ಒಂದಾಗಿ ಬಾಳುವುದು ಲಿಂಗಾಯತ ಧರ್ಮದ ಮೂಲ ಸಿದ್ಧಾಂತ: ಯಡಿಯೂರಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

‘ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿ ಮಕ್ಕಳೆಂದು ಬಾಳಬೇಕು’

ಗುಂಡ್ಲುಪೇಟೆ

ಲಿಂಗಾಯತ ಧರ್ಮದಲ್ಲಿ ಜಾತಿ, ಮತ, ಭೇದವನ್ನು ಮರೆತು ಎಲ್ಲರೂ ಒಂದಾಗಿ ಬಾಳುವುದು ಮೂಲ ಸಿದ್ಧಾಂತವಾಗಿದೆ, ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಸದ್ಗುರು ಷಟ್‌ಸ್ಥಲ ಚಕ್ರವರ್ತಿ ಸಿದ್ಧಮಲ್ಲಿಕಾರ್ಜುನ ಸ್ವಾಮಿಗಳ 76ನೇ ವಾರ್ಷಿಕ ಆರಾಧನೆ ಹಾಗೂ ಸೋಮಹಳ್ಳಿ ಶಿಲಾಮಠದ ಆದಿಗುರು ಗಂಗಾಧರೇಶ್ವರ ಅವರ ಶಿಲಾಮಠದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಇಂದು ಅಲ್ಲೋಲ ಕಲ್ಲೋಲ ಘಟನೆಗಳು ನಡೆಯುತ್ತಿದೆ. ಯಾವ ಸಮಯದಲ್ಲಿ ಏನಾಗುತ್ತದೆ ಎಂಬ ಅನಿಶ್ಚಿತತೆ ಇರುವುದರಿಂದ ಎಲ್ಲರೂ ಒಟ್ಟಾಗಿ ಬದುಕಬೇಕು. ಹಿಂದೂ ಮುಸ್ಲಿಂ ಕ್ರೈಸ್ತ ಬೇರೆ ಎಂದು ನಾನು ಎಂದೂ ಭಾವಿಸಿಲ್ಲ. ಎಲ್ಲರು ಒಂದೇ ತಾಯಿ ಮಕ್ಕಳೆಂದು ಬಾಳಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಆ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.

ಸೋಮಹಳ್ಳಿ ಮಠವು ಸುಮಾರು 800 ವರ್ಷಗಳ ಪ್ರಾಚಿನ ಇತಿಹಾಸ ಹೊಂದಿದೆ. ಇಲ್ಲಿನ ಮೂಲಗುರು ಶ್ರೀಗುರು ಗಂಗಾಧರೇಶ್ವರ ಸ್ವಾಮಿಗಳು ತಪಸ್ಸಿನ ಚೈತನ್ಯವನ್ನು ಹೊಂದಿದ್ದರು ಎಂದು ಅಭಿವ್ಯಕ್ತಪಡಿಸಿದರು.

ಧರ್ಮ ಉಳಿಸುವ ಕಾರ್ಯದಲ್ಲಿ ತೊಡಗಿರುವ ಮಠಮಾನ್ಯಗಳಿಗೆ ಸಾಧ್ಯವಾದಷ್ಟು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಸೋಮಹಳ್ಳಿ ಮಠವು ಅನ್ನ, ಅರಿವು, ಸಂಸ್ಕೃತಿ ನೀಡಿ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದೆ ಎಂದು ಬಣ್ಣಿಸಿದರು.

ಈ ವೇಳೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣ, ದಾಸರು ಮುಂತಾದವರಿಂದ ಭವ್ಯ ಪರಂಪರೆ ಹೊಂದಿದ ನಾಡು ಈ ಪೂಣ್ಯ ಭೂಮಿ ಎಂದರು.

ಶಾಸಕ ಎಚ್.ಎಂ. ಗಣೇಶ ಪ್ರಸಾದ್ ಮಾತನಾಡಿ, ₹475 ಕೋಟಿ ಅನುದಾನದಲ್ಲಿ ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ, ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದ ಮಹಾಂತ ಸ್ವಾಮೀಜಿ, ಬಾಲರಾಜು, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್ ಸೇರಿದಂತೆ ಸೋಮಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಮತ್ತು ಭಕ್ತರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
3 Comments
  • ಮಾನ್ಯ ಎಡೆಯೂರಪ್ಪನಲರು ಆರ್ ಎಸ್ ಎಸ್ ನಿಯಂತ್ರಣದಲ್ಲಿರುವ ಬಿಜೆಪಿಯಲ್ಲಿದ್ದುಕ್ಕೊಂಡು ಇವರು ಲಿಂಗಾಯತರ ಬಗ್ಗೆ ಮಾತನಾಡಲು ನಿಮ್ಮ ಆಸ್ಮಿತೆಯನ್ನು ಹೊಂದಿದ್ದಾರೆಯೆ? ಈ ಸಂಘಪರಿವಾರದ ಕಪಿಮುಸ್ಟಿಯಿಂದ ಹೊರಬರಲು ಇವರಿಗೆ ಸಾಧ್ಯವಿದೆಯೆ?

  • 2018ರಲ್ಲಿ ಬಸವಣ್ಣನ ಧರ್ಮ ಮಾನ್ಯತೆಗೆ ಅಡ್ಡಿ ಪಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ತಪ್ಪಿಗೆ ಲಿಂಗಾಯತರೇಕೆ ನಂಬಬೇಕು ಇಂತಹ ಗೋಸುಂಬೆಗಳನ್ನು? !

  • Man. Please come out of the clutches of RSS and start wearing Vibhuthi. Be responsible.

Leave a Reply

Your email address will not be published. Required fields are marked *