ಹರಿಹರ ಪಂಚಮಸಾಲಿ ಪೀಠದಲ್ಲಿ ಪ್ರತಿಭಟನೆ, ಸಭೆ ಮುಂದೂಡಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಹರಿಹರ

ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರ ಭವಿಷ್ಯ ನಿರ್ಧರಿಸಲು ಮಂಗಳವಾರ ನಡೆಯಬೇಕಿದ್ದ ಸಭೆ ಮುಂದಕ್ಕೆ ಹೋಗಿದೆ.

ಪಂಚಮಸಾಲಿ ಪೀಠಾಧ್ಯಕ್ಷರಾಗಿ ಮುಂದುವರಿಯುತ್ತೀರೊ ಅಥವಾ ಬೆಂಗಳೂರಿನ ಶ್ವಾಸಯೋಗ ಕೇಂದ್ರದ ಅಧಿಕಾರದಲ್ಲಿ ಇರುತ್ತೀರೊ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸೂಚಿಸಿ ಮಠದ ಟ್ರಸ್ಟಿಗಳಾದ ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್ ಮತ್ತಿತರರು ಮಾರ್ಚ್ 24ರ ಗಡುವು ನೀಡಿದ್ದರು.

“ಉಪಚುನಾವಣೆಯ ಕಾರಣಕ್ಕೆ ಭದ್ರತೆ ಒದಗಿಸಲು ಕಷ್ಟವಾಗುವುದರಿಂದ ಸಭೆ ನಡೆಸದಂತೆ ಪೊಲೀಸರು ಮನವಿ ಮಾಡಿದ್ದರು. ಹೀಗಾಗಿ ಸದ್ಯಕ್ಕೆ ಸಭೆ ಮುಂದೂಡಿ, ಮುಂದಿನ ದಿನಗಳಲ್ಲಿ ನಡೆಸುತ್ತೇವೆ,” ಎಂದು ಗುರುಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾಧ್ಯಮಗಳಿಗೆ ತಿಳಿಸಿದರು.

‘ಲೆಕ್ಕ ಕೊಡಿ’ ಪ್ರತಿಭಟನೆ

ಗುರುಪೀಠದಲ್ಲಿ ನಡೆದಿರುವ ಖರ್ಚು ವೆಚ್ಚದ ಕುರಿತ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿ ಮಂಗಳವಾರ ಮಠದ ಆವರಣದಲ್ಲಿ 200ಕ್ಕೂ ಹೆಚ್ಚು ಭಕ್ತರು ಪ್ರತಿಭಟಿಸಿದರು.

ಮಠದ ಆಡಳಿತಾಧಿಕಾರಿ ಹೊನ್ನಾಳಿಯ ರಾಜ್‌ಕುಮಾರ್ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರವರೆಗೆ ಭಕ್ತರು ‘ಲೆಕ್ಕ ಕೊಡಿ’ ಚಳವಳಿ ನಡೆಸಿದರು.

‘ಪ್ರತಿ 5 ವರ್ಷಕ್ಕೊಮ್ಮೆ ಪೀಠದ ಧರ್ಮದರ್ಶಿಗಳು ಹಾಗೂ ಟ್ರಸ್ಟಿಗಳು ಶೇ.25 ರಷ್ಟು ಬದಲಾಗಬೇಕು. ಆದರೆ, ಅವರೇ ಇದುವರೆಗೆ ಮುಂದುವರೆಯುತ್ತಿದ್ದಾರೆ. ಸಮಾಜದ ಬಡಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇದುವರೆಗೆ ಅನುಷ್ಠಾನಕ್ಕೆ ತಂದಿಲ್ಲ ಎಂದು ರಾಜ್‌ಕುಮಾರ್ ಆಪಾದಿಸಿದರು.

ಕಳೆದ ಎರಡೂವರೆ ವರ್ಷದಿಂದ ಲೆಕ್ಕ ಕೇಳುತಿದ್ದೇವೆ. ಇದೂವರೆಗೆ ನೀಡಿಲ್ಲ. ಈ ಬಗ್ಗೆ ಕೇಳಿದವರನ್ನು ಟ್ರಸ್ಟ್‌ನಿಂದಲೇ ತೆಗೆದು ಹಾಕಲಾಗುತ್ತಿದೆ. ಹಾಗಾಗಿ, ಮಠಕ್ಕೆ ಎಚ್.ಪಿ. ಬಾಬಣ್ಣ, ಪರಮೇಶ್ವರ ಗೌಡರ ನೇತೃತ್ವದಲ್ಲಿ 11 ಜನರನ್ನು ಒಳಗೊಂಡ ಹೊಸ ಟ್ರಸ್ಟ್ ರಚನೆಗೆ ಮುಂದಾಗಲಿದ್ದೇವೆ ಎಂದರು.

