ಪ್ರತಿಯೊಬ್ಬ ವಿರಕ್ತಮಠದವರು ಬಸವಧರ್ಮ ಪ್ರಚಾರ ತಂಡಗಳನ್ನು ತಪ್ಪದೇ ಈಗಿಂದೀಗಲೇ ರಚಿಸಬೇಕಾಗಿದೆ
ಚಿತ್ರದುರ್ಗ
ಲಿಂಗಾಯತ ಧರ್ಮ ಉಳಿದು ಬೆಳೆದು ಗಟ್ಟಿಗೊಳ್ಳಬೇಕಾದರೆ ಬಸವಧರ್ಮದ ಪೀಠಗಳು (ವಿರಕ್ತ ಮಠ) ತುಂಬಾ ಜಾಗರೂಕರಾಗಬೇಕಿದೆ. ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಕನಿಷ್ಠ ವರ್ಗಗಳು ಮನುಷ್ಯರಂತೆ ಬಾಳಬೇಕಾದರೆ ಬಸವಾದಿ ಶರಣರು ಭೂಮಿಗೆ ಬರಬೇಕಾಯಿತು.
ಜಗತ್ತಿನ ಇತಿಹಾಸದಲ್ಲೇ ಹನ್ನೆರಡನೇ ಶತಮಾನದ ಸಮಗ್ರ ಹಾಗೂ ಸರ್ವತೋಮುಖ ಕ್ರಾಂತಿ ಸಮಾಜದಲ್ಲಿ ಸರ್ವಸಮಾನತೆಯನ್ನು ತಂದುಕೊಟ್ಟಿತು. 850 ವರ್ಷಗಳಿಂದ ಸಮಾನತೆಯನ್ನು ಜಾಗೃತಗೊಳಿಸಿದ ಕೀರ್ತಿ ಬಸವತತ್ವನಿಷ್ಟರಿಗೆ ಸಲ್ಲುತ್ತದೆ.
ಬದುಕಿನ ಅನುಭವದ ಅನುಭಾವಾಮೃತವನ್ನು, ಸಾಕ್ಷಿಸಾಹಿತ್ಯವಾದ ವಚನ ಸಾಹಿತ್ಯದ ದಾರ್ಶನಿಕ ಶಕ್ತಿಯನ್ನು ಸಂಕಷ್ಟ ಸಮಾಜಕ್ಕೆ ತುಂಬಿ ಬಲಿಷ್ಟಗೊಳಿಸಲಾಗುತ್ತಿದೆ. ಈ ಪ್ರಯತ್ನಕ್ಕೆ ಪೂರಕವಾಗಿ ಭಾರತದ ಸಂವಿಧಾನ ರಕ್ಷಣಾ ಕವಚವಾಗಿದೆ. ಹೀಗಿರುವಾಗ ಕನ್ನೇರಿ ಸ್ವಾಮಿಯಂತಹ ಮಹಾನುಭಾವರು ಮತ್ತೆ ವರ್ಣಾಶ್ರಮದ ಪದ್ಧತಿಯನ್ನು ನೆನಪಿಸುವುದರ ಜೊತೆಗೆ ಕಡ್ಡಾಯಗೊಳಿಸುವ ಕ್ರೌರ್ಯತನವನ್ನು ಪ್ರದರ್ಶಿಸಿದ್ದಾರೆ.
ಸಂವಿಧಾನ, ಸಮಾನತೆಯ ಹಕ್ಕನ್ನು ಕೊಡುವುದಲ್ಲದೆ ಕಾಯ್ದುಕೊಂಡು ಬರುತ್ತಿದೆ. ಹೀಗಿರುವಾಗ ಸಮಾನತೆಯ ವಿರುದ್ಧ ಮಾತನಾಡಿದ ಯಾರಾದರಾಗಲಿ ಅವರಿಗೆ ಸಾಂವಿಧಾನಿಕ ವಿಧಿಯ ನಿಯಮದ ಪ್ರಕಾರ ಶಿಕ್ಷೆಯಾಗಬೇಕು.
ವಚನಕಾರರು ಧರ್ಮವನ್ನು ಉಳಿಸಿ ಬೆಳೆಸುವುದಕ್ಕೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ವಚನ ಸಾಹಿತ್ಯವನ್ನು ಉಳಿಸಲು ದಕ್ಷಿಣ ಭಾರತದ ತುಂಬ ಅಲೆದು ಗುಡ್ಡ-ಗವಾರಗಳಲ್ಲಿ, ಗವಿಗಳಲ್ಲಿ ಹಗಲು ರಾತ್ರಿ ಎನ್ನದೆ ಯಾವುದೇ ವ್ಯವಸ್ಥಿತ ಅನುಕೂಲಗಳಿಲ್ಲದೆ ಮಕ್ಕಳು, ವೃದ್ಧರು ಎನ್ನದೆ ಅನ್ನ ಆಹಾರಗಳಿಲ್ಲದೆ ಗೆಡ್ಡೆ ಗೆಣಸನ್ನು ತಿನ್ನುತ್ತ, ಕುಡಿಯಲು ನೀರು ದೊರಕದೆ ವಿಶ್ರಾಂತಿಗೆ ಸ್ಥಳವಿಲ್ಲದೆ ಪಟ್ಟ ಶ್ರಮದ ಪ್ರತಿಫಲವೇ ಇಂದು ದೊರಕಿದ ವಚನ ಸಾಹಿತ್ಯ.
ಇದನ್ನು ಕ್ರೋಢೀಕರಿಸಲು ಶರಣ ಫ.ಗು. ಹಳಕಟ್ಟಿಯವರು ಶ್ರಮಿಸಿದ ರೀತಿ, ಪೂಜ್ಯ ಲಿಂಗಾನಂದ ಅಪ್ಪಾಜಿಯವರ ನಿರಂತರ ಪ್ರವಚನದ ಪರಿಶ್ರಮ, ಪೂಜ್ಯ ಮಾತೆ ಮಹಾದೇವಿಯವರ ಸಂಘಟನಾತ್ಮಕ ಧರ್ಮ ಸಂಸ್ಕಾರಗಳು, ಭಾಲ್ಕಿ, ಇಳಕಲ್ಲ, ಗದಗು, ಪಾಂಡೋಮಟ್ಟಿಯಂಥ ಗುರುಪೀಠಗಳು ಕಣ್ಗಾವಲಿನಂತೆ ಕಾಯುತ್ತಿದ್ದು, ನಿಜಗುಣಾನಂದ ಶ್ರೀಗಳಂಥ ಕ್ರಾಂತಿಕಾರಿ ಭಾಷಣಕಾರರು ಇನ್ನು ಅನೇಕ ಸ್ವಾಮೀಜಿಗಳು, ಎಂ.ಎಂ. ಕಲಬುರ್ಗಿಯಂಥ ಸಾಹಿತಿಗಳು ವೀರಯೋಧರಂತೆ ಧರ್ಮರಕ್ಷಣೆಗೆ ನಿಂತರೂ ದುರುಳರ ಕಾಟ ತಪ್ಪುತ್ತಿಲ್ಲ.
ಇನ್ನು ಐ.ಎ.ಎಸ್. ನಿವೃತ್ತ ಅಧಿಕಾರಿಗಳಾದ ಶರಣ ಎಸ್. ಎಂ. ಜಾಮದಾರ ಅವರು ನೂತನ ಸಾರಥ್ಯ ವಹಿಸಿ ಸೈದ್ಧಾಂತಿಕವಾದ ಧರ್ಮವನ್ನು ಸಾಂವಿಧಾನಿಕ ಮಾನ್ಯತೆಯತ್ತ ಪೂಜ್ಯ ಬಸವಧರ್ಮ ಪೀಠದ ಜಗದ್ಗುರು ಗಂಗಾ ಮಾತಾಜಿಯವರು ಸೇರಿದಂತೆ ನೂರಾರು ವಿರಕ್ತ ಮಠಾಧೀಶರ ಒಕ್ಕೂಟದೊಂದಿಗೆ ಕೊಂಡೊಯ್ಯಲು ಪಣತೊಟ್ಟು ನಿಂತಿದ್ದಾರೆ.
ಹೀಗಿದ್ದರೂ ವರ್ಣಾಶ್ರಮ ಪದ್ಧತಿಯನ್ನು ಮತ್ತೆ ಎತ್ತಿಕಟ್ಟುವ ಹುನ್ನಾರ ನಡೆದಿದೆ ಎಂದರೆ ಲಿಂಗಾಯತ ಮಠಗಳು ಎಲ್ಲಾ ಲಿಂಗಾಯತರು ಎಷ್ಟು ಜಾಗ್ರತೆ ವಹಿಸಹಿಸಬೇಕಾಗಿದೆಯೆಂದು ಯೋಚಿಸಬೇಕಾಗಿದೆ.
