ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ

ಬಸವ ಮೀಡಿಯಾ
ಬಸವ ಮೀಡಿಯಾ

ಕ್ರೀಡೆಗಳ ಮಹತ್ವವನ್ನು ಯುವಜನತೆ ಅರಿಯಲಿ: ಸಿ.ಪಿ.ಐ. ಜೂಲಿಕಟ್ಟಿ ಕಿವಿಮಾತು

ಗದಗ :

ಆಧುನಿಕ ದಿನಮಾನದಲ್ಲಿ ಒತ್ತಡದ ಜೀವನಶೈಲಿಯಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕ್ಷೀಣಿಸುತ್ತಿದ್ದು, ಕ್ರೀಡೆಗಳು ಇಂಥ ಎಲ್ಲಾ ಸಮಸ್ಯೆಗಳಿಗೆ ದಿವ್ಯ ಔಷಧಗಳಾಗಿವೆ. ವಿಶೇಷವಾಗಿ ಯುವಜನತೆ ಕ್ರೀಡೆಗಳ ಮಹತ್ವವನ್ನು ಮರೆಯಬಾರದು ಎಂದು ಸಿ.ಪಿ.ಐ. ಎಲ್.ಕೆ. ಜೂಲಿಕಟ್ಟಿ ನುಡಿದರು.

ಅವರು ಇತ್ತೀಚೆಗೆ ಇಲ್ಲಿನ ಇತಿಹಾಸ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಮಠದ ೨೦೨೬ನೇ ಸಾಲಿನ ಜಾತ್ರಾ ಮಹೋತ್ಸವದಂಗವಾಗಿ ಜರುಗಿದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ತೋಂಟದಾರ್ಯ ಮಠದ ಜಾತ್ರೆಯ ಸಮಾಜಮುಖಿ ಪರಂಪರೆ ಅನನ್ಯವಾಗಿದ್ದು, ಕ್ರೀಡೆಗಳಿಗೂ ಜಾತ್ರೆಯಲ್ಲಿ ಪಾಲು ನೀಡಿರುವುದು ಅಭಿನಂದನೀಯ ಕಾರ್ಯವಾಗಿದೆ. ಸ್ಫರ್ಧಾಳುಗಳು ಗೆಲುವೇ ಪರಮೋದ್ಧೇಶ ಎನ್ನುವುದಕ್ಕಿಂತ ಭಾಗವಹಿಸುವಿಕೆಗೆ, ಕ್ರೀಡಾ ಸ್ಫೂರ್ತಿಗೆ ಆದ್ಯತೆ ನೀಡಬೇಕು ಎಂದರು.

ಜಾತ್ರೆಯ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಭವ್ಯ ಪರಂಪರೆಯ ದ್ಯೋಕತವಾಗಿ ಈ ವರ್ಷ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳು ನಡೆಯಲಿದ್ದು, ಅದರ ಭಾಗವಾಗಿ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ಜರುಗಿತು.

ಕಬಡ್ಡಿ ಪಂದ್ಯಾವಳಿಯಲ್ಲಿ ೨೧ ತಂಡಗಳು ಭಾಗವಹಿಸಿದ್ದವು. ಇವುಗಳ ಪೈಕಿ ಮೆಣಸಗಿಯ ಜಯಕರ್ನಾಟಕ ಕಬಡ್ಡಿ ತಂಡ ಪ್ರಥಮ ಸ್ಥಾನ ಗಳಿಸಿತು. ರೋಣದ ಬಿ.ಸಿ. ರಮೇಶ್ ತಂಡ ದ್ವೀತಿಯ ಸ್ಥಾನ ಗಳಿಸಿ ರನ್ನರ್ ಅಪ್ ಪದವಿಗೆ ಭಾಜನವಾದರೆ, ಡಂಬಳದ ಮಾರುತೇಶ್ವರ ಕಬಡ್ಡಿ ತಂಡ ಹಾಗೂ ಮೆಣಸಗಿಯ ಲಿಂಗಬಸವೇಶ್ವರ ಕಬಡ್ಡಿ ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿದವು.

ಕಬಡ್ಡಿ ಪಂದ್ಯಾವಳಿಗಳು ನಿರ್ಣಾಯಕರ ಹಾಗೂ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದವು. ವಿಜೇತ ಕಬಡ್ಡಿ ತಂಡಗಳಿಗೆ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಪಂದ್ಯಾವಳಿಗಳ ನಿರ್ಣಾಯಕರಾಗಿ ಬಿ.ಎಚ್. ಹಡಪದ, ಎಸ್.ಡಿ. ಮಾದರ, ಎಂ.ಆರ್. ಪೂಜಾರ, ಮುತ್ತು ಪ್ರದಾನಿ ಹಾಗೂ ಎಸ್.ಆರ್. ಗಣಾಚಾರಿ ಭಾಗವಹಿಸಿದ್ದರು.

ಜಾತ್ರಾ ಸಮಿತಿಯ ಅಧ್ಯಕ್ಷರಾದ ವಿನಾಯಕ ಮಾನ್ವಿ, ಉಪಾಧ್ಯಕ್ಷ ಶಿವಯ್ಯ ನಾಲ್ವತವಾಡಮಠ, ಸುಭಾಷ ಚನ್ನಪ್ಪನವರ, ಸುಧಾ ಹುಚ್ಚಣ್ಣವರ, ಕೋಶಾಧ್ಯಕ್ಷ ವಿರುಪಾಕ್ಷಪ್ಪ ದಲಾಲಿ, ಸಹಕೋಶಾಧ್ಯಕ್ಷ ವೀರಣ್ಣ ಗಡಗಿ, ಕಾರ್ಯದರ್ಶಿ ಚೇತನ ಅಂಗಡಿ, ಸಹಕಾರ್ಯದರ್ಶಿ ಎಮ್. ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್.ವ್ಹಿ. ಪವಾಡಿಗೌಡ್ರ, ಸಂಘಟನಾ ಕಾರ್ಯದರ್ಶಿ ಉಮೇಶಗೌಡ ಪಾಟೀಲ, ಯಲ್ಲೂಸಾ ಹಬೀಬ ಸೇರಿದಂತೆ ಶ್ರೀಮಠದ ಹಿರಿಯ ಭಕ್ತರು ಹಾಗೂ ಕ್ರೀಡಾಪ್ರೇಮಿಗಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *