(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)
ಧಾರವಾಡ
12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಪ್ರಚಾರ ಮಾಡಲು ಶರಣರು ಸ್ಥಾಪಿಸಿದ್ದು ಸಂಚಾರಿ ಜಂಗಮ ಪೀಠ. ಸಮಾನತೆಗಾಗಿ ಹೋರಾಡಿದ ಅವರು ಭಕ್ತರ ಮೇಲೆ ಕೂರುವ ‘ಗುರು’ ವ್ಯವಸ್ಥೆಯನ್ನು ರೂಪಿಸಲಿಲ್ಲ.
ಕಲ್ಯಾಣ ಕ್ರಾಂತಿಯ ನೂರಾರು ವರ್ಷಗಳ ನಂತರ ಮೊದಲ ವಿರಕ್ತ ಮಠಗಳು ಹುಟ್ಟಿ ಹಬ್ಬಿದವು.
ಶರಣರಲ್ಲಿ ‘ಗುರು’ ವ್ಯವಸ್ಥೆಯ ಕಲ್ಪನೆಯಿರಲಿಲ್ಲ

ದೀಕ್ಷೆ, ಜನನ, ಮರಣಗಳ ಆಚರಣೆಗಳನ್ನು ನಡೆಸಲು ಶರಣರು ಪ್ರತ್ಯೇಕ ಗುರುಗಳನ್ನು ಸೃಷ್ಟಿಸಲಿಲ್ಲ. ಸಮಾನತೆಗಾಗಿ ಹೋರಾಡಿದ ಅವರು ಭಕ್ತರ ಮೇಲೆ ಕೂರುವ ‘ಗುರು’ ವ್ಯವಸ್ಥೆಯನ್ನು ರೂಪಿಸಲಿಲ್ಲ.
ದೇವಾಲಯದ ಸ್ಥಾವರ ಲಿಂಗವನ್ನು ನಿರಾಕರಿಸಿದಂತೆ, ಮಠದಲ್ಲಿನ ಗುರುವ್ಯವಸ್ಥೆಯನ್ನೂ ಶರಣರು ನಿರಾಕರಿಸಿದರು. ಜ್ಞಾನಿಯಾದ ಯಾವುದೇ ವ್ಯಕ್ತಿಗೆ ದೀಕ್ಷೆ ನೀಡುವ ಅಧಿಕಾರವನ್ನು ನೀಡಿದ್ದರು.
ಮಾವನಾದ ಬಸವಣ್ಣ ಅಳಿಯ ಚೆನ್ನಬಸವಣ್ಣನಿಗೆ, ಎಳೆಯ ಚೆನ್ನಬಸವಣ್ಣ ಹಿರಿಯ ಸಿದ್ದರಾಮರಿಗೆ, ಅಣ್ಣ ಅಜಗಣ್ಣ ತಂಗಿ ಮುಕ್ತಾಯಿಗೆ ಈ ಕಾರಣದಿಂದಲೇ ದೀಕ್ಷೆ ನೀಡಲು ಸಾಧ್ಯವಾಗಿದ್ದು.
ಬಸವಣ್ಣನಿಗೆ ದೀಕ್ಷೆ ನೀಡಿದ ‘ಗುರು’ವಿನ ಬಗ್ಗೆ ಸ್ಪಷ್ಟತೆಯಿಲ್ಲ. ತಮ್ಮ ವಚನಗಳಲ್ಲಿ ನೂರಾರೂ ಶರಣರನ್ನು ಬಸವಣ್ಣ ಬಣ್ಣಿಸಿದರೂ, ತಮಗೆ ದೀಕ್ಷೆ ನೀಡಿದ ಗುರುವನ್ನು ಎಲ್ಲೂ ಸ್ಮರಿಸುವುದಿಲ್ಲ.
ಮಂಟೇಸ್ವಾಮಿ ಪರಂಪರೆಯ ದಲಿತರು ಬಸವಣ್ಣನವರು ತಮ್ಮ ಗುರುಗಳೆಂದು ಪರಿಗಣಿಸುತ್ತಾರೆ. ಅವರ ಜಾನಪದ ಹಾಡುಗಳಲ್ಲಿ ಬಸವಣ್ಣನವರನ್ನು ಗುರುವಿಲ್ಲದ ಗುಡ್ಡ (ಶಿಷ್ಯ) ಎಂದು ಬಣ್ಣಿಸಲಾಗಿದೆ.
ಆದರೆ ಶರಣ ಧರ್ಮದ ಒಳಗೆ ಬಂದ ವೈದಿಕ ಆರಾಧ್ಯರು ಲಿಂಗಾಯತರ ಗುರುಗಳಾಗಿ ಬೆಳೆದರು. ಜಾತ್ಯಾತೀತ ಸಮಾಜದಲ್ಲಿ ಜಂಗಮ ಜಾತಿ ಸೃಷ್ಟಿಸಿ ಮಠಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
(‘ಚತುರಾಚಾರ್ಯ ಪೀಠ: ಸೃಷ್ಟಿ ಸಂದರ್ಭ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪.)
ಶರಣರು ಕಟ್ಟಿದ್ದು ಜಂಗಮ ಪೀಠ, ಮಠಗಳಲ್ಲ

ಇಂದು ಲಿಂಗಾಯತ-ವೀರಶೈವ ಸಮಾಜದಲ್ಲಿ ವಿರಕ್ತ, ಗುರು ಪರಂಪರೆಯ ಮಠಗಳಿವೆ. ಈ ಎರಡೂ ಸಂಪ್ರದಾಯಗಳು ಅಸ್ತಿತ್ವಕ್ಕೆ ಬಂದದ್ದು ಕಲ್ಯಾಣ ಕ್ರಾಂತಿಯ 500 ವರ್ಷಗಳ ನಂತರ.
12ನೇ ಶತಮಾನದ ಶರಣರು ಸ್ಥಾಪಿಸಿದ್ದು ಧರ್ಮ ಪ್ರಚಾರ ಮಾಡುವ ಸಂಚಾರಿ ಜಂಗಮ ಪೀಠ. ಆ ಕಲ್ಪನೆಯಲ್ಲಿ ಹುಟ್ಟಿದ್ದೇ ಅನುಭವ ಮಂಟಪ. ಅದರ ಪೀಠಾಧಿಪತಿಗಳೇ ಅಲ್ಲಮ ಪ್ರಭುಗಳು.
ಪ್ರಜಾತಾಂತ್ರಿಕ ವೇದಿಕೆಯಾಗಿದ್ದ ಅನುಭವ ಮಂಟಪ ಸಂಪ್ರದಾಯವಾದಿಗಳ ವಿರೋಧದಿಂದ ಸ್ಥಗಿತವಾಯಿತು. ಅದಕ್ಕೆ ಮರು ಹುಟ್ಟು ನೀಡಿದ್ದು 16ನೇ ಶತಮಾನದಲ್ಲಿ ಬಂದ ತೋಂಟದ ಸಿದ್ಧಲಿಂಗರು.
ಸಿದ್ಧಲಿಂಗರು ಮತ್ತವರ 700 ವಿರಕ್ತ ಶಿಷ್ಯರು ಸಂಚರಿಸುತ್ತ ಅನುಭವ ಮಂಟಪದ ಘೋಷ್ಠಿಗಳನ್ನು ರಾಜ್ಯದ ಹಲವೆಡೆ ನಡೆಸಿದರು. ಅವರ ಪರಿಶ್ರಮದಿಂದ ಶರಣ ಧರ್ಮ ಮತ್ತೆ ಚಿಗುರಿತು.
ಆದರೆ ವಿಪರ್ಯಾಸವೆಂದರೆ ಸಿದ್ಧಲಿಂಗರು ಲಿಂಗೈಕ್ಯರಾದ ಮೇಲೆ ಈ ಜಂಗಮ ಸಂಪ್ರದಾಯ ಸ್ಥಾವರ ಮಠಗಳಾಗಿ ಕವಲೊಡೆಯಿತು. ಅವರ ಶಿಷ್ಯರ ನಡುವೆ ಮೂಡಿದ ವೈಮನಸ್ಯ ಇದಕ್ಕೆ ಮುಖ್ಯ ಕಾರಣ.
17ನೇ-18ನೇ ಶತಮಾನಗಳ ನಡುವೆ ಹರಪ್ಪನಹಳ್ಳಿ, ಚಿತ್ರದುರ್ಗ, ಇಸಳೂರಿನಲ್ಲಿ ಮೊದಲ ವಿರಕ್ತ ಮಠಗಳು ಹುಟ್ಟಿ ಹಬ್ಬಿದವು. ಜಂಗಮ ಪೀಠ ಮತ್ತೆ ಸ್ಥಗಿತವಾಗಿ ಸ್ಥಾವರ ಮಠಗಳು ಬೆಳೆದವು.
(‘ಚತುರಾಚಾರ್ಯ ಪೀಠ: ಸೃಷ್ಟಿ ಸಂದರ್ಭ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ
ಲಿಂಗಾಯತ ಸಮಾಜದ ಪ್ರಥಮ ವಿರಕ್ತ ಮಠಗಳು

ತೋಂಟದ ಸಿದ್ಧಲಿಂಗ ಶಿವಯೋಗಿಗಳು ಲಿಂಗೈಕ್ಯರಾದ ಬಳಿಕ 1570ರಲ್ಲಿ ಎಡೆಯೂರಿನ ಅವರ ಸಮಾದಿಯ ಮೇಲೆ ಒಂದು ಮಂಟಪವು ಎದ್ದು ಅಲ್ಲಿ ನಿತ್ಯ ಪೂಜೆಯ ವ್ಯವಸ್ಥೆಯಾಯಿತು.
ಆದರೆ ಅವರ ಉತ್ತರಾಧಿಕಾರಿ ಬೋಳಬಸವರು ಅಲ್ಲಿ ನಿಲ್ಲದೆ, ಧರ್ಮ ಪ್ರಚಾರಕ್ಕಾಗಿ ಹೊರಟರು. ಸಿದ್ಧಲಿಂಗರು ಹುಟ್ಟುಹಾಕಿದ್ದ ಸಂಚಾರಿ ಜಂಗಮ ಪರಂಪರೆಯನ್ನು ಮುಂದುವರೆಸಿದರು.
ಅವರ ನಂತರ ಪಟ್ಟಕ್ಕೆ ಬಂದ ಚೆನ್ನಂಜೆದೇವರು ಕೂಡಾ ಸಂಚಾರಿ ಜಂಗಮರಾದರು. ಈ ಜಂಗಮ ಸಂಪ್ರದಾಯ ಸ್ಥಾವರದತ್ತ ತಿರುಗಿದ್ದು ಅವರ ಉತ್ತರಾಧಿಕಾರಿ ಕಟ್ಟಿಗೆಹಳ್ಳಿ ಸಿದ್ಧಲಿಂಗರ ಕಾಲದಲ್ಲಿ.
ಅವರು ಪಾಳೇಗಾರ ಬಸವಂತರಾಯನ (1682-1705) ನೆರವಿನಿಂದ ಹರಪ್ಪನಹಳ್ಳಿಯಲ್ಲಿ ಮೊದಲ ಲಿಂಗಾಯತ ಮಠ ಸ್ಥಾಪಿಸಿ, ತಮ್ಮ ಶಿಷ್ಯ ಚೀಲಾಳ ಸ್ವಾಮಿಗಳನ್ನು ಪಟ್ಟಕ್ಕೆ ಕೂರಿಸಿದರು.
ಇದರಿಂದ ಮುನಿಸುಕೊಂಡ ಅವರ ಮತ್ತೊಬ್ಬ ಶಿಷ್ಯ ಮುರುಗಾ ಶಾಂತವೀರರು ಪಾಳೇಗಾರ ಭರಮಣ್ಣನಾಯಕನ (1656-1703) ನೆರವಿನಿಂದ ಚಿತ್ರದುರ್ಗದಲ್ಲಿ ಮುರುಗಾ ಮಠ ಸ್ಥಾಪಿಸಿದರು.
ಇನ್ನೊಬ್ಬ ಶಿಷ್ಯ ಕುಮಾರಸ್ವಾಮಿ ಸಾದ್ವಿ ಅರಸರ ಸಹಾಯದಿಂದ ಇಸಳೂರಿನಲ್ಲಿ ಮೂರನೇ ಮಠ ಸ್ಥಾಪಿಸಿದರು. ಇವೆಲ್ಲಾ ಶಾಖೆಗಳನ್ನು ರಚಿಸಿಕೊಳ್ಳುತ್ತಾ ಸಮರೋಪಾದಿಯಾಗಿ ಹರಡಿದವು.
(‘ವಿರಕ್ತ ಪರಂಪರೆಯ ಎರಡು ಪ್ರಥಮ ಮಠಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪.)
ಕೆಲವೇ ಕುಟುಂಬಗಳ ವಶವಾದ ಲಿಂಗಾಯತ ಮಠಗಳು

ವಿರಕ್ತ ಮಠಗಳು ಉಗಮವಾದ ಮೇಲೆ ಜಾತಿ ಜಂಗಮರಾಗಿ ಬೆಳೆದಿದ್ದ ವೀರಶೈವರು ತಮ್ಮ ಸಂಪ್ರದಾಯವನ್ನು ಬೆಳೆಸಲು ಪಂಚಾಚಾರ್ಯರ ಗುರು ಮಠಗಳನ್ನು ಹುಟ್ಟು ಹಾಕಿದರು.
ಮೊದಲು ಮಠಗಳಲ್ಲಿ ಯಾರಾದರೂ ಪೀಠವನ್ನೇರಲು ಸಾಧ್ಯವಿತ್ತು. ಆದರೆ ಕ್ರಮೇಣ ವಟುಗಳನ್ನು ರೂಪಿಸುವ ಮಠಗಳ ಮತ್ತು ಶಿವಯೋಗಮಂದಿರದ ಆಯ್ಕೆ ಕೇವಲ ಜಾತಿ ಜಂಗಮರಿಗೆ ಸೀಮಿತವಾಯಿತು.
ಮುಂದೆ ಗುರು ಮಠದ ಪೀಠಗಳಲ್ಲಿ ಶಿಷ್ಯ ವರ್ಗ ಮತ್ತು ಪುತ್ರ ವರ್ಗವೆಂಬ ಎರಡು ಪದ್ದತಿಗಳು ಶುರುವಾದವು. ಶಿಷ್ಯ ವರ್ಗದ ಪದ್ದತಿಯಿಂದ ಮಠಗಳು ಜಂಗಮ ಸಮಾಜದ ಆಸ್ತಿಗಳಾದವು.
ಪುತ್ರವರ್ಗದ ಪದ್ದತಿಯಿಂದ ಮಠಗಳು ಕೆಲವೇ ಜಂಗಮ ಕುಟುಂಬಗಳ ಆಸ್ತಿಗಳಾಗಿ ಕೊನೆಗೆ ಗ್ರಹಸ್ಥರ ಮನೆಗಳೇ ಆದವು. ಒಂದು ಲೆಕ್ಕದಂತೆ ಇದ್ದ 5,706 ಮಠಗಳಲ್ಲಿ 3,828 ಮಠಗಳು ಗ್ರಹಸ್ಥರ ಮನೆಗಳಾದವು.
ಉಳಿದ 1,875 ಮಠಗಳಲ್ಲಿ ನಿಜವಾಗಿ ಉಳಿದುಕೊಂಡವು 1,086 ಮಠಗಳು ಮಾತ್ರ. ಅಂದರೆ ಉಳಿದಿರುವ ಮಠಗಳಿಗಿಂತ ಮೂರು ಪಟ್ಟು ಮಠಗಳು ಗ್ರಹಸ್ಥರ ಮನೆಗಳಾದವು.
ಕಲ್ಯಾಣದ ಶರಣರು ಗುರು ವ್ಯವಸ್ಥೆಯನ್ನು ನಿರಾಕರಿಸಿದರೂ, ಲಿಂಗಾಯತರಲ್ಲಿ ಗುರು ವರ್ಗ, ಜಾತಿ ಜಂಗಮರು ಸೃಷ್ಟಿಯಾದರು. ಜಂಗಮ ಸಮಾಜ ಕ್ರಮೇಣ ಸ್ಥಾವರ ಮಠಗಳತ್ತ ಹೊರಳಿತು.
(‘ಶರಣ ಸಾಹಿತ್ಯ ಸಮ್ಮೇಳನ: ಅಧ್ಯಕ್ಷತೆ ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸುವ ಭಾಗ – ಮಾರ್ಗ ೬)
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
