ಹೊಸಪೇಟೆ:
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12ನೇ ಶತಮಾನದ ಶರಣ ಚಳವಳಿ ಅತ್ಯಂತ ಮಹತ್ವದ ಸಂಗತಿಯಾಗಿದ್ದು, ವಚನ ಚಳುವಳಿಯಲ್ಲಿ ಶರಣರ ಜೊತೆಗೆ ಶರಣೆಯರು ಪೂರ್ಣ ಭಾಗವಹಿಸಿದ್ದು ಸ್ವಾಭಿಮಾನ, ಆತ್ಮಾಭಿಮಾನದ ಸಂಕೇತವೆಂದು ಹಿಟ್ನಾಳ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಟಿ. ಹೆಚ್. ಬಸವರಾಜ ಹೇಳಿದರು.
ನಗರದ ಷಾ ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಎಸ್ಪಿಬಿಎನ್ ಶಿಕ್ಷಣ ಮಹಾವಿದ್ಯಾಲಯ, ಐ.ಕ್ಯು.ಎ.ಸಿ. ಕನ್ನಡ ವಿಭಾಗ ಇವರ ಸಹಯೋಗದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ವಚನಗಾರ್ತಿಯರು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪದ ಚರ್ಚೆಯಲ್ಲಿ ಅಕ್ಕಮಹಾದೇವಿ, ಹಡಪದ ಲಿಂಗಮ್ಮ, ಮುಕ್ತಾಯಕ್ಕ, ದೂಪದ ಗೊಗ್ಗವ್ವೆ, ಸೋಂಕಿಲ್ಲದೆ ಇನ್ನೂ ಅನೇಕ ವಚನಕಾರ್ತಿಯರು ಭಾಗವಹಿಸಿ, ಜಾತಿ-ಪಂಗಡ, ಲಿಂಗ, ಆಚಾರ-ವಿಚಾರಗಳ ಹೆಸರಿನಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ತೀವ್ರವಾಗಿ ವಿರೋಧಿಸಿದರು.

ವಚನಕಾರ್ತಿಯರು ದೇವರನ್ನು ಕೇವಲ ಪೂಜೆಯ ವಿಷಯವಾಗಿ ನೋಡದೆ, ಜೀವನದ ಅಂತರಂಗದ ಅನುಭವವಾಗಿ ಕಂಡರು. ಈ ಮೂಲಕ ಅವರು ಭಕ್ತಿ ಮತ್ತು ಜೀವನದ ನಡುವೆ ನೇರ ಸಂಬಂಧವನ್ನು ಸ್ಥಾಪಿಸಿದರು.
ಜಾತಿ ಮತ ಪಂಥಗಳನ್ನು ಮೀರಿ ಸಮಾಜದಲ್ಲಿ ಬೇರೂರಿದ್ದ ಅಂಧಕಾರ, ಅಜ್ಞಾನ, ಮೌಡ್ಯ, ಜಾತಿ ತಾರತಮ್ಯ, ಅಸಮಾನತೆ, ಶೋಷಣೆಗಳ ವಿರುದ್ಧ, ತಮ್ಮ ವಚನಗಳ ಮೂಲಕ ಸಮಾಜ ಬದಲಾವಣೆಗೆ ಮುನ್ನುಡಿ ಬರೆದಿದ್ದರು.
ಅನೇಕ ವಚನಕಾರ್ತಿಯರು ಅನುಭವ ಮಂಟಪದ ಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಸಮಾಜಕ್ಕೆ ನೂತನ ಚಿಂತನೆಗಳನ್ನು ನೀಡಿದ್ದಾರೆ. ಶರಣೆಯರು ರಚಿಸಿದ ವಚನ ಸಾಹಿತ್ಯವು ಸರಳ, ನೇರ ಮತ್ತು ಹೃದಯಸ್ಪರ್ಶಿ ಶೈಲಿಯಲ್ಲಿದ್ದು, ಅದು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡಿದೆ. ಈ ಸಾಹಿತ್ಯದ ಮೂಲಕ ಮಹಿಳೆಯರು ಸಾಮಾಜಿಕ ಅನ್ಯಾಯಗಳ ವಿರುದ್ಧದ ಧ್ವನಿಯನ್ನು ಹೊರ ಹಾಕಿದರು.
ಅವರು ಕೇವಲ ಭಕ್ತಿಯ ಮಾರ್ಗವನ್ನೇ ಪ್ರತಿಪಾದಿಸದೆ, ಸಮಾಜದ ಕಟ್ಟಳೆಗಳಿಗೆ ಸವಾಲು ಹಾಕಿ ಸಮಾನತೆಯ ಪರವಾಗಿ ನಿಂತರು. ವಚನಕಾರ್ತಿಯರು ತಮ್ಮ ವೈಯಕ್ತಿಕ ಅನುಭವಗಳನ್ನು ಆಧರಿಸಿ ರಚಿಸಿದ ವಚನಗಳು ಮಹಿಳೆಯ ಸ್ವಾತಂತ್ರ್ಯ, ಆತ್ಮಗೌರವ ಮತ್ತು ದೇವರೊಂದಿಗೆ ನೇರ ಸಂಬಂಧವನ್ನು ಒತ್ತಿ ಹೇಳುತ್ತವೆ.

ಶರಣ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರವು ಕೇವಲ ಸಾಹಿತ್ಯ ಸೃಷ್ಟಿಗೆ ಸೀಮಿತವಾಗಿರದೆ, ಅದು ಒಂದು ಸಾಮಾಜಿಕ ಚಳವಳಿಯ ಭಾಗವಾಗಿತ್ತು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತಿವೆ. ಆದ್ದರಿಂದ 12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ, ಆತ್ಮಾಭಿಮಾನದ ಸಂಕೇತ ಎಂದು ಬಸವರಾಜ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಮಹಾಬಲೇಶ್ವರ ರೆಡ್ಡಿ ಅವರು ಮಾತನಾಡುತ್ತಾ, 12ನೇ ಶತಮಾನದ ಮಹಿಳಾ ವಚನಕಾರ್ತಿಯರ ವಚನಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಡಾ. ಟಿ ಹೆಚ್. ಬಸವರಾಜ್ ಹಾಗೂ ಕನ್ನಡ ವಿವಿಯಿಂದ ಪಿಎಚ್ಡಿ ಪಡೆದ ಶಿಕ್ಷಕರಾದ ಡಾ. ಬಸವರಾಜ್ ಕೆ. ಅವರಿಗೆ ಸನ್ಮಾನಿಸಲಾಯಿತು. ಸಮಾಜ ಸೇವಕರಾದ ಅಕ್ಕಿ ಬಸವರಾಜ ಉಪಸ್ಥಿತಿ ಇದ್ದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿವನಗೌಡ ಸಾತ್ಮಾರ್, ಕಾಲೇಜಿನ ಐ ಕ್ಯುಎಸಿ ಸಂಚಾಲಕರಾದ ಡಾ. ಜಗದೀಶ್ ಹಿರೇಮಠ, ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಶೋಭಾ ಪಾಟೀಲ, ಡಾ. ಮಲ್ಲಿಕಾ, ಬೋಧಕ ಬೋಧಕೇತರ ಸಿಬ್ಬಂದಿಗಳು, ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಾರ್ಥನೆ ಜ್ಯೋತಿ, ಸ್ವಾಗತ ವಿಠಲ್, ಕಾರ್ಯಕ್ರಮದ ನಿರೂಪಣೆಯನ್ನು ರೇಖಾ ಅವರು ನೆರವೇರಿಸಿದರು.
