ಚಾಮರಾಜನಗರ :
ನಗರದ ‘ಮಹಾಮನೆ’ಯಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವು ಅರ್ಥಪೂರ್ಣ ಉಪನ್ಯಾಸ, ವಚನ ಗಾಯನ ಹಾಗೂ ವಚನ ವಾಚನದೊಂದಿಗೆ ಜರುಗಿತು.
12ನೇ ಶತಮಾನದ ಶರಣೆ ಅಕ್ಕಮಹಾದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಕ್ರಾಂತಿಕಾರಿ ವಿಚಾರಧಾರೆಗಳನ್ನು ನೆರೆದಿದ್ದ ಸಭಿಕರಿಗೆ ಮನವರಿಕೆ ಮಾಡಿಕೊಡಲಾಯಿತು.

ಪ್ರಸೂತಿ ತಜ್ಞೆ ಡಾ. ಶ್ವೇತಾ ಶಶಿಧರ್ ಮಾತನಾಡಿ, “ವಚನ ಸಾಹಿತ್ಯವು ಜಗತ್ತಿನ ಶ್ರೇಷ್ಠ ಸಾಹಿತ್ಯಗಳಲ್ಲಿ ಒಂದಾಗಿದೆ. ಅಕ್ಕಮಹಾದೇವಿಯವರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದವರು. ಇಂದಿನ ಪೀಳಿಗೆಗೆ ನಾವು ಮೊಬೈಲ್ ಸಂಸ್ಕೃತಿಯ ಬದಲು ವಚನ ಸಾಹಿತ್ಯವನ್ನು ಕಲಿಸುವ ಮೂಲಕ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕಿದೆ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದ ಜೆಎಸ್‌ಎಸ್ ಪ್ರೌಢಶಾಲೆಯ ಗಣಿತ ಶಿಕ್ಷಕಿ ಮಾಲತಿ ಶಶಿಧರ, “ಅಕ್ಕಮಹದೇವಿಯವರ ವಿದ್ವತ್ತು ಮತ್ತು ದೈವದತ್ತವಾದ ಬದ್ಧತೆಯನ್ನು ಕಂಡು ಸಾಕ್ಷಾತ್ ಅಲ್ಲಮಪ್ರಭುಗಳೇ ತಲೆಬಾಗಿದ್ದರು. ಅಕ್ಕಮಹಾದೇವಿ ವೈರಾಗ್ಯ ನಿಧಿ, ಸ್ತ್ರಿಕುಲದ ಜ್ಯೋತಿ, ದಿಟ್ಟ ಹೆಜ್ಜೆಯ ಧೀರ ನುಡಿಯ ಮಹಾನ್ ಶರಣೆಯಾಗಿದ್ದರು.
ಅವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳುವಳಿಯ ಪ್ರತಿಪಾದಕರಾಗಿ, ಅಕ್ಕರೆಯ ಅಕ್ಕನಾಗಿ ಹಲವು ಆಯಾಮಗಳಲ್ಲಿ ಗುರುತಿಸಬಹುದು. ಬಸವಣ್ಣನವರು ಆಕೆಯನ್ನು ಗೌರವದಿಂದ ‘ಅಕ್ಕ’ ಎಂದೇ ಕರೆದರು.

ಚನ್ನಮಲ್ಲಿಕಾರ್ಜುನನ ಮೇಲಿದ್ದ ಆಕೆಯ ನಿಷ್ಠೆ ಪರಮ ಪವಿತ್ರವಾದುದು. ಕೇವಲ ಭಕ್ತಿಯಷ್ಟೇ ಅಲ್ಲದೆ, 12ನೇ ಶತಮಾನದಲ್ಲೇ ಸ್ತ್ರೀ ಸಮಾನತೆಯನ್ನು ಸಾರಿದ ಕೀರ್ತಿ ಅಕ್ಕನಿಗೆ ಸಲ್ಲುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಕಾಳನಹುಂಡಿ ಗುರುಸ್ವಾಮಿ ಮಾತನಾಡಿ, ಅಕ್ಕ ಮಹಾದೇವಿ ವೈಭೋಗ ಮತ್ತು ಲೌಕಿಕ ಜೀವನವನ್ನು ಧಿಕ್ಕರಿಸಿ, ಸ್ತ್ರೀಪರ ಚಿಂತನೆಯನ್ನು ಮತ್ತು ಅಧ್ಯಾತ್ಮದ ಬದುಕನ್ನು ಪ್ರತಿಪಾದಿಸಿದ ಅಪರೂಪದ ವ್ಯಕ್ತಿತ್ವ ಎಂದು ಬಣ್ಣಿಸಿದರು.
ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಸಹ ಮಾತನಾಡಿದರು. ಶೋಭಾ ಸಿದ್ದರಾಜು, ಸುಂದ್ರಮ್ಮ ಮತ್ತು ತಂಡದವರು ವಚನ ಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಹೊನಮೇಟಿ ಸುಂದರ, ಅರ್ಕಪ್ಪ, ಕೊತ್ತಲವಾಡಿ ಮಹದೇವಸ್ವಾಮಿ, ಐ ಟಿ ಐ ಮಹದೇವಸ್ವಾಮಿ, ದೊಡ್ಡರಾಯಪೇಟೆ ನಾಗರಾಜು, ಅಂಚೆ ಬಸವರಾಜಪ್ಪ, ಮಲ್ಲಿಕಾರ್ಜುನಪ್ಪ, ಆರ್. ಎಸ್. ಲಿಂಗರಾಜು, ಕೆಂಪನಪುರ ಮಹದೇವಸ್ವಾಮಿ, ಯೋಗ ದೊರೆಸ್ವಾಮಿ, ಮಂಜುನಾಥ, ಯೋಗ ಶ್ರೀಕಾಂತ್, ಪ್ರಭುಲಿಂಗಸ್ವಾಮಿ, ನಂದೀಶ, ಸಿದ್ದಲಿಂಗಸ್ವಾಮಿ, ನಂಜುಂಡಸ್ವಾಮಿ, ಗುರುಸ್ವಾಮಿ, ಪರಶಿವಮೂರ್ತಿ, ಶಿವಕುಮಾರ, ಮಲ್ಲೇಶ, ಗೌರಮ್ಮ, ಅನ್ನಪೂರ್ಣ ಸ್ವಾಮಿ, ಕೋಮಲ, ಸೌಮ್ಯ, ಪದ್ಮಾಕ್ಷಿ, ಸುಶೀಲಮ್ಮ ಮತ್ತಿತರರು ಉಪಸ್ಥಿತರಿದ್ದರು.
