ಹೈದರಾಬಾದನಲ್ಲಿ ಎಂಟನೇ ಮಹಾದಂಡನಾಯಕರ ಸ್ಮರಣೋತ್ಸವ
ಗಂಗಾವತಿ :
12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ನೀಡಿದ ಜಗಜ್ಯೋತಿ ಬಸವೇಶ್ವರರು ಸೇರಿದಂತೆ ಅಂದಿನ ಶರಣರ ವಚನ ಸಾಹಿತ್ಯ ಸರ್ವಕಾಲದಲ್ಲಿ ಮಾನ್ಯತೆ ಪಡೆದಿದೆ. ವಚನಗಳ ಸಾರದಿಂದ ಸಮಾಜ ಉತ್ತಮ ಬದಲಾವಣೆ ಕಾಣುತ್ತಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ರಾಷ್ಟ್ರೀಯ ಬಸವ ದಳದ ವತಿಯಿಂದ ಭಾನುವಾರ ಗಂಗಾವತಿಯ ಶ್ರೀ ಚನ್ನಬಸವ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಮಾತೆ ಮಹಾದೇವಿಯವರ ಏಳನೆ ಸಂಸ್ಮರಣೆ ಅಂಗವಾಗಿ “ಲಿಂಗಾಯತ ಧರ್ಮ ಮಹಾದಂಡನಾಯಕರ ಸ್ಮರಣೋತ್ಸವ” ಮತ್ತು ರಾಷ್ಟ್ರೀಯ ಬಸವ ದಳದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರು ನೀಡಿದ ವಚನ ಸಂದೇಶಗಳು ನೆಮ್ಮದಿಯ ಬದುಕಿಗೆ ಪೂರಕವಾಗಿವೆ. ಶರಣರು ಜಾತಿ, ಮತ, ಪಂಥಗಳನ್ನು ನೋಡದೇ ಸಮಾಜ ಪರಿವರ್ತನೆ ಮಾಡುವ ಕೆಲಸ ಮಾಡಿದರು. ಮಹಿಳೆಯರಿಗೂ ಸಹ ಅವರು ಮೊದಲ ಸ್ಥಾನ ನೀಡಿ ಗೌರವಿಸಿದ್ದರು. ಮನೆ ಮನೆಯಲ್ಲಿ ಶರಣರ ವಚನಗಳ ಸಂದೇಶ ಪ್ರಸಾರವಾಗಬೇಕು. ಸಮಾನತೆ ಹಾಗೂ ಬಸವ ತತ್ವಗಳ ಬಗ್ಗೆ ಚರ್ಚೆಯಾಗುತ್ತಿವೆಯೇ ಹೊರತು ಇನ್ನೂ ಪೂರ್ಣ ಪ್ರಮಾಣದಲ್ಲಿ ಜೀವನದಲ್ಲಿ ನಾವು ಅಳವಡಿಸಿಕೊಳ್ಳಲಾಗುತ್ತಿಲ್ಲ ಎಂದರು.
ಬಸವ ಕೇಂದ್ರದ ಅಧ್ಯಕ್ಷ ಕೆ. ಬಸವರಾಜ ಪ್ರಾಸ್ತಾವಿಕ ಮಾತನಾಡಿ, 38 ವರ್ಷಗಳ ನಂತರ ಭತ್ತದ ನಾಡಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸರ್ವ ಸಮುದಾಯದವರು ಸಹಕಾರ ನೀಡಿದ್ದಾರೆ. ಶರಣರ ಅನುಭಾವಗಳು ಜೀವನಕ್ಕೆ ದಿಕ್ಸೂಚಿಯಾಗಲಿವೆ ಎಂದರು.
ಬೀದರ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ಮಾತೆ ಮಹಾದೇವಿ ತಾಯಿಯವರಿಗೆ ಕರ್ನಾಟಕ ಸರ್ಕಾರ ” ಕರ್ನಾಟಕ ರತ್ನ” ಪ್ರಶಸ್ತಿ ನೀಡಲಿ ಎಂದು ಆಗ್ರಹಿಸಿದರು.
ಸಮಾವೇಶದ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಕುಂಬಳಗೋಡು ಬಸವ ಗಂಗೋತ್ರಿ ಚೆನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮ ಮತ್ತು ಬಸವತತ್ವದ ಉಳಿವಿಗೆ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರ ಕೊಡುಗೆ ಅಪಾರವಾಗಿದೆ.

ಮಠದ ವತಿಯಿಂದ ಶಾಲಾ ಕಾಲೇಜು ತೆರೆದು ಹಣ ಸಂಪಾದನೆ ಮಾಡುತ್ತಿರುವ ಮಠಾಧೀಶರ ಕಂಡು, ಮನೆಮನೆಗೆ ಬಸವತತ್ವ ಪಸರಿಸಬೇಕೆಂದು ಪ್ರತೀ ಹಳ್ಳಿಗಳಿಗೆ ಸಂಚಾರ ಮಾಡಿ ಬಸವಾದಿ ಶರಣರ ವಚನ ಸಾಹಿತ್ಯ ಉಳಿಸಿ ಬೆಳೆಸಿದ್ದಾರೆ. ಹೀಗಾಗಿ ಮುಂದಿನ ಮಹಾದಂಡನಾಯಕರ ಸ್ಮರಣೋತ್ಸವ ಹೈದರಾಬಾದಿನಲ್ಲಿ ಆಚರಣೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
ಬೀದರನ ಬಸವ ಮಂಟಪದ ಸತ್ಯಾದೇವಿ ಮಾತನಾಡಿ, “ಧ್ವಜಾರೋಹಣ, ಬಸವಪೂಜೆ, ಜನನದಿಂದ ಮರಣದವರೆಗಿನ ಸಂಸ್ಕಾರಗಳು, ಪ್ರಾರ್ಥನೆ, ಇಷ್ಟಲಿಂಗ ಪೂಜೆ ವಿಧಾನ ನೀಡಿದವರು ಮಾತಾಜಿ. ಆದರೆ ಕೆಲವರು ಅವರ ನೆರಳಿನಲ್ಲೇ ಬೆಳೆದು ಅನ್ಯ ಕಾರ್ಯಕ್ರಮದಲ್ಲಿ ಮಾತಾಜಿಯವರ ಹೆಸರು ಸ್ಮರಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮನಗುಂಡಿ ನಿಸರ್ಗ ಚಿಕಿತ್ಸಕ ಪೂಜ್ಯ ಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಸಿರುಗುಪ್ಪದ ಬಸವರಾಜಪ್ಪ ವೆಂಕಟಾಪುರ ಸಮ್ಮುಖ ವಹಿಸಿದ್ದರು.
ಮಾಜಿ ಸಂಸದ ಎಚ್.ಜಿ. ರಾಮುಲು, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸಿ.ಎಚ್.ನಾರಿನಾಳ, ಪ್ರಮುಖರಾದ ಹೇಮಯ್ಯಸ್ವಾಮಿ, ಬಸವಕುಮಾರ ಪಾಟೀಲ, ದಿಲೀಪ ವಂದಾಲ, ವೀರೇಶ ಅಸರೆಡ್ಡಿ, ಕೆ. ಶರಣಪ್ರಸಾದ, ಇದ್ದರು.
ಸ್ಮರಣೋತ್ಸವ ಮೆರವಣಿಗೆ
ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಪೂಜ್ಯ ಮಾತೆ ಮಹಾದೇವಿಯವರ ಏಳನೇಯ ಸಂಸ್ಮರಣೆ ಹಾಗೂ ಮಹಾದಂಡ ನಾಯಕರ ಸ್ಮರಣೋತ್ಸವ ಮತ್ತು ರಾಷ್ಟ್ರೀಯ ಬಸವದಳದ ಸಮಾವೇಶದ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಭವ್ಯ ಮೆರವಣಿಗೆಯನ್ನು ಮಾಜಿ ಸಂಸದೆ ಹೆಚ್.ಜಿ. ರಾಮುಲು ಚಾಲನೆ ನೀಡಿದರು.

ಬೆಳಿಗ್ಗೆ ನಗರದ ಆನೆಗೊಂದಿ ರಸ್ತೆಯ ಬಸವೇಶ್ವರ ವೃತ್ತದಿಂದ, ಬಸವಣ್ಣನವರ ಭಾವಚಿತ್ರದೊಂದಿಗೆ ಪ್ರಾರಂಭವಾದ ಮೆರವಣಿಗೆಗೆ ಚಾಲನೆ ನೀಡಿದ ಹೆಚ್.ಜಿ .ರಾಮುಲು ಅವರು, ಶರಣರು ಈ ನಾಡಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಲಿಂಗಾನಂದರು ಮತ್ತು ಮಾತೆ ಮಹಾದೇವಿ ಅವರು ಬಸವತತ್ವ ಪರಿಚಯಿಸಿದ ಪುಣ್ಯಜೀವಿಗಳಾಗಿದ್ದಾರೆ ಎಂದರು.
ಇದೇ ವೇಳೆ ಗಾಳಿರುದ್ರಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮನಗುಂಡಿ ಬಸವಾನಂದ ಶ್ರೀಗಳು, ಬೀದರನ ಸತ್ಯವತಿ ಮಾತಾಜಿ, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಶರಣ ಚಿಂತಕ ಸಿ.ಹೆಚ್. ನಾರಿನಾಳ, ರಾಷ್ಟ್ರೀಯ ಬಸವದಳದ ದಿಲೀಪಕುಮಾರ, ಬಾಲಪ್ಪ, ಎ.ಕೆ. ಮಹೇಶ, ಪಂಪಣ್ಣ, ವೀರಣ್ಣ ಅರಹುಣಸಿ, ಕೋಟೆ ಸಂಗಮೇಶ, ಮಂಜುನಾಥ, ಕೊಟ್ರೇಶ್ ಸೇರಿದಂತೆ ಬಸವ ದಳದ ಮತ್ತು ಲಿಂಗಾಯತ ಧರ್ಮದ ಕಾರ್ಯಕರ್ತರು, ಪದಾಧಿಕಾರಿಗಳು ಮಾತೆಯರು ಇದ್ದರು.

ಡಿ.ಜಿ. ಮಠದ, ಸಮಿತಿ ಪದಾಧಿಕಾರಿಗಳಾದ ದಿಲೀಪ ವಂದಾಲ, ವೀರೇಶ ಅಸರೆಡ್ಡಿ, ಎ.ಕೆ. ಮಹೇಶಕುಮಾರ ಸೇರಿದಂತೆ ಬಸವದಳದ ಪದಾಧಿಕಾರಿಗಳು, ಕಾರ್ಯಕರ್ತರು, ಲಿಂಗಾಯತ ಸಮಾಜದ ಗಣ್ಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.
ಸಮಾವೇಶದಲ್ಲಿ ವಚನ ದರ್ಪಣ ಮತ್ತು ವಚನ ಕಿರಣ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸಾಧಕರಿಗೆ ಸನ್ಮಾನ
ಬೀದರನ ಶಿವರಾಜ ಪಾಟೀಲ ಅತಿವಾಳ ಅವರಿಗೆ ಲಿಂಗಾನಂದ ಶ್ರೀ ಪ್ರಶಸ್ತಿ ಹಾಗೂ ಲಲಿತಮ್ಮ ಬಸವರಾಜಪ್ಪ ಅವರಿಗೆ ಮಾತೆ ಮಹಾದೇವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆರು ಜನ ಶರಣ ಸಾಧಕರಾದ ಮಹಾದೇವಿ ಬಾಬುರಾವ ಟೆಂಗಸಾಲ ಹೈದರಾಬಾದ, ಪ್ರತಿಮಾ ಸುಭಾಷಚಂದ್ರ ಮೀರಜ್, ವಂದನಾ ಮಲ್ಲಿಕಾರ್ಜುನ ಬೆಳಗಾವಿ, ವಿದ್ಯಾವತಿ ಗುರುನಾಥ ಬೀದರ, ಶಿವಗಂಗಮ್ಮ ಶಿವಕುಮಾರ ಬಳ್ಳಾರಿ, ಸುವರ್ಣ ಲಿಂಗನಗೌಡ ಕೊಪ್ಫಳ ದಂಪತಿಗಳಿಗೆ ಆದರ್ಶ ಶರಣ ದಂಪತಿಗಳೆಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಸ್ಯಕಲಾವಿದ ಗಂಗಾವತಿ ಪ್ರಾಣೇಶ, ಶ್ರೀಶೈಲ ಪಟ್ಟಣಶೆಟ್ಟಿ, ಎಚ್, ಮಲ್ಲಿಕಾರ್ಜುನ, ಡಾ. ಶಿವಕುಮಾರ ಮಾಲಿಪಾಟೀಲ, ಗಣಪತಿ ಬಿರಾದಾರ, ಮಹಾಲಿಂಗಪ್ಪ ಬನ್ನಿಕೊಪ್ಪ, ಶರಣಪ್ಪ ಭಾವಿಕಟ್ಟಿ, ರಾಮಪ್ಪ ಕಳ್ಳಿಮನಿ, ಈರಮ್ಮ ತಾಯಿ ಅವರಿಗು ಸಹ ಸನ್ಮಾನಿಸಲಾಯಿತು.
