‘ಮಹಿಳಾ ಸಬಲೀಕರಣಕ್ಕೆ ಭದ್ರಬುನಾದಿ ಹಾಕಿದ ಕಲ್ಯಾಣದ ಶರಣರು’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಸೌಶೀಲ್ಯವಾದ ಬಾಳು ಮನುಕುಲಕ್ಕೆ ಸದಾ ಪ್ರಾಪ್ತವಾಗಬೇಕೆಂಬ ಸದಾಶಯದೊಂದಿಗೆ ಉನ್ನತ ವಿಚಾರಧಾರೆಗಳನ್ನು ಆಡುಭಾಷೆಯಲ್ಲಿ ಸರಳವಾಗಿ, ಜನಸಾಮಾನ್ಯರ ಎದೆಗೆ ನಾಟುವಂತೆ ಕಟ್ಟಿಕೊಟ್ಟಂತಹ ಸಾಹಿತ್ಯ ಪ್ರಕಾರ ಜಾಗತಿಕವಾಗಿ ಯಾವುದಾದರೂ ಇದ್ದರೆ ಅದು ಕನ್ನಡದ ವಚನ ಸಾಹಿತ್ಯ ಮಾತ್ರ.

12ನೇ ಶತಮಾನದಲ್ಲಿ ಕಲ್ಯಾಣ ನಗರದಲ್ಲಿ ನಡೆದ ವಚನ ಚಳವಳಿಯು ಅನೇಕ ಮೊದಲುಗಳನ್ನು ನೀಡಿದೆ. ಸಮಸಮಾಜವನ್ನು ಕಟ್ಟಿಕೊಟ್ಟದ್ದು ಶರಣರ ವಚನ ಸಾಹಿತ್ಯ. ಅಕ್ಕಮಹಾದೇವಿ ಲೋಕದ ಪ್ರಪ್ರಥಮ ಮಹಿಳಾ ಕವಯಿತ್ರಿ. ಮಹಿಳಾ ಸಾಹಿತ್ಯ ಬೆಳೆದು ಬಂದುದ್ದು ಮೊಟ್ಟ ಮೊದಲಿಗೆ ಕಲ್ಯಾಣ ನಾಡಿನಲ್ಲಿ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ ಅವರು ಅಭಿಪ್ರಾಯಪಟ್ಟರು.

ನಗರದ ಪಂಚಾಯತ ರಾಜ ಪದವಿ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡ  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ಬೀದರ ಜಿಲ್ಲಾ ಘಟಕದ ನೂತನದ ಅಧ್ಯಕ್ಷರ ಪದಗ್ರಹಣ, ಜಿಲ್ಲಾಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.

ಶರಣರು ಕಾಯಕ ಸಿದ್ಧಾಂತವನ್ನು ಕಟ್ಟಿಕೊಟ್ಟರು. ಜೊತೆಗೆ ಮಹಿಳೆಯರ ಬಗ್ಗೆ ಅವರಿಗೆ ಸಂವೇದನೆಯಿತ್ತು. ಅಂತಲೇ ಅಂದಿನ ದಿನಗಳಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ‍್ಯವನ್ನು ಕಲ್ಪಿಸಿಕೊಟ್ಟರು. ವಚನ ಸಾಹಿತ್ಯದಲ್ಲಿ ಆದರ್ಶ ದಾಂಪತ್ಯಕ್ಕೆ ಬಹುದೊಡ್ಡ ಉದಾಹರಣೆ ಇದೆ. ಗಂಗಾಂಬಿಕೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ ಇವರೆಲ್ಲರೂ ಆದರ್ಶವಾಗಿ ಬಾಳಿದರು, ಆಸೆ ಆಮಿಷಗಳಿಲ್ಲದೆ ಜೀವನ ಮಾಡಿದರು ಎಂದರು.

ನಿಜಕ್ಕೂ ಶರಣರ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು. ಇಂತಹ ನಾಡಿನಲ್ಲಿ ಇವತ್ತು ಈ ವೇದಿಕೆಯಲ್ಲಿ ಮಹಿಳೆಯರಿಗೆ ಗುರುತಿಸುವ ಕಾರ್ಯ ಆಗುತ್ತಿರುವುದು ಕಾಕತಾಳೀಯ ಎಂದು ನುಡಿದರು.

ಈ ಸಂದರ್ಭದಲ್ಲಿ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಸ್ವಾಗತ. ಹೆಣ್ಣು ಅಬಲೆಯಲ್ಲ ಸಬಲೆ. ಅಮ್ಮ ಎಂದರೆ ಅದೊಂದು ಪದವಲ್ಲ ಅದು ಭಾವನಾತ್ಮಕ ಸಂಬಂಧಕ್ಕೆ ಕಾರಣವಾಗುತ್ತದೆ ಎಂದರು.

ಶರಣರು ಕೊಟ್ಟಿರುವ ವಚನಗಳು ನಾವೆಲ್ಲ ನಿತ್ಯ ಅನುಸರಿಸಬೇಕು ಮತ್ತು ಅದರಂತೆ ಬಾಳಬೇಕು, ಇದು ನಿಜವಾದ ನಮ್ಮ ಆದರ್ಶ ಜೀವನಕ್ಕೆ ಸಾಕ್ಷಿಯಾಗಬಹುದು.

ಸತ್ಯ ಶುದ್ಧ ಕಾಯಕ ಮಾಡಬೇಕು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.

ವೇದಿಕೆ ಜಿಲ್ಲಾಧ್ಯಕ್ಷರಾದ ಕಲ್ಯಾಣರಾವ ಮದರಗಾಂವಕರ್ ಪ್ರಾಸ್ತಾವಿಕ ಮಾತನಾಡಿದರು, ತಹಸೀಲ್ದಾರ ಶಿವಾನಂದ ಮೇತ್ರೆ, ಸುರೇಖಾ ಹೊಸಮನಿ, ಸುಮಿತ್ರಾ ದಾವಣಗಾವೆ ಮಹಿಳೆಯರ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ. ಎಂ. ಜಿ. ದೇಶಪಾಂಡೆ, ಶೀತಲ ಖೂಬಾ, ವಿಶ್ವನಾಥ ಮುಕ್ತಾ, ಬಸವಣ್ಣಪ್ಪ ನೆಲೋಗಿ, ಆಶಾರಾಣಿ ಬಾವಿದೊಡ್ಡಿ ಉಪಸ್ಥಿತರಿದ್ದರು. 

ಇದೆ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಗಡ್ಡೆ, ರೇಖಾ ಹೊಸಮನಿ, ಆಶಾರಾಣಿ ಸಂಗಶಟ್ಟಿ, ಸರೋಜಾ ಚಂದಾಪುರೆ, ಜ್ಯೋತಿ ಅಲಶೆಟ್ಟಿ, ಜನಾಬಾಯಿ, ಸರಸ್ವತಿ ಕಾಂಬಳೆ, ಭಾರತಬಾಯಿ ಖರ್ಗೆ, ಮನುಸಾ ರೋಳಾ, ಜ್ಯೋತಿ ಧನ್ನೂರೆ, ವೈಜಯಂತಿ, ಸುಮಿತ್ರಾ ದಾವಣಗಾವೆ, ಅಶ್ವಿನಿ ಶರಣಪ್ಪ, ಆನಂದಾ ಜಮಾದಾರ, ರೇಖಾ ಕಾಂಬಳೆ ಈ ಮಹಿಳಾ ಸಾಧಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಎಂ. ಶ್ರೀಕಾಂತ ನಿರೂಪಿಸಿದರು. ಕವಿತಾ ಮಾಲಿಪಾಟೀಲ ವಂದಿಸಿದರು. ಲಕ್ಷ್ಮೀ ಮದರಗಾಂವಕರ, ಈಶ್ವರ ತಡೋಳಾ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *