ಶರಣ ತತ್ವ ಸಾರುವಲ್ಲಿ ‘ಶಿವಸಂಚಾರ’ಯಶಸ್ವಿ : ಗುರುಮಠಕಲ್ ಸ್ವಾಮೀಜಿ

ಯಾದಗಿರಿ:

ಬಸವಾದಿ ಶರಣರ ಕ್ರಾಂತಿಕಾರಿ ಚಿಂತನೆಗಳನ್ನು ಹಾಗೂ ವಚನ ಸಾಹಿತ್ಯದ ಸಾರವನ್ನು ಕಲೆಯ ಮೂಲಕ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಾಣೇಹಳ್ಳಿಯ ‘ಶಿವಸಂಚಾರ’ ನಾಟಕಗಳು ಅತ್ಯಂತ ಯಶಸ್ವಿಯಾಗಿರುತ್ತವೆ ಎಂದು ಗುರುಮಠಕಲ್ ಖಾಸಾಮಠದ  ಪೂಜ್ಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

​ನಗರದಲ್ಲಿ ಆಯೋಜಿಸಲಾಗಿದ್ದ ಸಾಣೇಹಳ್ಳಿ ಶಿವಸಂಚಾರ ನಾಟಕ ತಂಡದ ಮೂರು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

​ನಾಟಕ ಅತ್ಯಂತ ಪ್ರಭಾವಿ ಮಾಧ್ಯಮ, ನಾಟಕವು ಕೇವಲ ಮನರಂಜನೆಯ ಸಾಧನವಲ್ಲ, ಅದು ಜನರ ಮನಸ್ಸನ್ನು ನೇರವಾಗಿ ತಲುಪುವ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ. ವಚನಗಳ ಮೂಲಕ ಶರಣರ ತತ್ವಗಳನ್ನು ಸಮಾಜದಲ್ಲಿ ಬಿತ್ತರಿಸುವಲ್ಲಿ ಈ ತಂಡದ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಇದೇ ವೇಳೆ ಬಿಜೆಪಿ ಮುಖಂಡ ರಾಚನಗೌಡ ಮುದ್ದಾಳ ಮಾತನಾಡಿ, ಶಿವಸಂಚಾರ ನಾಟಕ ತಂಡ ಹಾಗೂ ವೈಜ್ಞಾನಿಕ ಪರಿಷತ್ತಿನ ಜಿಲ್ಲಾ ಘಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಗುಂಡಪ್ಪ ಕಲ್ಬುರ್ಗಿ, “ಕಳೆದ ಡಿಸೆಂಬರ್‌ನಲ್ಲಿ ಯಾದಗಿರಿಯಲ್ಲಿ ನಡೆದ ೫ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದ ಅಭೂತಪೂರ್ವ ಯಶಸ್ಸನ್ನು ಕಂಡು ಸಚಿವ ಸತೀಶ ಜಾರಕಿಹೊಳಿ ಅವರು ಪ್ರಭಾವಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಯಶಸ್ವಿ ಯಾದಗಿರಿ ತಂಡವನ್ನೇ ಬೆಳಗಾವಿಗೆ ಕರೆಸಿ ಗೌರವಿಸಿರುವುದು ನಮ್ಮ ಜಿಲ್ಲೆಗೆ ಸಂದ ದೊಡ್ಡ ಮನ್ನಣೆ” ಎಂದರು.

​ಇದೇ ಸಂದರ್ಭದಲ್ಲಿ, ಮುಂಬರುವ ನವೆಂಬರ್ 18ರಂದು ವಿಯೆಟ್ನಾಂನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲು ವೈಜ್ಞಾನಿಕ ಸಂಶೋಧನಾ ಪರಿಷತ್ತು ತೀರ್ಮಾನಿಸಿದೆ ಎಂಬ ಮಹತ್ವದ ವಿಷಯವನ್ನು ಅವರು ಪ್ರಕಟಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಿದ್ದಗಂಗಾ ಶಿವಕುಮಾರ ಶ್ರೀಗಳ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಗುಂಡಪ್ಪ ಕಲ್ಬುರ್ಗಿ ವಹಿಸಿದ್ದರು.

ವೇದಿಕೆಯ ಮೇಲೆ ಗಣ್ಯರಾದ ಸೋಮಶೇಖರ ಮಣ್ಣೂರ, ಬಸವರಾಜ ಮಹಾಮನಿ, ಬಸವರಾಜ ರಾಜಾಪೂರ, ಇಂದುಧರ ಸಿನ್ನೂರ, ಮರೆಪ್ಪ ಚಟ್ಟೇರಕರ್, ಶಿವಣ್ಣ ಇಜೇರಿ ಹಾಗೂ ಮಲ್ಲಿಕಾರ್ಜುನ ಸತ್ಯಂಪೇಟೆ ಉಪಸ್ಥಿತರಿದ್ದರು. ಜಗದೀಶ ನೂಲಿನವರ ಕಾರ್ಯಕ್ರಮ ನಿರೂಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *