ಬೀದರ್
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರ ಅಭಿನಂದನ ಸಮಾರಂಭ ನಗರದ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಭಾನುವಾರ ರಾತ್ರಿ ಜರುಗಿತು.
ತೆರೆದ ವಾಹನದಲ್ಲಿ ಖಂಡ್ರೆಯವರ ಭವ್ಯ ಮೆರವಣಿಗೆಯ ಮೂಲಕ ಅಭಿನಂದನಾ ಸಮಾರಂಭ ಚಾಲನೆಗೊಂಡಿತು.
ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಮೂರ್ತಿಗೆ ಪೂಜೆ ಸಲ್ಲಿಸಿ ವಚನ ಪಠಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಆರಂಭದಲ್ಲಿ ಕ್ರೇನ್ ಮೂಲಕ ದೊಡ್ಡ ಗಾತ್ರದ ಹೂಮಾಲೆ ಹಾಕುವ ಮೂಲಕ ಖಂಡ್ರೆ ಅವರಿಗೆ ಬರಮಾಡಿಕೊಳ್ಳಲಾಯಿತು.
ಮೆರವಣಿಗೆಯಲ್ಲಿ ವಚನಗಳ ಪಠಣ, ಖಂಡ್ರೆ ಹಾಗೂ ಮಹಾಸಭಾ ಪರ ಜಯಘೋಷಗಳು ಮುಗಿಲು ಮುಟ್ಟಿದ್ದವು. ಸಾವಿರಾರು ಸಂಖ್ಯೆ ಯಲ್ಲಿ ಖಂಡ್ರೆ ಅಭಿಮಾನಿಗಳು ಮೆರವಣಿಗೆ ಯುದ್ದಕ್ಕೂ ನಡೆದು ಸಾಗಿದರು.

ಫಾರ್ಮಸಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಖಂಡ್ರೆ ನಮ್ಮ ಪೀಠಾಧಿಪತಿಗಳಲ್ಲಿ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ಅದೆಲ್ಲವನ್ನೂ ಬದಿಗಿಟ್ಟು, ಸಮಾಜದ ಒಳಿತಿಗಾಗಿ ಒಂದಾಗಿ ನಡೆಯುವ ಸಕಾಲ ಇದಾಗಿದೆ ಎಂದರು.
ಬೆಂಗಳೂರಿನಲ್ಲಿ 1000 ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಿಸುವ ಗುರಿ ಮಹಾಸಭಾಗಿದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಅಶೋಕ ಖೇಣಿ ಅವರು ಮಾಗಡಿ ರಸ್ತೆ ಬಳಿ 2 ಎಕರೆ ಜಮೀನು ನೀಡಲು ಒಪ್ಪಿದ್ದಾರೆ. ಅದನ್ನು ಪಡೆಯುವ ಪ್ರಯತ್ನ ಮಾಡಲಾಗುವುದು. ಹಾಸ್ಟೆಲ್ ನಿರ್ಮಿಸಲಾಗು ವುದು. ಅದೇ ರೀತಿ ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿ ನಿಲಯ ನಿರ್ಮಿಸುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ ಎಂದರು.
ಬೀದರ್ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಈ ಹಣೆಪಟ್ಟಿ ಕಳಚಲು ಎಲ್ಲರೂ ಕೈಜೋಡಿಸಬೇಕು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ಬಾಬು ವಾಲಿ ಸ್ವಾಗತಿಸಿದರು. ದೀಪಕ್ ಭಾತಂಬ್ರಾ ನಿರೂಪಿಸಿದರು. ಅಭಿನಂದನಾ ಪತ್ರವನ್ನು ಆನಂದ ದೇವಪ್ಪ ವಾಚಿಸಿದರು.
ಕಾರ್ಯಕ್ರಮದಲ್ಲಿ ಖಂಡ್ರೆ ಅವರನ್ನು ಜಿಲ್ಲೆಯ ವಿವಿಧ ಮಠಾಧೀಶರು, ಗಣ್ಯರು, ಲಿಂಗಾಯತ ಸಮಾಜದ ಮುಖಂಡರು ಸನ್ಮಾನಿಸಿದರು.

‘ತತ್ವ ಸಿದ್ಧಾಂತಗಳ ಮೇಲೆ ಸಮಾಜ ಕಟ್ಟಬೇಕು. ಆ ಕೆಲಸ ಈಶ್ವರ ಬಿ. ಖಂಡ್ರೆ ಮಾಡಬೇಕು. ಅಷ್ಟಾವರಣ ಪಂಚಾಚಾರ ಷಟಸ್ಥಲ ತತ್ವಗಳ ಆಧಾರದ ಮೇಲೆ ಸಮಾಜ ಕಟ್ಟುವ ಕೆಲಸ ಮಾಡಬೇಕು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಸಲಹೆ ಮಾಡಿದರು.
ಮುಸ್ಲಿಮರು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಧರ್ಮದ ವಿಷಯ ಬಂದಾಗ ಒಂದಾಗುತ್ತಾರೆ. ಆದರೆ ಲಿಂಗಾಯತರು ಹಾಗಲ್ಲ ಧರ್ಮ ಬಿಟ್ಟು ಪಕ್ಷ ನೋಡುತ್ತಾರೆ. ಇದು ಬದಲಾಗಬೇಕು. ಕರ್ನಾಟಕಕ್ಕೆ ಲಿಂಗಾಯತ ಮಠಗಳ ಕೊಡುಗೆ ಬಹಳ ದೊಡ್ಡದಿದೆ. ಸರ್ವ ಜನಾಂಗದವರಿಗೆ ಅನ್ನ ಜ್ಞಾನ ಕೊಟ್ಟವರು ಲಿಂಗಾಯತರು. ಇದನ್ನು ಇಡೀ ದೇಶಕ್ಕೆ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಖಂಡ್ರೆ ಪ್ರಗತಿಪರ ಅಭಿವೃದ್ಧಿ ಪರ ಚಿಂತನೆ ಹೊಂದಿದವರು. ಲಿಂಗಾಯತ ಧರ್ಮದ ಏಳಿಗೆಗೆ ಶ್ರಮಿಸುವ ಭರವಸೆ ಇದೆ. ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲೋಣ, ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ದರಾಮ ಶರಣರು, ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ಲಿಂಗಾಯತ ಮಹಾಮಠದ ಬಸವಪ್ರಭು ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಬೀದರ್ ಮಹಾನಗರ ಪಾಲಿಕೆ ಉಪಮೇಯರ್ ಲಕ್ಷ್ಮೀಬಾಯಿ ಹಂಗರಗಿ, ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್, ಮುಖಂಡರಾದ ಬಸವರಾಜ ದೇಶಮುಖ, ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಧನ್ನೂರ, ದತ್ತು ಮೂಲಗೆ, ಆನಂದ್ ದೇವಪ್ಪ, ಜೈರಾಜ್ ಖಂಡ್ರೆ, ಧನರಾಜ ತಾಳಂಪಳ್ಳಿ, ಶಕುಂತಲಾ ಬೆಲ್ದಾಳೆ, ಗುರುನಾಥ ಕೊಳ್ಳೂರ, ದಿಲೀಪ್ ತಾಳಂಪಳ್ಳಿ, ಶಿವಶರಣಪ್ಪ ವಾಲಿ, ಗುರಮ್ಮ ಸಿದ್ದಾರೆಡ್ಡಿ, ಬಿ.ಜಿ.ಶೆಟಕಾರ್, ಡಾ. ಚಂದ್ರಕಾಂತ ಗುದಗೆ, ಬಸವರಾಜ ಭತಮುರ್ಗೆ, ರಾಜಶ್ರೀ ಸ್ವಾಮಿ, ಶರಣಪ್ಪ ಮಿಠಾರೆ, ವೈಜಿನಾಥ ಕಮಠಾಣೆ, ಡಾ. ರಜನೀಶ್ ವಾಲಿ, ಜಗನ್ನಾಥ ಹೆಬ್ಬಾಳೆ ಮತ್ತಿತರರು ಹಾಜರಿದ್ದರು. ದೀಪಕ್ ಥಮಕೆ ನಿರೂಪಿಸಿದರು. ಬಾಬುವಾಲಿ ಸ್ವಾಗತಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಮಹಾಸಭೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
