ರಾಯಚೂರು :
ನಗರದ ಬಸವ ಕೇಂದ್ರದಲ್ಲಿ ವೈರಾಗ್ಯನಿಧಿ ಶರಣೆ ಅಕ್ಕಮಹಾದೇವಿ ಜಯಂತಿ ನಡೆಯಿತು. ಬಸವೇಶ್ವರ ಕಾಲೋನಿಯ ಈಶ್ವರ ಗುಡಿಯಿಂದ ಬಸವ ಕೇಂದ್ರದವರೆಗೆ ಅಕ್ಕನ ಭಾವಚಿತ್ರ, ವಚನಗಳ ಘೋಷಣೆಯೊಂದಿಗೆ ವಿಜೃಂಭಣೆಯ ಮೆರವಣಿಗೆ ಮಾಡಲಾಯಿತು. ಅಕ್ಕನ ಬಳಗದ ಸದಸ್ಯರು ವಚನ ಗಾಯನಕ್ಕೆ ತಕ್ಕ ಕೋಲಾಟ ಹಾಕುತ್ತಾ ಸಾಗಿದರು.

ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ ಷಟಸ್ಥಲ ಧ್ವಜಾರೋಹಣ ಮಾಡಿದರು.
ನಂತರ ವೇದಿಕೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ದಿವ್ಯಸಾನಿಧ್ಯದಲ್ಲಿ, ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ ಅಧ್ಯಕ್ಷತೆಯಲ್ಲಿ ವನಜಾಕ್ಷಮ್ಮ ಗಿರಿಜಾಶಂಕರ ನವಸುಂದಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವ ಮಲ್ದಕಲ್, ಸುಶೀಲಮ್ಮ ಡಾ.ವಿ.ಎ. ಮಾಲಿಪಾಟೀಲ, ದಾನಮ್ಮ ಸುಭಾಶ್ಚಂದ್ರ ಮುಂತಾದವರು ಇದ್ದರು.

ಕಾರ್ಯಕ್ರಮದಲ್ಲಿ ಸುಪ್ರಿಯಾ ಪಾಟೀಲ, ಪೂರ್ಣಿಮಾ ಪಾಟೀಲ ಸಂಗಡಿಗರಿಂದ ವಚನ ಪ್ರಾರ್ಥನೆ, ವಚನ ನೃತ್ಯ ನೆರವೇರಿತು. ಅಕ್ಕಮಹಾದೇವಿಯ ತೊಟ್ಟಿಲ ಕಾರ್ಯಕ್ರಮವನ್ನು ಶರಣೆಯರು ಮತ್ತು ರಾಘವೇಂದ್ರ ಆಶಾಪೂರ ವಚನ ಜೋಗುಳ ಹಾಡುವ ಮೂಲಕ ನೆರವೇರಿಸಿದರು.
ಪಾರ್ವತಿ ಪಾಟೀಲ ಪ್ರಾಸ್ತಾವಿಕ ನುಡಿಯಲ್ಲಿ ಅಕ್ಕನ ಬಳಗ, ಮತ್ತು ಅದರ ಕಾರ್ಯವಿಸ್ತಾರ ಕುರಿತು ಮಾತನಾಡುತ್ತಾ, ಅಕ್ಕನ ಜೀವನ ಸಂದೇಶ ಮತ್ತು ವಚನ ಮಹತ್ವ ತಿಳಿಸಲು ೨೦೨೨ರ ಗೌರಿಹುಣ್ಣಿಮೆ ದಿನ ಅಕ್ಕನ ಬಳಗವನ್ನು ಪ್ರಾರಂಭಿಸಲಾಯಿತು. ಅಂದು ಇಲಕಲ್ಲ ಪೂಜ್ಯರಿಂದ ಅಕ್ಕನ ಮೂರ್ತಿ ಸ್ಥಾಪಿತವಾಯಿತು.

ಅಧಿಕೃತವಾಗಿ ೨೦೨೩ ಎಪ್ರಿಲ್ ೬ ರಂದು ವಿಧವೆ ತಾಯಂದಿರರಿಗೆ ಉಡಿ ತುಂಬುವ ಮೂಲಕ ಅಕ್ಕನ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಲ್ಲಿಂದ ಇಲ್ಲಿಯವರೆಗೆ ಶ್ರಾವಣ ಮಾಸದಲ್ಲಿ ಮನೆ ಮನೆಗಳಿಗೆ ಹೋಗಿ ವಚನ ಪುಸ್ತಕ, ಒಂದು ಬೋರ್ಡ್, ಡಸ್ಟರ್, ಚಾಕಪೀಸ್ ನೀಡುವ ಮೂಲಕ ವಚನ ಕಾರ್ಯಕ್ರಮಗಳ ನಡೆಸಿಕೊಂಡು ಬಂದ ಬಗ್ಗೆ ಮತ್ತು ಪ್ರತಿದಿನ ಮಕ್ಕಳಿಗೆ ಡಾ. ಪ್ರಿಯಾಂಕ ಕೋಣಿನ ಮತ್ತು ಪೂರ್ಣಿಮಾ ಪಾಟೀಲ ವಚನ ಕಂಠಪಾಟ, ವಚನ ನೃತ್ಯ, ಇಷ್ಟಲಿಂಗ ಪೂಜೆ ಮುಂತಾದ ಕಾರ್ಯಕ್ರಮ ನಡೆಸುವ ಬಗ್ಗೆ ತಿಳಿಸಿದರು.
“ಅನುಭವ ಮಂಟಪದ ಅನರ್ಘ್ಯ ರತ್ನ ಮಹಾದೇವಿಯಕ್ಕ” ವಿಷಯದ ಕುರಿತು ಉಪನ್ಯಾಸ ನೀಡಿದ ಪಿ. ರುದ್ರಪ್ಪ, ವೀರವೀರಾಗಿಣಿ ಅಂದರೆ ವೈರಾಗ್ಯದಲ್ಲಿ ಅಲ್ಲಮರಿಗಿಂತ ಎತ್ತರದ ಸ್ಥಾನದಲ್ಲಿರುವವರು. ಯಾವ ವಯಸ್ಸು ವೈರಾಗ್ಯಕ್ಕೆ ಅಡ್ಡಿಯಾಗುವುದೋ ಅಂತಹ 16 – 18 ನೇ ವಯಸ್ಸಿನಲ್ಲಿ ಅಕ್ಕನಿಗೆ ವೈರಾಗ್ಯ ಸಿದ್ಧಿಸಿತ್ತು ಎಂದರು.

ಶರಣರ ಧರ್ಮ ಯಾವುದೇ ಧರ್ಮಕ್ಕೆ ಪರ್ಯಾಯವಲ್ಲ, ವೇದ ಉಪನಿಷತ್ತುಗಳಿಗೂ ಪರ್ಯಾಯವಲ್ಲ, ಅದು ಸೃಷ್ಟಿಕರ್ತನ ನಿರ್ಮಾಣ ನೆಲೆಯ ಮಾಯಾಂಗನಿಗೆ ಪರ್ಯಾಯವಾಗಿ ಕಟ್ಟಿದ್ದು.
ಶರಣರ ದೃಷ್ಟಿಯಲ್ಲಿ ಹರಿಹರ ಬ್ರಹ್ಮಾದಿಗಳು ದೇವರಲ್ಲ ಎಂಬುದಕ್ಕೆ ತ್ರಿಮೂರ್ತಿಗಳ ಕುರಿತ ವಚನ ಹರಿಹರ ಬ್ರಹ್ಮಾದಿಗಳಿಗೆ ಅಗೋಚರವಾದ ಕೂಡಲ ಚನ್ನಸಂಗನೆಂಬ ಲಿಂಗವ ಕರೆಸ್ಥಲಕ್ಕೆ ತಂದುಕೊಟ್ಟ ಬಸವ ಗುರುವೇ ನಿಮಗೆ ಶರಣು ಶರಣಾರ್ಥಿ ಎಂದು ನೆನೆದರು.
ಹೆಣ್ಣು ಹೆಣ್ಣಾದರೆ ಗಂಡಿಗೆ ಸೂತಕ ಗಂಡು ಗಂಡಾದರೆ ಹೆಣ್ಣಿಗೆ ಸೂತಕ ಮನದ ಸೂತಕ ಹಿಂಗಿದರೆ ಅರುವಿನ ಸೂತಕಕ್ಕೆ ತೆರವುಂಟೆ ಅಯ್ಯಾ ಮೊದಲಿಲ್ಲದ ಸೂತಕಕ್ಕೆ ಮರುಳಾಯಿತು ಜಗವೆಲ್ಲ ಎನ್ನ ದೈವ ಚೆನ್ನಮಲ್ಲಿಕಾರ್ಜುನನೆಂಬ ಗರ್ವಕ್ಕೆ ಜಗವೆಲ್ಲ ಹೆಣ್ಣು ನೋಡಾ!
ಜಗತ್ತಿನ ಜೀವಚರ ಸಾಕಾರವಾದದ್ದೆಲ್ಲ ಹೆಣ್ಣು, ಅದರೊಳಗಿದ್ದು ಅದನ್ನು ಚಲಿಸುವಂತೆ ಮಾಡುವುದು ಗಂಡು, ಅಂದರೆ ನನ್ನೊಳಗಿರುವ ನನ್ನ ಗಂಡನನ್ನು ಗುರುತಿಸುವುದು ಜೀವನದ ಪರಮಗುರಿ ಎಂದು ಹೇಳಿದರು.

ಅಕ್ಕನ ಬಳಗದ ಅಧ್ಯಕ್ಷೆ ಜಗದೇವಿ ಚನ್ನಬಸವ ಮಲ್ದಕಲ್, ಸುಶೀಲಮ್ಮ ಡಾ.ವಿ.ಎ. ಮಾಲಿಪಾಟೀಲ, ದಾನಮ್ಮ ಸುಭಾಶ್ಚಂದ್ರ ಮುಂತಾದವರು ಇದ್ದರು. ಜಯಶ್ರೀ ಮಹಾಜನಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಾಲಿಕಾ ಹಣಮಂತ ಸ್ವಾಗತ ಕೋರಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
