್ಷರಾಗಿ, ಶಿವಶಕ್ತಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ, ಹರ್ಮ್ಸ್‌ ಡಿಸ್ಟಿಲ್ಲರಿ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿ, ಇನಾಂದಾರ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಠಾತ್ ನಿರ್ಗಮನ

ಕಳೆದ ತಿಂಗಳು ನಡೆದ ಕೆಎಲ್‌ಇ ಆಡಳಿತ ಮಂಡಳಿ ಚುನಾವಣೆಯಿಂದ ಡಾ. ಪ್ರಭಾಕರ ಕೋರೆ ಅನೀರೀಕ್ಷಿತವಾಗಿ ಹಿಂದಕ್ಕೆ ಸರಿದಿದ್ದರು.

ಫೆಬ್ರವರಿ 7 ಹುಬ್ಬಳ್ಳಿಯಲ್ಲಿ, ಫೆಬ್ರವರಿ 8ರಂದು ಬೆಳಗಾವಿಯಲ್ಲಿ ಮತದಾನ ನಿಗದಿಯಾಗಿತ್ತು. ಶುಕ್ರವಾರ (ಜನವರಿ 23) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಈ ಹಿಂದೆ ಇದ್ದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರು ನಾಮ‍ಪತ್ರ ಸಲ್ಲಿಸಿದರೂ, ಪ್ರಭಾಕರ ಕೋರೆ ಅವರು ಮಾತ್ರ ನಾಮಪತ್ರ ಸಲ್ಲಿಸಲು ನಿರಾಕರಿಸಿದರು.

ಆಡಳಿತ ಮಂಡಳಿಯ ಉಳಿದ 14 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರ ಮಗಳು ಡಾ.ಪ್ರೀತಿ ದೊಡವಾಡ, ಪುತ್ರ ಅಮಿತ್ ಕೋರೆ ಮಂಡಳಿಯಲ್ಲಿ ಮುಂದುವರಿದಿದ್ದರು.

ಇತರ ಪದಾಧಿಕಾರಿಗಳು: ಮಹಾಂತೇಶ ಶಿವಾನಂದ ಕೌಜಲಗಿ (ಅಧ್ಯಕ್ಷ), ಬಸವರಾಜ ಶಿವಲಿಂಗಪ್ಪ ತಟವಟಿ (ಉಪಾಧ್ಯಕ್ಷ), ಪ್ರವೀಣ ಅಶೋಕ ಬಾಗೇವಾಡಿ, ಡಾ.ಪ್ರೀತಿ ಕರಣ್‌ ದೊಡವಾಡ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಲ್ಲಿಕಾರ್ಜುನ ಚನಬಸಪ್ಪ ಕೊಳ್ಳಿ, ವಿಜಯ ಶ್ರೀಶೈಲಪ್ಪ ಮೆಟಗುಡ್‌, ಮಂಜುನಾಥ ಶಂಕರಪ್ಪ ಮುನವಳ್ಳಿ, ಜಯಾನಂದ ಉರೂಫ್‌ ರಾಜು ಮಹಾದೇವಪ್ಪ ಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ಡಾ.ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ, ಅನಿಲ ವಿಜಯಬಸಪ್ಪ ಪಟ್ಟೇದ (ಆಡಳಿತ ಮಂಡಳಿಯ ಸದಸ್ಯರು)

1916ರಲ್ಲಿ ಸ್ಥಾಪನೆಗೊಂಡ ಕೆಎಲ್‌ಇ ಸಂಸ್ಥೆ ದೇಶದ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸೇವಾ ಸಂಸ್ಥೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಶಾಲೆಗಳು, ಕಾಲೇಜುಗಳು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ 317ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *