ಹಾವೇರಿ :
ಅಲ್ಲಮಪ್ರಭುಗಳು ಕೇವಲ ಸಾಹಿತಿಯಲ್ಲ, ಅಪಾರ ಜ್ಞಾನದ ಮೂರ್ತಿಯಾಗಿದ್ದರು, ಅವರು ಶಿವಶರಣರಲ್ಲೇ ಅತ್ಯಂತ ಹೆಚ್ಚಿನ ಆತ್ಮಜ್ಞಾನಿಯಾಗಿದ್ದರು ಎಂದು ಬಸವ ಬಳಗದ ಅಧ್ಯಕ್ಷ ವಿ. ಜಿ. ಯಳಗೇರಿ ಹೇಳಿದರು.
ಇಲ್ಲಿನ ಬಸವ ಭವನದಲ್ಲಿ ಇತ್ತೀಚಿಗೆ ತತ್ವಜ್ಞಾನಿ ಅಲ್ಲಮ ಪ್ರಭುಗಳ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅಲ್ಲಮ ಪ್ರಭುಗಳು ಮತ್ತು ಅನಿಮಿಷ ಯೋಗಿಗಳ ನಡುವೆ ನಡೆದ ಘಟನೆಯನ್ನು ವಿವರಿಸಿದ್ದಲ್ಲದೇ ಅಲ್ಲಮರ ಅನೇಕ ವಚನಗಳನ್ನು ನಿರ್ವಚಿಸಿದರು. ಅಲ್ಲಮರ ಹಾಗೂ ಮುಕ್ತಾಯಕ್ಕನ ನಡುವೆ ನಡೆದ ನಿರವಲಯ ಪಥದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾದ ಬಸವರಾಜ ಕೋರಿ, ಅಲ್ಲಮ ಪ್ರಭುಗಳ ಕಾಲಜ್ಞಾನದ ವಚನವನ್ನು ಉಲ್ಲೇಖಿಸಿ, ಅದರ ಆಳವಾದ ಅರ್ಥವನ್ನು ವಿವರವಾಗಿ ತಿಳಿಸಿದರು.“ ಅಲ್ಲಮಪ್ರಭುಗಳು ನಾಡಿಗೆ ನೀಡಿದ ಸಂದೇಶವನ್ನು ಹಾಗೂ ವಚನ ಸಾಹಿತ್ಯದ ಮಹತ್ವ, ಅಲ್ಲಮಪ್ರಭುಗಳು, ಬಸವಣ್ಣ ಮತ್ತು ಸಿದ್ಧರಾಮೇಶ್ವರರ ನಡುವೆ ಅನುಭವ ಮಂಟಪದಲ್ಲಿ ನಡೆದ ಮಹತ್ವದ ಸಂಭಾಷಣೆಗಳನ್ನು ತಿಳಿಸಿದರು.
ಉಪನ್ಯಾಸಕರಾದ ಜಗದೀಶ ಹತ್ತಿಕೋಟಿ ಮಾತನಾಡಿ, ಅಲ್ಲಮಪ್ರಭುಗಳ ಜನನ, ಅವರ ಜೀವನ ಹಾಗೂ ಅನುಭವ ಮಂಟಪದಲ್ಲಿ ನಡೆದ ಅನೇಕ ಸಂಭಾಷಣೆಗಳನ್ನು ವಿವರಿಸಿದರು. ಅಲ್ಲಮರ ವಚನಗಳ ಅರ್ಥವನ್ನು ನಿರ್ವಚಿಸಿದರು.
ಉಪನ್ಯಾಸಕಿಯಾಗಿ ಆಗಮಿಸಿದ್ದ ಪುಷ್ಪಾವತಿ ಕೆರೂಡಿ ಮಾತನಾಡಿ, ಅಲ್ಲಮರು ಮತ್ತು ಅಕ್ಕಮಹಾದೇವಿ ನಡುವೆ ನಡೆದ ಆಧ್ಯಾತ್ಮಿಕ ಸಂಭಾಷಣೆಯನ್ನು ವಿವರವಾಗಿ ನಿರೂಪಿಸಿದರು.
ಕಾರ್ಯಕ್ರಮದ ನಿರೂಪಣೆ ಕೊಟ್ರೇಶ ಬಿಜಾಪುರ, ಪ್ರಾಸ್ತಾವಿಕ ನುಡಿಗಳನ್ನು ಶಿವಯೋಗಣ್ಣ ಬೆನ್ನೂರ ನುಡಿದರು. ಶಿವಾನಂದ ಅಂಗಡಿ ದಂಪತಿ, ಮುರಿಗೆಪ್ಪ ಕಡೇಕೊಪ್ಪ, ಇಟಗಿ, ನಾಗೇಂದ್ರಪ್ಪ ಮಂಡಕ್ಕಿ, ರಿತ್ತಿ ಗಾಣಗೇರ, ಗಂಗಪ್ಪ ಮಾಸೂರ, ಹನಮಂತಪ್ಪ ಮಡಿವಾಳರ, ಶಿವಾನಂದ ಹೊಸಮನಿ, ನಿವೃತ್ತ ಶಿಕ್ಷಕ ಕೋರಿಶೆಟ್ಟರ, ಶಂಕರಪ್ಪ ಜೋಗೊಂಡರ, ಪುಟ್ಟಪ್ಪ ಇನ್ನೂ ಅನೇಕರು ಉಪಸ್ಥಿತರಿದ್ದರು.
