ಗುರುಬಸವ ಮಠದಲ್ಲಿ ಎರಡು ದಿನಗಳ ಬಸವಧರ್ಮ ಉತ್ಸವದ ಸಂಭ್ರಮ

ಡಿ.ಪಿ. ನಿವೇದಿತಾ
ಡಿ.ಪಿ. ನಿವೇದಿತಾ

ರಾಮದುರ್ಗ :

ತಾಲೂಕಿನ ನಾಗನೂರ ಗ್ರಾಮದಲ್ಲಿ ಗುರುಬಸವ ಮಠದ ವತಿಯಿಂದ ‘ಬಸವ ಧರ್ಮ ಉತ್ಸವ-2026’ ಹಾಗೂ ‘ಅಲ್ಲಮಪ್ರಭುಗಳ ಜಯಂತಿ’ ಎರಡು ದಿನ ಅರ್ಥಪೂರ್ಣವಾಗಿ ನಡೆಯಿತು.

ಶುಕ್ರವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಸವಪ್ರಕಾಶ ಸ್ವಾಮಿಗಳು, ಇದು 16ನೇ ಬಸವಧರ್ಮ ಉತ್ಸವವಾಗಿದೆ. ನಮ್ಮ ಬದುಕಿನಲ್ಲಿ ನೂರಾರು ಅಡೆತಡೆಗಳು ಬಂದರೂ ಅದನ್ನೆಲ್ಲ ಮೀರಿ ನಿಲ್ಲುವ ಶಕ್ತಿಯನ್ನು ಬಸವಧರ್ಮ ಕಲಿಸಿಕೊಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಸದಾಶಿವ ಗಾಯಕವಾಡ ಅವರು ಮಾತನಾಡಿ, ಬಸವಧರ್ಮದ ಕಾರ್ಯವನ್ನು ಇಂತಹ ಸಣ್ಣ ಹಳ್ಳಿಯಲ್ಲಿ ಇಷ್ಟು ಅಚ್ಚುಕಟ್ಟಾಗಿ ಮಾಡುತ್ತಿರುವ ಬಸವಗೀತಾ ತಾಯಿಯವರು ಹಾಗೂ ಬಸವಪ್ರಕಾಶ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ ಎಂದರು.

ಶಿವಪ್ಪ ನಿರಾಕಾರಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಹಳ್ಳಿಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುವುದು ನಮಗೆ ತುಂಬಾ ಸಂತಸದ ತಂದಿದೆ ಎಂದರು.

ಸಮ್ಮುಖ ವಹಿಸಿದ್ದ ಬಸವಗೀತಾ ತಾಯಿಯವರು ಮಾತನಾಡಿ, ಬಸವತತ್ವದ ನಮ್ಮ ಬದುಕಿನಲ್ಲಿ ತುಂಬಾ ನೆಮ್ಮದಿಯಿದೆ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಅದರ ಸವಿ ಏನೆಂದು ಎಂದು ಎಂದರು.

ಸಾನಿಧ್ಯ ವಹಿಸಿದ್ದ ಇಲಕಲ್ಲ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಶ್ರೀಗಳು ಮಾತನಾಡಿ, ಈ ಕಾರ್ಯಕ್ರಮದ ರೂವಾರಿಗಳಾದ ನಾಗನೂರಿನ ಈರ್ವರೂ ಶ್ರೀಗಳು ತುಂಬಾ ಶ್ರಮವಹಿಸಿ ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ತತ್ವನಿಷ್ಠೆ ಮಾದರಿಯಾಗುವಂತಿದೆ ಎಂದರು.

ಶನಿವಾರ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕು ಮೊದಲು ಮುಂಜಾನೆ ಊರಿನ ಬೀದಿಗಳಲ್ಲಿ ಶರಣರ ವಚನ ಸಾಹಿತ್ಯ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಉತ್ಸವವು ಬಸವೇಶ್ವರ ಭಜನಾ ಮಂಡಳದೊಂದಿಗೆ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರದ ಮುಖ್ಯ ಸಚೇತಕರು, ಸ್ಥಳೀಯ ಶಾಸಕರು ಆದ ಅಶೋಕ ಪಟ್ಟಣ ಮಾತನಾಡಿ, ಈ ಚಿಕ್ಕ ಹಳ್ಳಿಯಲ್ಲಿ ಇಂತಹ ಕಾರ್ಯಕ್ರಮ ಜರುಗುವುದು ತುಂಬಾ ಹೆಮ್ಮೆಯ ವಿಷಯ. ಪೂಜ್ಯರಿಬ್ಬರೂ ತಮ್ಮ ಪರಿಶ್ರಮದಿಂದ ಬಸವತತ್ವ ಪ್ರಚಾರವನ್ನು ಮಾಡುತ್ತಿದ್ದಾರೆ. ಅವರಿಗೆ ನಾವೆಂದಿಗೂ ಬೆಂಗಾವಲಾಗಿ ಇರುತ್ತೇವೆ ಎಂದರು.

ದುಷ್ಚಟಮುಕ್ತ ಭಾರತವನ್ನು ಕಟ್ಟಬೇಕು ಎಲ್ಲರೂ ಕುಡಿತದಿಂದ ಮುಕ್ತರಾಗಬೇಕು, ಮಧ್ಯಪಾನವು ಎಂದಿಗೂ ಸಂಸಾರವನ್ನು, ಸಂಬಂಧಗಳನ್ನು ಕಾಪಾಡುವುದಿಲ್ಲ. ಅವೆಲ್ಲದರಿಂದ ನಾವು ದೂರವಾಗಿ ಉಳಿಯಬೇಕೆಂದರೆ ನಾವು ಇಂತಹ ಕಾರ್ಯಕ್ರಮಗಳಲ್ಲಿ, ಇಂತಹ ಶರಣರ ಸಾಮೀಪ್ಯಕ್ಕೆ ಬರಬೇಕು ಎಂದರು.

ಅನುಭಾವಿಗಳಾದ ಲಕ್ಷ್ಮೀ ಆರಿಬೆಂಚಿ ಮಾತನಾಡಿ, ಜಾನಪದ ಸಾಹಿತ್ಯವು ಶರಣರ ಬದುಕು ಬರಹಗಳನ್ನು ತೆರೆದಿಡುತ್ತದೆ, ನಾವು ಇಂದು ಜನಪದ ಸಾಹಿತ್ಯವನ್ನು ಓದಲೇಬೇಕು, ಅದರಿಂದ ವಿಮುಖವಾಗಿ ನಮ್ಮ ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ ಎಂದರು.

ಮಹಾನಂದಾ ಪಾಟೀಲ ಮಾತನಾಡಿ, ನಮಗೆ ಬಸವಧರ್ಮದ ಪರಿಚಯ ಅಷ್ಟಾಗಿ ಇರಲಿಲ್ಲ, ಅದನ್ನು ನಿವೇದಿತಾ ಅವರು ತಿಳಿಸಿಕೊಟ್ಟರು. ಅವರ ತಿಳುವಳಿಕೆಯಿಂದಲೇ ನಾವಿಂದು ಇನ್ನೂ ಹೆಚ್ಚಿನ ಆಸಕ್ತಿಯಿಂದ ಬಸವಧರ್ಮವನ್ನು ಅದ್ಯಯನ ಮಾಡುತ್ತಿದ್ದೇವೆ ಎಂದರು.

ರಾಜೇಶ್ವರಿ ಯಾದವಾಡ ಮಾತನಾಡಿ, ಗುರುಬಸವ ಮಠದ ಇಬ್ಬರೂ ಶ್ರೀಗಳ ಸದುಪಯೋಗವನ್ನು ನಾವೆಲ್ಲಾ ಪಡೆದುಕೊಳ್ಳಬೇಕು. ಅವರಿಂದ ಒಳ್ಳೆಯ ಸಂಸ್ಕಾರವನ್ನು ಕಲಿತುಕೊಳ್ಳಬೇಕು ಎಂದರು.

ಅನ್ನಪೂರ್ಣ ಲಂಬುನವರ ಮಾತನಾಡಿ, ಬಸವಗೀತಾ ತಾಯಿಯವರು ನಮ್ಮ ಬಾಲ್ಯದ ಸ್ನೇಹಿತರು. ಅವರು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ನೀಲಲೋಚನಾ ತಾಯಿಯವರು ಮಾತನಾಡಿ, ಈ ಉತ್ಸವದಲ್ಲಿ ಭಾಗಿಯಾಗಿದ್ದು ನನಗೆ ತುಂಬಾ ಸಂತಸ ತಂದಿದೆ ಹಾಗೂ ಒಂದು ಸಾರಿ ಇಲಕಲ್ಲ ಪೂಜ್ಯರ ದರ್ಶನ ಪಡೆಯಬೇಕೆಂಬ ಆಸೆಯಿತ್ತು. ಅದು ಇಂದಿಗೆ ನೆರವೇರಿತು ಎಂದರು.

ಅತಿಥಿಗಳಾದ ರವಿ ಯಡಹಳ್ಳಿ ಮಾತನಾಡಿ, ಬಸವತತ್ವನಿಷ್ಠರು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಲ್ಲಿ ಬಸವಗೀತಾ ತಾಯಿಯವರು ಹಾಗೂ ಬಸವಪ್ರಕಾಶ ಸ್ವಾಮಿಗಳೂ ಕೂಡ ಇದ್ದಾರೆ. ಅವರ ನಮ್ಮ ಬಾಂಧವ್ಯ ಸುಮಾರು 35 ವರ್ಷಗಳದ್ದು. ಅದು ಇಲ್ಲಿಯವರೆಗೂ ಬಂದಿದೆ ಎಂದರೆ ಅದಕ್ಕೆ ಕಾರಣ ಬಸವಧರ್ಮ ಮಾತ್ರವೇ ಎಂದರು.

ಬಸವಗೀತಾ ತಾಯಿಯವರು ಮಾತನಾಡಿ, ಬಸವತತ್ವದ ಗಟ್ಟಿತನ ಹೇಳಿದರೆ ಬರುವುದಿಲ್ಲ ಅದು ಹೃದಯದಲ್ಲಿ ಹುಟ್ಟಬೇಕು, ಯಾರು ಏನೇ ಹೇಳಿದರೂ ಸತ್ಯ ಸುಳ್ಳಾಗುವುದಿಲ್ಲ, ಬಸವಧರ್ಮದ ಏಳಿಗೆ ಕೆಲವರಿಗೆ ಸಹಿಸಲಾಗುತ್ತಿಲ್ಲ ಎಂದರು.

ಮಹಾಂತಪ್ಪ ಶ್ರೀಗಳು ಆಶೀರ್ವಚನ ಮಾಡುತ್ತಾ, ಎಂದಿಗೂ ಸೇವೆಯನ್ನು ಮಾಡುತ್ತಿರಬೇಕು. ಅದರಲ್ಲೂ ಮಠದಲ್ಲಿ ಬಂದು ಸೇವೆಯನ್ನು ಮಾಡುವುದರಿಂದ ಅದು ನಮ್ಮ ಪುಣ್ಯವನ್ನು ಹೆಚ್ಚಿಸುತ್ತದೆ. ಬಸವಾದಿ ಶರಣರ ಹಾದಿಯಲ್ಲಿ ನಡೆಯುವ ನಾವೆಲ್ಲಾ ಎಂದಿಗೂ ಅವರಿಗೆ ಋಣಿಯಾಗಿರಬೇಕು, ಗುರುಬಸವ ಮಠದ ಕಾರ್ಯ ಶ್ಲಾಘನೀಯ. ಅವರು ಎಂದಿಗೂ ತತ್ವವನ್ನು ಬಿಟ್ಟು ಹಿಂದೆ ಸರಿದವರಲ್ಲ ಎಂದರು.

ಈ ಸಂದರ್ಭದಲ್ಲಿ 16 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ಕಾತರಕಿಯ ಬಸವರಾಜ ಗೌಡರ ಹಾಗೂ ಏಷಿಯನ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದ ಮೂಡಲಗಿಯ ಲಕ್ಷ್ಮೀ ರಡರಟ್ಟಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ನಾಗನೂರಿನ ಮಕ್ಕಳು ಹಾಗೂ ಜೆ. ಎಲ್. ಎಂ. ತಾಲೂಕಾ ಮಹಿಳಾ ಘಟಕದ ಶರಣೆಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು. ಮನೋಹರ ಕರವಾ ತಾವೇ ಸ್ವತಃ ರಚಿಸಿದ ಬಸವ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ಈರಣ್ಣ ಗದಗಿನ ಮತ್ತು ಪಾಂಡುರಂಗ ಬಡಿಗೇರ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ನಿವೇದಿತಾ ಡಿ. ಪಿ. ನಿರೂಪಿಸಿದರು.

ವೇದಿಕೆಯಲ್ಲಿ ಅಶೋಕ ಕುಲಗೋಡ, ಜೆ. ಎಲ್. ಎಂ. ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರಾದ ಗೀತಾ ಆರಿಬೆಂಚಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಸ್ಥರು, ಬಸವಭಕ್ತರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಬಸವ ಧರ್ಮ ಉತ್ಸವವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *

ಬಸವ ತತ್ವ ಪ್ರಚಾರಕರು, ಗುರು ಬಸವ ಮಠ, ನಾಗನೂರು