ಪ್ರತಿಯೊಬ್ಬ ವಿರಕ್ತಮಠದವರು ಬಸವಧರ್ಮ ಪ್ರಚಾರ ತಂಡಗಳನ್ನು ತಪ್ಪದೇ ಈಗಿಂದೀಗಲೇ ಮಾಡಬೇಕಾಗಿದೆ. ಸ್ಥಿತಿವಂತ ಮಠಗಳವರು ಧರ್ಮಪ್ರಚಾರಕರನ್ನು ತಯಾರು ಮಾಡುವ ಟಂಕಶಾಲೆಗಳನ್ನು ನಿಯೋಜನೆ ಮಾಡಬೇಕಾಗಿದೆ. ವಚನಾಧ್ಯಯನ ಶಾಲೆಗಳನ್ನು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ತೆರೆಯಲು ಮಠಾಧಿಪತಿಗಳ ಒಕ್ಕೂಟ ಮನಸು ಮಾಡಬೇಕಾಗಿದೆ.

ವಿರಕ್ತ ಮಠಾದಿಶರು ಒಳಗಿನ ಕಣ್ಣು ತೆರೆಯಬೇಕಾಗಿದೆ.ಅಷ್ಟೇ ಬಸವ ಮೀಡಿಯಾ ವರದಿ ಚೆನ್ನಾಗಿ ಬಂದಿದೆ ತಮ್ಮಗೆ ಶರಣು ಶರಣಾರ್ಥಿಗಳು
ಎಲ್ಲಾ ಮಠಾಧೀಶರು ಮಠ ಒಡ್ಡು ಹೊರ ಬರಬೇಕು. ಇಲ್ಲದಿದ್ದರೆ ನಾವು ಶರಣರ ವಾರಸುದಾರರಾಗುವದಿಲ್ಲ.
ವಚನಗಳನ್ನಾಧರಿಸಿದ ಬಸವ/ಶರಣ ಧರ್ಮವನ್ನು ಅರಿತು ಆಚರಿಸಿ ಪ್ರಚಾರ/ಪ್ರಸಾರ ಮಾಡುವ ಪಡೆಗಳಿಗೆ ಬಸವಣ್ಣನವರು ಜಂಗಮರೆಂದು ಅಪಾರ ಗೌರವ ಕೊಟ್ಟಿರುವುದು ವಚನಗಳ ಅಧ್ಯಯನದಿಂದ ವೇದ್ಯವಾಗುತ್ತದೆ. ಬಸವ/ ಶರಣ ಧರ್ಮದ ಪೂಜ್ಯರೆಲ್ಲರೂ ಒಗ್ಗೂಡಿ ಬಸವಾನುಯಾಯಿಗಳಲ್ಲಿ ಅರಿವು ಆಚರಣೆ ತುಂಬುವ ಪರಮ ಪಾವನವಾದ ಕಾರ್ಯ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಕೊಂಡಿ ಮಂಚಣ್ಣನಂತಹ ವಂಶವಾಹಿನಿಯವರು ಇಂದು ಆಕ್ರಮಕಾರಿ ಕಾರ್ಯಗಳನ್ನು ಹಗಲಿರುಳೆನ್ನದೆ ಮಾಡುತ್ತಿರುವುದಕ್ಕೆ ಪ್ರತಿಯಾಗಿ ನಿಜವಾದ ಶರಣ ಧರ್ಮದ ಸಮರ ನಡೆಸಲೇಬೇಕಾಗಿದೆ.
ಮೊದಲು ಪಾದಪೂಜೆ ಬೇಡ ಎ೦ದು ವಿರಕ್ತರು ನಿರ್ಧರಿಸಲಿ
ಶರಣರೆ, ಕೆಲವೇ ಕೆಲವು ವಿರಕ್ತಮಠಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಸಾವಿರಗಟ್ಟಲೆ ಇರುವ ವಿರುಕ್ತಮಠಗಳಿಗೆ ತಮ್ಮ ಧರ್ಮದ, ಮಠದ ಯಾವುದೇ ಪೂರ್ವ ಇತಿಹಾಸದ ಅರಿವಿರುವುದಿಲ್ಲ. ಇದ್ದರೂ ಅವರಿಗೆ ಸ್ವಾಭಿಮಾನವಿಲ್ಲ. ಅವರೆಲ್ಲ ಮಠವೆಂಬ ಗೂಟವನ್ನು ಗಟ್ಟಿಯಾಗಿ ಹಿಡಿದು ಕುಳಿತಿದ್ದಾರೆ. ಮತ್ತೊಂದಷ್ಟು ಮಠಾಧೀಶರು ಕನ್ನೇರಿ ಯ ಅವತಾರ ಪುರುಷರಾಗಿದ್ದಾರೆ. ಇಡೀ ಮಠವಾಗಲಿ ಮಠದ ಆಸ್ತಿಯಾಗಲಿ ಲಿಂಗಾಯತ ಧರ್ಮೀಯರು, ಸಮಾಜ ಬಾಂಧವರು ಕೊಟ್ಟ ಕೊಡುಗೆ. ಇದನ್ನು ಮರೆತು ತಾವೇ ಇಷ್ಟಕ್ಕೂ ವಾರಸುದಾರರು ಎಂಬಂತೆ ಸ್ವಾರ್ಥ ಮೆರೆಯುತ್ತಿದ್ದಾರೆ. ಇದು ಅಪ್ಪ ಬಸವಣ್ಣನವರು ಹೇಳುವ ಬೇಲಿ ಎದ್ದು ಹೊಲ ಮೇದಂತ ಸ್ಥಿತಿಯಾಗಿದೆ. ಧರೆಗೆ ಬೆಂಕಿ ಬಿದ್ದಿದೆ ಎಂಬಂತಾಗಿದೆ. ನಮ್ಮನ್ನು ಕಾಯುವ ದೇವರೇ ಕೊಲ್ಲಲು ಹೊರಟಾಗ ರಕ್ಷಿಸುವವರು ಯಾರು ಎಂಬಂತಾಗಿದೆ ಲಿಂಗಾಯಿತ ಸಮಾಜದವರ ಸ್ಥಿತಿ.