ವೀರಣ್ಣ ಕೊರ್ಲಳ್ಳಿ, ಅಶೋಕ ಬೆಂಡಿಗೇರಿ, ವಿಜಯಕುಮಾರ ಪಟ್ನೆ, ಭೀಮರಾವ ಬಿರಾದಾರ, ಶಿವಕುಮಾರ ಮಂಡ್ಯ, ಜಗದೇವಿ ಚಟ್ಟಿ, ವೀರಭದ್ರಯ್ಯ ಸ್ವಾಮಿ, ಬಾಣೂರು ಚೆನ್ನಪ್ಪ, ಬಾಣೂರು ಹಿರಣ್ಣಯ್ಯ, ಸೇರಿದಂತೆ ಬೀದರ, ಕಲಬುರಗಿ, ಭದ್ರಾವತಿ, ರಾಯಚೂರು, ಬಳ್ಳಾರಿ, ಬೆಂಗಳೂರು, ಕೊಪ್ಪಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ಸುಮಾರು ಐದು ಸಾವಿರಕ್ಕೂ ಅಧಿಕ ಶರಣರು ಪಾಲ್ಗೊಂಡು ಮಹಾದಂಡನಾಯಕರ ಸ್ಮರಣೋತ್ಸವ ಹಾಗೂ ರಾಷ್ಟ್ರೀಯ ಬಸವ ದಳದ ಸಮಾವೇಶ ಯಶಸ್ವಿಗೊಳಿಸಿದರು.
ಸಮಾವೇಶ ಎಂಟು ಪ್ರಮುಖ ನಿರ್ಣಯಗಳು ಕೈಗೊಂಡಿತು. ಗಂಗಾವತಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ದಿಲೀಪಕುಮಾರ ವಂದಾಲ ನಿರ್ಣಯಗಳನ್ನು ಮಂಡಿಸಿದರು. ವೇದಿಕೆ ಮೇಲಿರುವ ಪೂಜ್ಯರು, ಗಣ್ಯರು ಅನುಮೋದನೆ ನೀಡಿದರು. ಸಭಿಕರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.
ಗಂಗಾವತಿ ಮಹಾದಂಡನಾಯಕರ ಸ್ಮರಣೋತ್ಸವ, ರಾಷ್ಟ್ರೀಯ ಬಸವ ದಳದ ಸಮಾವೇಶ ಕೈಕೊಂಡ ನಿರ್ಣಯಗಳು
1) ಕರ್ನಾಟಕದಲ್ಲಿ ಬಸವಣ್ಣನವರಿಂದ ಸ್ಥಾಪನೆಯಾದ ಲಿಂಗಾಯತ ಧರ್ಮವನ್ನು ಅಲ್ಪಸಂಖ್ಯಾತ ಮಾನ್ಯತೆಯೊಂದಿಗೆ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಜೈನ, ಬೌದ್ಧ ಮತ್ತು ಸಿಖ್ ಧರ್ಮಗಳಿಗೆ ಇರುವ ಎಲ್ಲಾ ಧಾರ್ಮಿಕ ಲಕ್ಷಣಗಳು ಲಿಂಗಾಯತ ಧರ್ಮಕ್ಕೆ Partnership ಇರುವುದರಿಂದ ಕರ್ನಾಟಕ ಘನ ಸರ್ಕಾರವು ಮತ್ತೊಮ್ಮೆ ಲಿಂಗಾಯತಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಿ, ‘ಸ್ವತಂತ್ರ ಧರ್ಮ’ವೆಂದು ಸಂವಿಧಾನ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
2) ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರುಗಳಾದ ಪೂಜ್ಯ ಶ್ರೀ ಡಾ. ಮಾತೆ ಮಹಾದೇವಿಯವರ ಜನ್ಮದಿನ ಪ್ರತಿವರ್ಷ ಮಾರ್ಚ್-13 ರನ್ನು “ಸ್ತ್ರೀ-ಸಮಾನತೆ ದಿನಾಚರಣೆ”ಯನ್ನಾಗಿ ಘೋಷಿಸಬೇಕು.
