ಪ್ರಚಾರಪತ್ರ ಬಿಡುಗಡೆ ಮಾಡಿದ ದೇವನೂರು ಸ್ವಾಮೀಜಿ
ನಂಜನಗೂಡು:
ಐತಿಹಾಸಿಕ ನಂಜುಂಡೇಶ್ವರ ಜಾತ್ರೆಯ ಪ್ರಯುಕ್ತ, ಗರಳಪುರಿ ಉತ್ಸವ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 24, ಮಂಗಳವಾರ ಬೆಳಿಗ್ಗೆ 9 ಗಂಟೆಗೆ ನಂಜನಗೂಡಿನ ಬಸವೇಶ್ವರ ನಗರ, ವಿಶ್ವಗುರು ಬಸವೇಶ್ವರ ವೃತ್ತ, ನಂದಿ ಕನ್ವೆನ್ಷನ್ ಹಾಲ್ ನಲ್ಲಿ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗಿದೆ.
ನಂಜನಗೂಡು ತಾಲೂಕು ದೇವನೂರಿನ ತ್ರಿವಿಧ ದಾಸೋಹಿ ಗುರುಮಲ್ಲೇಶ್ವರ ಮಠದ ಪೂಜ್ಯ ಮಹಾಂತ ಸ್ವಾಮೀಜಿಗಳು ಸ್ಪರ್ಧೆಯ ಪ್ರಚಾರಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಇದೊಂದು ವಿಶಿಷ್ಟ ಕಾರ್ಯಕ್ರಮ, ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಬೇಕು, ಶರಣರ ಚಿಂತನೆ ಲೋಕಕಲ್ಯಾಣದ ಚಿಂತನೆಯಾಗಿದೆ. ಆದ್ದರಿಂದ ಅವರು ನೀಡಿರುವ ವಚನಗಳ ಸಂದೇಶಗಳ ಅರಿವನ್ನು ಜನಮಾನಸದಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿಸುವ ಕೆಲಸ ಆಗಬೇಕಿದೆ.

ಆರ್ಥಿಕವಾಗಿ ಬಲಿಷ್ಠ ರಾಷ್ಟ್ರ ಮತ್ತು ಸದೃಢ ಸಮಾಜವನ್ನು ಕಟ್ಟಲು ಶರಣರ ವಚನಗಳಿಂದ ಸಾಧ್ಯವಿದೆ. ಆದ್ದರಿಂದ ಈ ರೀತಿಯ ವಚನ ಕಂಠಪಾಠ ಸ್ಪರ್ಧೆಗಳನ್ನು ವರ್ಷವಿಡಿ ಏರ್ಪಡಿಸಿ ಅರಿವು ಜಾಗೃತಿ ಮೂಡಿಸಬೇಕಿದೆ. ಕರ್ನಾಟಕ ರಾಜ್ಯಾದ್ಯಂತ ಇಂಥ ಸ್ಪರ್ಧೆಗಳನ್ನು ನಡೆಸಿದರೆ ಉತ್ತಮ ಫಲ ಸಿಗುತ್ತೆ ಎಂದು ನುಡಿದರು.
ಕಾರ್ಯಕ್ರಮದ ಆಯೋಜಕರಾದ ಶರಣ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷರಾದ ಬಸವಯೋಗೇಶ ಮಾತನಾಡಿ, ಈ ವಚನ ಕಂಠಪಾಠ ಸ್ಪರ್ಧೆಯ ಮೊದಲ ಬಹುಮಾನ ₹ 30,000, 2ನೆ ಬಹುಮಾನ ₹ 20,000, 3ನೆ ಬಹುಮಾನ ₹ 10,000 ಹಾಗು ಸಮಾಧಾನಕರ ಬಹುಮಾನ ₹ 2,000 ಐದು ಜನರಿಗೆ ಎಂದು ಇಡಲಾಗಿದೆ. ಕಾರ್ಯಕ್ರಮ ನಂಜನಗೂಡಿನ ಶಾಸಕರಾದ ದರ್ಶನ್ ದೃವನಾರಾಯಣ್ ಅವರ ನೇತೃತ್ವ, ನೆರವಿನಲ್ಲಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ದೇವನೂರು ಶಿವಪ್ಪದೇವರು ಮತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬದನವಾಳ ಮಂಜು ಹಾಗೂ ಬಸವ ಮಾಸ ಸಮಿತಿಯ ಅಧ್ಯಕ್ಷರಾದ ಆಯರಳ್ಳಿ ಪ್ರಭುಸ್ವಾಮಿ, ಯುವ ಮುಖಂಡ ಹಾಡ್ಯ ರಾಜು, ಮುದ್ದಹಳ್ಳಿ ಅಶೋಕ, ಸುರೇಶ, ಮಹೇಶ, ಕೆರೆಹುಂಡಿ ಮಾದಪ್ಪ, ದಕ್ಷಿಣಮೂರ್ತಿ, ಪ್ರಶಾಂತ, ಆನಂದ ಮತ್ತಿತರರು ಹಾಜರಿದ್ದರು.
