ವೈಚಾರಿಕ ಜಾತ್ರೆಯೆಂದೇ ಹೆಸರಾಗಿರುವ ತೋಂಟದಾರ್ಯ ಜಾತ್ರೆ: ಎಂ. ಬಿ. ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

೧೨ನೇ ಶತಮಾನದ ಬಸವಾದಿ ಶರಣರು ಜಾತಿರಹಿತ ಸಮಾಜವನ್ನು ಕಟ್ಟಿದ್ದರು : ಸಚಿವ ಎಂ.ಬಿ. ಪಾಟೀಲ

ಗದಗ :

ಇಂದು ನಾವೆಲ್ಲ ಜಾತ್ಯಾತೀತ ಸಮಾಜವನ್ನು ನಿರ್ಮಾಣ ಮಾಡುವ ಕುರಿತು ಚಿಂತನೆ ಮಾಡುತ್ತೇವೆ. ಆದರೆ ಬಸವಾದಿ ಶರಣರು ೧೨ನೇ ಶತಮಾನದಲ್ಲೇ ಕಲ್ಯಾಣದಲ್ಲಿ ಜಾತಿರಹಿತ ಸಮಾಜವನ್ನು ನಿರ್ಮಾಣ ಮಾಡಿದ್ದರು, ಜಾತಿರಹಿತ ಸಮಾಜಕ್ಕೂ ಜಾತ್ಯಾತೀತ ಸಮಾಜಕ್ಕೂ ವ್ಯತ್ಯಾಸವಿದೆ ಎಂದು ಕರ್ನಾಟಕ ಸರ್ಕಾರದ ಬೃಹತ್‌ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ ನುಡಿದರು.

ಅವರು ಬುಧವಾರ ನಗರದ ತೋಂಟದಾರ್ಯ ಮಠದಲ್ಲಿ ೨೦೨೬ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ತೋಂಟದಾರ್ಯ ಜಾತ್ರೆ ನಾಡಿನಲ್ಲೇ ವೈಚಾರಿಕ ಜಾತ್ರೆಯೆಂದು ಹೆಸರಾಗಿದ್ದು, ಇಂಥ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿರುವುದು ನನ್ನ ಸುಯೋಗ.

ಕಲ್ಯಾಣ ಕ್ರಾಂತಿಯ ನಂತರ ತೆರೆಮರೆಗೆ ಸರಿದಿದ್ದ ಶರಣ ಪರಂಪರೆಯನ್ನು ಪುನರುತ್ಥಾಪಿಸಲು ೧೫ನೇ ಶತಮಾನದ ಸಿದ್ಧಲಿಂಗ ಶಿವಯೋಗಿಗಳು ಸ್ಥಾಪಿಸಿದ ಪೀಠ ಪರಂಪರೆ ಇದಾಗಿದ್ದು, ಈ ಮಠದ ಪರಂಪರೆಗೆ ಮೆರುಗು ತಂದುಕೊಟ್ಟವರು ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳು.

ಕನ್ನಡಾಭಿಮಾನ ಹಾಗೂ ಬಸವತತ್ವನಿಷ್ಠೆಗೆ ವ್ಯಾಖ್ಯಾನರಾಗಿದ್ದ ಅವರ ಜೊತೆ ನನಗೂ ಅವಿನಾಭಾವ ಸಂಬಂಧವಿತ್ತು. ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಕ್ಷೇತ್ರದಲ್ಲಿ ಅತೀ ಎತ್ತರದ ನೀರಾವರಿ ಯೋಜನೆಯು ಜಾರಿಯಾಗುವಾಗ ಅದರ ಪೂಜೆ ನೆರವೇರಿಸಿದ್ದ ಲಿಂಗೈಕ್ಯ ಗುರುಗಳು ಬೃಹದಾಕಾರದ ನೀರಾವರಿ ಪೈಪುಗಳನ್ನು ಕಂಡು ಬೆರಗಾಗಿ ಪ್ರವಚನದಲ್ಲಿ ನನ್ನ ಕಾರ್ಯದ ಕುರಿತು ಶ್ಲಾಘಿಸಿದ್ದರು.

ಲಿಂಗಾಯತ ಧರ್ಮದ ವೈಶಿಷ್ಠ್ಯತೆ ಕುರಿತು ಮಾತನಾಡಿದ ಅವರು, ಲಿಂಗಾಯತ ಧರ್ಮ ಕಾಯಕ-ಸಮಾನತೆ-ದಾಸೋಹ ತತ್ವಗಳನ್ನು ಆಧರಿಸಿದ ಸಮಸಮಾಜದ ಕನಸನ್ನು ಹೊತ್ತ ಶ್ರೇಷ್ಠವಾದ ಧರ್ಮವಾಗಿದ್ದು, ವರ್ಗ-ವರ್ಣಗಳ ಎಲ್ಲೆಯನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಮಹದಾಶೆ ಹೊಂದಿದೆ ಎಂದರು.

ಇಂದು ಬಿಡುಗಡೆಗೊಂಡ ಒಕ್ಕಲಿಗ ಮುದ್ದಣ್ಣನವರ ವಚನ ವಿಶ್ಲೇಷಣೆ ಕೃತಿಯು ಮಾಜಿ ಸಚಿವ ಎಸ್.ಎಸ್‌ ಪಾಟೀಲರ ಬಹುದಿನಗಳ ಕನಸಾಗಿದ್ದು, ಆ ಮಹತ್ವಪೂರ್ಣ ಕೃತಿಯನ್ನು ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು.

ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ ಪ.ಗು. ಸಿದ್ದಾಪುರ ವಿರಚಿತ ʻಹಣತೆ ಹಚ್ಚಿದವರು-೨ʼ ಹಾಗೂ ಡಾ.ಎಸ್‌. ಗಂಗಾಂಬಿಕೆ ಗೋವರ್ಧನ ವಿರಚಿತ ʻತಾರಕಗುರೂಪದೇಶʼ, ವಿಜಯಕುಮಾರ ಕಮ್ಮಾರ ವಿರಚಿತ ʻಒಕ್ಕಲಿಗ ಮುದ್ದಣ್ಣನವರ ವಚನಗಳ ವಿಶ್ಲೇಷಣೆʼ ಗ್ರಂಥಗಳು ಲೋಕಾರ್ಪಣೆಗೊಂಡವು.

ಗ್ರಂಥ ಲೋಕಾರ್ಪಣೆ ನೆರವೇರಿಸಿದ ವಿಧಾನ ಪರಿಷತ್‌ ಸದಸ್ಯರಾದ ಎಸ್.ವ್ಹಿ. ಸಂಕನೂರ ಮಾತನಾಡಿ, ತೋಂಟದಾರ್ಯ ಜಾತ್ರೆಗೆ ಇಡೀ ರಾಜ್ಯದಲ್ಲಿ ತನ್ನದೇ ಆದ ಇತಿಹಾಸ-ವಿಶಿಷ್ಠತೆ ಇದೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಜಾತ್ರೆಗೆ ಸಾಮಾಜಿಕ-ಸಾಂಸ್ಕೃತಿಕ ಆಯಾಮ ನೀಡಿದರು. ಅದಕ್ಕೆ ಸಾಕ್ಷಿಯೆಂಬಂತೆ ಇಂದಿನ ಜಾತ್ರೆಯಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಪಂದ್ಯಾವಳಿಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜಾತ್ರೆಯ ಸಂದರ್ಭದಲ್ಲಿ ಆಯಾ ಊರಿನ ಜನರು ಮಳೆ-ಬೆಳೆಗಾಗಿ ಪ್ರಾರ್ಥಿಸುತ್ತಾರೆ. ಜಾತಿಮತಗಳನ್ನು ಮೀರಿ ಎಲ್ಲರೂ ಸೇರಿ ನಮ್ಮೂರಿನ ಜಾತ್ರೆ ಎಂದು ಆಚರಿಸಿ ಸಂಭ್ರಮಿಸುತ್ತಾರೆ. ಜಾತ್ರೆಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಇಂದು ಬಿಡುಗಡೆಯಾದ ಪುಸ್ತಕಗಳು ಅತ್ಯಂತ ಮಹತ್ವದ್ದಾಗಿವೆ ಎಂದರು.

ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ ಸ್ವಾಗತಿಸಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಪ್ರೊ.ಎಸ್.ಎಸ್‌. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಶಿವಮೊಗ್ಗ ಆನಂದಪುರ, ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.

ಸಮ್ಮುಖವನ್ನು ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು, ಮಣಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಮಣಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮಿಗಳು, ಆಡಿ-ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು, ಶಿರೋಳ-ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ರುದ್ನೂರಿನ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು, ಸಿರಸಂಗಿಯ ಬಸವಮಹಾಂತ ಮಹಾಸ್ವಾಮಿಗಳು ವಹಿಸಿದ್ದರು.

ಸಿದ್ಧಲಿಂಗ ದೇವರು, ಶಿವಾನಂದದೇವರು, ವೆಂಕಟಾಪೂರ ಶರಣರು, ಮಾಜಿ ಸಚಿವರಾದ ಎಸ್.ಎಸ್‌. ಪಾಟೀಲ, ಮಾಜಿ ಸಂಸದರಾದ ಐ.ಜಿ. ಸನದಿ, ಡಾ. ಐಹೊಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸ್ಥಾಯಿ ನಾಕೋಡ ಹಾಗೂ ಪಂ. ಬಾಲಚಂದ್ರ ನಾಕೋಡ ಇವರಿಂದ ವಚನ ಸಂಗೀತ ಜರುಗಿತು. ಬಾಹುಬಲಿ ಜೈನರ ನಿರೂಪಿಸಿದರು. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಶ್ರೀಮಠದ ಅಪಾರ ಸದ್ಭಕ್ತರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *