ಇದು ಜಾಗತಿಕ ಮಟ್ಟದ ಧರ್ಮಗಳ ಸಾಲಿಗೆ ಲಿಂಗಾಯತ ಧರ್ಮವನ್ನು ಸೇರಿಸಲು ನಡೆದಿರುವ ಹೋರಾಟ.
ಬೆಂಗಳೂರು
೧೨ನೇ ಶತಮಾನದಲ್ಲಿ ಗುರು ಬಸವಣ್ಣನವರು ಹಾಗೂ ಇತರ ಶರಣರು ಸೇರಿ ಅಪೂರ್ವ ಕ್ರಾಂತಿಯನ್ನು ಮಾಡಿದರು.
ಗಂಡು-ಹೆಣ್ಣು ಎಂಬ ಲಿಂಗಭೇದ, ಬಡವ-ಶ್ರಿಮಂತ ಎಂಬ ವರ್ಗಭೇದ, ಸಂಸಾರಿ-ಸನ್ಯಾಸಿ ಎಂಬ ಆಶ್ರಮಭೇದ, ವರ್ಣಪದ್ಧತಿಯ ಶ್ರೇಣಿಕೃತ ವ್ಯವಸ್ಥೆ ಹಾಗೂ ಜಾತಿ ಪದ್ಧತಿಯ ಅಸಮಾನತೆಯ ವಿರುದ್ಧ ಹೋರಾಡಿ ಸಮಾನತೆಯ ತಳಹದಿಯ ಮೇಲೆ ಲಿಂಗಾಯತ ಧರ್ಮ ಸ್ಥಾಪಿಸಿದರು. ಬಸವಣ್ಣನವರು ತಮ್ಮ ಸ್ವಂತ ವೈಚಾರಿಕ ಆಲೋಚನೆಗಳಿಂದ ಲಿಂಗಾಯತ ಧರ್ಮಕ್ಕೆ ನಾಂದಿ ಹಾಡಿದರು
ಎನಗೆ ಗುರುಪಥವ ತೋರಿದವರಾರು?
ಲಿಂಗಪಥವ ತೋರಿದವರಾರು?
ಜಂಗಮಪಥವ ತೋರಿದವರಾರು?
ಪಾದೋದಕ ಪ್ರಸಾದಪಥವ ತೋರಿದವರಾರು?
ತೋರುವ ಮನವೆ ನೀವೆಂದರಿತೆ
ಎಂದು ಗುರು ಬಸವಣ್ಣನವರು ದೇವರನ್ನು ಸಂಭೋಧಿಸುತ್ತಾರೆ.
ಗುರು ಬಸವಣ್ಣ ಕಟ್ಟಿದ್ದು ಸ್ವತಂತ್ರ ಧರ್ಮ ಜಾತಿಯಲ್ಲ

ಒಂದು ವೇಳೆ ಬಸವಣ್ಣನವರಿಗೆ ಯಾರಾದರು ಈ ಧರ್ಮ ಕೊಟ್ಟಿದ್ದರೆ ಅವರ ಹೆಸರನ್ನು ಇಲ್ಲಿ ಬಳಸಬಹುದಾಗಿತ್ತು. ಏಸು ಕ್ರಿಸ್ತ, ಮೊಹಮ್ಮದ ಪೈಗಂಬರ್, ಬುದ್ಧ, ಗುರು ನಾನಕ್, ಮಹಾವೀರರು ತಾವು ಧರ್ಮ ಸ್ಥಾಪಿಸಿದ್ದೇವೆ ಎಂದು ಹೇಳಲಿಲ್ಲ ಆದರೆ ಅವರ ಅನುಯಾಯಿಗಳು ಅದನ್ನು ಧರ್ಮವನ್ನಾಗಿ ಕರೆದರು. ಧರ್ಮಗುರು ಬರೆದ ಅಥವಾ ಹೇಳಿದ ತತ್ವಗಳನ್ನು ಧರ್ಮದ ಚೌಕಟ್ಟಿನಲ್ಲಿ ಪ್ರಚಾರ ಮಾಡುತ್ತ ಬಂದರು.
ಅದೇ ರೀತಿ ಬಸವಣ್ಣನವರ ಸಮಕಾಲೀನ ಹಾಗೂ ನಂತರದ ಅನುಯಾಯಿಗಳಾದ ಶರಣರು ತಮ್ಮ ವಚನಗಳಲ್ಲಿ ಬಸವಣ್ಣನವರೆ ಲಿಂಗಾಯತ ಧರ್ಮಗುರು ಎಂಬ ಮಾತನ್ನು ಸ್ಪಷ್ಟಪಡಿಸುತ್ತಾರೆ. ಬಸವಣ್ಣನವರು ಕಟ್ಟಿದ್ದು ಸ್ವತಂತ್ರ ಧರ್ಮವೇ ಹೊರತು ಜಾತಿಯಲ್ಲ ಎಂದು ವಚನಗಳಿಂದ ಸ್ಪಷ್ಟವಾಗುತ್ತದೆ.
ಜಾತಿ ಹುಟ್ಟಿನಿಂದ ಬರುತ್ತದೆ ಹಾಗೂ ಸಂಕುಚಿತ ಮನೋಭಾವದಿಂದ ಕೂಡಿರುತ್ತದೆ. ಆದರೆ ಧರ್ಮವು ಆಚರಣೆಯಿಂದ ಬರುತ್ತದೆ ಹಾಗೂ ಎಲ್ಲರನ್ನು ಇಂಬಿಟ್ಟುಕೊಳ್ಳುವ ಉದಾತ್ತ ಚಿಂತನೆಯಿಂದ ಕೂಡಿರುತ್ತದೆ. ವಚನ ಸಾಹಿತ್ಯವು ಲಿಂಗಾಯತ ಧರ್ಮಗ್ರಂಥವಾಗಿದೆ. ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿ ನೋಡಿದಾಗ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ ಎಂದು ಸ್ಪಷ್ಟವಾಗುತ್ತದೆ.
ವಚನಗಳಲ್ಲಿ ಲಿಂಗಾಯತ ಧರ್ಮ
ಬಸವಣ್ಣನವರ ಸಮಕಾಲೀನ ಶರಣರ ವಚನಗಳಲ್ಲಿ ಬಸವಣ್ಣನವರ ಹಾಗೂ ಲಿಂಗಾಯತ ಧರ್ಮ ಕುರಿತ ಸಾಲುಗಳು ಹೀಗಿವೆ
● ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪಥವು, ಕರುಣಿಸಿ ಕಪಿಲಸಿದ್ದಮಲ್ಲಿನಾಥಯ್ಯಾ. ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ – ಸಿದ್ದರಾಮೇಶ್ವರರು
● ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ – ಅಂಬಿಗರ ಚೌಡಯ್ಯನವರು
● ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಬಸವಣ್ಣನಿಂದ, ಅತ್ತ ಬಲ್ಲಡೆ ನೀವು ಹೇಳಿರೆ, ಇತ್ತ ಬಲ್ಲಡೆ ನೀವು ಹೇಳಿರೆ – ಮಡಿವಾಳ ಮಾಚಿದೇವರು
● ಬಸವಣ್ಣನು ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರ – ಅಲ್ಲಮಪ್ರಭುದೇವರು
● ಅನುಭವ ಮಂಟಪವ ಮಾಡಿ. ಅರಿವ ಸಂಪಾದಿಸಿ ಆಚಾರವಂಗಗೊಳಿಸಿ ಏಳನೂರೆಪ್ಪತ್ತು ಅಮರಗಣಂಗಳ ಅನುಭವ ಮೂರ್ತಿಗಳ ಮಾಡಿ ಸ್ವಯಲಿಂಗಿಯಾದ ಬಸವಯ್ಯನು – ನೀಲಾಂಬಿಕೆ ತಾಯಿಯವರು
● ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು ಮುಟ್ಟಿ ಪಾವನವ ಮಾಡಿ ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ ಬಸವಣ್ಣನು – ಡೋಹರ ಕಕ್ಕಯ್ಯನವರು
● ಬಸವಣ್ಣನೆ ಗುರುವೆಂದರಿಯದ ಅನಾಚಾರಿಗಳ ಎನಗೆ ತೋರದಿರಯ್ಯ ಗುಹೇಶ್ವರ –ಅಲ್ಲಮಪ್ರಭುದೇವರು
● ನಮಗೆ ಲಿಂಗವುಂಟು, ನಾವು ಲಿಂಗವಂತರೆಂದು ನುಡಿವರು – ಮಡಿವಾಳ ಮಾಚಿದೇವರು
ಹೀಗೆ ವಚನಗಳಲ್ಲಿ ಬಸವಣ್ಣನವರಿಂದ ಲಿಂಗಾಯತ ಧರ್ಮ ಸ್ಥಾಪಿಸಲ್ಪಟ್ಟಿತು ಎಂದು ನಮಗೆ ಸಾಕಷ್ಟು ಆಧಾರಗಳು ದೊರೆಯುತ್ತವೆ. ಅದಲ್ಲದೆ ವಚನಗಳಲ್ಲಿ ಲಿಂಗವಂತ (ಲಿಂಗಾಯತ) ಪದವನ್ನು ೨೩ ವಚನಕಾರರು, ೧೦೬ ವಚನಗಳಲ್ಲಿ ೧೭೩ ಕಡೆ ಬಳಸಿದ್ದಾರೆ.
ಸಾಹಿತ್ಯದಲ್ಲಿ, ಜಾನಪದದಲ್ಲಿ ಲಿಂಗಾಯತ ಧರ್ಮ
೧೩ನೇ ಶತಮಾನದಲ್ಲಿ ಹರಿಹರ ಕವಿಯು ಬಸವಣ್ಣನವರನ್ನು ಕಾರಣಿಕ ಪುರುಷ ಎಂದು ಬಣ್ಣಿಸಿದ್ದಾರೆ.
ಸಾಮರ್ಥ್ಯಮಂ ಬಿತ್ತಿ, ಪ್ರತ್ಯಕ್ಷಂಗಳಂ ಬೆಳೆದು,
ಗಣಪರ್ವಂಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವಾ,
ನಿನ್ನ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು…
೧೫ ನೇ ಶತಮಾನದಲ್ಲಿ ಭೀಮಕವಿಯು ಬಸವಣ್ಣನವರು ‘ಮಹಾಗುರುವೆಮಗೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಶ್ರೀ ಗುರುವೆ ದೀಕ್ಷಾಗುರುವೆ
ಶಿಕ್ಷಾ ಗುರುವೆ ರಕ್ಷಾ ಗುರುವೆ
ಸರ್ವಾಗಮೋಕ್ತಕಳಾಗುರುವೆ ಶಿವಯೋಗ ಧರ್ಮಾರ್ಥ
ಭೋಗ ಗುರುವೇ ತ್ಯಾಗಗುರುವೆ
ಸುಧೀ ಗುರುವೇ ವಾಚಾಗುರುವೇ
ಭವರೋಗಹರ ಶರಣಾಗು ಬಸವ ಮಹಾಗುರುವೆಮಗೆ
ಜನಪದದಲ್ಲಿ ಕೂಡ ಬಸವಣ್ಣನವರು ಕೊಟ್ಟ ಹೊಸ ಧರ್ಮದ ಕಲ್ಪನೇ ಈ ರೀತಿ ವ್ಯಕ್ತವಾಗಿದೆ.
ಬಸವ ಸಾರಿದನಂದು ಕುಶಲದಲಿ ವಚನಗಳ
ಮಸುಕಿರುಳು ಹರಿದು ನಸುಕಾತು! ಜಗದೊಳಗೆ
ಹೊಸಮತದ ಸೂರ್ಯನುದಿಸಿದನು
ಮೈಸೂರು ಜನಗಣತಿ

ಹೀಗೆ ಶರಣರ ಸಂತತಿಯಲ್ಲಿ ಬಂದ ಎಲ್ಲಾ ಪ್ರಮುಖ ವ್ಯಕ್ತಿಗಳು ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರು ಎಂದು ಸಾರಿ ಸಾರಿ ಹೇಳಿದ್ದಾರೆ. ೧೮೯೧ರ ಮೈಸೂರು ಪ್ರಾಂತ್ಯದ ಜನಗಣತಿಯಲ್ಲಿ ಲಿಂಗಾಯತ ಸಮಾಜದಲ್ಲಿ ೩೮ ಒಳಪಂಗಡಗಳನ್ನು ಗುರುತಿಸಲಾಗಿದೆ. ಅದರಲ್ಲಿ ವೀರಶೈವವು ಒಂದು ಉಪಪಂಗಡವಾಗಿತ್ತು ಎಂಬುದು ಗಮನಿಸಬೇಕಾದ ಅಂಶ.
೧೯೦೧ರಲ್ಲಿ ಲಿಂಗಾಯತ ಸಮಾಜದ ಕೆಲವು ವ್ಯಕ್ತಿಗಳು ತಾವು ಸ್ವತಂತ್ರ ಧರ್ಮ ಎಂದು ಪ್ರತಿಪಾದನೆ ಮಾಡುವ ಬದಲು ತಾವು ಲಿಂಗಿಬ್ರಾಹ್ಮಣರು ಎಂದು ಬ್ರಾಹ್ಮಣರ ಜೊತೆ ಸ್ಪರ್ಧೆಗಿಳಿಯುತ್ತಾರೆ. ಇದಕ್ಕೆ ಕಾರಣವೆನೆಂದರೆ ಲಿಂಗಾಯತರು ಹಾಗೂ ವೀರಶೈವರನ್ನು ತಲೆತಲಾಂತರದಿಂದ ಶೂದ್ರರೆಂದು ಪರಿಗಣಿಸ್ಪಡಲಾಗುತ್ತಿತ್ತು.
ಇದನ್ನು ಹೋಗಲಾಡಿಸಲು ಹಾಗೂ ತಮಗೆ (ವೀರಶೈವರಿಗೆ) ಬ್ರಾಹ್ಮಣರಂತೆ ವೇದಾಧ್ಯಯನ, ಪೂಜೆ, ಪೌರೋಹಿತ್ಯಗಳ ಅಧಿಕಾರವಿದೆ ಎಂದು ಪ್ರತಿಪಾದಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ತಮ್ಮಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಸ್ವತಂತ್ರ ಲಿಂಗಾಯತ ಧರ್ಮದ ಪ್ರತಿಪಾದನೆ ಕೈಬಿಟ್ಟರು.
ದಿವಾನ ಬಹದೂರ್ ಎಲ್ ಕೆ ಅನಂತಕ್ರಿಷ್ಣ ಅಯ್ಯರ್ ರವರ Mysore Tribes and Castes, Vol -1 ಪುಸ್ತಕದ ಪುಟ ೧೫೪ ರಲ್ಲಿ “ಕೆಲವು ಲಿಂಗಾಯತರು ತಮ್ಮನ್ನು ವೀರಶೈವರೆಂದು ಕರೆಯಬೇಕು ಎಂದು ೧೯೦೧ ರಲ್ಲಿ ಕೇಳಿದ್ದಾರೆ” ಎನ್ನುವ ವಿಷಯವನ್ನು ಪ್ರಸ್ಥಾಪಿಸಿದ್ದಾರೆ.
ಪ್ರತ್ಯೇಕ ಧರ್ಮಕ್ಕೆ ಧೀರ್ಘ ಹೋರಾಟ

ಈ ಬೆಳವಣಿಗೆಗಳು ಲಿಂಗಾಯತ ಧರ್ಮವನ್ನು ಹಿಂದೂ (ವೈದಿಕ) ಧರ್ಮದ ಒಳಗೆ ಸೇರಿಸುವ ಪ್ರಯತ್ನವಾಗಿದ್ದವು. ಆದರೂ ಆ ಕಾಲದಲ್ಲಿಯೇ ಪ್ರಜ್ಞಾವಂತರು ಲಿಂಗಾಯತ ಸ್ವತಂತ್ರ ಧರ್ಮ ಎಂದು ಗಟ್ಟಿಯಾಗಿ ಪ್ರತಿಪಾದಿಸಿದರು.
- ೧೫-೧೨-೧೯೨೮ ರಲ್ಲಿ ಮೈಸೂರ್ ಸ್ಟಾರ್ ಪತ್ರಿಕೆಯಲ್ಲಿ ವಿದ್ವಾಂಸರಾದ ಜೀರಗೆ ಬಸವಲಿಂಗಪ್ಪನವರು ಲಿಂಗಾಯತ ಸ್ವತಂತ್ರ ಧರ್ಮವೆಂದು ಆಧಾರ ಸಹಿತ ಪ್ರತಿಪಾದಿಸಿದರು.
- ೩೧-೧೨-೧೯೪೦ ರಂದು ದಾವಣಗೆರೆಯಲ್ಲಿ ಸಭೆ ಸೇರಿದ್ದ “ವೀರಶೈವ ಮಹಾಸಭೆ ಸಂಸ್ಥೆ” ಯ ಕಮಿಟಿಯು ಸಮಗ್ರವಾಗಿ ಚರ್ಚಿಸಿ “ಲಿಂಗಾಯತರು ಹಿಂದೂಗಳಲ್ಲ” ಎಂಬ ನಿರ್ಣಯ ಸ್ವಿಕರಿಸಿದರು.
- ಇದೇ ವರ್ಷದಲ್ಲಿ (೧೯೪೦) ತಮಿಳುನಾಡಿನ ಕುಂಭಕೋಣಂನಲ್ಲಿ ಸೇರಿದ್ದ ವೀರಶೈವ ಮಹಾಸಭೆಯ ವಾರ್ಷಿಕ ಸಮ್ಮೇಳದಲ್ಲಿ ಲಿಂಗಾಯತ ಸ್ವತಂತ್ರ ಧರ್ಮವೆಂದು ಅಭ್ಯಸಿಸಿ ಸಮಿತಿ ರಚನೆ ಮಾಡಲಾಯಿತು. ಈ ಸಮಿತಿಯು ೧೯೪೦ ರಿಂದ ೧೯೪೫ರ ವರೆಗೆ “ಹಿಂದೂ ಕಾಯದೆ ಮಸೂದೆ ಸಿದ್ಧಪಡಿಸುವ ಸಮಿತಿ” ಯೊಂದಿಗೆ ಪತ್ರ ವ್ಯವಹಾರ ನಡೆಸಿತು
- ೧೯೪೨ ರಲ್ಲಿ ಪ್ರಸಿದ್ದ ವಿದ್ವಾಂಸರಾಗಿದ್ದ ಶ್ರೀ ಆರ್ ಎಂ ಸಾಖರೆಯವರು ತಮ್ಮ “ಲಿಂಗಧಾರಣ ಚಂದ್ರಿಕೆ” ಗ್ರಂಥದಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಎಂದು ಪ್ರತಿಪಾದಿಸಿದರು
- ೧೯೫೬-೯೫ ಬಸವತತ್ವ ಪ್ರಚಾರ ಮತ್ತು ಅನುಷ್ಟಾನ ಮಾಡುತ್ತಿದ್ದ ಕೆಲವು ಮಠಗಳಿದ್ದವು. ಆದರೆ ಮನೆ ಮನೆಗೆ ಹೋಗಿ ಬಸವತತ್ವದ ಬಗ್ಗೆ ಜಾಗೃತಿ ಮೂಡಿಸಿದ ಕೀರ್ತಿ ಪೂಜ್ಯ ಲಿಂಗಾನಂದ ಸ್ವಾಮೀಜಿಯವರಿಗೆ ಸಲ್ಲುತ್ತದೆ.

ಲಿಂಗಾಯತ ಎನ್ನುವುದು ಒಂದು ಜಾತಿ, ಮತ ಅಥವಾ ಪಂಗಡವಲ್ಲ ಇದು ಸ್ವತಂತ್ರ ಧರ್ಮ ಎಂದು ಪೂಜ್ಯ ಲಿಂಗಾನಂದ ಸ್ವಾಮೀಜಿಯವರು ಪ್ರತಿಪಾದಿಸಿದರು. ಧರ್ಮಕ್ಕೆ ಇರಬೇಕಾದ ಪ್ರಮುಖ ೧೧ ಲಕ್ಷಣಗಳು ಲಿಂಗಾಯತ ಧರ್ಮಕ್ಕಿವೆ ಎಂದು ಅವರ ’ಜಂಗಮ ದರ್ಶನ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
- ಲಿಂಗಾನಂದ ಸ್ವಾಮೀಜಿಯವರ ಶಿಷ್ಯರಾದ ಪೂಜ್ಯ ಮಾತೆ ಮಹಾದೇವಿಯವರು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಕೈಗೆತ್ತಿಕೊಂಡರು. ಸ್ವತಂತ್ರ ಧರ್ಮಕ್ಕೆ ಬೇಕಾದ ತಾತ್ವಿಕ ಚೌಕಟ್ಟನ್ನು ಇನ್ನೂ ಬದ್ರಗೊಳಿಸಿದರು.

೧೯೯೬ ರಲ್ಲಿ ಪೂಜ್ಯ ಮಾತೆ ಮಹಾದೇವಿಯವರು ಬರೆದ “ಲಿಂಗಾಯತರು ವೀರಶೈವರಲ್ಲ” ಪುಸ್ತಕವು ದೊಡ್ಡ ಮಟ್ಟದ ಸಂಚಲನ ಮೂಡಿಸಿತು. ಸಾಕಷ್ಟು ಆಧಾರಗಳ ಮೂಲಕ ಲಿಂಗಾಯತರು ವೀರಶೈವರಲ್ಲ ಮತ್ತು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದು ಪ್ರತಿಪಾದಿಸಿದರು.

- ಲಿಂಗಾನಂದ ಸ್ವಾಮೀಜಿಯವರ ಆಶಯದಂತೆ ಅವರು ಲಿಂಗೈಕ್ಯರಾದ ಮೇಲೆ ೧೯೯೭ ರಲ್ಲಿ ಪೂಜ್ಯ ಮಾತೆ ಮಹಾದೇವಿಯವರ ನೆತೃತ್ವದಲ್ಲಿ ದೆಹಲಿಯಲ್ಲಿ ’ಲಿಂಗಾಯತ ಧರ್ಮ ಸಮ್ಮೇಳನ’ ಮಾಡಿ, ೨೦೦೧ ರ ಜನಗಣತಿಯಲ್ಲಿ ’ಲಿಂಗಾಯತ ಧರ್ಮ’ ವೆಂದು ಬರೆಯಬೇಕೆಂದು ಜನಜಾಗೃತಿ ಮಾಡಲಾಯಿತು. ಇದು ೫ನೇ ಲಿಂಗಾಯತ ಧರ್ಮ ಸಮ್ಮೇಳನವಾಗಿತ್ತು.
ಸಮಾವೇಶದ ಮೂಲಕ ಮತ್ತು ಮನೆ ಮನೆಗೆ ಹೋಗಿ ಸಾಮಾನ್ಯ ಜನರಿಗೆ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ ಪುಸ್ತಕಕ್ಕೆ (ಕೆಲವೆ ವರ್ಗದವರಿಗೆ) ಸಿಮಿತವಾಗಿದ್ದ ಲಿಂಗಾಯತ ಸ್ವತಂತ್ರ ಹೋರಾಟವನ್ನು ಜನಸಾಮಾನ್ಯರಿಗೆ ತಲುಪಿಸಿದ ಪ್ರಥಮ ಪ್ರಯತ್ನದ ಕೀರ್ತಿ ಪೂಜ್ಯ ಮಾತೆ ಮಹಾದೇವಿಯವರಿಗೆ ಸಲ್ಲುತ್ತದೆ.
ಜನಸಾಮಾನ್ಯರನ್ನು ಸಂಘಟಿಸುವಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿಯವರ ಕಾರ್ಯ ಶ್ಲಾಘನೀಯ. ಸತತವಾಗಿ ನಾಡಿನಾದ್ಯಂತ ಸಂಚರಿಸಿ ಲಿಂಗಾಯತ ಧರ್ಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ಜಾರಿಗೆ ತಂದರು.

- ೧೯೯೮ ರಲ್ಲಿ ೬ನೇ ಲಿಂಗಾಯತ ಧರ್ಮ ಸಮ್ಮೇಳನವು ಮಹಾರಾಷ್ಟ್ರದ ಮುಂಬೈನಲ್ಲಿ ಹಾಗೂ ೧೯೯೯ರಲ್ಲಿ ೭ನೇ ಲಿಂಗಾಯತ ಧರ್ಮ ಸಮ್ಮೇಳನವು ಮಹಾರಾಷ್ಟ್ರದ ಈಚಲಕರಂಜಿಯಲ್ಲಿ ಪೂಜ್ಯ ಮಾತೆ ಮಹಾದೇವಿಯವರ ನೆತೃತ್ವದಲ್ಲಿ ಜರುಗಿದವು.
- ೧೧-೨-೨೦೦೦ ರಂದು ಅಖಿಲ ಭಾರತ ವೀರಶೈವ ಮಹಾಸಭೆಯು “The Registrar General and Census Commissioner” ಅವರಿಗೆ ವಿವರವಾಗಿ ಪತ್ರ ಬರೆದು “ಲಿಂಗಾಯತವು ಸ್ವತಂತ್ರ ಧರ್ಮವಾಗಿದೆ” ಕಾರಣ ೨೦೦೧ರ ಜನಗಣತಿಯಲ್ಲಿ ಅದಕ್ಕೆ ಸ್ವತಂತ್ರ ಕೋಡ್ ಕೊಡಬೇಕೆಂದು ಕೋರಿಕೊಂಡಿತು.
- ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎನ್. ಜಿ. ಮಹಾದೇವಪ್ಪನವರು ೨೦೦೪ ರಲ್ಲಿ ‘ಲಿಂಗಾಯತರು ಹಿಂದೂಗಳಲ್ಲ’ ಎಂಬ ಪುಸ್ತಕ ರಚಿಸಿ, ಈ ವಿಷಯದ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ಲಿಂಗಾಯತ ಧರ್ಮವನ್ನು ಅವೈದಿಕ ಧರ್ಮವೆಂದು ಪ್ರತಿಪಾದಿಸಲಾಗಿತ್ತು ಆದರೆ ಅದು ಹೇಗೆ ಅವೈದಿಕ ಧರ್ಮವೆಂದು ತಾತ್ವಿಕವಾಗಿ ಸಾಧರ ಪಡಿಸುವಲ್ಲಿ ಈ ಪುಸ್ತಕವು ಯಶಸ್ವಿಯಾಯಿತು. ಲಿಂಗಾಯತ ಧರ್ಮದ ತತ್ವಜ್ಞಾನದ ದೃಷ್ಟಿಯಿಂದ ಈ ಪುಸ್ತಕ ಅಮೂಲ್ಯ ಕೊಡುಗೆಯಾಗಿದೆ.
- ೨೦೦೫ ರಲ್ಲಿ ೮ ನೇ ಲಿಂಗಾಯತ ಧರ್ಮ ಸಮ್ಮೇಳನವು ದೆಹಲಿಯ ಮಹಾವೀರ ವಾಟಿಕಾದಲ್ಲಿ, ೨೦೦೭ ರಲ್ಲಿ ೯ ನೇಯ ಲಿಂಗಾಯತ ಧರ್ಮ ಸಮ್ಮೇಳನವು ತಮಿಳುನಾಡಿನ ಚೆನ್ನೈನಲ್ಲಿ ಹಾಗೂ ೨೦೦೮ ರಲ್ಲಿ ಪುನಃ ದೆಹಲಿಯಲ್ಲಿ ೧೦ ನೇ ಲಿಂಗಾಯತ ಧರ್ಮ ಸಮ್ಮೇಳನ ಪೂಜ್ಯ ಮಾತೆ ಮಹಾದೇವಿಯವರ ನೆತೃತ್ವದಲ್ಲಿ ಜರುಗಿತು.
- ೨೦೧೩ ರಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರಿ ಜನಸಮೂಹದ ಮೂಲಕ ಪೂಜ್ಯ ಮಾತೆ ಮಹಾದೇವಿಯವರು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದರು. ತದನಂತರ ಜನಜಾಗೃತಿ ಮೂಡಿಸಿಲು ಸಮಯ ಮೀಸಲಿಟ್ಟರು.
- ೧೪-೧೧-೨೦೧೬ ಮಹಾರಾಷ್ಟ್ರದ ಶರಣಪರಂಪರೆಯ ಮನ್ಮತಸ್ವಾಮಿಯವರ ಸ್ಥಳ ಬೀಡ್ ನಲ್ಲಿ ಮಹಾರಾಷ್ಟ್ರದ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ಲಿಂಗಾಯತ ಧರ್ಮ ಸಮ್ಮೇಳನ ಜರುಗಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಸಂತ ಡಾ. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿ, ಪೂಜ್ಯ ಬಸವಲಿಂಗ ಪಟ್ಟದೇವ್ರು, ಪೂಜ್ಯ ಬಸವಜಯಮೃತ್ಯುಂಜಯ ಸ್ವಾಮೀಜಿ, ಅವಿನಾಶ ಭೊಷಿಕರ್ ಮತ್ತಿತರರು ಪಾಲ್ಗೊಂಡಿದ್ದರು. ಸಾವಿರಾರು ಜನ ನೆರೆದು ಈ ಸಮ್ಮೇಳನವು ಯಶಸ್ವಿಗೊಂಡಿತು.
- ೨೨-೧-೨೦೧೭ ರಂದು ಮಹಾರಾಷ್ಟ್ರದ ಲಿಂಗಾಯತ ಸಮನ್ವಯ ಸಮಿತಿ ವತಿಯಿಂದ ನಾಂದೇಡನಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಪೂಜ್ಯ ಶಿವಲಿಂಗ ಶಿವಚಾರ್ಯ ಸ್ವಾಮೀಜಿ ಹಾಗೂ ಅವಿನಾಶ ಭೂಷಿಕರ್ ರವರ ನೆತೃತ್ವದಲ್ಲಿ ನೆರೆವೇರಿತು.
- ೨೦೧೭ ರ ಜೂನ್ ತಿಂಗಳಿನಲ್ಲಿ ಪೂಜ್ಯ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂತು. ಈ ಸಮಿತಿಯ ಅಡಿಯಲ್ಲಿ ಎಲ್ಲಾ ಬಸವ ಸಂಘಟನೆಗಳನ್ನು ಒಂದು ಗೂಡಿಸುವ ಕಾರ್ಯವನ್ನು ಪೂಜ್ಯ ಚೆನ್ನಬಸವಾನಂದ ಸ್ವಾಮೀಜಿಯವರು ವಹಿಸಿಕೊಂಡರು. ಆಗ ಮಹಾರಾಷ್ಟ್ರದಲ್ಲಿ ರಾಷ್ಟ್ರಸಂತ ಎಂದೆ ಪ್ರಖ್ಯಾತರಾದ ಶತಾಯುಶಿ ಡಾ. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಬಾಲ್ಕಿಯ ಬಸವಲಿಂಗ ಪಟ್ಟದೇವ್ರು, ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ, ಕೊರ್ಣೆಶ್ವರ ಸ್ವಾಮೀಜಿ, ಬೆಲ್ದಾಳ ಶರಣರು, ಅಕ್ಕ ಅನ್ನಪೂರ್ಣ ಹಾಗೂ ಸ್ಥಳೀಯ ಮುಖಂಡರು, ಶಾಸಕರು, ನ್ಯಾಯವಾದಿಗಳು ಹಾಗೂ ಇನ್ನೂ ಅನೇಕರು ಬೆಂಬಲ ವ್ಯಕ್ತಪಡಿಸಿದರು.
- ೧೯-೭-೨೦೧೭ ರಂದು ಬೀದರನಲ್ಲಿ ಐತಿಹಾಸಿಕ ಲಿಂಗಾಯತ ಸ್ವತಂತ್ರ ಧರ್ಮ ರ‍್ಯಾಲಿ ಲಿಂಗಾಯತ ಸಮನ್ವಯ ಸಮಿತಿಯಡಿಯಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಲಕ್ಷಾಂತರ ಜನ ನೆರೆದು ಅತ್ಯಂತ ಯಶಸ್ವಿಗೊಳಿಸಿದರು. ಇದು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಇತಿಹಾಸದಲ್ಲಿ ಅತಿ ದೊಡ್ಡ ತಿರುವು ಕೊಟ್ಟಿತು. ಅಂದು ಲಕ್ಷಾಂತರ ಜನ ಸೇರಿದ್ದನ್ನು ನೋಡಿ ಇಡಿ ರಾಜ್ಯದ ಜನತೆ ಬೆರಗಾಯಿತು. ಬಸವತತ್ವ ಪರಿಪಾಲಕ ಮಠಗಳ ಹಾಗೂ ರಾಜಕೀಯ ನಾಯಕರ ಗಮನ ಸೆಳೆಯಿತು. ಈ ರ‍್ಯಾಲಿ ಜನಸಾಮಾನ್ಯರ ಹೋರಾಟದ ಸಾಕ್ಷಿಯಂತೆ ಕಂಡಿತು. ತಮ್ಮ ಅಸ್ಮಿತೆಗಾಗಿ, ಬಸವತತ್ವಕ್ಕಾಗಿ ಜನಸಾಮಾನ್ಯರು ನೆರೆದು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ರ‍್ಯಾಲಿಗಾಗಿ ಅನೇಕರು ಹಗಲಿರುಳು ಶ್ರಮಿಸಿ ಯಶಸ್ವಿ ಮಾಡುವುದರಲ್ಲಿ ಪಾತ್ರ ವಹಿಸಿದ್ದಾರೆ.
- ನಾಡಿನಲ್ಲಿ ಸಂಚಲನ ಮೂಡಿಸಿದ ಬೀದರ್ ರ‍್ಯಾಲಿಯಿಂದಾಗಿ ಪ್ರೇರಿತಗೊಂಡು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೂಜ್ಯ ಸಿದ್ಧರಾಮ ಸ್ವಾಮೀಜಿಗಳು ೨೨-೮-೨೦೧೭ ರಂದು ಬೆಳಗಾವಿಯಲ್ಲಿ ಲಿಂಗಾಯತ ಧರ್ಮ ರ‍್ಯಾಲಿ ಯಶಸ್ವಿಯಾಗಿ ನಡೆಸಿದರು. ಈ ರ‍್ಯಾಲಿಯಲ್ಲಿ ನಾಡಿನ ಪ್ರಮುಖ ಮಠಾಧಿಪತಿಗಳಾದ ಗದಗಿನ ಪೂಜ್ಯ ತೊಂಟದ ಸಿದ್ದಲಿಂಗಶ್ರೀಗಳು, ನಿಜಗುಣಾನಂದ ಶ್ರೀಗಳು, ಚಿತ್ರದುರ್ಗದ ಮರುಘಾಶ್ರೀಗಳು, ಮೋಟಗಿಮಠ ಶ್ರೀಗಳು ಹಾಗೂ ಇನ್ನೂ ಅನೇಕ ಗಣ್ಯರು ಭಾಗವಹಿಸಿದರು.
ಲಿಂಗಾಯತ ಧರ್ಮ ಆಸಕ್ತರಾದ ಎಂ ಬಿ ಪಾಟೀಲ್, ವಿನಯ ಕುಲಕರ್ಣಿ ಬಸವರಾಜ ಹೊರಟ್ಟಿ, ಶಿವಾನಂದ ಜಾಮದಾರ ಮುಂತಾದವರು ಹೋರಾಟವನ್ನು ಸೇರಿ ಇನ್ನಷ್ಟೂ ಬಲಪಡಿಸಿದರು.

- ೩-೯-೨೦೧೭ ರಂದು ಮಹಾರಾಷ್ಟ್ರದ ಲಾತೂರಿನಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಕಹಳೆ ಮೊಳಗಿತು. ರಾಷ್ಟ್ರಸಂತ ಎಂದೆ ಪ್ರಖ್ಯಾತರಾಗಿರುವ ಡಾ ಶಿವಲಿಂಗ ಶಿವಚಾರ್ಯ ಸ್ವಾಮಿಗಳ ನೆತೃತ್ವದಲ್ಲಿ ಲಕ್ಷಾಂತರ ಜನ ನೆರೆದು ಇಡೀ ರಾಷ್ಟ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ರ‍್ಯಾಲಿಗಾಗಿ ಚೆನ್ನಬಸವಾನಂದ ಸ್ವಾಮೀಜಿ, ಕೊರಣೇಶ್ವರ ಸ್ವಾಮೀಜಿ, ,ಬಸವಲಿಂಗ ಪಟ್ಟದೆವ್ರ, ಅವಿನಾಶ ಭೂಷಿಕರ್ ಹಾಗೂ ಮಹಾರಾಷ್ಟ್ರದ ಹಲವು ಪ್ರಮುಖರು ಶ್ರಮಿಸಿದ್ದಾರೆ.
- ೨೪-೯-೨೦೧೭ ರಂದು ಕಲಬುರ್ಗಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ರ‍್ಯಾಲಿ ನಡೆಸಲಾಯಿತು. ಸುಲಫಲಶ್ರೀಗಳು ಹಾಗೂ ಇನ್ನಿತರರು ಸೇರಿ ಈ ರ‍್ಯಾಲಿ ಯಶಸ್ವಿಗೊಳಿಸಿದರು. ಕಲಬುರ್ಗಿಯ ಶರಣ ಬಸಪ್ಪ ಅಪ್ಪಾರವರು, ಪೂಜ್ಯ ಬೇಲಿಮಠದ ಸ್ವಾಮೀಜಿ, ರಂಜಾನ ದರ್ಗಾ, ನಟ ಚೇತನರವರು, ಶರಣಪ್ರಕಾಶ ಪಾಟೀಲ್, ಬಸವರಾಜ ರಾಯರೆಡ್ಡಿ ಹಾಗೂ ಹಿಂದೆ ಬೆಂಬಲಿಸಿದ ಎಲ್ಲಾ ಮಹನಿಯರು ಭಾಗವಹಿಸಿದ್ದರು.
- ೨೮-೯-೨೦೧೭ ರಂದು ಚಿತ್ರದುರ್ಗದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಪೂಜ್ಯ ಮರುಘಾಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಿತು. ಈ ಮೂಲಕ ಕರ್ನಾಟಕದ ದಕ್ಷಿಣ ಭಾಗಕ್ಕೆ ಲಿಂಗಾಯತ ಧರ್ಮ ಹೋರಾಟ ಕಾಲಿಟ್ಟಿತು.
- ೧೬-೧೦-೨೦೧೭ ಪೂಜ್ಯ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಬೃಹತ್ ರ‍್ಯಾಲಿ ನಡೆಯಿತು.
- ೫-೧೧-೨೦೧೭ ರಂದು ಹುಬ್ಬಳ್ಳಿಯಲ್ಲಿ ಶ್ರೀ ವಿನಯ ಕುಲಕರ್ಣಿ ಹಾಗೂ ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಬೃಹತ್ ರ‍್ಯಾಲಿ ನಡೆಯಿತು. ಇದೇ ಸಮಯದಲ್ಲಿ ’ರಾಷ್ಟ್ರೀಯ ಬಸವ ಸೇನೆ ಸಂಘಟನೆ’ಗೆ ನಾಂದಿ ಹಾಡಲಾಯಿತು.
- ೧೧-೧೧-೨೦೧೭ ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ರ‍್ಯಾಲಿ ನಡೆಯಿತು. ಅನೇಕ ಪ್ರಮುಖರು ಭಾಗವಸಿದ್ದರು.
- ೧೯-೧೧-೨೦೧೭ ರಂದು ಲಿಂಗಾಯತ ಧರ್ಮ ಮಹಾಸಭಾದ ವತಿಯಿಂದ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮ ಸಮಾವೇಶ ಹಾಗೂ ಲಿಂಗಾಯತ ಧರ್ಮ ಮಹಾಸಭಾದ ೨೨ ನೇ ವಾರ್ಷಿಕೊತ್ಸವ ನಡೆಯಿತು. ಈ ವಾರ್ಷಿಕೊತ್ಸವದಲ್ಲಿ ಪೂಜ್ಯ ಗಂಗಾಮಾತಾಜಿ, ಪೂಜ್ಯ ದಯಾನಂದ ಸ್ವಾಮೀಜಿ, ಪುಟ್ಟರುದ್ರಪ್ಪ, ಸಿ ಎಸ್ ದ್ವಾರಕನಾಥ, ಅರವಿಂದ ಮಾಲಗತ್ತಿ, ಶಿವಾನಂದ ಎಸ್ ಜಾಮದಾರ, ಯೊಗೇಶ ಮಾಸ್ಟರ್ ಹಾಗೂ ಅನೇಕ ಪ್ರಗತಿಪರ ಚಿಂತಕರು ಭಾಗಿಯಾಗಿದ್ದರು.
- ೩-೧೨-೨೦೧೭ ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬೃಹತ್ ರ‍್ಯಾಲಿ ನಡೆಯಿತು. ಲಕ್ಷಾಂತರ ಜನ ಸೇರಿ ಸಮಾವೇಶ ಯಶಸ್ವಿಗೊಳಿಸಿದರು.
- ೧೦-೧೨-೨೦೧೭ ರಂದು ವಿಜಯಪುರದಲ್ಲಿ ಶ್ರೀ ಎಂ ಬಿ ಪಾಟೀಲರವರ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಯಿತು. ಇದೇ ರ‍್ಯಾಲಿ ಹಿಂದಿನ ದಿನ ಲಿಂಗಾಯತ ಧರ್ಮಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಎಂ ಬಿ ಪಾಟೀಲರು ಹಾಗೂ ಶಿವಾನಂದ ಎಸ್ ಜಾಮದಾರರವರು ಬಿಡುಗಡೆ ಮಾಡಿದರು.
- ೨೩-೧-೨೦೧೮ ರಂದು ’ಜಾಗತಿಕ ಲಿಂಗಾಯತ ಮಹಾಸಭಾ’ ಅಸ್ಥಿತ್ವಕ್ಕೆ ಬಂದಿತು. ಇದರ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಹೊರಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ವೀರಶೈವ ಮಹಾಸಭಾದ ಪೋಷಕ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ರಾಜಿನಾಮೆ ನೀಡಿದರು. ಜೊತೆಗೆ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ವೀರಶೈವ ಮಹಾಸಭಾದ ೪೫೦ಕ್ಕೂ ಹೆಚ್ಚು ಜನ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ವೀರಶೈವ ಮಹಾಸಭಾ ಇಬ್ಬದಿ ನೀತಿಯನ್ನು ಖಂಡಿಸಿ ಅದರ ನಂಟು ಕಡಿದುಕೊಂಡರು.
- ೨೮-೧-೨೦೧೮ ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಾಗೂ ಯಾವತ್ ಮಾಳದಲ್ಲಿ ಬೃಹತ್ ರ‍್ಯಾಲಿ ನಡೆಯಿತು.
- ೫-೨-೨೦೧೮ ರಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜಿಲ್ಲಾ ಮಟ್ಟದ ರ‍್ಯಾಲಿ ನಡೆಯಿತು
- ಈ ಎಲ್ಲಾ ರ‍್ಯಾಲಿಗಳ ಪ್ರಭಾವದಿಂದ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟಾಯಿತು. ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರಿಗೆ ಲಿಂಗಾಯತ ಧರ್ಮ ಕುರಿತು ೫ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ೫ ಅರ್ಜಿಗಳನ್ನು ಸಿದ್ದರಾಮಯ್ಯನವರು ಹಿಂದುಳಿದ ವರ್ಗ ಆಯೋಗಕ್ಕೆ ಸಲ್ಲಿಸಿದರು. ಹಿಂದುಳಿದ ವರ್ಗ ಆಯೋಗವು ತಜ್ಞರ ಸಮಿತಿಯನ್ನು ರಚನೆ ಮಾಡಿತು.
- ೧೯-೩-೨೦೧೮ ರಂದು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತಜ್ಞರ ಸಮಿತಿಯ ವರದಿಯಂತೆ ಒಕ್ಕೂರಲಿನಿಂದ ’ಲಿಂಗಾಯತ ಮತ್ತು ವೀರಶೈವ ಲಿಂಗಾಯತ (ಬಸವತತ್ವ ಒಪ್ಪುವ) ವವರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡಬೇಕೆಂದು ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ದಿನವನ್ನು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ. ಈ ಘನ ಕಾರ್ಯದಿಂದ ಮಾನ್ಯ ಸಿದ್ಧರಾಮಯ್ಯನವರ ಹಾಗೂ ಇನ್ನಿತರ ಮುಖಂಡರ ಹೆಸರು ಲಿಂಗಾಯತ ಧರ್ಮ ಇತಿಹಾಸ ಪುಟದಲ್ಲಿ ಸೇರಿತು.
- ೨೨-೩-೨೦೧೮ ರಂದು ಹಿಂದುಳಿದ ವರ್ಗ ಆಯೋಗದಿಂದ ಸೆಕ್ಷನ್ 2D ಮೈನಾರಿಟಿ ಕಮಿಷನ್ ಆಕ್ಟ ಮೂಲಕ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು.
- ೮-೪-೨೦೧೮ ರಂದು ಮಹಾರಾಷ್ಟ್ರದ ಔರಂಗಾಬಾದನಲ್ಲಿ ಬೃಹತ್ ಲಿಂಗಾಯತ ಧರ್ಮ ರ‍್ಯಾಲಿ ನಡೆಯಿತು.
- ೨೯-೪-೨೦೧೮ ರಂದು ಮಹಾರಾಷ್ಟ್ರದ ನಾಸಿಕನಲ್ಲಿ ಜಿಲ್ಲಾ ಮಟ್ಟದ ಲಿಂಗಾಯತ ಧರ್ಮ ರ‍್ಯಾಲಿ ನಡೆಯಿತು.
- ೩-೬-೨೦೧೮ ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕಿರಿಟೇಶ್ವರ ಮಠದ ಸಹಯೋಗದಿಂದ ಎಲ್ಲಾ ಲಿಂಗಾಯತ ಧರ್ಮ ಹೋರಾಟಗಾರ ನೇತೃತ್ವದಲ್ಲಿ ಬೃಹತ್ ಲಿಂಗಾಯತ ಧರ್ಮ ರ‍್ಯಾಲಿ ನಡೆಯಿತು.
- ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅಂಗಿಕರಿಸಬೇಕೆಂದು ಒತ್ತಾಯಿಸಿ ೨೦೧೮ ಡಿಸೆಂಬರ್ ೧೦, ೧೧, ೧೨ ರಂದು ದೆಹಲಿಯಲ್ಲಿ ಬೃಹತ್ ಸಮಾವೇಶ ಹಾಗೂ ರ‍್ಯಾಲಿ ಪೂಜ್ಯ ಮಾತೆ ಮಹಾದೇವಿಯವರ ನೇತೃತ್ವದಲ್ಲಿ ನೆರೆವೆರಿತು. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ದೆಹಲಿಯಲ್ಲಿ ನಡೆದ ೪ನೇ ಬಾರಿ ಸಮ್ಮೇಳನ ಇದು.
- ೧೫-೯-೨೦೧೯ ರಂದು ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಪೂಜ್ಯ ಗಂಗಾದೇವಿ ಮಾತಾಜಿಯವರ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಯಿತು. ಈ ರ‍್ಯಾಲಿಯಲ್ಲಿ ಮಹಾರಾಷ್ಟ್ರದ ಹಾಗೂ ಕರ್ನಾಟಕದ ಎಲ್ಲಾ ಪೂಜ್ಯರು ಹಾಗೂ ಮುಖಂಡರು ಭಾಗವಹಿಸಿದರು. ಲಕ್ಷಾಂತರ ಜನ ಪಾಲ್ಗೊಂಡು ಅತ್ಯಂತ ಯಶಸ್ವಿ ರ‍್ಯಾಲಿ ನೆರೆವೇರಿತು.
- ೧೫-೯-೨೦೨೦ ಲಿಂಗಾಯತ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಲೋಪದೋಷವಾಗುತ್ತಿದೆ. ನಮ್ಮ ಮೂಲ ಲಿಂಗಾಯತ ಧರ್ಮವಾಗಿದೆ ಹಾಗಾಗಿ ’ವೀರಶೈವ ಲಿಂಗಾಯತ’ ಬದಲು ’ಲಿಂಗಾಯತ’ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ನಾಡಿನ ಎಲ್ಲಾ ಬಸವಪರ ಸಂಘಟನೆಗಳು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
- ೨೪-೧೦-೨೦೨೧ ಮಹಾರಾಷ್ಟ್ರದ ಪರಭಾಣಿಯಲ್ಲಿ ಬೃಹತ್ ರ‍್ಯಾಲಿ ನಡೆಯಿತು
- ೨೯-೦೧-೨೦೨೩ ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಬೃಹತ್ ರ‍್ಯಾಲಿ ನಡೆಯಿತು
- ೦೪-೦೬-೨೦೨೩ ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ಬೃಹತ್ ರ‍್ಯಾಲಿ ನಡೆಯಿತು
- ೦೫-೧೦-೨೦೨೫ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸತತವಾಗಿ ಒಂದು ತಿಂಗಳು ರಾಜ್ಯಾದ್ಯಂತ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು. ಈ ಅಭಿಯಾನದಲ್ಲಿ ೩೫೦ ಕ್ಕೂ ಹೆಚ್ಚು ಮಠಾಧಿಶರು ಭಾಗವಹಿಸಿದರು.
ನಾಡಿನ ಎಲ್ಲಾ ಬಸವಪರ ಸಂಘಟನೆಗಳು ಸಕ್ರೀಯವಾಗಿ ಭಾಗವಹಿಸಿ ಅತ್ಯಂತ ಯಶಸ್ವಿಪೂರ್ಣ ಅಭಿಯಾನ ಇದಾಯಿತು. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳು ಆದರೆ ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಧಾರ್ಮಿಕವಾಗಿ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಮತ್ತು ಇದರ ಜಾಗೃತಿ ಸದಾ ಮುಂದುವರಿಯುತ್ತದೆ ಎಂದು ಮತ್ತೊಮ್ಮೆ ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ಕಹಳೆ ಮೊಳಗಿತು.

ಲಿಂಗಾಯತ ಧರ್ಮ ಹೋರಾಟಕ್ಕೆ ಒಂದು ಶತಮಾನದ ಇತಿಹಾಸವಿದೆ. ಈ ಹೋರಾಟ ಯಾವುದೇ ಧರ್ಮದ ವಿರುದ್ಧ ಹೋರಾಟವಲ್ಲ. ಇದು ನಮ್ಮ ಅಸ್ಮಿತೆಯ ಹೋರಾಟ. ಬಸವತತ್ವ ಜಾರಿಗಾಗಿ ಹೋರಾಟ. ಜಾಗತಿಕ ಮಟ್ಟದ ಧರ್ಮಗಳ ಸಾಲಿಗೆ ಲಿಂಗಾಯತ ಧರ್ಮವನ್ನು ಸೇರಿಸಲು ನಡೆದಿರುವ ಹೋರಾಟ.
ಕಳೆದ ವರ್ಷಗಳಲ್ಲಿ ಪೂಜ್ಯ ಮಾತೆ ಮಹಾದೇವಿಯವರು, ಪೂಜ್ಯ ತೋಂಟದ ಸಿದ್ಧಲಿಂಗಶ್ರೀಗಳು, ಪೂಜ್ಯ ಇಲಕಲ್ ಮಹಾಂತ ಶಿವಯೋಗಿಗಳನ್ನು ಕಳೆದುಕೊಂಡಿದ್ದೇವೆ.
೧೨ನೇ ಶತಮಾನದಲ್ಲಿ ಬಸವಾದಿ ಶರಣರು ಲಿಂಗಾಯತ ಧರ್ಮ ಉಳಿಸಲು ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ್ದಾರೆ. ಅವರ ದಾರಿಯಲ್ಲಿ ನಡೆದು ಅವರ ಮಟ್ಟಕ್ಕೆ ನಾವು ಏರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಹೋರಾಟವನ್ನು ನಾವು ಲಿಂಗಾಯತರು ನಮ್ಮ ಉದ್ದಾರಕ್ಕಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಾವೆಲ್ಲರೂ ಭಾಗಿಯಾಗಿ ಶರಣರ ಋಣ ತೀರಿಸಬೇಕೆಂಬುದು ನಮ್ಮ ಆಶಯ.

ಸಂಗ್ರಹ – ಕಿರಣ ಬೆಲ್ಲದ,
Email ID – kiran.bellad@gmail.com
ಸೂಚನೆ : – ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಸಂಬಂಧ ಪಟ್ಟ ಎಲ್ಲಾ ಮಾಹಿತಿಯನ್ನು ಕಲೆಹಾಕಲು ಪ್ರಯತ್ನಿಸಲಾಗಿದೆ. ಒಂದು ವೇಳೆ ಯಾವುದಾದರೂ ಮಾಹಿತಿ ಬಿಟ್ಟು ಹೋಗಿದ್ದರೆ ದಯಮಾಡಿ ನನ್ನ ಈ ಮೇಲ್ ಐಡಿಗೆ ಕಳುಹಿಸಿರಿ.
ಆಕರ ಗ್ರಂಥಗಳು:
- ಲಿಂಗಾಯತರು ಹಿಂದೂಗಳಲ್ಲ ಮತ್ತು ಲಿಂಗಾಯತರು ವೀರಶೈವರಲ್ಲ – ಡಾ. ಮಾತೆ ಮಹಾದೇವಿಯವರು
- ಲಿಂಗಾಯತರು ಹಿಂದೂಗಳಲ್ಲ – ಡಾ. ಎನ್ ಜಿ ಮಹಾದೇವಪ್ಪನವರು
- ಮಾರ್ಗ ೭ – ಡಾ ಎಂ ಎಂ ಕಲಬುರ್ಗಿಯವರು
- ಲಿಂಗಾಯತರು ಹಿಂದೂಗಳೇ? – ಒಂದು ತೌಲನಿಕ ಅಧ್ಯಯನ
- ಸಮಗ್ರ ವಚನ ಸಂಪುಟ
- ದಿನಪತ್ರಿಕೆಗಳು

ತಮ್ಮ ಅಮೂಲ್ಯ ಸಾಧನೆಗಳು ಈ ರೀತಿ ಎಲ್ಲ ಕಡೆ ಮಾಡಿ ಎಲ್ಲರಿಗೆ ಪ್ರೋತ್ಸಾಹ ನೀಡುವ ಮೂಲಕ ಲಿಂಗಾಯತ ಧರ್ಮದ ಮಾನ್ಯತೆಗೆ ಕಾನೂನು ಕಾಯ್ದೆ ಜಾರಿಗೊಳಿಸಲು ರಾಜ್ಯದಲ್ಲಿಯೇ ಅತ್ಯುತ್ತಮವಾದ ಕಾರ್ಯಕ್ರಮವನ್ನು ನಡೆಸಿದ್ದೀರಿ.ತಮಗೆಲ್ಲ ಅಭಿನಂದನೆ. ಈ ಹೋರಾಟದ ವಿವರ UNO – ವಿಶ್ವ ಸಂಸ್ಥೆಗೆ, ಹಾಗೂ ಗಿನ್ನಿಸ ದಾಖಲೆಗೆ ಸೇರಿಸಲು ತಾವು (ಜಾಗತಿಕ ಲಿಂಗಾಯತ ಮಹಾ ಸಭೆ) ಕ್ರಮ ತೆಗೆದುಕೊಳ್ಳಬೇಕೆಂದು ಕಳಕಳಿಯ ಮನವಿ. ತಮ್ಮ ಅಮೂಲ್ಯ ಸಾಧನೆಗಳನ್ನು ನಿಜವಾಗಲು ಲಿಂಗಾಯತ ಧರ್ಮದಲ್ಲಿ ಬಂದ ಚಳವಳಿಯ ಮಾರ್ಗ ದಿನಾಂಕಗಳ ಸಹಿತ, ವಿವಿಧ ಸ್ಥಳಗಳಲ್ಲಿ ನಡೆಸಿದ್ದು , ಬಹಳ ಶ್ಲಾಘನೀಯವಾಗಿದೆ. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.
ಲಿಂಗಾಯತ ಸ್ವತಂತ್ರ ಧರ್ಮ ಕುರಿತ ತಮ್ಮ ಲೇಖನ ಎಲ್ಲ ಮಾಹಿತಿಗಳು ಮತ್ತು ಚಿತ್ರಪಟಗಳಂತೆ ಕೂಡಿ, ಹೋರಾಟದ ಸಮಗ್ರ ಚಿತ್ರಣವನ್ನು ನೀಡಿದೆ. ಅಭಿನಂದನೆಗಳು 👍🙏
ತಮ್ಮ ಅಮೂಲ್ಯ ಸಾಧನೆಗಳು ಈ ರೀತಿ ಎಲ್ಲ ಕಡೆ ಮಾಡಿ ಎಲ್ಲರಿಗೆ ಪ್ರೋತ್ಸಾಹ ನೀಡುವ ಮೂಲಕ ಲಿಂಗಾಯತ ಧರ್ಮದ ಮಾನ್ಯತೆಗೆ ಕಾನೂನು ಕಾಯ್ದೆ ಜಾರಿಗೊಳಿಸಲು ನೆರೆ ರಾಜ್ಯ, ರಾಜ್ಯದಲ್ಲಿಯೇ ಅತ್ಯುತ್ತಮವಾದ ಕಾರ್ಯಕ್ರಮವನ್ನು ನಡೆಸಿದ್ದೀರಿ. ತಮಗೆಲ್ಲ ಅಭಿನಂದನೆಗಳು. ಈ ಹೋರಾಟದ ವಿವರ UNO – ವಿಶ್ವ ಸಂಸ್ಥೆಗೆ, ಹಾಗೂ ಗಿನ್ನಿಸ ದಾಖಲೆಗೆ ಸೇರಿಸಲು ತಾವು (ಜಾಗತಿಕ ಲಿಂಗಾಯತ ಮಹಾ ಸಭೆ) ಇಂಗ್ಲಿಷ್ ಭಾಷೆಯಲ್ಲಿ ತರ್ಜುಮೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಕಳಕಳಿಯ ಮನವಿ. ತಮ್ಮ ಅಮೂಲ್ಯ ಸಾಧನೆಗಳನ್ನು ನಿಜವಾಗಲು ಲಿಂಗಾಯತ ಧರ್ಮದಲ್ಲಿ ಬಂದ ಚಳವಳಿಯ ಮಾರ್ಗ ದಿನಾಂಕಗಳ ಸಹಿತ, ವಿವಿಧ ಸ್ಥಳಗಳಲ್ಲಿ ಭಾವ ಚಿತ್ರ ದೊಂದಿಗೆ ನೆರವೇರಿಸಿದ್ದು ಬಹಳ ಶ್ಲಾಘನೀಯವಾಗಿದೆ. ಎಲ್ಲರಿಗೂ ಶುಭವಾಗಲಿ, ಶರಣು ಶರಣಾರ್ಥಿ.