ಮಠಾಧೀಶರು ಧರ್ಮ ಮತ್ತು ಧರ್ಮ ಕ್ಷೇತ್ರ, ಧರ್ಮ ಸಾಹಿತ್ಯವಾದ ವಚನಗಳ ರಕ್ಷಣೆಗೆ ಪೂಜ್ಯ ಲಿಂಗಾನಂದ ಸ್ವಾಮಿಯವರಂತೆ, ಪೂಜ್ಯ ಮಾತೆ ಮಹದೇವಿ ತಾಯಿಯವರಂತೆ ತಮ್ಮನ್ನು ತಾವು ಧರ್ಮರಕ್ಷಣೆಗಾಗಿ, ಧರ್ಮ ಪ್ರಚಾರಕ್ಕಾಗಿ ಎಲ್ಲಿಯವರೆಗೆ ತೊಡಗಿಸಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ಲಿಂಗಾಯಿತರ,ಬಸವ ಧರ್ಮೀಯರ ಸ್ಥಿತಿ ಅತಂತ್ರವೇ ಆಗಿರುತ್ತದೆ.
ಪೂಜ್ಯ ಮಾತಾಜಿಯವರು ಅಪ್ಪಾಜಿಯವರು ಬಸವ ದಳ ಕಟ್ಟಿದಂತೆ ಎಲ್ಲಾ ವ್ಯಕ್ತಮಠಾಧೀಶರು ಒಂದಾಗಿ ಬಸವ ಸೇನೆಯನ್ನ ಕಟ್ಟಿ ತರಬೇತಿಯನ್ನ ನೀಡಬೇಕಾಗಿದೆ. ಆ ಮೂಲಕ ಲಿಂಗಾಯತ ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ. ಅನ್ಯ ಧರ್ಮಗಳನ್ನು ಅನುಸರಿಸುವವರಿಗೆ ಮತ್ತೆ ಸ್ವಧರ್ಮಕ್ಕೆ ಅವರನ್ನ ಕರೆದು ತರಬೇಕಾಗಿದೆ. ಇದಕ್ಕಾಗಿ ನಾವುಗಳು ಇನ್ನಾರನ್ನು ದೂರಿದರೆ ಪ್ರಯೋಜನವಿಲ್ಲ. ಬೌದ್ಧರಾಗಲಿ, ಜೈನರಾಗಲಿ, ಸಿಖ್ಖ ರಾಗಲಿ ಪರರನ್ನು ನಿಂದಿಸದೆ ತಮ್ಮತನವನ್ನು ಅಷ್ಟೇ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಲಿಂಗಾಯತ ಧರ್ಮೀಯರು ಕೂಡ ತಮ್ಮ ಧರ್ಮದ ಸಂಘಟನೆ ಆಚರಣೆ ಇವುಗಳನ್ನೇ ಮುಖ್ಯವಾಹಿನಿಯಾಗಿಸಿಕೊಂಡು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿ ಮುನ್ನಡೆಯಬೇಕಾಗಿದೆ.
ಇಷ್ಟೆಲ್ಲಾ ಆಲೋಚನೆಗಳಿಗೆ ಅವಕಾಶ ಮಾಡಿಕೊಟ್ಟದ್ದು ಈ ಒಂದು ಲೇಖನ. ಸಮಯೊಚಿತವಾಗಿದೆ ಶರಣು ಶರಣಾರ್ಥಿ ಗಳು.