ಬೆಳಗಾವಿ:
ಶರಣರ ನಡೆ-ನುಡಿ ಬದುಕು ಪಾರದರ್ಶಕವಾಗಿತ್ತು. ಅವರ ಅನುಭಾವದ ವಚನ ಸಾಹಿತ್ಯವು ಮೌಲ್ಯಗಳ ಕಣಜವಾಗಿತ್ತು ಎಂದು ಡಾ.ಸುರೇಶ ಉಕ್ಕಲಿ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಎಸ್ ವತಿಯಿಂದ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶರಣರು ಜಗದ ಅಜ್ಞಾನವನ್ನು ಕಳೆದು ಕಲ್ಯಾಣ ರಾಜ್ಯ ನಿರ್ಮಿಸುವ ಕನಸು ಕಟ್ಟಿಕೊಂಡಿದ್ದರು. ವಿದ್ಯಾರ್ಥಿಗಳು ವಚನಗಳನ್ನು ಓದಿಕೊಳ್ಳುತ್ತಾ ತಮ್ಮ ಜೀವನ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಎನ್.ಆರ್.ಪಾಟೀಲ ಅವರು ಅಧ್ಯಕ್ಷೀಯ ಮಾತುಗಳನ್ನು ಆಡುತ್ತ, ವಚನ ಸಾಹಿತ್ಯವು ಮಾನವ ಜನಾಂಗವನ್ನು ವೈಚಾರಿಕ ಯುಗದತ್ತ ಕರೆದುಕೊಂಡು ಹೋಗುವುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ವೈಚಾರಿಕ ವೈಜ್ಞಾನಿಕ ವಿಚಾರಗಳುಳ್ಳ ವಚನಗಳನ್ನು ಓದಿಕೊಳ್ಳುವುದರ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದರು. ಗೌರವ ಉಪಸ್ಥಿತರಾಗಿ ಡಾ.ಜಯಶೀಲ.ಜಿ. ಭಾಗವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್.ಗಂಗನಳ್ಳಿ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತ, ಮೌಲ್ಯಗಳನ್ನು ತಿಳಿಹೇಳುವ ಈ ವಿಶೇಷ ಉಪನ್ಯಾಸಕ್ಕೆ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಆಲಿಸಿ ಬದುಕು ರೂಪಿಸಿಕೊಳ್ಳಬೇಕೆಂದರು.
ಡಾ.ಅ.ಬ.ಇಟಗಿ ಸ್ವಾಗತ ಹಾಗೂ ಅತಿಥಿಗಳ ಪರಿಚಯ ಮಾಡಿದರು. ಆಂಗ್ಲ ಉಪನ್ಯಾಸಕರಾದ ಡಾ.ಇರ್ಫಾನ್ ಶಿಲ್ಲೆದಾರ ಹಾಗೂ ಹಿಂದಿ ಉಪನ್ಯಾಸಕಿಯರಾದ ಡಾ.ಶಾಕಿರಾಬಾನು ಕಿತ್ತೂರ ಡಾ.ಹನುಮಂತ ಚುಳಕಿ, ಡಾ.ನಾಗೇಶ ಜಿ. ಭಾಗವಹಿಸಿದ್ದರು.
ಪ್ರಗತಿ ಮುತ್ತೂರು ಪ್ರಾರ್ಥನೆ ಸಲ್ಲಿಸಿದರು. ಡಾ.ಮಂಜುನಾಥ ಪಾಟೀಲ ವಂದಿಸಿದರು. ನಿರೂಪಣೆಯನ್ನು ಅಕ್ಷತಾ ಮೇತ್ರಿ ನಡೆಸಿಕೊಟ್ಟರು.