3. ಸುಮಾರು 80 ವರ್ಷಗಳ ಹಿಂದೆಯೇ ಗಂಗಾವತಿಯ ಬೆಳವಣಿಗೆಯನ್ನು ಗ್ರಹಿಸಿ, ಗಂಗಾವತಿಯು ಮುಂದಿನ ದಿನಗಳಲ್ಲಿ ಛೋಟಾ ಮುಂಬೈ ಆಗಲಿದೆ ಎಂದು ಗ್ರಹಿಸಿದ್ದ ಗಂಗಾವತಿಯ ಆರಾಧ್ಯದೈವ ಶ್ರೀ ಚನ್ನಬಸವಸ್ವಾಮಿಗಳ ಹೆಸರನ್ನು ಗಂಗಾವತಿ ರೈಲು ನಿಲ್ದಾಣಕ್ಕೆ “ಶ್ರೀ ಚನ್ನಬಸವಸ್ವಾಮಿ ರೈಲು ನಿಲ್ದಾಣ” ಎಂಬ ಹೆಸರನ್ನು ಇಡಬೇಕು.
4) ಪೌರಾಣಿಕ ಹಿನ್ನೆಲೆಯಲ್ಲಿ ಗಂಗಾವತಿಯನ್ನು ರಾಷ್ಟ್ರಮಟ್ಟದಲ್ಲಿ ಇಂದು ಗುರುತಿಸುವಂತಾಗಿರುವುದರಿಂದ ತಾಲೂಕಿನ ಸನಿಹದಲ್ಲಿ ಬರುವ ಕಾರಟಗಿ, ಕನಕಗಿರಿ, ಕಂಪ್ಲಿ, ಸಿಂಧನೂರನ್ನು ಒಳಗೊಂಡಂತೆ ಗಂಗಾವತಿಯನ್ನು ಕೇಂದ್ರವನ್ನಾಗಿಸಿ “ಕಿಸ್ಕಿಂದಾ ಜಿಲ್ಲೆ” ಯನ್ನು ರಚಿಸಬೇಕು.
5. ವಿಶ್ವ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ತಾಲೂಕಿನ ಹಿರೇಬೆಣಕಲ್ ಸನಿಹದಲ್ಲಿರುವ ಶಿಲಾಯುಗದ ಮೋರರ ಬೆಟ್ಟ ಅದರಂತೆ ಅಂಜನಾದ್ರಿ, ನವಬೃಂದಾವನ, ಪಂಪಾಸರೋವರ, ಆನೆಗುಂದಿ ಭಾಗಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಘೋಷಿಸುವ ಮೂಲಕ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಹಾಗೂ ಈ ಭಾಗಗಳ ಅಭಿವೃದ್ಧಿ ದೃಷ್ಟಿಯಿಂದ “ಕಿಕ್ಕಿಂಧಾ ಅಭಿವೃದ್ಧಿ ಪ್ರಾಧಿಕಾರ” ರಚಿಸಬೇಕು.
6) ದೇಶದ ನೆಚ್ಚಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು 12ನೇ ಶತಮಾನದ ಅನುಭವ ಮಂಟಪವನ್ನು ವಿಶ್ವದ “ಪ್ರಪ್ರಥಮ ಸಂಸತ್” ಎಂದು ಕರೆದಿರುತ್ತಾರೆ. ಆ ಹಿನ್ನೆಲೆಯಲ್ಲಿ ಬಸವ ಜಯಂತಿಯನ್ನು “ರಾಷ್ಟ್ರೀಯ ದಿನಾಚರಣೆ”ಯನ್ನಾಗಿ ಘೋಷಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು.
7. ಬಸವ ಕಲ್ಯಾಣದಲ್ಲಿ ಈಗಾಗಲೇ ರಾಜ್ಯ ಸರ್ಕಾರವು ಮಂಜೂರು ಮಾಡಿರುವ ವಚನ ವಿಶ್ವವಿದ್ಯಾಲಯವನ್ನು ಅಲ್ಲಿ ಈಗ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪದ ಜೊತೆಗೆ ಸರ್ಕಾರ ಸ್ಥಾಪಿಸಬೇಕು.
8. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು “ಬಸವ ಅಧ್ಯಯನ ಪೀಠ”ವನ್ನು ಸ್ಥಾಪಿಸಬೇಕು.