‘ಬಳ್ಳಾರಿ, ನವಲಗುಂದ, ದಾವಣಗೆರೆ, ಶಿಗ್ಗಾವಿ, ಹಿರೇಕೆರೂರು, ಹಗರಿಬೊಮ್ಮನಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಮಠ ಹೊಂದಿರುವ ಆಸ್ತಿ ವಿವರವನ್ನೂ ಬಿ.ಸಿ.ಉಮಾಪತಿ, ಚಂದ್ರಶೇಖರ್ ಪೂಜಾರ್ ಅವರು ನೀಡಬೇಕು’ ಎಂದು ಮಠದ ಹೊರಾಂಗಣದಲ್ಲಿ ನಡೆದ ಸಭೆಯಲ್ಲಿ ಟ್ರಸ್ಟಿ ಸೋಮಣ್ಣ ಬೇವಿನಮರದ ಹೇಳಿದರು.
ಒತ್ತಾಯಿಸಿದರು.

ಪೀಠದ ಹಣವನ್ನು ಸ್ವಂತಕ್ಕೆ ಬಳಸಿಲ್ಲ

ಮಧ್ಯಾಹ್ನ ಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ ಪೀಠದ ಹಣವನ್ನು ಬೆಂಗಳೂರಿನ ಶ್ವಾಸಯೋಗ ಕೇಂದ್ರಕ್ಕೆ ಅಥವಾ ಸ್ವಂತಕ್ಕಾಗಿ ಬಳಸಿಲ್ಲ. ಪೀಠಾಧಿಪತಿ ಹುದ್ದೆಯನ್ನು ಯಾವುದೇ ರೀತಿಯ ದುರುಪಯೋಗ ಮಾಡಿಕೊಂಡಿಲ್ಲ, ಎಂದು ಹೇಳಿದರು.

ಅಧಿಕಾರ ಸ್ವೀಕರಿಸಿದಾಗಿನಿಂದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರ ಹೊಂದಿಲ್ಲ. ಸಮಾಜವೇ ನನಗೆ ಶ್ವಾಸ, ಸಮಾಜವೇ ಸರ್ವಸ್ವವಾಗಿದೆ, ಎಂದರು.

ನಾನು ಪೀಠವನ್ನು ಅರಸಿಕೊಂಡು ಬರಲಿಲ್ಲ. ಪೀಠವೇ ನನ್ನನ್ನು ಅರಸಿಕೊಂಡು ಬಂದಿದೆ. ಈ ಸಮಾಜದ ನೊಗವನ್ನು ಹೊರಲು ಯಾರೂ ಇಲ್ಲದಿದ್ದಾಗ, ಈ ಸಮಾಜದ ಜವಾಬ್ದಾರಿಯ ನೊಗವನ್ನು ಹೊತ್ತಿದ್ದೇನೆ. ನನ್ನೆಲ್ಲ ಶಕ್ತಿ ಸಾಮರ್ಥ್ಯವನ್ನು ಸಮರ್ಪಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

‘ಗುರುಪೀಠಕ್ಕೆ ನೇಮಕವಾಗುವಾಗ ಸಂದರ್ಭ ಟ್ರಸ್ಟ್ ಮುಖ್ಯಸ್ಥರಿಗೆ ಯಾವುದಾದರೂ ವಾಗ್ದಾನ ನೀಡಲಾಗಿತ್ತೇ?’ ಎಂಬ ಪ್ರಶ್ನೆಗೆ ಶ್ರೀಗಳು ಉತ್ತರ ನೀಡಲಿಲ್ಲ. ಆದರೆ, ‘ದಾಖಲೆಗಳನ್ನು ಒದಗಿಸುತ್ತೇನೆ’ ಎಂದಷ್ಟೇ ಹೇಳಿದರು.

ರಾಣೇಬೆನ್ನೂರು ಮಾಜಿ ಶಾಸಕ ಅರುಣಕುಮಾರ್ ಪೂಜಾರ್, ಅನ್ನ ದಾಸೋಹ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್, ಸಮುದಾಯದ ಮುಖಂಡರಾದ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೊಳೆಸಿರಿಗೆರೆಯ ಪರಮೇಶ್ವರ ಗೌಡ ಸೇರಿದಂತೆ ಹಲವರು ಮಠದ ಲೆಕ್ಕಪತ್ರ ಸಲ್ಲಿಸಬೇಕೆಂದು ಆಗ್ರಹಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *