ವೈದಿಕತೆ ತಿರಸ್ಕರಿಸಿದ ಶರಣರು: ಯಡಿಯೂರು ಸಿದ್ಧಲಿಂಗೇಶ್ವರರ ವಚನಗಳು

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.

ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

ಇಂದು ಸನಾತನ ಧರ್ಮವನ್ನು ನಿರಾಕರಿಸುವ ಯಡಿಯೂರು ಸಿದ್ಧಲಿಂಗೇಶ್ವರರ ಕೆಲವು ವಚನಗಳು:

ಬ್ರಾಹ್ಮಣರ ಸಂಗ ಬಿಟ್ಟರೆ ಮಾತ್ರ ದೇವರನ್ನು ಕಾಣಲು ಸಾಧ್ಯ

ಹಾರುವರ ಮನೆಯ ದೇವಿಯ ಹದಿರು ಚದರಿನಲ್ಲಿ
ಹಲಬರು ಸಿಕ್ಕಿ ಕೆಟ್ಟರು ನೋಡಾ.
ಹಾರುವರ ಕೊಂದು ಹದಿರು ಚದಿರು ಅಳಿದಲ್ಲದೆ
ದೇವರ ಕಾಣಬಾರದು, ಪ್ರಾಣಲಿಂಗ ಸಂಬಂಧಿಗಳೆಂಬರೆ,
ನಾಚದವರನೇನೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ಹೂವು ಪತ್ರೆಗಳಿಂದ ಪೂಜೆ ಮಾಡುವದಕ್ಕಿಂತಲೂ ನಮ್ಮ ಒಳಗಿನ ಜ್ಯೋತಿ ನೋಡಬೇಕು

ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು
ಹೊರ ಉಪಚಾರವ ಮಾಡುವುದೆಲ್ಲ
ಬರಿಯ ಭಾವದ ಬಳಲಿಕೆ ನೋಡಾ.
ಅಳಲದೆ ಬಳಲದೆ ಆಯಾಸಂಬಡದೆ
ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ
ಪೂಜಿಸಬಲ್ಲ ಶರಣಂಗೆ
ಬೆಳಗಾಗೆದ್ದು ಪೂಜಿಸಿಹೆನೆಂಬ ಕಳವಳವೆಂದೇನು ಹೇಳಾ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ಗುರು ಕೊಟ್ಟ ಇಷ್ಟಲಿಂಗ ಇರಲು ಶೈವರು ಕಟ್ಟಿದ ಗುಡಿಗಳಿಗೆ ಹೋಗುವ ರಗಳೆ ಏಕೆ?

ಶೈವರು ಕಟ್ಟಿದ ಗುಡಿಯ ಹೊಗಲೇಕೆ?
ಶೈವರು ನೆಟ್ಟ ಲಿಂಗವ ಮುಟ್ಟಿ ಪೂಜಿಸಲೇಕೆ?
ಆದಕೆ ಉಪಾಸಿತವ ಮಾಡಲೇಕೆ?
ನೆಟ್ಟಿದ್ದ ಕಲ್ಲಿಗೆ ನೀಡಿ ಕೆಡೆದರೆ
ಕಟ್ಟಿದ್ದ ಕಲ್ಲಿನ ಕಷ್ಟವ ನೋಡಿರೆ!
ಕಟ್ಟಿದ ಕಲ್ಲು ಕಳೆದಿಟ್ಟು ಬಿಟ್ಟು
ನೆಟ್ಟಿದ್ದ ಕಲ್ಲಿಗೆ ನಮಿಸಿದಾ ಭ್ರಷ್ಟರಿರ.
ತನ್ನ ಗುರು ಕೊಟ್ಟ ಇಷ್ಟಲಿಂಗ ಕೊಡಲರಿಯದೆಂದು,
ನೆಟ್ಟಿದ್ದ ಲಿಂಗ ಕೊಟ್ಟಿತ್ತೆಂಬ ಕೊಟ್ಟಿಗಳ ಕಡೆನೋಡಿ
ಹೊಟ್ಟೆ ಹುಣ್ಣಾಗುವಂತೆ ನಗುತಿರ್ದೆನಯ್ಯ.
ಅದೇನು ಕಾರಣವೆಂದಡೆ:
ಕಟ್ಟಿದ್ದುದೂ ಕಲ್ಲು, ನೆಟ್ಟಿದ್ದುದೂ ಕಲ್ಲು.
ಅದೇನು ಕಾರಣವೆಂದಡೆ;
ಏಕಲಿಂಗನಿಷ್ಠಾಚಾರವಿಲ್ಲದ ಕಾರಣ.
ಪ್ರಾಣಲಿಂಗಿಗೆ ಈ ಪಾಷಾಣದ ಹಂಗುಂಟೆ?
ಆತ್ಮನೊಳಗೆ ಹುಟ್ಟಿದ ಅನುಭಾವಲಿಂಗವ ಶ್ರೀಗುರು ತಂದು
ಕರಸ್ಥಲದಲ್ಲಿ ಇಷ್ಟಲಿಂಗವ ಮಾಡಿ ಇರಿಸಿದನಾಗಿ
ಇಷ್ಟ ಪ್ರಾಣ ಒಂದೇಯೆಂದು ಅರಿದು
ಆರಾಧಿಸಿ ಸುಖಿಯಾಗಿದ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ದೇಹವೇ ದೇಗುಲ, ಕಾಲೇ ಕಂಬ, ಶಿರಸ್ಸೇ ಶಿಖರ ನೋಡಾ

ದೇಹವೇ ದೇಗುಲ, ಕಾಲೇ ಕಂಬ, ಶಿರಸ್ಸೇ ಶಿಖರ ನೋಡಾ.
ಹೃದಯಕಮಲಕರ್ಣಿಕಾವಾಸವೇ ಸಿಂಹಾಸನ.
ಮಹಾಘನಪರತತ್ವವೆಂಬ ಪ್ರಾಣಲಿಂಗವ ಮೂರ್ತಿಗೊಳಿಸಿ,
ಪರಮಾನಂದಾಮೃತಜಲದಿಂದ ಮಜ್ಜನಕ್ಕೆರೆದು,
ಮಹಾದಳಪದ್ಮದ ಪುಷ್ಪದಿಂದ ಪೂಜಿಸಿ,
ಪರಮ ಪರಿಣಾಮವೆಂಬ ನೈವೇದ್ಯವ ಗಡಣಿಸಿ,
ಪ್ರಾಣಲಿಂಗಕ್ಕೆ ಪ್ರಾಣಸಂಬಂಧವಾದ ಪೂಜೆಯ
ಮಾಡುತ್ತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ಹುಟ್ಟಿ ಸಾಯುವವರನ್ನು ದೇವರು ಎನ್ನಲಾಗದು

ತಂದೆಯಿಲ್ಲದ, ತಾಯಿಯಿಲ್ಲದ,
ಹೆಸರಿಲ್ಲದ, ಕುಲವಿಲ್ಲದ,
ಹುಟ್ಟಿಲ್ಲದ, ಹೊಂದಿಲ್ಲದ,
ಅಯೋನಿಸಂಭವ ನೀನಾದ ಕಾರಣ
ನಿನ್ನ ನಾನು ನಿಃಕಲಲಿಂಗವೆಂದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ತೀರ್ಥಕ್ಷೇತ್ರಕ್ಕೆ ಹೋಗುವುದು, ನೀರಿನಲ್ಲಿ ಮುಳುಗುವುದು, ಹೋಮ ನೇಮ ಮಾಡುವುದು ಮೋಕ್ಷಕ್ಕೆ ದಾರಿಗಳಲ್ಲ

ಅಷ್ಟಷಷ್ಠಿಕೋಟಿ ತೀರ್ಥವ ಮಿಂದರಿಲ್ಲ ಕಾಣಿರಣ್ಣಾ.
ಲಕ್ಷ ಲಕ್ಷ ಕೋಟಿ ಕೋಟಿ ಜಪ (ವ)ನೆಣಿಸಿದರಿಲ್ಲ ಕಾಣಿರಣ್ಣಾ.
ಧ್ಯಾನ ಮೌನ ಹೋಮ ನೇಮ ಅನುಷ್ಠಾನವ ಮಾಡಿದರಿಲ್ಲ ಕಾಣಿರಣ್ಣಾ.
ನೂರಿಪ್ಪತ್ತು ವೇಳೆ ಭೂಪ್ರದಕ್ಷಿಣವ ಮಾಡಿದರಿಲ್ಲ ಕಾಣಿರಣ್ಣಾ.
ಕಾಶಿ ಕೇದಾರ ಶ್ರೀಶೈಲ ಶಿವಗಂಗೆಗೈದಿದರಿಲ್ಲ ಕಾಣಿರಣ್ಣಾ.
ಇವೆಲ್ಲ ಬರಿಯ ಭ್ರಾಂತು.
ಇಪ್ಪ ಠಾವ ಹೇಳಿಹೆನು ಕೇಳಿರಣ್ಣಾ.
ಶ್ರೀಗುರು ಕರುಣದಿಂದ ಬಿಜಯಂಗೈಸಿ ಕೊಟ್ಟ
ಪರಮಲಿಂಗ ತನ್ನ ಕರದಲ್ಲಿ ತುಂಬಿಪ್ಪುದಯ್ಯ.
ಹಲವು ಕಡೆಗೆ ಹೋಹ ಮನವ ಧ್ಯಾನವೆಂಬ ಹಸ್ತದಲ್ಲಿ ಹಿಡಿದು
ಆ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆಯಬಲ್ಲರೆ
ಅಲ್ಲಿಪ್ಪನು ಶಂಭು ಪರಮೇಶ್ವರನು.
ಇದೇ ನಿಶ್ಚಯ; ಉಳಿದವೆಲ್ಲ ಹುಸಿ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು